“I must confess that I did not then know even the name, much less the geographical position, of Champaran, and I had hardly any notion of indigo plantations.” – Mahatma Gandhi (in his autobiography)
ಇಂಡಿಗೊ.. ಒಂದು ಗಿಡ! ಹೌದು, ಅನೇಕರಿಗೆ ಇಂಡಿಗೊ ಎಂದರೆ ಬಣ್ಣ ಅಥವಾ ಇಂಕು, ಹೆಚ್ಚೆಂದರೆ ಏರ್‌ಲೈನ್ಸ್! ಕೆಲವರಿಗೆ ಒಂದು ಕಂಪನಿಯ ಹೆಸರು! ಆದರೆ ಭಾರತೀಯ ಪರಂಪರೆಯನ್ನು ಜಾಗತಿಕವಾಗಿ ಬಣ್ಣದಿಂದ ಮೆರೆಸಿದ್ದ ಇಂಡಿಗೊ ಎನ್ನುವ ಗಿಡವೊಂದು ಇತ್ತು ಎನ್ನುವುದು ಮರೆತುಹೋಗುವಷ್ಟು ಕಾಲದಲ್ಲಿ ದೂರ ಬಂದಿದ್ದೇವೆ. ಭಾರತೀಯ ನೆಲದಲ್ಲಿ ಗಾಂಧೀಜಿಯವರ ಸತ್ಯಾಗ್ರಹದ ಆರಂಭಕ್ಕೂ ಕಾರಣವಾಗಿದ್ದ ಸಸ್ಯ ಇದು. ಗಾಂಧಿ ಜಯಂತಿಯನ್ನು ಆಚರಿಸುವ ಈ ಹೊತ್ತಿನಲ್ಲಿ ಆಧುನಿಕತೆಯ ಬಣ್ಣ ಮತ್ತು ಪಾರಂಪರಿಕ ಬೆರಗಿನ ಜೊತೆಗೆ, ರಾಷ್ಟ್ರೀಯತೆ, ಸ್ವಾಭಿಮಾನ ಮತ್ತು ಪ್ರತಿಭಟನೆಯ ಸಂಕೇತವೂ ಆದ “ಇಂಡಿಗೊ” ಸಸ್ಯದ ಕುರಿತು ಇಂದಿನ ಸಸ್ಯಯಾನ.
ಇಂಡಿಗೊ ಬಗೆಗೆ ಸಾಮಾನ್ಯಜ್ಞಾನದ ಪ್ರಶ್ನೆಗಳನ್ನು ಕೇಳುವಷ್ಟು ಆ ಸಸ್ಯವು ಇತಿಹಾಸದಲ್ಲಿ ಸೇರಿದೆ, ಹಾಗೆಯೇ ಮರೆತೂ ಹೋಗುತ್ತಿದೆ. ಇಂಡಿಗೊ ಸಸ್ಯಕ್ಕೆ ಆ ಹೆಸರು ಬರಲು ಕಾರಣವೇನು? ಇಂಡಿಗೊ ಸಸ್ಯಕ್ಕೆ ಕನ್ನಡದಲ್ಲಿ ಏನು ಹೇಳುತ್ತಾರೆ? ಇಂಡಿಗೊ ಸಸ್ಯದ ಬಣ್ಣ ಮತ್ತು ಇತರೆ ಪೂರ್ವಾಪರಗಳ ಬಗೆಗಿನ ಪ್ರಶ್ನೆಗಳನ್ನು ಕೇಳಿರಬಹುದು ಅಥವಾ ಮಾತಿನ ಚರ್ಚೆಯಲ್ಲಿ ಬಂದಿರಬಹುದು. ಇಂಡಿಗೊ ಅನ್ನುವುದು ಒಂದು ಸಸ್ಯನಾ? ಎಂದೂ ಕೇಳುವವರೂ ಇಲ್ಲದಿಲ್ಲ. ಹಾಗಿದ್ದಲ್ಲಿ ಅದು ಎಂತಹಾ ಗಿಡ? ಎಂದೂ ಕೇಳುತ್ತಾರೆ! ನಮ್ಮ ಮಾತಿರಲಿ ಗಾಂಧಿಗೆ ಭಾರತೀಯ ರಾಷ್ಟ್ರೀಯ ಇತಿಹಾಸದಲ್ಲಿ ಎಂದೂ ಅಳಿಸಲಾರದಂತಹಾ ಅವಕಾಶವನ್ನು ತಂದುಕೊಟ್ಟ ಈ ಸಸ್ಯದ ಬಗ್ಗೆ ಅವರ ಆತ್ಮಕಥೆಯ ಸಾಲುಗಳನ್ನು ಈ ಪ್ರಬಂಧದ ಮೊದಲೇ ಗಮನಿಸಿರುತ್ತೀರಿ. ಅವರಿಗೂ ಇಂಡಿಗೊ ಬೆಳೆಯ ಕುರಿತು ಏನೂ ತಿಳಿದಿರಲಿಲ್ಲವಂತೆ! ಆದರೆ ಭಾರತೀಯ ನೆಲದಲ್ಲಿ ಅವರ ಬದುಕನ್ನೇ ಬದಲಿಸಲು ಅದೇ “ಇಂಡಿಗೊ” ಗಿಡ ಕಾರಣವಾಗಿದೆ. ಇದಲ್ಲವನ್ನೂ, ಜೊತೆಗೆ ಸಸ್ಯದ ವೈಜ್ಞಾನಿಕ ಹರಹನ್ನೂ, ವ್ಯಾವಹಾರಿಕವಾಗಿ ಜಗತ್ತನ್ನು ಆಕರ್ಷಿಸಿದ್ದ ಸಂಗತಿಗಳನ್ನೂ, ಜೊತೆಗೆ ಅದರ ಬಣ್ಣದ ರಾಸಾಯನಿಕ ವಿಶೇಷಗಳು ಮತ್ತವುಗಳು ತಂದಿಟ್ಟ ಮಹತ್ವದ ವಿಚಾರಗಳನ್ನೂ ಮುಂದೆ ಒಂದೊಂದಾಗಿ ನೋಡೋಣ. ಗ್ರೀಕ್, ರೋಮನ್ನರ ಇತಿಹಾಸದಲ್ಲೂ, ಇಡೀ ಯೂರೋಪಿನ ಅವಶ್ಯಕತೆಗಳಲ್ಲೂ “ಇಂಡಿಗೊ” ಸ್ಥಾನವನ್ನು ಪಡೆದದ್ದನ್ನೂ ಅನುರಣಿಸೋಣ.
