You are currently viewing ಮಾನವಕುಲವು ಊಟಕ್ಕೆಂದೇ ಹುಡುಕಿಕೊಂಡ ಧಾನ್ಯ ಜೋಳ : Sorghum bicolor

ಮಾನವಕುಲವು ಊಟಕ್ಕೆಂದೇ ಹುಡುಕಿಕೊಂಡ ಧಾನ್ಯ ಜೋಳ : Sorghum bicolor

ಹೊಸ ವರ್ಷದ ಶುಭಾಶಯಗಳು…

ಊಟದ ವಿಷಯ ಬಂದಾಗ ಅನ್ನ, ರೊಟ್ಟಿ, ಮುದ್ದೆ ಮತ್ತು ಅಂಬಲಿಯ ಸಂಗತಿಗಳು ಮಾತಿಗೆ ಬರಬಹುದು. ಈ ಎಲ್ಲಾ ಪ್ರಕಾರಗಳನ್ನೂ ಒಂದೇ ಕಾಳಿನಲ್ಲಿ ಮಾಡಬಹುದಾದ ಸಾಧ್ಯತೆಯನ್ನು ಕಟ್ಟಿ ಕೊಟ್ಟದ್ದು ಕೇವಲ ಜೋಳ ಮಾತ್ರ! ಹೌದು, ಜೋಳ ಊಟಕ್ಕೆ ಬಳಸುವ ಕಾಳಾಗಿ ವಿಶೇಷವಾದ ಮಹತ್ವವನ್ನು ಪಡೆದಿದೆ. ಇತರೆ ಯಾವ ಧಾನ್ಯದಲ್ಲೂ ಕಾಳಿನ ಹೊರಕವಚದ ಹೊಟ್ಟನ್ನು ಆಹಾರವಾಗಿ ಬಳಸಲಾಗದು. ಆದರೆ ಜೋಳ ಮಾತ್ರ ಇದಕ್ಕೆ ಅಪವಾದ.

    ಜೋಳದ ಕಾಳಿನ ಅಥವಾ ಬೀಜದ ಕವಚ ಮತ್ತು ಒಳಭಾಗ ಎರಡೂ ಹೊಂದಿಕೊಂಡಿದ್ದು ಬಿಡಿಸಲಾರದಂತೆ ಇರುತ್ತದೆ. ಆದರೆ ಭತ್ತ ಮುಂತಾದ ಬಹುಪಾಲು ಧಾನ್ಯಗಳಲ್ಲಿ ಕಾಳನ್ನು ಹಿಡಿದುಕೊಂಡಿರುವ ಪುಷ್ಟಪಾತ್ರೆಯ ನಡುವೆ ಹೊಟ್ಟು, ಮತ್ತು ಹೊರ ಕವಚದಂತೆ ಗೊಳಲು ಇರುತ್ತದೆ. ಆದರೆ ಜೋಳದಲ್ಲಿ ಈ ಹೊಟ್ಟು ಇರುವುದಿಲ್ಲ. ಅದೂ ಕಾಳಿಗೆ ಸೇರಿದಂತೆ ಇರುತ್ತದೆ. ಹಾಗಾಗಿ ಅದನ್ನೂ ಹಿಟ್ಟು ಮಾಡಿಸಿದಾಗ ತಿನ್ನುವ ಆಹಾರದ ಭಾಗವಾಗುತ್ತದೆ. ಇದರಿಂದಾಗಿ ಹಲವು ಆಹಾರಾಂಶಗಳು ಅದರ ತಯಾರಿಯ ಆಹಾರದಲ್ಲಿ ಸೇರಿ ಹೆಚ್ಚು ಸತ್ವಯುತವಾಗುತ್ತದೆ. ಹಾಗಾಗಿ ಪ್ರಮುಖ ಆಹಾರಾಂಶಗಳಾದ ಆಂಟಾಕ್ಸಿಡೆಂಟ್‌ಗಳು, ಕೊಲೆಸ್ಟರಾಲ್‌ ಕಡಿಮೆ ಮಾಡುವಂತಹಾ ಪಾಲಿಕೊಸ್‌ನಾಲ್‌ಗಳು, ಪ್ರೊಟೀನು ಮತ್ತು ನಾರಿನಾಂಶ ಇವುಗಳು ಬೀಜ ಸಂಸ್ಕರಣೆಯಿಂದ ನಾಶವಾಗದೆ ಆಹಾರದ ತಯಾರಿಯಲ್ಲಿ ಸೇರುತ್ತವೆ.   

