You are currently viewing ಭಾರತವನ್ನು ಬೆಸೆದ ಸಂಪರ್ಕಕ್ರಾಂತಿಯ ಹರಿಕಾರ ಸ್ಯಾಮ್ ಪಿತ್ರೊಡ

ಭಾರತವನ್ನು ಬೆಸೆದ ಸಂಪರ್ಕಕ್ರಾಂತಿಯ ಹರಿಕಾರ ಸ್ಯಾಮ್ ಪಿತ್ರೊಡ

ಅನೇಕರಿಗೆ ನೆನಪಿರಬಹುದು, ಮನೆಗೆ ಫೋನನ್ನು ಬುಕ್ ಮಾಡಿ ವರ್ಷಗಟ್ಟಲೇ ಕಾದು ಮನೆಗೆ ಹಾಕಿಸಿಕೊಂಡ ಸಂಗತಿ. ಅದರ ಜೊತೆಗೆ ಟ್ರಂಕಾಲ್ ಬುಕ್ ಮಾಡಿ ಗಂಟೆಗಟ್ಟಲೆ ಕಾದು ಮಾತಾಡಿದ್ದ ದಿನಗಳನ್ನೂ ಮರೆತಿರಲಾರರು. ನಿಜ ಅಂತಹದ್ದೂ ಒಂದು ಕಾಲವಿತ್ತು. ಆದರೆ ಇಂದಿನ ಜಗತ್ತು ಎಲ್ಲವನ್ನೂ ತೊಡೆದುಹಾಕಿ ಕ್ಷಣ ಮಾತ್ರದಲ್ಲಿ ಎಲ್ಲಿಂದೆಲ್ಲಿಗೋ ಮಾತಾಡುವುದನ್ನು ನಿಜ ಮಾಡಿದೆ. ಇಂತಹ ದಿನಗಳನ್ನು ಅಂದು ಕಾಯ್ದಿದ್ದ ಜನರ‍್ಯಾರೂ ಊಹಿಸಿರಲಾರರು. ಹೌದು, ಅದರ ಜೊತೆಗೆ ಅಂತಹಾ ದಿನಗಳೂ ಇದ್ದವು ಎಂಬುದನ್ನು ಇಂದಿನ ಪೀಳಿಗೆಯವರು ಅರಿಯುವುದೂ ಕಷ್ಟವೇ. ಅಷ್ಟರಮಟ್ಟಿಗೆ ಸಂವಹನ ಸಾಧ್ಯವಾಗಿದೆ. ಇದಕ್ಕೆಲ್ಲಾ ಮೂಲ ಕಾರಣ ಒಬ್ಬ ವ್ಯಕ್ತಿ ಎಂಬುದು ಮತ್ತೂ ಆಶ್ಚರ್ಯ. ಅದೂ ಅಲ್ಲದೆ ವಿದೇಶದಲ್ಲಿ ನೆಲೆಸಿದ್ದ ಭಾರತೀಯರೊಬ್ಬರು ತವರಿಗೆ ಮರಳಿ ನಮ್ಮ ನೆಲದ ಬವಣೆಯ ಪರಿಹಾರ ಮಾರ್ಗವಾಗಿ ಮಾಡಿದ ಜಾದೂ ಎಂದರೂ ಆದೀತು. ಸ್ಯಾಮ್ ಪಿತ್ರೊಡ ಎಂದೇ ಹೆಸರಾದ ಸತ್ಯನಾರಾಯಣ ಗಂಗಾರಾಂ ಪಿತ್ರೊಡ ಅದರ ಮಾಂತ್ರಿಕರು.

ಭಾರತಕ್ಕೆ ಮರಳಿಬಂದು ಇಲ್ಲಿನ ಸಂವಹನಕ್ಕೆಂದು ಕೈಹಾಕಿದ ಸ್ಯಾಮ್ ಅನೇಕರಿಗೆ ಭಾರತೀಯರೆಂದೇ ತಿಳಿದಿರಲಿಲ್ಲ. ಅದಕ್ಕೆ ಅವರ ಹೆಸರೂ ಸ್ಯಾಮ್ ಎಂಬುದು ಕಾರಣವಾಗಿತ್ತು. ಸತ್ಯನಾರಾಯಣ ಪಾಶ್ಚ್ಯಾತ್ಯರ ಬಾಯಲ್ಲಿ ಸುಲಭವಾಗಿ ಕರೆಯಲು ಮೊಟಕಾಗಿ ಸ್ಯಾಮ್ ಆಗಿದ್ದರು. ಒರಿಸ್ಸಾದ ತಿತಲ್‌ಗಡ್ ಎಂಬ ಸಣ್ಣ ಹಳ್ಳಿಯಿಂದ ಅಮೇರಿಕೆಗೆ ಹೋಗಿ ಉನ್ನತ ವಿದ್ಯಾಭ್ಯಾಸ ಮಾಡಿ, ಅಲ್ಲಿ ಬಹು ಸಾಧ್ಯತೆಗಳ ಜಗತ್ತಿನಲ್ಲಿ ತಂತ್ರಜ್ಞಾನದ ಸಾಧಕರಾಗಿ ಅನೇಕ ಆವಿಷ್ಕಾರಗಳನ್ನು ಮಾಡಿದವರು. ಎಷ್ಟೆಂದರೆ ಹೆಚ್ಚೂ ಕಡಿಮೆ ಒಂದು ನೂರು ಪೇಟೆಂಟುಗಳನ್ನು ಎಲೆಕ್ಟ್ರಾನಿಕ್ ಇನ್ನಿತರೆ ಉದ್ಯಮಗಳಲ್ಲಿ ಪಡೆದ ಇಂಜನಿಯರ್. ಅಷ್ಟೊಂದು ಗಳಿಕೆಯ ನಂತರವೂ ಅಮೆರಿಕಾದಂತಹ ಆಧುನಿಕ ದೇಶದಲ್ಲಿ ನೆಲೆಗೊಳ್ಳದೆ ಭಾರತಕ್ಕೆ ಬಂದು ಇಲ್ಲಿ ಏನಾದರೂ ಸಾಧಿಸುವ ಛಲ ಹೊತ್ತು, ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಜೊತೆಗೂಡಿ ನಮ್ಮ ದೇಶದ ಟೆಲಿಕಾಂ ಲೋಕವನ್ನೇ ಬದಲಿಸಿದ್ದು ಇದೀಗ ಇತಿಹಾಸ. ಅಷ್ಟೇ ಅಲ್ಲ ಈಗಲೂ ಹಳದಿ ಬಣ್ಣದ ಎಸ್‌ಟಿಡಿ ಬೂತ್‌ಗಳನ್ನು ನೆನಪಿಸಿಕೊಳ್ಳದವರೇ ಇಲ್ಲ. ಅದಕ್ಕೆಲ್ಲಾ ಕಾರಣರೆಂದರೆ ಸತ್ಯನಾರಾಯಣ ಗಂಗಾರಾಂ ಪಿತ್ರೊಡ. ಒಂದು ಕಾಲದಲ್ಲಿ ಬಹುಸಂಖ್ಯಾತ ಉದ್ಯೋಗಗಳನ್ನೇ ಸೃಷ್ಟಿಸಿದ್ದ ಖ್ಯಾತಿ ಈ ಟೆಲಿಫೋನ್ ಬೂತುಗಳದ್ದಾಗಿದ್ದರೆ ಆಶ್ಚರ್ಯವೇನಿಲ್ಲ. ಇಂದು ನಮ್ಮ ಎಲ್ಲಾ ಆಧುನಿಕ ಭಾರತೀಯರಲ್ಲಿ ಒಂದಲ್ಲಾ ಎರಡೆರಡು ಸಿಮ್ಮುಗಳಿರುವ ಮೊಬೈಲುಗಳು ಇದ್ದು, ಫೋನು ಒಂದು ಲಕ್ಸುರಿ ಅಲ್ಲವೇ ಅಲ್ಲ ಎಂಬುದಕ್ಕೂ ಮೂಲ ಕಾರಣರು ಸ್ಯಾಮ್.