ಇಂಡಿಗೊ ಗಿಡವು ಒಂದು ಕಾಲದಲ್ಲಿ ಬಹಳ ಮುಖ್ಯ ಬೆಳೆಯಾಗಿತ್ತು. ಸುಮಾರು ಒಂದು-ಒಂದೂವರೆ ಮೀಟರ್ ಎತ್ತರ ಬೆಳೆಯುವ, ನಮ್ಮ ಬೇಳೆ-ಕಾಳುಗಳ ಲೆಗ್ಯೂಮ್ ಕುಟುಂಬ ಫ್ಯಾಬೇಸಿಯೆದ ಸಸ್ಯ! ಇಂಡಿಗೊಫೆರಾ (Indigofera) ಎಂಬ ಸಂಕುಲದ ಅನೇಕ ಪ್ರಭೇದಗಳು ಇಂಡಿಗೊ ಗಿಡಗಳು ಎಂದು ಕರೆಸಿಕೊಳ್ಳುತ್ತಿದ್ದರೂ ಇಂಡಿಗೊಫೆರಾ ಟಿಂಕ್ಟೊರಿಯಾ (Indigofera tinctoria-) ಎಂಬ ವೈಜ್ಞಾನಿಕ ಹೆಸರಿನ ಗಿಡವನ್ನು ನಿಜವಾದ ಇಂಡಿಗೊ (True Indigo) ಎಂದು ಕರೆಯಲಾಗುತ್ತದೆ. ಈಗಲೂ ತಮಿಳುನಾಡು, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬೆಳೆಯಲಾಗುತ್ತಿರುವ ಇಂಡಿಗೊ -ಇದೆ ಸಸ್ಯವಾಗಿದೆ. ಇಂಡಿಗೊಫೆರಾ ಸಂಕುಲದಲ್ಲಿ ಸರಿ ಸುಮಾರು ೭೫೦ಕ್ಕೂ ಹೆಚ್ಚು ಸಸ್ಯಗಳಿದ್ದು ಇವುಗಳು ಜಗತ್ತಿನ ಉಷ್ಣವಲಯ ಮತ್ತು ಸಮಶೀತೋಷ್ಣವಲಯದ ಅನೇಕ ದೇಶಗಳಲ್ಲಿ ಹಂಚಿವೆ. ಟಿಂಕ್ಟೊರಿಯಾ ಅಲ್ಲದೆ ಇಂಡಿಗೊಫೆರಾ ಸಫ್ರುಟಿಕೊಸ (Indigofera suffruticosa) ಎನ್ನುವ ಪ್ರಭೇದವನ್ನೂ ಕೂಡ ಬಣ್ಣದ ತಯಾರಿಯಲ್ಲಿ ಬಳಸಲಾಗುತ್ತದೆ. ಈ ಪ್ರಭೇದಕ್ಕೆ ವೆಸ್ಟ್ ಇಂಡಿಯನ್ ಇಂಡಿಕಾ, ಕಾಡು (ವೈಲ್ಡ್) ಇಂಡಿಕಾ ಎಂದು ಕರೆಯುತ್ತಾರೆ. ಆದರೆ ಹೆಚ್ಚು ಪ್ರಚಲಿತ ಹಾಗೂ ಉತ್ತಮ ಗುಣದ ಬಣ್ಣವನ್ನು ಕೊಡುವುದು ಟಿಂಕ್ಟೊರಿಯಾ ಪ್ರಭೇದವೇ! ಇವೆರಡೂ ಅಲ್ಲದೆ ಸ್ಥಳೀಯವಾಗಿ ವಿವಿಧ ದೇಶ ಹಾಗೂ ನಮ್ಮ ದೇಶದ ವಿವಿಧ ಪ್ರದೇಶಗಳಲ್ಲಿ ಬಗೆ ಬಗೆಯ ಸಸ್ಯಗಳನ್ನು ನೈಸರ್ಗಿಕ ಬಣ್ಣಗಳ ತಯಾರಿಯಲ್ಲಿ ಬಳಸುವುದೂ ಇದೆ. ನಿಜವಾದ ಇಂಡಿಗೊ ಆದ ಟಿಂಕ್ಟೊರಿಯಾ ಸಸ್ಯವು ವಾರ್ಷಿಕ ಸಸ್ಯವಾಗಿಯೂ, ದ್ವಿವಾರ್ಷಿಕ ಸಸ್ಯವಾಗಿಯೂ ಕೆಲವೊಮ್ಮೆ ಬಹು ವಾರ್ಷಿಕ ಸಸ್ಯವಾಗಿಯೂ ಬೆಳೆಯಬಲ್ಲದು. ಬಿತ್ತಿದ ನಂತರ ಪ್ರತಿ ಮೂರು-ಮೂರು ತಿಂಗಳಿಗೊಮ್ಮೆ ಬೆಳೆಯನ್ನು ಕಟಾವು ಮಾಡಲಾಗುವುದು. ಪ್ರತೀ ವರ್ಷ ಕನಿಷ್ಠ 2 ಬೆಳೆಯ ಕೊಯಿಲು ಅಥವಾ 3 ಕೊಯಿಲುಗಳನ್ನು ಮಾಡಲಾಗುವುದು. ಕೊಯ್ದ ಸೊಪ್ಪು ಮತ್ತು ಗಿಡವನ್ನು ಬಣ್ಣದ ತಯಾರಿಯಲ್ಲಿ ಬಳಸಲಾಗುತ್ತದೆ. ಇದರಿಂದ ತಯಾರಿಸಲಾದ ಅತ್ಯಾಕರ್ಷಕ ನೀಲಿ ಬಣ್ಣಕ್ಕೆ ವಿಶೇಷತೆಯಿದ್ದು ಜಗದ್ವಿಖ್ಯಾತವಾಗಿದೆ. ಸ್ವಾಭಾವಿಕವಾಗಿ ಪಡೆಯಲಾದ ಬಣ್ಣಗಳಲ್ಲಿ ಇದಕ್ಕೆ “ಬಣ್ಣಗಳ ರಾಜ(King of Dyes) ಎನ್ನುತ್ತಾರೆ. ಮಾನವಕುಲದ ನಾಗರಿಕ ಇತಿಹಾಸದಲ್ಲಿ ಇಂಡಿಗೊ ಬಣ್ಣದ ರಂಗು ಮತ್ತೊಂದಕ್ಕೆ ಇಂದಿಗೂ ಇಲ್ಲ!