     ಜೋಳದಲ್ಲಿ ಸಾಕಷ್ಟು ವೈವಿಧ್ಯತೆಯಿದೆ. ಜೋಳ ಎಂದು ಗುರುತಿಸಲಾಗುವ ಪ್ರಭೇಧದಲ್ಲೇ ಹಲವಾರು ಇರುವ ಬಗೆಗೆ ತರ್ಕಗಳಿವೆ. ಜಾಗತಿಕವಾಗಿ ಹರಡಿರುವ ಜೋಳದ ಧಾನ್ಯಗಳಲ್ಲಿ ಈ ವಿವಿಧ ಪ್ರಭೇದಗಳ ಬಗೆಯನ್ನು ಹಲವು ಸಂಶೋಧನೆಗಳಿಂದ ಗುರುತಿಸಲಾಗಿದೆ. ತೀರಾ ಮೇಲು ನೋಟದಲ್ಲೇ ವಿವಿಧ ತಳಿಗಳೆಂದು ಗುರುತಿಸಬಹುದಾದ ಸಾಧ್ಯತೆಯ ಬಣ್ಣ ಬಣ್ಣದ ಕಾಳುಗಳನ್ನು ಜೋಳದಲ್ಲಿ ಕಾಣುತ್ತೇವೆ. ಬಿಳಿ, ಮಾಸಲು ಬಿಳಿ, ಕಂದು ಮಿಶ್ರಿತ ಬಿಳಿ, ಕಡು ಕಂದು, ಕೆಂಪು, ಕೆಂಪು ಮಿಶ್ರಿತ ಕಂದು, ಕಂಚಿನಂತಹಾ ಕಂದು, ಮಾಸಲು ಹಳದಿ, ದಟ್ಟ ಹಳದಿ, ಹಸಿರು ಮಿಶ್ರಿತ ಮಾಸಲು ಬಿಳಿ ಹೀಗೆ ವಿವಿಧ ಬಣ್ಣಗಳ ಕಾಳುಗಳನ್ನು ಕಾಣಬಹುದು. ಈ ಬಣ್ಣಗಳೇ ವಿವಿಧ ತಿನಿಸುಗಳ ತಯಾರಿಯಲ್ಲೂ ವಿವಿಧತೆಯನ್ನು ಪೋಷಿಸಿವೆ.