ಸ್ಯಾಮ್ ಪಿತ್ರೊಡ ತಂದೆಯವರಾದ ಗಂಗಾರಾಂ ಪಿತ್ರೊಡ ಸಾಹಸಶೀಲ ಪ್ರವೃತ್ತಿಯವರಾದ ವ್ಯಕ್ತಿ. ಹಾಗೆಂದೇ ತಮ್ಮ ರಾಜ್ಯವಾದ ಗುಜರಾತನ್ನು ತೊರೆದು ದೂರದ ಒರಿಸ್ಸಾಕೆ ಬಂದು ನೆಲೆ ನಿಂತವರು. ಸ್ಯಾಮ್  ಕುಟುಂಬದ ಪೂರ್ವಜರೆಲ್ಲ ಬಡಗಿಗಳು ಮತ್ತು ಕಮ್ಮಾರಿಕೆ ಮಾಡಿಕೊಂಡೇ ಬಂದ ವಿಶ್ವಕರ್ಮ ಕುಲದವರು. ಅವರ ವಂಶದ ಹೆಸರಾಗಿರುವ `ಪಿತ್ರೊಡ’ ಎನ್ನುವುದು ಬಂದಿದ್ದು `ಪಿತರ್’ ಎನ್ನುವ ಶಬ್ದದಿಂದ. `ಪಿತರ್’ ಎಂದರೆ `ಹಿತ್ತಾಳೆ’ ಎಂದರ್ಥ. ಅಂದರೆ, ಅವರ ಪೂರ್ವಜರೆಲ್ಲ ಹೆಚ್ಚಾಗಿ ಮಾಡುತ್ತಿದ್ದುದು ಹಿತ್ತಾಳೆ ಕೆಲಸವನ್ನೇ. ಹೀಗಾಗಿಯೇ ಅವರ ಜಾತಿಗೆ `ಲೋಹರ್-ಸುತರ್’ ಎನ್ನುವ ಹೆಸರು. ಹೀಗೆಂದರೆ `ಮರಗೆಲಸದವರು ಮತ್ತು ಕಮ್ಮಾರಿಕೆಯವರು’ ಎಂದರ್ಥ. 

ಅಪ್ಪ ಗಂಗಾರಾಂ ಹೊಟ್ಟೆಪಾಡಿನ ಅನಿವಾರ್ಯತೆಗೆ ಸಿಲುಕಿ, ಗುಜರಾತಿನಿಂದ ಒರಿಸ್ಸಾಗೆ ವಲಸೆ ಬಂದ ಮೊದಲಿಗೆ ಇಲ್ಲಿ ರೈಲ್ವೆ ಹಳಿ ಹಾಕುವ ಕೆಲಸದಲ್ಲಿ ತಾವೂ ಒಬ್ಬ ಕೂಲಿಯಾಳಾಗಿದ್ದವರು. ಅಲ್ಲಿ ಅವರು ತಮ್ಮ ಧಣಿಯಿಂದ ಒಂದು ಗುಡಿಸಲನ್ನು ಬಾಡಿಗೆಗೆ ತೆಗೆದುಕೊಂಡು ಸ್ಯಾಮ್ ಅವರ ತಾಯಿ ಶಾಂತ ಜೊತೆಗೆ ಸಂಸಾರವನ್ನು ಹೂಡಿದರು. ಸ್ಯಾಮ್ ಅವರ ಅಕ್ಕ ಮಂಜುಳಾ, ಆಮೇಲೆ ಅಣ್ಣ ಮನೇಕ್ ಮತ್ತು ಕೊನೆಯಲ್ಲಿ ಸ್ಯಾಮ್- ಹುಟ್ಟಿದ್ದೆಲ್ಲ ಅಲ್ಲೇ. 1942ರಲ್ಲಿ ಅವರ ಜನನ. ನಂತರ ಸ್ವತಂತ್ರ ಮನೋಭಾವ ಮತ್ತು ಸಾಹಸಪ್ರವೃತ್ತಿಯವರೂ ಆದ ಅವರು ತಮ್ಮದೇ ಸ್ವಂತ ಸಣ್ಣ ಉದ್ದಿಮೆ ಆರಂಭಿಸಿದರು. ಅಷ್ಟರಲ್ಲೇ ಜೀವನದ ಆರಂಭದ ಜೊತೆಗೆ ಸಾಹಸಪ್ರಿಯತೆ, ಸ್ವತಂತ್ರ ಮನೋಭಾವವನ್ನು ಸ್ಯಾಮ್ ಅವರ ಅಪ್ಪನಿಂದ ರೂಢಿಸಿಕೊಂಡರು. ಮುಂದೆ ಇದೇ ಬಹುಶಃ ಅವರಿಗೆ ದೊಡ್ಡ ಮಾರ್ಗದರ್ಶಕನಾಗಿ ಸಹಕಾರಿಯಾಯಿತು. ಅದೇ ದೊಡ್ಡ ಕ್ರಾಂತಿಕಾರಕ ತಂತ್ರಜ್ಞರಾಗಿ ರೂಪುಗೊಳ್ಳುವಂತಾಯಿತು. ಹಾಗಾಗಿ 1964ರಲ್ಲಿ ಎಂ.ಎಸ್.ಸಿ ಪದವಿಯ ನಂತರ ಅಮೆರಿಕಾಕ್ಕೆ ವಿಶೇಷ ವ್ಯಾಸಂಗಕ್ಕೆ ಹೋದರು. ಅದೇ ಅವರ ಬಹು ಮುಖ್ಯ ತಿರುವಾಗಿ ಪರಿಣಮಿಸಿತು. ಅಲ್ಲಿಂದ ಇಂಜನಿಯರಿಂಗ್ ಕಲಿಕೆಯ ನಂತರ 1967ರಲ್ಲಿ ತಮ್ಮ ಅನ್ವೇಷಣೆಗೆ ಮೊದಲ ಪೇಟೆಂಟ್ ಪಡೆದರು. ಸುಮಾರು 20 ವರ್ಷಗಳ ದುಡಿಮೆ ಹಾಗೂ ಗಳಿಕೆಯ ನಂತರ ದೇಶ ಸೇವೆಯ ಗಮನದಿಂದ ಭಾರತಕ್ಕೆ ಬಂದರು. 

ಆಧುನಿಕ ಭಾರತದ ರುವಾರಿಯಾಗಿ ಡಿಜಿಟಲ್ ತಂತ್ರಜ್ಞಾನದ ಕನಸನ್ನು ರಾಜೀವ್ ಗಾಂಧಿಯವರ ಜೊತೆಯಲ್ಲಿ ಬಿತ್ತಿ ಬೆಳೆದು, ದೇಶವನ್ನು ಜಗತ್ತಿನ ಮುಖ್ಯವಾಹಿನಿಗೆ ಬರುವಂತೆ ಮಾಡುವಲ್ಲಿ ಕಾರಣರಾದರು. ಇವತ್ತು ಭಾರತವೇನಾದರೂ ಅಭಿವೃದ್ಧಿಯ ಪಥದಲ್ಲಿ ಡಿಜಿಟಲ್ ಅನ್ನುವ ಮಾತುಗಳನ್ನು ಬಳಸುತ್ತಿದ್ದರೆ ಅದರ ಮೂಲವೇ ಸ್ಯಾಮ್ ಪಿತ್ರೊಡರ ಒಳಗೊಳ್ಳುವಿಕೆಯಲ್ಲಿದೆ. ಅದಕ್ಕೆ ಅವರು ಪಡೆದ ಸಂಬಳ ವರ್ಷಕ್ಕೆ ಒಂದು ರೂಪಾಯಿ ಮಾತ್ರ. ಇವನ್ನೆಲ್ಲ ಅರ್ಥಮಾಡಿಕೊಳ್ಳಲು ಅವರ ದೂರದೃಷ್ಟಿಯನ್ನು ಮುಂದಿನ ಕೆಲವು ನಿದರ್ಶನಗಳನ್ನು ತಿಳಿಯಬೇಕಿದೆ. ಅವನ್ನಷ್ಟು ವಿವರವಾಗಿ ನೋಡುವುದು ಮುಖ್ಯವಾಗುತ್ತದೆ.