ಇಂಡಿಗೊಫೆರಾ ಟಿಂಕ್ಟೊರಿಯಾವು ಫ್ಯಾಬೇಸಿಯೆ ಕುಟುಂಬಕ್ಕೆ ಸೇರಿದ ಕೆನ್ನೀಲಿ ಬಣ್ಣ ಹೂವುಗಳನ್ನು ಬಿಡುವ ಸಸ್ಯ. ಪ್ರತಿ ಎಕರೆಗೆ 10ಕಿಲೋ ಬೀಜವನ್ನು ಬಿತ್ತುವ ಮೂಲಕ ಇದರ ಕೃಷಿ ಆರಂಭವಾಗುತ್ತದೆ. ಸುಮಾರು ಮೂರು ತಿಂಗಳಲ್ಲಿ ಎರಡು ಅಡಿಗಳಷ್ಟು ಎತ್ತರಕ್ಕೆ ಬೆಳೆದ ಗಿಡಗಳನ್ನು ಕತ್ತರಿಸಿ, ಇನ್ನೂ ತಾಜಾ ಇರುವಾಗಲೇ ಇಡಿಯಾದ ಸಸ್ಯಗಳನ್ನು ಒಟ್ಟು ಮಾಡಿ ಬಣ್ಣ ತಯಾರಿಸುವ ಸ್ಥಳಕ್ಕೆ ಕೊಂಡೊಯ್ಯಲಾಗುವುದು. ಸಾಮಾನ್ಯವಾಗಿ ಬೆಳೆಯುವ ಹೊಲಗಳ ಹತ್ತಿರವೇ ಬಣ್ಣವನ್ನೂ ತಯಾರಿಸುವ ಘಟಕಗಳೂ ಇರುವುದುಂಟು. ತಾಜಾ ಸೊಪ್ಪನ್ನು ಒಂದು ಇಡೀ ರಾತ್ರಿ ನೀರಿನೊಳಗೆ ಹುದುಗಿಸಲಾಗುತ್ತದೆ. ರಾತ್ರಿ ಇಡಿ ನೀರೊಳಗೆ ಮುಳುಗಿರುವುದರಿಂದ ಚೆನ್ನಾಗಿ ಹುದುಗು ಬರುತ್ತದೆ. ಎಲೆಗಳು ಬಣ್ಣವನ್ನು ನೀರಿಗೆ ಬಿಟ್ಟುಕೊಡುತ್ತವೆ. ಹಸಿರು ಮಿಶ್ರಿತ ನೀಲಿಯ ನೀರನ್ನು ಮತ್ತೊಂದು ಸಂಗ್ರಾಹಕ-ಸೆಡಿಮೆಂಟೇಶನ್-ಟ್ಯಾಂಕಿಗೆ ವರ್ಗಾಯಿಸಲಾಗುವುದು. ಈ ಹಂತದಲ್ಲಿ ನೀರಿನ ರಸಸಾರವನ್ನು ಹೆಚ್ಚು ಮಾಡುವ ಸುಣ್ಣವನ್ನು ಬಳಸಲಾಗುತ್ತದೆ. ಹುದುಗುವಿಕೆಯಿಂದಾಗಿ ಇಂಜೈಮುಗಳ ಸಹಾಯದಿಂದ ಜಲವಿಚ್ಛೆದನ ಪ್ರಕ್ರಿಯೆಯಲ್ಲಿ ಮೊದಲು ಇಂಡಾಕ್ಸಿಲ್ ಉತ್ಪಾದನೆಯಾಗುತ್ತದೆ. ಇದನ್ನು ಹಲವಾರು ಗಂಟೆಗಳ ಕಾಲ ಉತ್ಕರ್ಷಣಗೊಳಿಸಿ ಬಣ್ಣವನ್ನು ಗಟ್ಟಿಗೊಳಿಸಲಾಗುತ್ತದೆ. ನಂತರ ಬಣ್ಣದ ದಟ್ಟ ಗಟ್ಟಿಯಾದ ಪದಾರ್ಥವನ್ನು ತಳಕ್ಕೆ ಸೇರುವಂತೆ ನಿಲ್ಲಿಸಿ ಅನಂತರ ಸೋಸಿ ಬೇರ್ಪಡಿಸಲಾಗುವುದು. ನಂತರ ಬಣ್ಣವನ್ನು ಕೇಕುಗಳಾಗಿಸಿ ಒಣಗಿಸಲಾಗುತ್ತದೆ.
ಇಂಡಿಗೊ- ಅಪ್ಪಟ ನೀಲಿಯೂ ಅಲ್ಲ! ತುಸು ನೇರಳೆ ಬಣ್ಣವನ್ನು ಹೊಂದಿರುವ ನೀಲಿ. ಈ ಇಂಡಿಗೊ ನೀಲಿಯ ಇತಿಹಾಸವು ಇಂಡಸ್ ಕಣಿವೆಯ ನಾಗರಿಕತೆಯ ಕಾಲದಿಂದ ಆರಂಭವಾಗುತ್ತದೆ. ಇಡೀ ಏಷಿಯಾ ಅಲ್ಲದೆ ಯೂರೋಪಿನ ನಾಗರಿಕ ಜಗತ್ತನ್ನು ಆವರಿಸಿ, ಗ್ರೀಕ್, ರೋಮನ್ನರಿಗೂ ಬೆರಗನ್ನಿತ್ತ ಅಚ್ಚರಿಯ ವಸ್ತುವಾಗಿತ್ತು. ಇದರ ಬಣ್ಣದ ಕುರಿತಾದ ಮಹತ್ವದ ರಾಸಾಯನಿಕ ಸಂಗತಿಗಳಿದ್ದು, ಜಾಗತಿಕವಾಗಿ ಆಧುನಿಕ ಜನಜೀವನಕ್ಕೆ ಅಪಾರ ಬೆರಗನ್ನು ತಂದಿರುವುದನ್ನು ನಂತರದಲ್ಲಿ ನೋಡೋಣ. ಮೊದಲು ಗಾಂಧೀಜಿಯವರಿಗೆ ಸತ್ಯಾಗ್ರಹದ ಅವಕಾಶವನ್ನಿತ್ತ ಸಂದರ್ಭವನ್ನು ತಿಳಿಯೋಣ.