     ಎಲ್ಲಾ ಹುಲ್ಲಿನ ಸಂಕುಲದ ಬೆಳೆಗಳಂತೆಯೇ ಜೋಳವೂ ಸಹಾ ಬೇಳೆಯಾಗದ ಕಾಳಿನ ಗಿಡ. ಹುಲ್ಲಿನ ಜಾತಿಯ ಗಿಡಗಳ ತೆನೆಗಳ ಲೋಕವೇ ವಿಚಿತ್ರ. ಇತರೆಲ್ಲಾ ಬೆಳೆಗಳಂತೆ ಮೈತುಂಬಾ ಕಾಯಿಗಳನ್ನು ಹೊಂದಿರುವುದಿಲ್ಲ. ಎಲ್ಲಾ ಕಾಯಿಗಳೂ-ಕಾಳುಗಳಾಗಿ ಒಂದೆಡೆ ತೆನೆಯಾಗಿ ಕೊಯಿಲು ಮಾಡಲು ಸುಲಭವಾಗುವಂತಿರುತ್ತವೆ. ಆದರೂ ತೆನೆಯಿಂದ ಬೀಜ ಅಥವಾ ಕಾಳುಗಳನ್ನು ಹೊರತೆಗೆಯುವ ಕಷ್ಟವನ್ನು ಒಂದೊಂದು ಹುಲ್ಲೂ ವಿಭಿನ್ನವಾದ ಬಗೆಯಿಂದ ತಮ್ಮನ್ನು ಇತರೇ ಹುಲ್ಲಿನಿಂದ ಪ್ರತ್ಯೇಕಿಸಿಕೊಳ್ಳುತ್ತವೆ. ಮಾನವ ಕುಲವು ಮುಖ್ಯ ಆಹಾರವಾಗಿ ಹುಲ್ಲಿನ ಸಂಕುಲವನ್ನೇ ನಂಬಿ ಹತ್ತಾರು ಸಾವಿರ ವರ್ಷಗಳಿಂದ ಕೃಷಿ ಮಾಡುತ್ತಿದೆ. ಜೋಳವೂ ಸಹಾ ಅತ್ಯಂತ ಹಳೆಯ ಆಹಾರ ಧಾನ್ಯ. ಇಡೀ ಬೆಳೆಯು ಬಗೆ ಬಗೆಯ ಆಹಾರದ ಉಪಯೋಗಗಳಿಗೆ ವಿಕಾಸಗೊಂಡಿದೆ. ಅದನ್ನು ಅನುಸರಿಸಿಯೇ ಹಲವಾರು ಅನೂಕೂಲಗಳನ್ನು ಕಂಡುಕೊಳ್ಳಲಾಗಿದೆ. ಮೂಲ ನಾಗರಿಕ ಸಮಾಜವು ಆಹಾರವನ್ನೇ ಮೂಲವಾಗಿಟ್ಟುಕೊಂಡು ಜೋಳದ ಅನುಕೂಲಗಳನ್ನು ಕಂಡುಕೊಂಡಿದ್ದರೆ, ಆಧುನಿಕ ಸಮಾಜವು (ಅಮೆರಿಕಾ ಖಂಡದ ದೇಶಗಳು) ನವೀನ ಅನುಕೂಲಗಳ ಲಾಭವನ್ನು ಕಂಡುಕೊಂಡಿದೆ. ಈ ಹಿನ್ನೆಲೆಯಲ್ಲಿ ಬಗೆ ಬಗೆಯ ಊಟದ ತಳಿಗಳು, ಹೆಚ್ಚು ಜೈವಿಕರಾಶಿಯ ಮೇವಿನ ತಳಿಗಳೂ ಹಾಗೇ ಜೈವಿಕ ಇಂಧನವನ್ನು ಕೊಡುವ ತಳಿಗಳೂ ಅಲ್ಲದೆ ಆಲ್ಕೊಹಾಲ್‌ ಹಾಗೂ ಮಾದಕ ಪೇಯಗಳ ತಳಿಗಳೂ ಇವೆ. ಮೇವಿನ ತಳಿಗಳು ಹೆಚ್ಚು ಜೀವದ್ರವ್ಯವನ್ನು ಕೊಡುವ ಬಗೆಗಳಾಗಿದ್ದು 3ರಿಂದ 4 ಮೀಟರ್‌ ಎತ್ತರದವರೆಗೂ ಬೆಳೆಯುತ್ತವೆ. ಆದರೆ ಆಹಾರ ಧಾನ್ಯಗಳ ತಳಿಗಳು ಸಾಮಾನ್ಯವಾಗಿ ಒಂದರಿಂದ ಒಂದೂವರೆ ಮೀಟರ್‌ ಎತ್ತರದವು.