ಟೆಲಿಕಾಂ ಜಗತ್ತು

ಭಾರತಕ್ಕೆ ಸೇವೆ ಮಾಡುವ ಮನಸ್ಸಿನಿಂದ ಬಂದ ಸ್ಯಾಮ್ ಪಿತ್ರೊಡರು ಮೊದಲು ಕಂಡದ್ದೇ ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರನ್ನು. ಕೇವಲ ಹತ್ತು ನಿಮಿಷವೂ ಸಮಯ ಕೊಡದ ಪ್ರಧಾನಿಯಿಂದ ಗಂಟೆಗಿಂತಲೂ ಹೆಚ್ಚು ಸಮಯ ಬೇಡಿದ್ದಲ್ಲದೆ, ಸಾಧ್ಯಮಾಡಿ ಅವರ ದೃಷ್ಟಿಯನ್ನು ಪಡೆದರು. ಆಗಲೇ ಸಭೆಯಲಿದ್ದ ರಾಜೀವ್ ಗಾಂಧಿಯವರು ಸ್ವತಃ ವೈಮಾನಿಕ ವಿಜ್ಞಾನದ ವಿದ್ಯಾರ್ಥಿಯಾಗಿದ್ದರಿಂದ ವಿಶೇಷ ಆಕರ್ಷಣೆಯನ್ನು ಸ್ಯಾಮ್ ಕಡೆಗೆ ಹೊರಳಿಸಿದರು. ಮುಂದೆ ಇದೇ ಇಂದಿರಾ ನಂತರದ ಸ್ಥಾನ ಗಳಿಸಿದ ರಾಜೀವ್ ಸ್ಯಾಮ್ ಅವರ ಜೀವದ ಗೆಳೆಯರಾಗಿದ್ದು ದೇಶದ ಅಭಿವೃದ್ಧಿಯ ಹಿತಕ್ಕೆ ಕಾರಣವಾಯಿತು.

ರಾಜೀವರ ಜೊತೆಗೂಡಿದ ಸ್ಯಾಮ್ 1984ರಲ್ಲಿ ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರವೆಂಬ (C-DOT) ಸಂಸ್ಥೆಯನ್ನು ಹುಟ್ಟಿ ಹಾಕಿದರು. ಈ ಸಂಸ್ಥೆಯ ಉದ್ದೇಶವೇ ಸ್ಥಳೀಯ ತಂತ್ರಜ್ಞಾನವನ್ನು ಬೆಳೆಸುವುದರ ಜೊತೆಗೆ ದೇಶದ ಸಂವಹನ ಸಾಧ್ಯತೆಯನ್ನು ಇಲ್ಲಿನ ಯುವ ಪ್ರತಿಭೆಯಿಂದ ಕಟ್ಟಿಕೊಡುವುದೇ ಆಗಿತ್ತು. ಇದೆಲ್ಲವೂ ದೇಸಿಯವಾಗೆ ಆಗುವಂತೆ ಮಾಡಬೇಕಾದರೆ ಇಲ್ಲಿನ ಆಡಳಿತಶಾಹಿ ವ್ಯವಸ್ಥೆಯಿಂದ ರಾಜಕೀಯ ದಬ್ಬಾಳಿಕೆಯಿಂದ ಹೊರಬಂದು ಸಾಧಿಸಬೇಕಿತ್ತು. ಅದೆಲ್ಲವನ್ನೂ ಮಾಡಬೇಕಾದರೆ ಅಮೇರಿಕಾದಂತಹ ರಾಷ್ಟçದಲ್ಲಿ ಕಳೆದ ತಂತ್ರಜ್ಞರೊಬ್ಬರು ಮಾಡಿದ ಕಸರತ್ತನ್ನು ಈ ಪುಟ್ಟ ಲೇಖನದಲ್ಲಿ ವಿವರಿಸಲು ಸಾಧ್ಯವೇ ಇಲ್ಲ. ಅದನ್ನು ಸ್ವಲ್ಪವಾದರೂ ಊಹಿಸಬೇಕೆಂದರೆ ಇಂದಿಗೂ ಸರ್ಕಾರಿ ಕಚೇರಿಗಳಿಗೆ ಅಲೆದಾಟದ ಸಾಮಾನ್ಯ ಅನುಭವವನ್ನು ನೆನಪಿಸಿಕೊಂಡರೆ ಸಾಕು. ಸಾಲದಕ್ಕೆ 80ರ ದಶಕದ ಮೊದಲು ಫೋನುಗಳಿಗೆ ಪಟ್ಟ ಕಷ್ಟ ಅಥವಾ ಟೆಲಿಫೋನ್ ಇಲಾಖೆಯ ಅನುಭವಗಳನ್ನೂ ಕಂಡವರು ಆಲೋಚಿಸಿದರೆ ಮತ್ತೂ ಆದೀತು. ಇವೆಲ್ಲವನ್ನೂ ಮೆಟ್ಟಿ ಇಂದು ಒಂದೇ ದಿನದಲ್ಲಿ ಕೈಗೆ ಮೊಬೈಲನ್ನು ಪಡೆದು ಸಂವಹನ ಸಾಧ್ಯತೆಯನ್ನು ಪಡೆವ ಸಾಧನೆಯೇ ಸ್ಯಾಮ್ ಪಿತ್ರೊಡ. 

80ರ ದಶಕದಲ್ಲಿ ನಮ್ಮ ದೇಶವು 80 ಕೋಟಿ ಜನರಿಗೆ ಕೇವಲ 20 ಲಕ್ಷ ಟೆಲಿಪೋನ್ ಕನೆಕ್ಷನ್‌ಗಳನ್ನು ಹೊಂದಿದ್ದು, ಇಂದು ಹೆಚ್ಚೂ ಕಡಿಮೆ ಪ್ರತೀ ಪ್ರಜೆಯ ಕೈಯಲ್ಲಿ  ಫೋನುಗಳಿವೆ. ಇದು ಊಹಿಸಲೂ ಆಗದಂತಹ ಸಾಧನೆಯೇ ಸರಿ. ಇದನ್ನೆಲ್ಲಾ ಭಾರತೀಯ ಪ್ರತಿಭೆಯೇ ಯುವಜನತೆಯ ಸಹಕಾರದಿಂದ ದೇಸಿಯವಾಗೇ ಮಾಡಿದ್ದೂ ನಮ್ಮ ಕಾಲದ ದೊಡ್ಡ ಸಂಗತಿಯೇ. ಅಂದು ಹುಟ್ಟಿದ ಸಂವಹನದ ಕನಸುಗಳು ಇಂದು ದೇಶ ವ್ಯಾಪಿಯಾಗಿ ಅದಕ್ಕೆಂದೇ ಅನುಭವಿಸುತ್ತಿದ್ದ ಕಷ್ಟಗಳನ್ನು ಸಂಪೂರ್ಣ ಮರೆಸಿವೆ. ಅಷ್ಟು ಸುಲಭವಾಗಿ ಇಂದು ಎಲ್ಲರೂ ಸಂಪರ್ಕದಲ್ಲಿದ್ದಾರೆ. 