ಆಗಿನ್ನೂ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಹೊಸತು. ಗಾಂಧಿಯ ರಾಜಕೀಯ ಗುರು, ಮಾರ್ಗದರ್ಶಿ ಗೋಪಾಲಕೃಷ್ಣ ಗೋಖಲೆಯ ಸಲಹೆಯಂತೆ ಭಾರತದಾದ್ಯಂತ ಪ್ರವಾಸಮಾಡಿದ ಗಾಂಧಿಯವರಿಗೆ ಬಿಹಾರದಿಂದ ಓರ್ವ ರೈತನ ಮೂಲಕ ಒಂದು ಕರೆಯು ಬರುತ್ತದೆ. ಬಿಹಾರದ ಚಂಪಾರಣ್ಯ ಪ್ರದೇಶದಲ್ಲಿ ಬ್ರಿಟೀಷ್ ಜಮೀನ್ದಾರರು ರೈತರಿಗೆ ಕಡ್ಡಾಯವಾಗಿ ಇಂಡಿಗೊ ಬೆಳೆದು ಕಡಿಮೆ ಹಣಕ್ಕೆ ಮಾರಬೇಕಾದ ವಿವರಗಳ ಶೋಷಣೆಯನ್ನು ತಿಳಿಸಲಾಗುತ್ತದೆ. ಇದರಿಂದ ರೈತರು ಆಹಾರದ ಬೆಳೆಗಳ ಬದಲು “ಇಂಡಿಗೊ” ಬೆಳೆದು ಬ್ರಿಟೀಷರು ಒಪ್ಪಿದ ಹಣಕ್ಕೆ ಮಾರಬೇಕಾಗಿದ್ದಲ್ಲದೆ ತಪ್ಪಿದಲ್ಲಿ ಅಪಾರ ತೆರಿಗೆಯನ್ನೂ ಕೊಡಬೇಕಿರುತ್ತದೆ. ಇದರ ವಿರುದ್ಧವಾದ ಅಹಿಂಸಾತ್ಮಕ ರಾಜಕೀಯ ಪ್ರತಿಭಟನೆಯನ್ನು ಮಾಡುವ “ಚಂಪಾರಣ್ಯ ಸತ್ಯಾಗ್ರಹ”ವನ್ನು ಗಾಂಧಿ ರೈತರ ಪರವಾಗಿ ಆರಂಭಿಸುತ್ತಾರೆ. ಇದೇ ಕಾರಣಕ್ಕೆ ಗಾಂಧಿ “ಮೋತಿಹಾರಿ” ಎಂಬಲ್ಲಿಗೆ ರೈಲಿನಲ್ಲಿ ಬಂದು ತಲುಪಿ ಚಳುವಳಿಯ ನೇತೃತ್ವ ವಹಿಸುತ್ತಾರೆ. ಕಳೆದ ವರ್ಷ 2017ಕ್ಕೆ ಈ ಚಳುವಳಿಗೆ ನೂರು ವರ್ಷ ತುಂಬಿತ್ತು. 1917ರಲ್ಲಿ ಆರಂಭವಾದ ಸತ್ಯಾಗ್ರಹವು ಗಾಂಧೀಜಿಯವರೂ ಇರುವಂತಹಾ ಸಮಿತಿಯಿಂದ 19ರ ಮಾರ್ಚ್‌ನಲ್ಲಿ ರೈತಪರವಾದ ಕಾನೂನು ರೂಪಿತವಾಗುವಲ್ಲಿ ಮುಕ್ತಾಯವಾಗುತ್ತದೆ. ಕೇಳಿಯೇ ಇರದ ಬೆಳೆಯೊಂದರ ಕಾರಣದಿಂದ ಗಾಂಧಿ ತಾಯಿನಾಡಿನಲ್ಲಿ ಮೊದಲ ಬಾರಿಗೆ ಅಹಿಂಸೆಯ ಪ್ರತಿಭಟನೆಯಿಂದ ಗೆದ್ದು ನಿಜವಾಗಿಯೂ ಅಂದಿನ ಅನಿವಾರ್ಯವಾಗಿದ್ದ ದೇಶದ ಸ್ವಾತಂತ್ರ್ಯ ಸಂಗ್ರಾಮದ ನಾಯಕರಾಗುವ ಸಂದರ್ಭ ಬರುತ್ತದೆ. ಇಂಡಿಗೊ ಬೆಳೆಗಾರರ ಪರವಾದ ಈ ಹೋರಾಟ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಮಾರ್ಗೋಪಾಯಗಳ ಮೊದಲ ದರ್ಶನವನ್ನೂ ಒದಗಿಸುತ್ತದೆ.