     ನಮ್ಮ ರಾಜ್ಯದ ಹೆಚ್ಚು ಜೋಳ ಬೆಳೆವ ಪರಿಸರದವರಿಗೆ ಹಾಲುಗಾಳಿದ್ದಾಗ ತೆನೆಗಳನ್ನು ಸುಟ್ಟು ಅಥವಾ ಬೇಯಿಸಿ ತಿನ್ನುವ ಬಗ್ಗೆ ತಿಳಿದಿರಬಹುದು. ದಾವಣಗೆರೆ ಜಿಲ್ಲೆಯ ಕೆಲವೆಡೆ ಮತ್ತು ಅದರ ಉತ್ತರ ಕರ್ನಾಟಕದ ಜಿಲ್ಲೆಗಳ ಗಡಿಯ ಕಡೆಗಿನ ಊರುಗಳಲ್ಲಿ “ಬೆಳೆಸಿ-ತಿನ್ನುವುದು” ಎಂಬ ಅಭ್ಯಾಸವು ಬಳಕೆಯಲ್ಲಿದೆ. ಇನ್ನೂ ಹಾಲುಗಾಳಿರುವ ತೆನೆಗಳನ್ನು ಹಾಗೇ ಸುಟ್ಟು ತಿನ್ನುವುದನ್ನು ಹಾಗೆನ್ನುತ್ತಾರೆ. ಜೋಳದಲ್ಲಿ ಈ ಬಗೆಯ ಹಾಲುಗಾಳುಗಳನ್ನು ಬಳಸುವ ಆಸಕ್ತಿಯಿಂದ ಅಂತಹಾ ತಳಿಗಳನ್ನೂ ಕಂಡುಕೊಳ್ಳಲಾಗಿದೆ. ಇಂತಹಾ ಕೆಲವು ತಳಿಗಳ ಕಾಳುಗಳನ್ನು ನೇರವಾಗಿ (ಅಕ್ಕಿಯಿಂದ ಬೇಯಿಸಿ ಅನ್ನ ಮಾಡಿದಂತೆ) ಜೋಳದ ಅನ್ನ ಮಾಡಬಹುದು. ಈಗಿನ ಬಹುಪಾಲು ಬಳಕೆಯಲ್ಲಿ ಜೋಳದ ಅನ್ನ ಮಾಡುವುದಂತೂ ಕಡಿಮೆಯೆ! ಆದರೂ ಕೊಪ್ಪಳದ ಗವಿ ಸಿದ್ದೇಶ್ವರ ಮಠದಲ್ಲಿ ಹಿಂದೊಮ್ಮೆ ಜೋಳದ ಅನ್ನ ಸಾಂಪ್ರದಾಯಿಕ ಊಟವಾಗಿದ್ದ ನೆನೆಪನ್ನು ಉಳಿಸಿಕೊಂಡು ಪ್ರತೀ ಊಟದ ಜೊತೆಗೂ ತುಸುವೇ ಜೋಳದ ಅನ್ನವನ್ನು ಬಡಿಸುವುದನ್ನು ನಾನು ನೋಡಿದ್ದೇನೆ. ಇದೇ ಬಗೆಯ ಜೋಳದ ಗುಗ್ಗರಿಯ ಬಳಕೆಯ ಅನುಭವ ಹಲವರಿಗೆ ಇದ್ದಿರಬಹುದು.  ಜೋಳದ ಅನ್ನದಿಂದ ಬಗೆ ಬಗೆಯ ಉಸಳಿಯನ್ನು ತಯಾರು ಮಾಡಬಹುದು.

          ಕರ್ನಾಟಕ ರಾಜ್ಯದ ಆಹಾರ ಹಾಗೂ ಕೃಷಿ ಬೆಳೆಗಳ ಪರಿಸರವನ್ನು ಎರಡು ಭಾಗಗಳಾಗಿ ತುಂಗಭದ್ರಾ ನದಿಯು ವಿಭಜಿಸುತ್ತದೆ. ಈ ನದಿಯ ಎರಡೂ ಬದಿಗಳಿಂದ ನೆಲದ ಹರಹು ವಿಸ್ತರಿಸುತ್ತಲೇ ಕೃಷಿಯ ಹಾಗೂ ಆಹಾರದ ಬಗೆಗಳು ವಿಸ್ತಾರವಾಗುತ್ತಾ ಹೋಗುತ್ತವೆ. ಉತ್ತರದ ಕೃಷ್ಣೆಯ ಕಡೆಗಿನ ನೆಲದ ಜೋಳದ ಬೆಳೆಯು ದಟ್ಟವಾಗುತ್ತಾ ಸಾಗುತ್ತದೆ. ಜೊತೆಗೆ ಹೆಚ್ಚುತ್ತಲೇ ಹೋಗುತ್ತದೆ. ಅದರಿಂದಾಗಿಯೇ ಉತ್ತರ ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ ಗುಜರಾತ್‌ ದಾಟಿ ರಾಜಾಸ್ಥಾನ್‌ ವರೆಗೂ ಜೋಳದ ಪರಿಮಳವು ನೆಲವನ್ನು ಆವರಿಸಿದೆ. ತುಂಗಭದ್ರೆಯಿಂದ ಕಾವೇರಿಯ ಕಡೆಗೆ ಬಂದಹಾಗೆ ಜೋಳದ ಪರಿಮಳವು ಕ್ಷೀಣಿಸುತ್ತಾ ಸಾಗುವುದು. ದಟ್ಟವಾಗುತ್ತಾ ಹೋದ ಉತ್ತರದ ಕಡೆಗೆ ಜೋಳದ ಆಹಾರದ ಬಳಕೆಯೂ “ರೊಟ್ಟಿ”ಯಾಗಿ ಹರಹನ್ನು ಹೆಚ್ಚಿಸಿಕೊಂಡಿದೆ.

      ತುಂಗಭದ್ರೆಯ ಕಾವೇರಿ ಕಡೆಗಿನ ಹರಹಿನ ಆರಂಭದಲ್ಲಿ ಹೊನ್ನಾಳಿ, ಚನ್ನಗಿರಿ, ಹೊಳಲ್ಕೆರೆ, ಹೊಸದುರ್ಗ ಮುಂತಾದ ತಾಲ್ಲೂಕುಗಳಲ್ಲಿ ಜೋಳದ ಮುದ್ದೆಯು ವಿಶೇಷವಾಗಿದೆ. ಅದರಲ್ಲೂ ಚನ್ನಗಿರಿ ಆಸು-ಪಾಸಿನ ರೈತ ಕುಟುಂಬಗಳ ಮುದ್ದೆಯಂತೂ ವಿಶೇಷವಾದದ್ದೇ ಸರಿ! ಸಾಮಾನ್ಯವಾಗಿ ಮುದ್ದೆಯ ಸವಿಯು ರಾಗಿಯಲ್ಲಿ ಹೆಚ್ಚು ಪ್ರಚಲಿತವಿದ್ದರೂ, ಜೋಳದ ಮುದ್ದೆಯ ವಿಶೇಷತೆಯನ್ನು ತಿಳಿಯುವುದೂ ಸಹಾ ಆಸಕ್ತಿಯುತವಾಗಿದೆ. ರಾಗಿ ಮುದ್ದೆಯು ಹೆಚ್ಚು ಅಂಟಾಗಿದ್ದು, ಆಕಸ್ಮಿಕವಾಗಿ -ಹೊಸ ಅನುಭವದ ಊಟದಲ್ಲಿ- ಅಗಿದರೆ ಹಲ್ಲಿಗೆ ಅಂಟಿಕೊಳ್ಳುತ್ತದೆ. ಆದರೆ ಜೋಳದ ಮುದ್ದೆ ಹಾಗೆ ಅಂಟಿಕೊಳ್ಳುವುದಿಲ್ಲ. ಹಾಗಾಗಿ ಹದವಾಗಿ ಮಾಡಿದ ಜೋಳದ ಮುದ್ದೆಯನ್ನು ಸುಲಭವಾಗಿ ನುಂಗಬಹುದು. ಬಣ್ಣವೂ ದಟ್ಟ ಬಿಳಿ!