ಟೆಕ್ನಾಲಜಿ ಮಿಷನ್‌ಗಳು

ಟೆಕ್ನಾಲಜಿ ಮಿಷನ್‌ಗಳು ಸತ್ಯನಾರಾಯಣ ಪಿತ್ರೊಡರ ಕಲ್ಪನೆಯ ಕೂಸು. 1982ರಲ್ಲಿ ರಾಜೀವ್ ಗಾಂಧಿಯವರು ರಾಷ್ಟ್ರೀಯ (National Technology Mission) ಟೆಕ್ನಾಲಜಿ ಮಿಷನ್ ಎಂಬ ಸಂಸ್ಥೆಯನ್ನು ಸ್ಯಾಮ್ ಪಿತ್ರೊಡ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಥಾಪಿಸಿದರು. ಅದೊಂದು ಸಂಪೂರ್ಣ ಪಿತ್ರೊಡರೇ ಕಂಡ ದೇಶದ ಅಭಿವೃದ್ಧಿಯ ಮಾರ್ಗವಾಗಿದ್ದು ರಾಜೀವರ ಜೊತೆಯಲ್ಲಿ ಅದನ್ನು ಆಲೋಚನೆಗಿಳಿಸಿ, ಕಾರ್ಯಸಾಧುವಾಗಿಸಿದರು. ಇದರ ಪ್ರಮುಖ ಮಾರ್ಗಸೂಚಿಗಳೆಂದರೆ ದೇಶದ ಮುಖ್ಯವಾದ ಐದು ಸಮಸ್ಯೆಗಳನ್ನು ಪರಿಹಾರದತ್ತ ಆಲೋಚಿಸುವುದೇ ಆಗಿತ್ತು. ಆಗ ಆರಂಭಗೊಂಡ ಈ ಪ್ರಮುಖಸೂಚಿಗಳಲ್ಲಿ ಕುಡಿಯುವ ನೀರು, ರೋಗನಿರೋಧಕತೆಯನ್ನು ಸಾಧಿಸುವುದು. ಸಾಕ್ಷರತೆ, ಎಣ್ಣೆಕಾಳುಗಳಲ್ಲಿ ಸ್ವಾವಲಂಬನೆ, ಟೆಲಿಕಮ್ಯುನಿಕೇಷನ್. ನಂತರದಲ್ಲಿ ಐದಕ್ಕೆ ಆರನೆಯದಾಗಿ ಇವುಗಳ ಜೊತೆಗೆ ಹೈನುಗಾರಿಕೆಯು ಸೇರಿಕೊಂಡಿತು. ಇವೆಲ್ಲವನ್ನೂ ಸ್ವಾವಲಂಬನೆಯ ಕನಸಾಗಿ ದೇಶದ ಅಭಿವೃದ್ಧಿಯ ಹಿತದಲ್ಲಿ ಸ್ಥಾಪಿಸಿದ ಅಸಾಧ್ಯ ತಂತ್ರಜ್ಞರು ಪಿತ್ರೊಡರು.

ಭಾರತದಂತಹ ದೊಡ್ಡ ದೇಶದಲ್ಲಿ ಇವೆಲ್ಲವನ್ನೂ ಸಾಧ್ಯಮಾಡಿದ ಈ ಕೆಲಸಗಳು ಮಿಷನ್ ಮಾದರಿಯಲ್ಲಿ ಅಂದರೆ ಆಂದೋಲನದ ರೀತಿಯಲ್ಲಿ ನಡೆದವು. ಇವತ್ತಿಗೂ ನಡೆಯುತ್ತಿರುವ ಮಕ್ಕಳಿಗೆ ಲಸಿಕೆ ಹಾಕುತ್ತಿರುವ ಆಂದೋಲನವನ್ನು ಗಮನಿಸಿದರೆ ಇದರ ಹಿಂದಿನ ಆಲೋಚನೆ ಹಾಗೂ ಶಕ್ತಿ ತಿಳಿದೀತು. ಯಾಕೆಂದರೆ ಇವತ್ತು ಲಸಿಕೆಯ ನಿರಂತರ ಬಳಕೆಯಿಂದ ಹೆಚ್ಚೂ ಕಡಿಮೆ ಪೋಲಿಯೋವನ್ನು ನಿಯಂತ್ರಿಸಲಾಗಿದೆ. ಪೋಲಿಯೋ ಲಸಿಕೆಯ ದಿನ ಸಣ್ಣ ಹಳ್ಳಿಯಲ್ಲೂ, ಅಷ್ಟೇಕೆ ಬಸ್‌ಸ್ಟ್ಯಾಂಡ್‌ಗಳಲ್ಲೂ ಲಸಿಕೆಯ ಡಬ್ಬಗಳನ್ನು ಹೊತ್ತು ಅಲೆದಾಡುವ ವ್ಯಕ್ತಿಗಳನ್ನು ಕಂಡಿರಬಹುದು. ಇಂದಿಗೂ ಪ್ರತೀವರ್ಷ 20 ದಶಲಕ್ಷ ಗರ್ಭಿಣಿ ಸ್ತ್ರೀಯರಿಗೂ ಮತ್ತು 20 ದಶಲಕ್ಷ ಮಕ್ಕಳಿಗೂ ಪ್ರತಿರೋಧವನ್ನು ಉಂಟುಮಾಡುವ ಲಸಿಕೆಯನ್ನು ಹಾಕುವುದು ಸುಲಭದ ಕೆಲಸವಲ್ಲ.

ಹಳ್ಳಿ ಹಳ್ಳಿಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಪ್ರತಿಪ್ರಜೆಗೂ ದಿನಕ್ಕೆ 40 ಲೀಟರ್‌ಗಳಂತೆ ಕೊಡುವ ದಿನಗಳನ್ನು ಕನಸು ಕಂಡು ನನಸಾಗಿಸಿದ್ದು ಟೆಕ್ನಾಲಜಿ ಮಿಷನ್. ವಯಸ್ಕರ ಶಿಕ್ಷಣ ಯೋಜನೆಯಲ್ಲಿ ಲಕ್ಷಾಂತರ ಜನತೆಯ ಸಾಕ್ಷರತೆಯನ್ನು ಸಾಧಿಸಿದ್ದೂ ಟೆಕ್ನಾಲಜಿ ಮಿಷನ್. ಇದೇ ರೀತಿ ನಮ್ಮ ದೇಶವೂ ಎಣ್ಣೆ ಕಾಳು ಉತ್ಪಾದನೆಯಲ್ಲಿ ಸ್ವಾವಲಂಭನೆಯು ಅಗತ್ಯಗಳಲ್ಲಿ ಒಂದಾಗಿತ್ತು. ಇದರಿಂದ ಎಣ್ಣೆಕಾಳುಗಳ ಆಮದನ್ನು ತಪ್ಪಿಸುವುದು ಸಾಧ್ಯವಿತ್ತು. ಏಕೆಂದರೆ ಇದಕ್ಕೆಂದೇ ಲಕ್ಷಾಂತರ ರೂಪಾಯಿಗಳ ವಿದೇಶಿ ವಹಿವಾಟು ವ್ಯಯವಾಗುತ್ತಿತ್ತು. ಇವತ್ತು ನಮ್ಮ ರಾಜ್ಯದಲ್ಲೂ ಸಾಧ್ಯವಾದ ಕರ್ನಾಟಕ ಎಣ್ಣೆ ಕಾಳುಗಳ ಫೆಡರೇಶನ್ ಕೂಡ ಅದರ ಫಲವೇ! ಇದನ್ನು ಹೈನು ಉದ್ಯಮದ ಪಿತಾಮಹ ಡಾ.ಕುರಿಯನ್ ಮಾರ್ಗದರ್ಶನದಲ್ಲಿ ಸಾಧಿಸಿದ್ದು ಇಂದು ಇತಿಹಾಸ. ಅದರ ಜೊತೆಯಲ್ಲೇ ಹಾಲು ಉತ್ಪಾದನೆಯನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲೇ ಔನ್ಯತ್ಯ ಸಾಧಿಸಿದ್ದೂ ಟೆಕ್ನಾಲಜಿ ಮಿಷನ್ನಿನ ಹೆಗ್ಗಳಿಕೆ.  

ಟೆಲಿಕಮ್ಯುನಿಕೇಷನ್‌ನ ಅತೀ ದೊಡ್ಡ ಸಾಧನೆಯನ್ನು ಸ್ಯಾಮ್ ಪಿತ್ರೊಡರು ನನಸಾಗಿಸಿದರು.  1980ರ ದಶಕದಲ್ಲಿದ್ದ ಕೇವಲ 20 ದಶಲಕ್ಷ ಟೆಲಿಫೋನುಗಳು ಇಂದು 117.02 ಕೋಟಿ ಫೋನು ಕನೆಕ್ಷನ್‌ಗಳನ್ನು ಹೊಂದಿರುವ ದೇಶ ನಮ್ಮದು. ಸಂವಹನವೆಂದರೆ ದುಬಾರಿ ಮಾತ್ರವಲ್ಲದೆ ಸಾಧ್ಯವೇ ಅನ್ನಿಸುವಷ್ಟು ಕಷ್ಟದ ದಿನಗಳನ್ನು ಎದುರಿಸಿದ್ದ ಭಾರತವು ಇಂದು ಕೈಬೆರಳಲ್ಲಿ ದೇಶಾದ್ಯಂತ ಮಾತನಾಡುವ -ಅದೂ ಸುಲಭ ದರದಲ್ಲಿ- ಆಗುಮಾಡಿದ್ದು ಪಿತ್ರೊಡರ ಟೆಕ್ನಾಲಜಿ ಮಿಷನ್ನಿನ ಬಹು ದೊಡ್ಡ ಕೊಡುಗೆ. ಸಂವಹನಕ್ರಾಂತಿಯ ನಿಜವಾದ ಹರಿಕಾರರಾಗಿ ದೇಶಕಂಡ ಅಪರೂಪದ ತಂತ್ರಜ್ಞ ಸತ್ಯನಾರಾಯಣ ಗಂಗಾರಾಂ ಪಿತ್ರೊಡ.