ಇಂಡಿಗೊ ಬಣ್ಣ-ರಾಸಾಯನಿಕ ಸಂಗತಿಗಳು ಮತ್ತು ಅದರ ಭವ್ಯ ಇತಿಹಾಸ
ಇಂಡಿಗೊ ಬಣ್ಣದ ಬಳಕೆಯು ಬಹಳ ಹಿಂದಿನದು. ಹೆಚ್ಚೂ ಕಡಿಮೆ ಕ್ರಿಸ್ತ ಪೂರ್ವ 3300 ಮತ್ತು 1300ರ ನಡುವಣ ಸಿಂಧೂ ಬಯಲಿನ ನಾಗರಿಕ ಕಾಲದ ಕಂಚಿನ ಯುಗದ್ದೆಂದು ಪುರಾವೆಗಳು ತಿಳಿಸುತ್ತವೆ. ಅಲ್ಲಿನ ಉತ್ಖನನದಲ್ಲಿ ಇಂಡಿಗೊಫೆರಾ ಸಂಕುಲದ ಕನಿಷ್ಟ ನಾಲ್ಕು ಪ್ರಭೇದಗಳ ಬೀಜಗಳು ದೊರಕಿವೆ. ಪುರಾತತ್ವ ತಜ್ಞರು ಮೊಹೆಂಜೊದಾರೊ ಮತ್ತು ಹರಪ್ಪನ್ ನಾಗರಿಕ ನೆಲದಲ್ಲಿ ಕ್ರಿ.ಪೂ. 1750 ರ ಕಾಲದ ನೀಲಿ ಬಣ್ಣದ ಬಟ್ಟೆಯ ಪುರಾವೆಯನ್ನೂ ಸಹಾ ಪಡೆದಿದ್ದಾರೆ. ಒಂದು ಅಂದಾಜಿನಂತೆ ಭಾರತದಲ್ಲಿ ಏನಿಲ್ಲವೆಂದರೂ ಕನಿಷ್ಟ 50 ಬಗೆಯ ವಿವಿಧ ಪ್ರಭೇದಗಳು ನೀಲಿ ಬಣ್ಣದ ತಯಾರಿಯಲ್ಲಿ ಇದ್ದಿರಬಹುದೆಂದು ನಂಬಲಾಗಿದೆ. ಇಂಡಿಯಾದ ವಾಯುವ್ಯ ಭಾಗದಲ್ಲಿ ಹೆಚ್ಚಾಗಿ ತಯಾರಾಗುತ್ತಿದ್ದ ನೀಲಿಯು ಯೂರೋಪಿಗೆ ರಫ್ತಾಗುತ್ತಿತ್ತು. ಗ್ರೀಕ್ ಮತ್ತು ರೋಮನ್ನರು ಕ್ರಿ.ಪೂ 300 ಮತ್ತು ಕ್ರಿ.ಶ. 400ರ ನಡುವೆ ಅವರಿಗೆ ದೊರಕುತ್ತಿದ್ದ ಈ ನೀಲಿ ಬಿಲ್ಲೆಗಳನ್ನು ಖನಿಜಗಳಿಂದ ತಯಾರಿಸುತ್ತಾರೆ ಎಂದುಕೊಂಡಿದ್ದರು. ಇಂಡಿಯಾದಿಂದ ಬರುತ್ತಿದ್ದ ಕಾರಣ ಗ್ರೀಕರು ಇಂಡಿಯಾದ ಪದಾರ್ಥ ಎಂದು ಅರ್ಥ ಕೊಡುವ “ಇಂಡಿಕಾನ್” ಎಂದು ಮೊದಲು ಕರೆದರು. ಮುಂದೆ ಅದು ಪೋರ್ಚುಗೀಸರಿಂದ “ಇಂಡಿಕಾ” ಆಯಿತು. ಸಂಸ್ಕೃತ ಮೂಲದಲ್ಲಿ ಇಂಡಿಕಾವು “ನೀಲಿ”ಯಾಗಿದ್ದು, ಅರಬ್ಬಿಯಲ್ಲಿ ಅಲ್-ನಿಲ್ (Al-nil) ಆಯಿತು. ಇದೇ ಸ್ಪಾನಿಶ್ ಅಲ್ಲಿ ಅನಿಲ್ (Anil) ಆಗಿ ಇದರಿಂದ ಆಂಗ್ಲ ಪದ ಅನಿಲಿನ್ (Aniline) ಹುಟ್ಟಿತು. ಅದನ್ನೆ ಕೃತಕ ಬಣ್ಣಗಳನ್ನು ವರ್ಗೀಕರಿಸುವ ಅನಿಲಿನ್ (Aniline) ಎಂಬ ರಾಸಾಯನಿಕ ಪದಾರ್ಥಗಳ ಗುಂಪಿಗೆ ಕರೆಯಲಾಗುತ್ತದೆ.
ಪಾಶ್ಚಿಮಾತ್ಯರಿಗೆ “ಇಂಡಿಗೊ” ಖನಿಜದಿಂದ ಹುಟ್ಟಿದುದಲ್ಲ, ಅದೊಂದು ಗಿಡದ ಉತ್ಪನ್ನ ಎಂದು ತಿಳಿದದ್ದು “ಮಾರ್ಕೊಪೋಲೊ”ವಿನಿಂದ. ಆತ ತನ್ನ ಏಷಿಯಾ ಪ್ರವಾಸದ ನಂತರ ಹಿಂದಿರುಗಿದಾಗ ಈ ಸಂಗತಿಯು ಅವರಿಗೆ ತಿಳಿಯಿತು. ಆಗ “ಇಂಡಿಗೊ” ಬಹಳ ದೂರ ಮತ್ತು ಪ್ರಯಾಸದಿಂದ ತಲುಪಬೇಕಿದ್ದರಿಂದ ಯೂರೋಪಿನಲ್ಲಿ ತುಂಬಾ ದುಬಾರಿಯಾದ ವಸ್ತುವಾಗಿತ್ತು. ಬಟ್ಟೆಗೆ ಅದರಲ್ಲೂ ಹತ್ತಿ ಬಟ್ಟೆ ಮತ್ತು ಲಿನನ್ ಬಟ್ಟೆಗೆ “ಇಂಡಿಗೊ” ನೀಲಿ ಅತ್ಯಂತ ಉಪಯುಕ್ತವಾದ ಮತ್ತು ದಕ್ಷವಾದ, ಸುಲಭವಾದ ಬಣ್ಣವಾಗಿತ್ತು. ನೀಲಿ ಬಣ್ಣಕ್ಕೆ ಇಂಡಿಗೊ ಬದಲಾಗಿ ಯೂರೋಪಿನಲ್ಲಿ ಆಗ “ವಾಡ್” ಎಂಬ ಬೇರೊಂದು ಸಸ್ಯದ ಮೂಲದಿಂದ ತಯಾರಿಸಿದ ಬಣ್ಣವನ್ನು ಬಳಸುತ್ತಿದ್ದರು. ಈ ವಾಡ್ ಗಿಡವು ಇಸಾಟಿಸ್ ಟಿಂಕ್ಟೊರಿಯಾ(Isatis tinctoria) ಎಂಬ ವೈಜ್ಞಾನಿಕ ಹೆಸರಿನದು. ಆದರೆ ಇದು ಲೆಗ್ಯೂಮ್ ಜಾತಿಯದಲ್ಲ. ಕ್ಯಾಬೆಜ್ ಅಥವಾ ಸಾಸಿವೆಯ ಜಾತಿಯ ಗಿಡ. ಇದರ ಬಣ್ಣವೂ ಇಂಡಿಗೊದಂತೆಯೆ ಇದೆ, ಆದರೆ ಇಂಡಿಗೊದಷ್ಟು ದಕ್ಷವಾದ್ದಲ್ಲ. ಈ ಟ್ರೂ ಇಂಡಿಗೊದ ಬಣ್ಣವು “ಫಾಸ್ಟ್ ಕಲರ್” ದಟ್ಟವಾದ ಬಣ್ಣವಾದ್ದರಿಂದ ವಾಡ್ ಗಿಂತ ಹೆಚ್ಚು ಬೆಲೆಯುಳ್ಳದ್ದು ಅತ್ಯುತ್ತಮವೆಂದು ಹೆಸರು ಮಾಡಿತ್ತು. ಆದರೆ ಇಂಡಿಗೊ ಹೆಚ್ಚು ದೊರೆಯದ ಕಾರಣದಿಂದ ಜೊತೆಗೆ ಯೂರೋಪು ಮತ್ತು ಇಂಡಿಯಾದ ನಡುವಣ ದಾರಿಗೂ ಅದಚಣೆಯಾಗಿ ಹೊಸ ಮಾರ್ಗದ ಹುಡುಕಾಟದಲ್ಲಿ ಪೋರ್ಚುಗೀಸ್ ವಾಸ್ಕೊಡಿಗಾಮ ಯಶಸ್ವಿಯಾಗಿ ಭಾರತ ಮತ್ತು ಯೂರೋಪಿಗೆ ನೌಕಾಮಾರ್ಗವನ್ನು ಕಂಡುಹಿಡಿಯುತ್ತಾನೆ. ಹಾಗಾಗಿ ಮುಂದೆ ಪೋರ್ಚುಗೀಸರು ಕಂಡುಹಿಡಿದ ಈ ನೌಕಾ ಮಾರ್ಗದಿಂದ ಇಂಡಿಗೊ ಯೂರೋಪ್ ಅನ್ನು ತಲುಪಿ ಮಾರಾಟವಾಗುತ್ತಿತ್ತು.
ಇಂಡಿಗೊ ಮತ್ತು ವಾಡ್ ಬಣ್ಣಗಳ ನಡುವೆ ದೊಡ್ಡ ಪೈಪೋಟಿ ಉಂಟಾಗಿ ಯೂರೋಪ್ ಮೂಲದ ವಾಡ್ ಗೆ ದೊಡ್ಡ ಪೆಟ್ಟು ಬಿದ್ದಿತ್ತು. ಆಗ ಜರ್ಮಿನಿಯು ವಾಡ್ ನಿಂದ ನೀಲಿ ತಯಾರಿಸುವಲ್ಲಿ ಮುಂಚೂಣಿಯಲ್ಲಿದ್ದು ವಾಡ್‌ಗೆ ಬೆಂಬಲವಾಗಲು ನಿರ್ಧರಿಸುತ್ತದೆ. ಹಾಗಾಗಿ ಇಂಡಿಗೊದ ಮೇಲೆ ಅಪವಾದ ಹೇರಿ 1577ರಲ್ಲಿ ಜರ್ಮನಿಯು ಇಂಡಿಗೊವನ್ನು ನಿಷೇಧಿಸಿತು. ಈ ನಿಷೇಧವು ಮತ್ತೆ 1594ರಲ್ಲಿ ಮತ್ತು 1602ರಲ್ಲಿ ಮರುಕಳಿಸಿದವು. ಫ್ರಾನ್ಸ್ ಕೂಡ ನಿಷೇಧವನ್ನು ಬೆಂಬಲಿಸಿತು. ಆದರೆ ಮುಂದೆ ಜರ್ಮನಿಯು ಕೃತಕ ನೀಲಿ ಬಣ್ಣದ ರಾಸಾಯನಿಕವನ್ನು ಕಂಡುಹಿಡಿದು ವಾಡ್ ಮತ್ತು ಇಂಡಿಗೊ ಎರಡಕ್ಕೂ ಪರ್ಯಾಯವನ್ನು ಸೃಷ್ಟಿಸಿತು. 20ನೆಯ ಶತಮಾನದ ಆರಂಭಕ್ಕಾಗಲೆ ವಾಡ್ ಸಂಪೂರ್ಣ ನೆಲಕಚ್ಚಿತ್ತು. ತೀರ ಇತ್ತೀಚೆಗೆ ಅಂದರೆ 1932ರಲ್ಲಿ ಬಳಸಿ ತಯಾರಿಸಿದ ಬಣ್ಣದ ಬಗ್ಗೆ ಇರುವ ದಾಖಲೆಯೇ ವಾಡ್ ಕುರಿತಂತೆ ಇರುವ ಕೊನೆಯ ಮಾಹಿತಿ. ಆದರೆ ಇಂಡಿಗೊ ಮಾತ್ರ ಇಂದೂ ಸಹಾ ಮೊದಲಿನಷ್ಟು ಅಲ್ಲದಿದ್ದರೂ ಇನ್ನೂ ಬೇಡಿಕೆಯಲ್ಲಿ ಇರುವ ವಸ್ತುವಾಗಿದೆ. ಕಾರಣಗಳನ್ನು ಆಧುನಿಕ ಹಿತದಲ್ಲಿ ಇಂಡಿಗೊ ಬಳಕೆಯಿಂದ ನೋಡೋಣ ಮೊದಲು ಕೃತಕ ನೀಲಿಯ ಹುಟ್ಟನ್ನು ಅದರ ರಾಸಾಯನಿಕ ಹಿನ್ನೆಲೆಯಿಂದ ನೋಡೋಣ.