      ಏನೇ ಆದರೂ ಜೋಳದ ಖಡಕ್‌ ಸಂಗತಿ ಎಂದರೆ ರೊಟ್ಟಿಯೇ ಸರಿ! ಜೋಳದ ಖಡಕ್‌ ರೊಟ್ಟಿಯಂತೆ, -ಸಜ್ಜೆಯನ್ನು ಹೊರತು ಪಡಿಸಿ- ಗೋಧಿ, ರಾಗಿ ಅಥವಾ ಅಕ್ಕಿಯಲ್ಲಿ ಮಾಡಲಾಗದು. ಹಾಗಾಗಿ ರೊಟ್ಟಿಯ ವೈಭವವೇನಿದ್ದರೂ ಜೋಳದ ಸಾಮ್ರಾಜ್ಯವೇ! ಇದರ ಮಹತ್ವವು ಮುಂದಿನ ದಿನಗಳಲ್ಲಿ ಬೃಹತ್ತಾಗುವ ಸೂಚನೆಯನ್ನು ಅಮೆರಿಕಾದ ಕೋಲ್ಡ್‌ ಸ್ಪ್ರಿಂಗ್‌ ಹಾರ್ಬರ್‌ ಪ್ರಯೋಗಾಲಯದ ಸಂಶೋಧಕರು ಗುರುತಿಸಿದ್ರುದಾರೆ. ಹಿಂದಿನ ಭಾಗದ ಜೋಳದ ಕಥನದಲ್ಲಿ ತಿಳಿದಿದ್ದಂತೆ ಜೋಳದ ಕಾಳುಕಟ್ಟುವ ಬಗೆಯ ಪ್ರಕ್ರಿಯೆಯ ವೈಜ್ಞಾನಿಕ ಅರಿವನ್ನು ಪತ್ತೆ ಹಚ್ಚಲಾಗಿದೆ. ಎರಡು ಪಟ್ಟು ಹೆಚ್ಚಾಗುವ ಉತ್ಪಾದನೆಯಿಂದ ಮುಂದೊಮ್ಮೆ ಜೋಳವು ಅತಿ ಮುಖ್ಯ ಆಹಾರದ ಬೆಳೆಯಾಗಲಿದೆ. ಏಕೆಂದರೆ ರೊಟ್ಟಿಯನ್ನೇ ಉದಾಹರಿಸುವುದಾದರೆ. ಇಡಬಹುದಾದ ಆಹಾರ! ಚಪಾತಿಯಲ್ಲಿ, ಅಕ್ಕಿ-ಅಥವಾ ರಾಗಿ ರೊಟ್ಟಿಯನ್ನು ಹಾಗೆ ಇಡಲಾಗದು. ಇದಲ್ಲೆಕ್ಕಿಂತಾ ಮುಖ್ಯವಾಗಿ ಜೋಳವು ಗ್ಲುಟೆನ್‌ ರಹಿತವಾದ ಧಾನ್ಯ! ಸಾಕಷ್ಟು ಪ್ರೊಟೀನ್‌ ಅನ್ನೂ ಸಹಾ ಹೊಂದಿದ್ದು, ಬಣ್ಣವೂ ಆಕರ್ಷಕವಾಗಿದ್ದು, ಹೆಚ್ಚೂ ಕಡಿಮೆ ಉಳಿದೆಲ್ಲಾ ಆಹಾರ ಧಾನ್ಯಗಳಲ್ಲಿ ಮಾಡಬಹುದಾದ ಎಲ್ಲ ತಯಾರಿಯನ್ನೂ ಈ ಒಂದೇ ಬೆಳೆಯು ನಿಭಾಯಿಸುತ್ತದೆ. ಸಾಲದಕ್ಕೆ ಜೋಳದ ವೈನ್‌, ಜೋಳದ ಬಿಯರ್‌ ಕೂಡ ಈಗಾಗಲೇ ಜನಪ್ರಿಯ! ಜೈವಿಕ ಇಂಧನ ಕೂಡ! ಆದ್ದರಿಂದ ಇಳುವರಿಯಲ್ಲಿ ಎರಡು ಪಟ್ಟಾದರೆ ಇವೆಲ್ಲವನ್ನೂ ನಿಭಾಯಿಸುತ್ತಾ ಜೋಳವು ಮತ್ತಷ್ಟು ಜನಪ್ರಿಯವಾಗಬಲ್ಲದು.