ರಾಷ್ಟ್ರೀಯ ಜ್ಞಾನ ಕಮೀಷನ್ (National Knowledge Commission)

ರಾಷ್ಟ್ರೀಯ ನಾಲೆಡ್ಜ್ (ಜ್ಞಾನ) ಕಮೀಷನ್ ಸತ್ಯನಾರಾಯಣರ ಮತ್ತೊಂದು ಅಲೋಚನೆಯ ಸಾಧ್ಯತೆ. ನಮಗೆಲ್ಲಾ ಅನ್ನಿಸುತ್ತಿರುವಂತೆ ಯಾವುದೇ ದೇಶವೊಂದು ತನ್ನ ಅಭಿವೃದ್ಧಿಯ ಪಥದಲ್ಲಿ ಮುನ್ನೆಡೆಯಲು ಜ್ಞಾನದ ಅನ್ವೇಷಣೆಯ ಜೊತೆಗೆ ಅದರ ಸಹಚಾರಿಯಾಗಿ ಮುನ್ನೆಡೆಯಬೇಕಾಗುವುದು ಅನಿವಾರ್ಯ. ಇಂತಹದ್ದೊಂದು ಜ್ಞಾನ ಬ್ಯಾಂಕ್ ಇದ್ದರೆ ಬೇಕಾದಾಗ ಜ್ಞಾನವನ್ನು ಪಡೆಯುವುದು ಸುಲಭವಲ್ಲವೇ? ರಾಷ್ಟ್ರಮಟ್ಟದಲ್ಲಿ ಆಲೋಚಿಸುವ ಹಾಗೂ ದೇಶದ ಏಳಿಗೆಗೆ ಅನುಸರಿಸುವಂತೆ ಕೊಡುವ ಶಿಫಾರಸ್ಸುಗಳು, ಸಲಹೆಗಳು ಮಾರ್ಗದರ್ಶಕವಲ್ಲವೇ? ಇದಕ್ಕೆ ಸಾಕಷ್ಟು ಆಲೋಚನೆಗಳ ಸಂಪನ್ಮೂಲ ಇದ್ದದ್ದು ನಿಜ.

ಇಂದಿನ ಸಮಾಜದಲ್ಲಿ ಯುವಪೀಳಿಗೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗುವುದು ಸಹಜ. ನಿಜವಾಗಿಯೂ ಯುವಶಕ್ತಿಯು ಸಮಾಜದ ಬಲು ದೊಡ್ಡ ಸಂಪನ್ಮೂಲ. ಅದೃಷ್ಟಕ್ಕೆ ಭಾರತವು ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಹೆಚ್ಚೂ ಕಡಿಮೆ 60 ಕೋಟಿಗೂ ಮಿಕ್ಕಿ 25 ವರ್ಷದೊಳಗಿನ ಯುವಕರನ್ನು ಹೊಂದಿದ್ದು ಅವರೆಲ್ಲಾ ಶಿಕ್ಷಣ, ಆಲೋಚನೆಗಳಲ್ಲಿ ದೇಶ ಮುನ್ನಡೆಸಲು ಪ್ರಮುಖವಾಗಿದ್ದಾರೆ. ಅವರನ್ನೆಲ್ಲಾ ಜ್ಞಾನದ ಎಳೆಯಲ್ಲಿ ಮುಂದೆ ಕೊಂಡೊಯ್ಯುವ ದೇಶವಾದರೆ ನಮ್ಮದು ಅದ್ಭುತ ದೇಶವಾಗುವುದಲ್ಲವೇ? ಇಂತಹದಕ್ಕೆಲ್ಲಾ ರಾಷ್ಟ್ರಮಟ್ಟದಲ್ಲಿ ಮಾಡಬೇಕಾದ ಚಿಂತನೆಯನ್ನು ಕಟ್ಟಿಕೊಡುವ ಕೆಲಸವನ್ನು ಸೃಜನಶೀಲ ಮನಸ್ಸಿನ ಹಿರಿಯ ಚಿಂತಕರು ಒಂದೆಡೆ ಸೇರಿ ಮಾಡಿದಲ್ಲಿ ಎಲ್ಲಾ ಯುವಪೀಳಿಗೆಯು ದೇಶಕಟ್ಟುವ ಕೆಲಸದಲ್ಲಿ ಭಾಗಿಯಾಗುವುದಲ್ಲವೇ? ಇದೇ ಹಿನ್ನೆಲೆಯಿಂದ ಒಂದು ಅತ್ಯುನ್ನತ ಸಮಿತಿಯಾಗಿ ರಾಷ್ಟ್ರೀಯ ಜ್ಞಾನ ಆಯೋಗ ಜಾರಿಗೆ ಬಂತು. ಇದು ನೇರವಾಗಿ ರಾಷ್ಟ್ರದ ಪ್ರಧಾನಮಂತ್ರಿಗಳ ಸಲಹೆಗಾರರಂತೆ ಕೆಲಸ ಮಾಡುತ್ತ ದೇಶಕಟ್ಟುವ ಕೆಲಸದಲ್ಲಿ ಜ್ಞಾನ ಉಪಾಯಗಳನ್ನು ಕೊಡುವ ಕೆಲಸ ಮಾಡಿತು. ಜೂನ್ 2005ರಲ್ಲಿ ಸಂವಿಧಾನ ಬದ್ಧವಾಗಿ ಜಾರಿಗೆ ಬಂದ ಆಯೋಗವು ಅದೇ ವರ್ಷದ ಅಕ್ಟೋಬರ್‌ನಿಂದ ಮೂರು ವರ್ಷಗಳ ಕಾಲ ನಿರಂತರವಾಗಿ ಜಾರಿಯಲ್ಲಿದ್ದು ಜ್ಞಾನದ ಕನಸುಗಳನ್ನು ನನಸಾಗಿಸುವ ಯೋಜನೆಗಳನ್ನು ನಿರೂಪಿಸಿ ರಾಷ್ಟ್ರಕ್ಕೆ ಸಮರ್ಪಿಸುವ ನಿರ್ಧಾರ ಕೈಗೊಂಡಿತು.