ಕೃತಕ ಇಂಡಿಗೊ ಬಣ್ಣ
ಹೆಚ್ಚು ಹೆಚ್ಚು ಬೆಳೆಯುತ್ತಿರುವ ಹತ್ತಿಗೆ ಸಾಕಷ್ಟು ಬಣ್ಣವನ್ನು ಒದಗಿಸಲಾಗದ್ದು ಕೃತಕ ಇಂಡಿಗೊದ ಹುಟ್ಟಿಗೆ ಮೂಲ ಕಾರಣ. ನೈಸರ್ಗಿಕವಾದ ಇಂಡಿಗೊದಿಂದ 19ನೆಯ ಶತಮಾನದಲ್ಲೇ ಬೇಡಿಕೆಯನ್ನು ಪೂರೈಸಲು ಆಗುತ್ತಿರಲಿಲ್ಲ. ಹಾಗಾಗಿ 1865ರಲ್ಲಿ ಜರ್ಮನಿಯ ರಸಾಯನಿಕವಿಜ್ಞಾನಿ “ಅಡಾಲ್ಫ್ ವಾನ್ ಬಾಯೆರ್” ಎಂಬುವರು ರಸಾಯನಿಕ ಹುಡುಕಾಟವನ್ನು ಆರಂಭಿಸಿದರು. 1897ರ ವೇಳೆಗೆ ಕೃತಕ ಇಂಡಿಗೊ ಕಂಡುಹಿಡಿದ ಸಂಗತಿಯನ್ನು ಜಗತ್ತಿಗೆ ಹಂಚಿದರು. ಮುಂದೆ ಇದೇ ವಿಜ್ಞಾನಿ 1905ರಲ್ಲಿ ತಮ್ಮ ಕೃತಕವಾಗಿ ನೈಸರ್ಗಿಕ ಬಣ್ಣಗಳನ್ನು ತಯಾರಿಸುವ ವಿಧಾನದ ಆವಿಷ್ಕಾರಕ್ಕಾಗಿ ರಸಾಯನಕವಿಜ್ಞಾನದ ನೊಬೆಲ್ ಬಹುಮಾನವನ್ನು ಪಡೆದರು. ಹೀಗೆ ಇಂಡಿಗೊ ನೊಬೆಲ್ ಪುರಸ್ಕಾರವನ್ನು ಕೊಡಿಸುವಷ್ಟು ಮಹತ್ವದ ಬಣ್ಣವಾಗಿತ್ತು.
ಕೃತಕ ಬಣ್ಣವನ್ನು ಕಂಡುಹಿಡಿಯುವುದಕ್ಕೂ ಮೊದಲು ಇಂಡಿಗೊ ಬೆಳೆಯು ಸುಮಾರು 20ರಿಂದ 25ಲಕ್ಷ ಎಕರೆಗಳಿಗೂ ಹೆಚ್ಚು ಪ್ರದೇಶವನ್ನು ಆವರಿಸಿತ್ತು. ಪ್ರಮುಖವಾದ ದೇಶ ಭಾರತವೇ ಆಗಿತ್ತು. ಕೃತಕ ಬಣ್ಣದ ಆವಿಷ್ಕಾರದ ನಂತರ 1914ರಲ್ಲಿಯೇ ಬೆಳೆಯ ವಿಸ್ತೀರ್ಣವು ಕೇವಲ ಒಂದು ಲಕ್ಷ ಎಕರೆಗೆ ಇಳಿಯಿತು. ಪ್ರಸ್ತುತ ಏನಿಲ್ಲವೆಂದರು 20,000 ಟನ್ನುಗಳಷ್ಟು ಇಂಡಿಗೊ ಬೇಡಿಕೆಯಲ್ಲಿದೆ. ಅಷ್ಟೆಲ್ಲವನ್ನೂ ನೈಸರ್ಗಿಕವಾಗಿ ಪೂರೈಸಲು ಆಗುತ್ತಿಲ್ಲ. ಹಾಗಾಗಿ ಕಡಿಮೆ ಬೆಲೆಯ ಕೃತಕ ರಾಸಾಯನಿಕವು ಚಾಲ್ತಿಯಲ್ಲಿದೆ. ಆದರೂ ವಾತಾವರಣದ ನೈರ್ಮಲ್ಯದ ಹಿತದಿಂದ ನೈಸರ್ಗಿಕ ಬಣ್ಣಗಳಿಗೆ ಮತ್ತೆ ಬೆಲೆ ಬರುತ್ತಿದೆ. ಇಂಡಿಗೊ ಮತ್ತೊಮ್ಮೆ ಸುದ್ದಿಯಲ್ಲಿದೆ.
ಇಂಡಿಗೊ ಮತು ಜೀನ್ಸ್ ಪ್ಯಾಂಟ್
ಒಂದುಕಾಲದಲ್ಲಿ ಆಧುನಿಕತೆಗೆ ಜೀನ್ಸ್ ಪ್ಯಾಂಟ್ ಬಹಳ ದೊಡ್ಡ ರೂಪಕ. ಈಗಲೂ ಜೀನ್ಸ್ ಆಧುನಿಕತೆಯ ಸಂಕೇತವೇ! ಜೀನ್ಸ್ ಸಾದಾರಣ ನೀಲಿ ವರ್ಣದ ಬಟ್ಟೆ. ಇದರಲ್ಲಿ ಅದರ “ಹಾಸು”ವಿನ(“Warp) ದಾರವನ್ನು ನೀಲಿಯಾಗಿಯೂ ಮತ್ತು “ಹೊಕ್ಕು”(Weft) ವಿನ ದಾರವನ್ನು ಬಿಳಿಯಾಗಿರಿಸಿ ಒಂದು ಬಗೆಯ ಮಾಸಲು ಬಣ್ಣದ ಬಟ್ಟೆಯನ್ನು ಪಡೆಯಲಾಗುತ್ತದೆ. ಜೀನ್ಸ್‌ನ ನೀಲಿ ಬಣ್ಣಕ್ಕೆ ಇಂಡಿಗೊ ಬಹಳ ಪ್ರಧಾನವಾಗಿ ಬಳಸಲಾಗುತ್ತದೆ. ಈಗ ಕೃತಕ ಬಣ್ಣವನ್ನು ಬಳಸುತ್ತಿದ್ದರೂ “ಇಂಡಿಗೊ”ವಿಗೆ ಬಹಳ ಬೇಡಿಕೆಯಂತೂ ಇದ್ದೇ ಇದೆ. ಬಗೆ ಬಗೆಯ ನೀಲಿಯ ರಂಗಿನ ಜೀನ್ಸ್‌ಗಳನ್ನು ಇಂಡಿಗೊ ಮೆರೆಸುತ್ತಿದೆ. ನೈಸರ್ಗಿಕ ಇಂಡಿಗೊ ಬಣ್ಣವನ್ನು ಬಳಸಿದ ಜೀನ್ಸ್ ಗೆ ಬೇಡಿಕೆಯೂ ಹೆಚ್ಚುತ್ತಿದೆ. ಮೂಲದಲ್ಲಿ ಜೀನ್ಸ್ ಪ್ರಬುದ್ಧಮಾನಕ್ಕೆ ಬಂದಿದ್ದೇ ಇಂಡಿಗೊದಿಂದ. ಕಾರಣ ಅದರಿಂದ ಬಳಸಿದ ಬಣ್ಣವು ಧರಿಸಿದ ಜನರ ಮೈಕೈಗೆ ಹಿತವಾಗಿಯೂ, ಜೊತೆಗೆ ಬಣ್ಣವು ಆಕರ್ಷಕವಾಗಿಯೂ ಇರುವುದು ಕಾರಣ.