      ಇಂತಹಾ ವಿಶೇಷವಾದ ಕಾಳಿನ ವಿವಿಧ ಪೊಷಕಾಂಶಗಳ ಸ್ವಾರಸ್ಯವನ್ನು ನೋಡೋಣ. ಜೋಳವನ್ನು ಗ್ರೇಟ್‌ ಮಿಲೆಟ್‌ ಅಥವಾ ಇಂಡಿಯನ್‌ ಮಿಲೆಟ್‌ ಎಂದೂ ಕರೆಯಲಾಗುತ್ತದೆ. ಮಿಲೆಟ್‌ ಹೆಸರಿಗೆ ಮುಖ್ಯ ಕಾರಣವೆಂದರೆ ಗೋಧಿ, ಮೆಕ್ಕೆ ಜೋಳ ಅಥವಾ ಅಕ್ಕಿಗಿಂದ ಚಿಕ್ಕ ಕಾಳಿನ ಧಾನ್ಯವಾಗಿರುವುದು! ಚಿಕ್ಕ ಕಾಳಿನ ಧಾನ್ಯಗಳಲ್ಲೇ ಜೋಳವು ದೊಡ್ಡದಾಗಿದ್ದರಿಂದ “ಗ್ರೇಟ್‌ ಮಿಲೆಟ್‌”. ಭಾರತಕ್ಕೆ ಆಫ್ರಿಕಾದಿಂದ ಬಂದೂ ಅಪಾರವಾಗಿ ಹೊಂದಿಕೊಂಡು ಜಗತ್ತಿನ ಮೊದಲ ಸ್ಥಾನದಲ್ಲಿರುವ ಕಾರಣ “ಇಂಡಿಯನ್‌ ಮಿಲೆಟ್‌”. ಅಲ್ಲದೆ ಸಹಜವಾಗಿ 2ರಿಂದ 8ಅಡಿ ಬೆಳೆಯವ ಜೋಳ 15 ಅಡಿಗೂ ಹೆಚ್ಚು ಬೆಳೆಯುವ ತಳಿಗಳನ್ನೊಳಗೊಂಡಿದೆ. ಈ ವೈವಿಧ್ಯ ಜೈವಿಕ ರಾಶಿಯ ಗುಣವೇ ಬಗೆ ಬಗೆಯ ಉತ್ಪನ್ನಗಳಲ್ಲಿ ಮಾನವ ಕುಲವನ್ನು ಪೋಷಿಸುತ್ತಿದೆ.   