 ಆಗಿನ ಪ್ರಧಾನಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ಅವರು ಜ್ಞಾನಆಯೋಗದ ಕೆಲಸಗಳನ್ನು ಸ್ವಾತಂತ್ರೋತ್ತರವಾಗಿ ದೇಶಕಟ್ಟುವ ಎರಡನೆಯ ಮಹಾನ್ ದರ್ಶನವೆಂದು ಬಣ್ಣಿಸಿದರು. ಜ್ಞಾನದ ಮುಂಚೂಣಿಯೇ ಶಿಕ್ಷಣ, ಸಂಶೋಧನೆಗಳಿಂದ ದೇಶದ ಸಾಮರ್ಥ್ಯವನ್ನು ಕಟ್ಟುವ ಕೆಲಸ. ಆಗಷ್ಟೆ 21ನೇ ಶತಮಾನಕ್ಕೆ ಕಾಲಿಟ್ಟ ಹೊಸತರಲ್ಲಿ ದೇಶವು ಇಂತಹದ್ದೊಂದು ಭರವಸೆಯನ್ನು ಬೇಡುತ್ತಿತ್ತು. ಅದಕ್ಕೆ ಪೋಷಕರಾಗಿ ನಿಂತ ಸ್ಯಾಮ್ ಪಿತ್ರೊಡರು ದೇಶದ ಇತರೇ ಮಹಾನ್ ಚಿಂತಕರ ಚಾವಡಿಯನ್ನು ರೂಪಿಸಿಕೊಟ್ಟರು. 21ನೆಯ ಶತಮಾನದ ಆರಂಭದ ಭರವಸೆಯ ಕನಸುಗಳು ವಿಜ್ಞಾನ ಮತ್ತು ತಂತ್ರಜ್ಞಾನ, ಇ-ಆಡಳಿತ, ಜ್ಞಾನದ ಸಾರ್ವತ್ರಿಕತೆ, ಶಿಕ್ಷಣದ ಸಾಧ್ಯತೆಗಳು ಇವೇ ಮುಂತಾದವುಗಳಾಗಿ ನೆಲೆಗೊಂಡವು. ಇಂದು ಈ ನಮ್ಮ ರಾಜ್ಯದಲ್ಲೇ ಸುಮಾರು ಪ್ರತೀ ಜಿಲ್ಲೆಯಲ್ಲೂ ಇಂಜನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜು, ಅಷ್ಟೇಕೆ ವಿಶ್ವವಿದ್ಯಾಲಯಗಳನ್ನು ಕಾಣುತ್ತಿದ್ದರೆ, ಅದೆಲ್ಲವೂ ಜ್ಞಾನಆಯೋಗದ ಭರವಸೆಯ ಸಲಹೆಗಳ ಫಲ. ಸ್ವಲ್ಪವಾದರೂ ಪಾರದರ್ಶಕ ಆಡಳಿತವು ಜಾರಿಯಾಗುತ್ತಿದೆ ಅನ್ನಿಸಿದರೆ ಅದೂ ಕೂಡ ಜ್ಞಾನಆಯೋಗದ ಚಿಂತನೆಗಳ ಕೂಸೆ.

ರಾಷ್ಟ್ರೀಯ ಜ್ಞಾನ ಆಯೋಗವೇನು ಕೇವಲ ದೆಹಲಿಯಲ್ಲಿ ಕುಳಿತು ಭಾಷಣ ಚರ್ಚೆಗಳ ಮೂಲಕ ಮಾಂತ್ರಿಕವಾಗಿ ರೀತಿ ರಿವಾಜುಗಳ ರೂಪಿಸಲಿಲ್ಲ. ಪ್ರತೀ ರಾಜ್ಯಕ್ಕೂ ಜ್ಞಾನಆಯೋಗಗಳು ಜಾರಿಗೆ ಬಂದವು. ಅವುಗಳು ಕೂಡ ರಾಜಧಾನಿಗಳ ಮಟ್ಟದವೇ ಆಗಿರಲಿಲ್ಲ. ಸುಮಾರು 300 ವಿವಿಧ ಪ್ರಕಾರಗಳಲ್ಲಿಯ  ವೈವಿಧ್ಯಮಯ ಚಿಂತನೆಗಳು ಸುಮಾರು 27 ಪ್ರಮುಖ ವಿಚಾರಗಳಲ್ಲಿ ಹೊರಬಂದವು. ಕೃಷಿಯ ಉದಾಹರಣೆಯನ್ನು ಗಮನಿಸುವುದಾದರೆ, ಕೃಷಿಯನ್ನು ಒಳಗೊಳ್ಳುವ ಸ್ವಾವಲಂಭನೆಯ ದೇಸಿ ಜ್ಞಾನವೂ ಚರ್ಚೆಯ ಭಾಗವಾಗಿತ್ತು, ಶಿಫಾರಸ್ಸಿನಲ್ಲಿ ಸೇರಿಹೋಗಿತ್ತು. ಇಷ್ಟೆಲ್ಲವೂ 2005ರ ಗಾಂಧಿ ಜಯಂತಿಯಂದು ಆರಂಭಗೊಂದು ಮೂರು ವರ್ಷಗಳ ಕಾಲ ಮುಂದೆ 2008ರ ಗಾಂಧಿ ಜಯಂತಿಯವರೆಗೂ ಚಿಂತನ ಮಂಥನಗಳು ರಾಷ್ಟ್ರಾದ್ಯಂತ ನಡೆದವು. ಅವುಗಳು ಎಲ್ಲ ಮಟ್ಟದಲ್ಲೂ ಮಾಹಿತಿ ಸಂಗ್ರಹಣೆ ಹಾಗು ಚರ್ಚೆಗಳನ್ನು ಒಳಗೊಂಡಿದ್ದವು. ಪ್ರತೀ ರಾಜ್ಯಕ್ಕೂ ಹಬ್ಬಿದ್ದವು.

ಸ್ಯಾಮ್ ಪಿತ್ರೊಡರ ಬಗ್ಗೆ ಬರೆಯುವುದೆಂದರೆ ಒಂದು ಬಗೆಯಲ್ಲಿ ಆಧುನಿಕ ಭಾರತದ ಬಗೆಗೆ ಬರೆದಂತೆ. ಅದಕ್ಕೆಂದೇ ಅವರ ಆತ್ಮಕಥೆಯನ್ನು “ಡ್ರೀಮಿಂಗ್ ಬಿಗ್ – ಮೈ ಜರ್ನಿ ಟು ಕನೆಕ್ಟ್ ಇಂಡಿಯಾ” ಎಂದೇ ಕರೆದಿದ್ದಾರೆ. ಭಾರತವನ್ನು ಸಂವಹನ ಮೂಲಕ ಬೆಸೆಯುವ ಕೆಲಸವನ್ನು ದಶಕಗಳ ಕಾಲ ತಮ್ಮ ಕೌಟುಂಬಿಕ ಕೆಲಸವನ್ನು ಬದಿಗೊತ್ತಿ ಸಾಧಿಸಿದ್ದಾರೆ. ಇದಕ್ಕೆಂದು ಇಂದು ಅನೇಕ ಸಾಧ್ಯತೆಗಳನ್ನು ಕಾಣುತ್ತಿದ್ದೇವೆ. ಕೇವಲ ಅವರ ಜ್ಞಾನಆಯೋಗವನ್ನೇ ಮುಂದಿಟ್ಟು ಅದರ ಸಾರವನ್ನು ಅರಿಯುವುದಾದರೆ ಅದು ಈ ಕೆಳಗಿನ ಆಧುನಿಕ ಅಭಿವೃದ್ಧಿಯನ್ನು ನಮ್ಮ ಮುಂದೆ ತೆರೆದಿಡುತ್ತದೆ. (ಈ ಪುಸ್ತಕವನ್ನು ಕನ್ನಡಕ್ಕೆ ನನ್ನ ಗೆಳೆಯ ಜಯಪ್ರಕಾಶ ನಾರಾಯಣ ಅನುವಾದಿಸಿದ್ದಾರೆ, ಅದಕ್ಕೆ ನನ್ನ ಮುನ್ನುಡಿಯ ಬರಹವಿದೆ. ಅವರೊಡನೆ ಕಳೆದ ಸುಮಾರು ಒಂದೂವರೆ ಗಂಟೆ ಕೂಡ ಅತ್ಯಮೂಲ್ಯವಾದ ಕ್ಷಣ)

*     21ನೆಯ ಶತಮಾನಕ್ಕೆ ಭಾರತವನ್ನು ಸಜ್ಜುಮಾಡಲು ಜ್ಞಾನವನ್ನೇ ಪ್ರಮುಖ ಅಸ್ತ್ರವನ್ನಾಗಿಸಿ, ಅದಕ್ಕೆ ಬೇಕಾದ ಶೈಕ್ಷಣಿಕ ಸಾಧ್ಯತೆಗಳನ್ನು ಕಟ್ಟುವುದು. * ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರಗಳ ಪ್ರಯೋಗಾಲಯಗಳಲ್ಲಿ ಜ್ಞಾನವನ್ನು ವಿಕಸಿಸುವ ಕಾರ್ಯಗಳ ಉತ್ತೇಜನೆ. * ಬೌದ್ಧಿಕ ಆಸ್ತ್ತಿ ಹಕ್ಕುಗಳ ನಿರ್ವಹಣೆಗೆ ಯೋಗ್ಯವಾದಂತಹ ಸಂಸ್ಥೆಗಳ ಅಭಿವೃದ್ಧಿ. * ಕೃಷಿ ಮತ್ತು ಉದ್ದಿಮೆ ಎರಡರಲ್ಲೂ ಜ್ಞಾನ ಬಳಕೆ ಹಾಗೂ ಅನ್ವಯವನ್ನು ಉತ್ತೇಜಿಸುವುದು * ಸರ್ಕಾರದ ಯಾವುದೇ ಸೇವೆಯಲ್ಲಿ, ಆಡಳಿತ ನಿರ್ವಹಣೆಯೂ ಸೇರಿದಂತೆ ಜ್ಞಾನವನ್ನೇ ಪ್ರಮುಖ ಅಸ್ತçವನ್ನಾಗಿಸಿ ಅಳವಡಿಸುವುದು. ಇದರಿಂದ ಸಾಧ್ಯವಾದಷ್ಟು ಪಾರದರ್ಶಕತೆಯನ್ನು ವಿಕಾಸಗೊಳಿಸುವುದು.