“ಇಂಡಿಗೊ”ಗೆ ಯಾಕಿಷ್ಟು ಮಹತ್ವ?
ಇಂಡಿಗೊ ಹತ್ತಿ ಬಟ್ಟೆಗಳಿಗೆ ಅತ್ಯಂತ ಶ್ರೇಷ್ಠವಾದ ಬಣ್ಣ. ನೇರವಾಗಿ ಬಳಸಬಹುದಾದ ಬಣ್ಣ ಕೂಡ. ಜೊತೆಗೆ ತುಂಬಾ ಬೇಗ ಅಂದರೆ 5ರಿಂದ 10 ನಿಮಿಷದಲ್ಲಿ ಬಣ್ಣವನ್ನು ಕೊಡುತ್ತದೆ. ಹೆಚ್ಚು ಶಾಖದ ಅವಶ್ಯಕತೆಯೂ ಇಲ್ಲ, ಹಾಗಾಗಿ ಶಕ್ತಿಯ ಉಳಿತಾಯ ಕೂಡ ಸಾಧ್ಯ. ಇಂಡಿಗೊ ತುಂಬಾ ಸಾಂದ್ರವಾಗಿದ್ದು ಕೇವಲ ಹತ್ತೇ ಗ್ರಾಂ ಬಣ್ಣದಿಂದ ಒಂದು ಕಿಲೋ ಬಟ್ಟೆಗೆ ಬಣ್ಣ ಕೊಡಬಹುದು. ಇಂಡಿಗೊ ನಿಸರ್ಗದಲ್ಲಿ ಸುಲಭ ಮತ್ತು ಸರಳವಾಗಿ ಒಂದಾಗಿ ಯಾವುದೇ ಮಲಿನತೆಯನ್ನೂ ಉಂಟುಮಾಡುವುದಿಲ್ಲ. ಉತ್ತಮವಾದ ಹಸಿರು ಬಣ್ಣವನ್ನು ಪಡೆಯಲು ಇಂಡಿಗೊನಿಂದ ಮಾತ್ರವೇ ಸಾಧ್ಯ. ಇಂಡಿಗೊ ಬಳಸಿ ಹತ್ತಿಯನ್ನು ಮಾತ್ರವೇ ಅಲ್ಲದೆ, ರೇಷ್ಮೆ, ಬೆತ್ತದ ಸಾಮಗ್ರಿ, ಚರ್ಮ, ಕಾಗದ ಮುಂತಾದವನ್ನೂ ಬಣ್ಣ ಕೊಡಲು ಸಾಧ್ಯ. ಅಷ್ಟೇಕೆ, ಉಗುರು ಬಣ್ಣವನ್ನೂ ಕೂಡ ತಯಾರಿಸಬಹುದು.
ದಟ್ಟ ಹಸಿರಾದ ಗಿಡವೊಂದು ತನ್ನ ಎಲೆಗಳಲ್ಲಿ ನೇರಳೆ-ಮಿಶ್ರಿತ ನೀಲ ವರ್ಣವನ್ನು ತುಂಬಿಕೊಂಡು ಇಂಡಿಯಾದ ನೆಲದ ಪರಂಪರೆಯನ್ನು ಜಾಗತಿಕ ಮೆರೆಸಿದ್ದು ದೊಡ್ಡ ಇತಿಹಾಸ. ಗ್ರೀಕ್-ರೋಮನ್ನರಿಂದ ಇಂದಿನ ಜೀನ್ಸ್‌ವರೆಗೂ ಇಂಡಿಗೊದ ರಂಗು ತುಂಬಿಕೊಂಡು ಭಾರತೀಯತೆಯನ್ನು ಮೆರೆದಿದೆ. ಮತ್ತೀಗ ಸ್ವಾಭಾವಿಕ ಬಣ್ಣಗಳ ನವೀನ ಆಸಕ್ತಿಯಲ್ಲೂ ಹೊಸ ತಿರುವು ಪಡೆಯುತ್ತ ಸಾಗಿದೆ. ಗಾಂಧಿಯವರನ್ನೂ ಮಹಾತ್ಮರನ್ನಾಗಿಸಿದ ಸತ್ಯಾಗ್ರಹಕ್ಕೂ ಕಾರಣವಾಗಿ ಇನ್ನೂ ನೆನಪನ್ನು ಹಸಿರಾಗಿಸಿದೆ. ಗಾಂಧಿ ಜನ್ಮದಿನದಂದು ಇಂಡಿಗೊದ ನೆನಪದಲ್ಲಿ ರಂಗು-ರಂಗಾದ ಶುಭಾಶಯಗಳು.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
Dr Channesh your aim of educating us is commendable
I got a good insight into Indigo
Awesome post! Keep up the great work! 🙂
ಉತ್ತಮ ಲೇಖನ, ಬಹಳಷ್ಟು ತಿಳುವಳಿಕೆ ಒಳನೋಟಗಳನ್ನು ಹೊಂದಿವೇ. ಇದನ್ನು ನಮಗೆಲ್ಲ ಸಿಗುವ ಹಾಗೆ ಮಾಡಿದ ಎಲ್ಲರಿಗೂ ಧನ್ಯವಾದಗಳು
– ಅಭಿಲಾಷ್
ಉತ್ತಮ, ಉಪಯುಕ್ತ ಮತ್ತು ಪ್ರತಿಯೊಬ್ಬ ಭಾರತೀಯರು ತಿಳಿಯಲೇಬೇಕಾದ ವಿವರಗಳಿರುವ ಲೇಖನ. ???
Thank u very much sir
Beautiful article with extraordinary information. From Gandhiji to Nobel Prize! Congratulations sir