      ಜೋಳದ ಕಾಳು ಹೆಚ್ಚು ಪಿಷ್ಟವನ್ನು ಹೊಂದಿದ್ದು ಸುಮಾರು ಪ್ರತಿಶತ 10ರಷ್ಟು ಪ್ರೊಟೀನ್‌ ಅನ್ನೂ ಸಹಾ ಹೊಂದಿದೆ. ಸುಮಾರು ಮೂರರಿಂದ ಮೂರೂವರೆ ಪ್ರತಿಶತ ಕೊಬ್ಬೂ ಸಹಾ ಈ ಕಾಳಿನಲ್ಲಿದೆ. ಇದರ ಮುಖ್ಯ ಖನಿಜಯುತ ಗುಣವೆಂದರೆ ಹೆಚ್ಚು ಪೊಟ್ಯಾಶನ್ನು ಹೊಂದಿದ್ದು, ಸೋಡಿಯಂ ಅನ್ನು ಕಡಿಮೆ ಹೊಂದಿರುವುದಾಗಿದೆ. ಸಾಕಷ್ಟು ಕ್ಯಾಲ್ಸಿಯಂ ಕೂಡ ಜೋಳದ ಬಳಕೆಯಿಂದ ದೊರಕಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಗ್ಲುಟೇನ್‌ ಮುಕ್ತ ಧಾನ್ಯವಾಗಿದೆ. ಆದ್ದರಿಂದ ಗ್ಲುಟೇನ್‌ ಯುಕ್ತ ಗೋಧಿಯ ಬಳಕೆಯ ಸಮಸ್ಯೆಯಿಂದಲೂ ಮುಕ್ತವಾಗಿದೆ. ಅದರ ಜೊತೆಗೆ ಚಪಾತಿಯಂತಹಾ ತಯಾರಿಯಾದ ರೊಟ್ಟಿಯನ್ನು, ಅದರಲ್ಲೂ ಬಹುಕಾಲ ಇಡಬಲ್ಲ “ಖಡಕ್‌” ರೊಟ್ಟಿಯು ಇದರ ಜನಪ್ರಿಯತೆಯನ್ನು ಹೆಚ್ಚಿಸಿದೆ.   ಇದೂ ಸಹಾ ಮತ್ತೊಂದು ವಿಶೇಷವನ್ನು ಸೇರಿಸಿದೆ.

      ಜೋಳದ ಹೆಚ್ಚು ನಾರಿನಾಂಶದ ಗುಣ, ರಕ್ತದ ಸಕ್ಕರೆಯನ್ನು ಮಿತಿಯಲ್ಲಿಡಲು ಸಹಕಾರಿಯಾಗಿದೆ. ಇದರಲ್ಲಿನ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಖನಿಜಾಂಶದ ಜೊತೆಗೆ ವಿಟಮಿನ್‌ಗಳೂ ಒಟ್ಟಾರೆ ಆರೋಗ್ಯದ ಹಿತಕ್ಕೆ ಅನುಕೂಲವನ್ನು ಕಲ್ಪಿಸಿವೆ.

      ಹೆಚ್ಚು ಜೈವಿಕರಾಶಿಯ ಉತ್ಪನ್ನದಿಂದ ಅತ್ಯುತ್ತಮ ಮೇವಾಗಿ ಜನಪ್ರಿಯವಾಗಿದ್ದರೂ, ಎಳೆಯ ಸಸ್ಯಗಳಲ್ಲಿ ಸಯನೈಡ್‌ ಹೊಂದಿದ್ದು ದನಕರುಗಳಿಗೆ ಮಾರಕವಾಗಿದೆ. ಇದನ್ನು ಬಹುಶಃ ದನಕರುಗಳು ಮೇಯದಂತೆ ಸಸ್ಯವೇ ವಿಕಸಿಸಿಕೊಂಡ ಯೋಜನೆಯಾಗಿದ್ದರೂ ಇದ್ದೀತು. ಎಳೆಯ ಗಿಡವನ್ನೇ ತಿನ್ನದಂತೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಬಗೆ! ಏನೇ ಆಗಲಿ ಜೋಳದ ಸಸ್ಯ ವೈವಿಧ್ಯತೆಯು ಆಹಾರ ವೈವಿಧ್ಯತೆಯಲ್ಲೂ ಮೇಳವಿಸಿ ಮಾನವ ಕುಲಕ್ಕೆ ಬಗೆ ಬಗೆಯ ಅನುಕೂಲಗಳನ್ನು ಅಂತೂ ಒದಗಿಸಿದೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.

This Post Has One Comment

  1. Sachin desai

    Tumba chennagide Sir..

Leave a Reply