ಇಷ್ಟೊಂದು ದೇಶದ ಕೆಲಸಗಳ ಮಧ್ಯೆಯೂ ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳನ್ನೂ ಮುನ್ನೆಡೆಸುತ್ತಿರುವ ಸ್ಯಾಮ್ ಪಿತ್ರೊಡ ನಿಜಕ್ಕೂ ನಮ್ಮೆಲ್ಲಾ ಯುವಜನತೆಗೆ ದೊಡ್ಡ ಮಾದರಿ. ಚಿಕಾಗೋದಲ್ಲಿ ನೆಲೆಕಂಡಿರುವ ಸ್ಯಾಮ್ ಪಿತ್ರೊಡ ಅವರು ಹೆಂಡತಿ ಅಂಜನಾ ಮತ್ತಿಬ್ಬರು ಮಕ್ಕಳು (ಮಗ ಸಲೀಲ್ ಹಾಗೂ ಮಗಳು ರಾಜಲ್) ಹಾಗೂ ಇದೀಗ ಮೊಮ್ಮಗಳು ಅರಿಯಾಳೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಅವರೊಬ್ಬ ಮಹಾನ್ ಕನಸುಗಾರ, ಅನ್ವೇಷಕ, ಇಂಜನಿಯರ್, ಆಡಳಿತಗಾರ. ಎಲ್ಲಕ್ಕೂ ಮಿಗಿಲಾಗಿ ಮಾನವತಾವಾದಿ.

ಅವರ ಸೇವೆಗಾಗಿ ಭಾರತ ಸರ್ಕಾರವು ಉನ್ನತ ನಾಗರೀಕ ಗೌರವವಾದ ಪದ್ಮಭೂಷಣವನ್ನು 2009ರಲ್ಲಿ ಕೊಟ್ಟು ಗೌರವಿಸಿದೆ. ದೇಶ ವಿದೇಶಗಳ ಹಲವಾರು ವಿಶ್ವವಿದ್ಯಾಲಯಗಳು ಸುಮಾರು 20ಕ್ಕೂ ಹೆಚ್ಚು ಗೌರವ ಡಾಕ್ಷರೇಟ್ ಪದವಿಗಳನ್ನು ನೀಡಿವೆ. ಅಂತಾರಾಷ್ಟ್ರೀಯ ಟೆಲಿಕಮೀಷನ್ ಯೂನಿಯನ್ ವಿಶೇಷ ಗೌರವವನ್ನು ಪಿತ್ರೊಡರಿಗೆ ನೀಡಿದೆ. ವಿಶ್ವಸಂಸ್ಥೆಯೂ ಸಹಾ ಬ್ರಾಡ್‌ಬ್ಯಾಂಡ್ ಕಮೀಷನ್ನಿನ ಸ್ಥಾಪಕ ಕಮೀಷನರ್ ಆಗಿ ತೊಡಗಿಸಿಕೊಂಡಿತ್ತು.

ಉತ್ತಮ ತಂತ್ರಜ್ಞಾನಿಯೂ ಚಿಂತಕರೂ ಅಗಿದ್ದಂತೆ ಉತ್ತಮ ಬರಹಗಾರರೂ ಆಗಿರುವ ಸ್ಯಾಮ್ ಪಿತ್ರೊಡ ತಮ್ಮ ಆತ್ಮಕತೆಯೂ ಸೇರಿದಂತೆ ಹಲವಾರು ಪುಸ್ತಕಗಳನ್ನು ಇಂಗ್ಲೀಶಿನಲ್ಲಿ ಬರೆದಿದ್ದಾರೆ. ಆತ್ಮಕತೆಯನ್ನು ಹೊರತು ಪಡಿಸಿ ಅನೇಕವನ್ನು ಅವರ ಸ್ವಂತ ವೆಬ್ ಪುಟ (https://www.sampitroda.com/) ದಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. ಮುಖ್ಯವಾಗಿ ಹೆಸರಿಸಬಹುದಾದರೆ: ಎಕ್ಸ್ಪ್ಲೋಡಿಂಗ್ ಫ್ರೀಡಂ: ರೂಟ್ಸ್ ಇನ್ ಟೆಕ್ನಾಲಜಿ, ವಿಷನ್ ವ್ಯಾಲ್ಯೂಸ್ ಮತ್ತು ವೆಲಾಸಿಟಿ, ಫೌಂಡೇಷನ್ ಫಾರ್ ದ ಫ್ಯೂಚರ್, ಹಾಗೂ ಮಾರ್ಚ್ ಆಫ್ ಮೊಬೈಲ್ ಮನಿ ಮುಂತಾದವು.

ತಂತ್ರಜ್ಞಾನವು ಏನಾದರೂ ಮೋಡಿಯನ್ನು, ಮಾಂತ್ರಿಕತೆಯನ್ನು ಭಾರತದ ಸಂದರ್ಭದಲ್ಲಿ ಮಾಡಿದ್ದರೆ ಅವನ್ನೆಲ್ಲಾ ನಾವೀಗ ಅನುಭವದ ಮೂಲಕ ಸವಿಯುತ್ತಿದ್ದೇವೆ. ಪ್ರಯಾಣಕ್ಕೆ ಟಿಕೇಟ್ ಕಾದಿರಿಸುವಿಕೆ, ಯಾವುದಾದರೂ ಫೀಜು ಕಟ್ಟುವ ಕೆಲಸ, ಜಮೀನಿನ ಪಹಣಿ ಪಡೆಯುವ ಕೆಲಸ, ಹಣದ ವರ್ಗಾವಣೆ ಹೀಗೆ ಎಲ್ಲವೂ ಬೆರಳ ತುದಿಗೆ ಬಂದಿದ್ದರ ಹಿಂದೆ ಜ್ಞಾನದ ಬಳಕೆಯ ಕನಸುಗಳನ್ನು ಬೆಸೆಯಲಾಗಿದೆ. ಆ ಬೆಸುಗೆಗೆ ಎರಕ ಹೊಯ್ದು ಕುಸುರಿ ಕೆಲಸವನ್ನು ಸ್ಯಾಮ್ ಪಿತ್ರೋಡ ಮಾಡಿದ್ದಾರೆ. ವಿಶ್ವಕರ್ಮರಾಗಿದ್ದು ನಿಜಕ್ಕೂ ದೇಶ ಕಟ್ಟುವಿಕೆಗೆ ದುಡಿದಿದ್ದಾರೆ. ಅದಕ್ಕಾಗಿ ಯಾವುದೇ ಲಾಭದ ವಹಿವಾಟನ್ನೂ ಮುಂದಿಟ್ಟವರಲ್ಲ. ಬ್ರಿಟೀಷರ ವಸಾಹತುಶಾಹಿಧೋರಣೆಯನ್ನು ಆಡಳಿತದ ಪ್ರತೀ ಹಂತದಲ್ಲೂ ಕಾಣುವ ಸ್ವಾತಂತ್ರದ ನಂತರದ ದಿನಗಳಲ್ಲಿ ಆಧುನಿಕ ದೇಶ ಕಟ್ಟುವ ಕೆಲಸವನ್ನು ಮಾಡಿದವರು ಸತ್ಯನಾರಾಯಣ ಗಂಗಾರಾಂ ಪಿತ್ರೊಡ. ನಮ್ಮ ದೇಶದವರೇ ಎಂಬುದೂ ಅನೇಕರಿಗೆ ತಿಳಿಯದ ಸಂಗತಿ. ಸ್ಯಾಮ್ ಹೆಸರಿನಿಂದಾಗಿ ಅವರೊಬ್ಬ ಪಾಶ್ಚ್ಯಾತ್ಯರೇ ಆಗಿದ್ದರು. ಗಾಂಧಿಯ ನಂತರ ದೇಶ ಕಟ್ಟುವ ಕೆಲಸದಲ್ಲಿ ನವನಿರ್ಮಾಣವನ್ನು ಆಲೋಚಿಸಿದ್ದು ಲೋಕನಾಯಕ ಜಯಪ್ರಕಾಶ ನಾರಾಯಣ. ಅದನ್ನು ಆಧುನಿಕ ತಂತ್ರಜ್ಞಾನಗಳ ಮೂಲಕ ಸಾಧ್ಯವಾಗಿಸಿದ್ದು ಪಿತ್ರೊಡ.

ಎಷ್ಟೊಂದು ಕನಸುಗಳ ಸಾಕ್ಷಾತ್ಕರಿಸಿ ಅನೇಕ ಮನಸುಗಳ ಗೆದ್ದ ಸ್ಯಾಮ್ ಪಿತ್ರೊಡರೂ ಸಾಮಾನ್ಯರಂತೆ ಅನಾರೋಗ್ಯದಿಂದ ಬಳಲಿದ್ದಾರೆ, ಸೋತಿದ್ದಾರೆ. ಕ್ಯಾನ್ಸರ್‌ಗಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ, ಹೃದಯ ತೊಂದರೆಗಾಗಿ ಬೈ-ಪಾಸ್ ಚಿಕಿತ್ಸೆಗೆ ಒಳಗಾಗಿದ್ದಾರೆ. ಎಲ್ಲದರ ನಡುವೆಯೇ ದೇಶವನ್ನು ತಾಂತ್ರಿಕ ಆಲೋಚನೆಗಳ ಮೂಲಕ ಗೆಲ್ಲಿಸಿದ್ದಾರೆ. ಇಲ್ಲದಿದ್ದರೆ ೨೧ನೆಯ ಶತಮಾನದಲ್ಲಿ ನಾವು ಆಧುನಿಕ ಜಗತ್ತನ್ನು ಪ್ರತಿನಿಧಿಸಲು ಆಗುತ್ತಿರಲಿಲ್ಲ. ಸಂಪರ್ಕ ಏನೆಲ್ಲಾ ಸಾಧಿಸುತ್ತದೆ ಎಂಬುದಕ್ಕೆ ಬಲವಾದ ಉದಾಹರಣೆಯನ್ನು ಪ್ರತೀ ಪ್ರಜೆಯೂ ಅನುಭವಿಸುವಂತೆ ದೇಶ ಕಟ್ಟುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು ಸ್ಯಾಮ್ ಪಿತ್ರೊಡ.

ತಂತ್ರಜ್ಞಾನಗಳ ವ್ಯಾಪ್ತಿ ಮತ್ತು ಸಾಮರ್ಥ್ಯ ಅದರ ಜೊತೆಗೆ ಪ್ರಸ್ತುತವಾದ ಕಾಲಘಟ್ಟ ಎಲ್ಲವನ್ನೂ ಸಮೀಕರಿಸುತ್ತಾ, ಸಮಗ್ರ ದೇಶವನ್ನು ಜೋಡಿಸುವ ಸಂವಹನ ಶಕ್ತಿಯನ್ನು ಮುಂದಿಟ್ಟುಕೊಂಡು, ಸ್ಯಾಮ್ ಪಿತ್ರೊಡ ಅರಂಭಿಸಿದ ಮಾದರಿಯೇ ವಿಭಿನ್ನವಾದುದು. ಆದರೆ ಅದಕ್ಕೆ ಅವರ ಮನಸ್ಥಿತಿಯನ್ನು ಗಮನಿಸಲು ಅವರ ಒಂದು ಉದಾಹರಣೆಯನ್ನು ಗಮನಿಸಬಹುದು. ಅದೇನೆಂದರೆ, ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟ ಹೊಸದರಲ್ಲಿ  ಅಮೆರಿಕಾದಲ್ಲಿ ಒಂದು ಸಂಜೆ ಭಾರತೀಯ ಸಿನಿಮಾ ನೋಡಲು ಹೋಗುವ ಘಳಿಗೆಯಲ್ಲಿ ಅವರ ಹೆಂಡತಿಯು ಕೇಳಿದ ರವಿಕೆಯನ್ನು ಅವರೇ ಹೊಲಿದುಕೊಟ್ಟದ್ದು! ಆಶ್ಚರ್ಯವೆಂದರೆ, ಅದಕ್ಕೂ ಮೊದಲು ಅವರು ಯಾವತ್ತೂ ರವಿಕೆಯನ್ನು ಹೀಗೆ ಹೊಲಿದಿರಲಿಲ್ಲ. ಇದರ ಅರ್ಥವಿಷ್ಟೆ, ಮನುಷ್ಯನಿಗೆ ಅಸಾಧ್ಯವೆನ್ನುವಂಥದ್ದು ಯಾವುದೂ ಇಲ್ಲ. ನಾವು ಹೊಸಹೊಸ ಸಂಗತಿಗಳನ್ನು ಕೈಗೆತ್ತಿಕೊಳ್ಳಲು ಸಿದ್ಧವಾಗಿರಬೇಕಷ್ಟೆ. ಇದು ಮಹಾನ್ ತಂತ್ರಜ್ಞಾನ ಕನುಸುಗಾರನ ಸಾಧ್ಯತೆಗಳ ಮನಸ್ಥಿತಿ.

ಸ್ಯಾಮ್ ಪಿತ್ರೊಡ ಅವರು ತಂತ್ರಜ್ಞಾನಗಳ ಹಿನ್ನೆಲೆಯಿಂದ ದೇಶವನ್ನು ಕಟ್ಟುವ ಕೆಲಸದಲ್ಲಿ ತೀರಾ ಕಗ್ಗಂಟಾದ ಭಾರತದ ರಾಜಕೀಯ ಮತ್ತು ತಂತ್ರಜ್ಞಾನ ರಂಗಗಳೆರಡನ್ನೂ ಸೂಕ್ಷ್ಮವಾಗಿ ಬಿಡಿಸಿದ್ದು ಅವರ     ಆಲೋಚಿಸುವ ಜಾಣತನ ಹಾಗೂ ಧೈರ್ಯ. ಇವೆರಡನ್ನೂ ಸ್ಯಾಮ್ ಪಿತ್ರೊಡ ನಿಭಾಯಿಸಿದ್ದು- ಅವರ ವಿಜ್ಞಾನ ಕಲಿಕೆಯು ಕೊಟ್ಟ ದಾರ್ಶನಿಕತೆ ಹಾಗೂ ತಂತ್ರಜ್ಞಾನಗಳಲ್ಲಿ ಅವರಿಟ್ಟ ನಂಬಿಕೆಯಿಂದಲೇ.  

ನಮಸ್ಕಾರ

ಡಾ.ಟಿ.ಎಸ್.‌ ಚನ್ನೇಶ್

This Post Has 3 Comments

 1. VENKATASWAMY BIJAVARA

  Dr. Channesh, you have narrated the over all contribution given by Dr. Sam Pitroda for development of this country in a very crispy way..it is really exhited to go through this article and you have described about Sam Pitroda in a pricise way..Salutes to your noble job 🙏🌹🙏
  B.H.Venkatswamy

  1. CPUS

   Thank you Venkat..

 2. Parthasarathy Srinivasaranga

  I am a former executive of Department of Teleom
  I have had occasions to meet Sam Jayaprakash is my friend as well. Thank you for this elaborate write up in Kanada.
  I am in US . I would try meet Mr Petroda

Leave a Reply