ನಿಜ ಹಣ್ಣಿನ ತುಂಬಾ ಬರೀ ಬೀಜಗಳೇ! ದಾಳಿಂಬೆಯಲ್ಲಿ ಸೀಡ್‌ಲೆಸ್ ಬಂದರೆ ಹೇಗೆ ಅನ್ನುವುದನ್ನು ತಮಾಷೆಗೆ ಹೇಳುವುದನ್ನು ಕೇಳಿರುತ್ತೀರಿ. ಇದು ನಿಜಕ್ಕೂ ವಿಚಿತ್ರವಾದ ಹಣ್ಣೇ! ಏಕೆಂದರೆ ಬೀಜಗಳನ್ನು ತುಂಬಿಕೊಂಡು, ಹಣ್ಣಾಗಿ ಮಾಗಿ ಗಟ್ಟಿಯಾಗುತ್ತಲೇ ಒಣಗುವ ದಪ್ಪ ಸಿಪ್ಪೆಯನ್ನೂ ಒಳ್ಳೆಯ ಪ್ಯಾಕಿಂಗ್ ಮಾಡಿದಂತಾಗುವ ಕಾಯಿಬಿಡುವ ಅವಶ್ಯಕತೆ ಗಿಡಕ್ಕೆ ಏನಿದ್ದೀತು. ಯಾವುದೇ ಗಿಡದ ಉದ್ದೇಶ ಮತ್ತೊಂದು ಗಿಡವಾಗಲು ಬೀಜಗಳು ದೂರ ಪ್ರಸಾರವಾಗಿ ಅಲ್ಲೆಲ್ಲೋ ಮೊಳೆತು ಮತ್ತೆ ಗಿಡವಾಗಿ ಕಾಯಿಬಿಟ್ಟು ಹಣ್ಣಾಗಿ ಬೀಜಗಟ್ಟಬೇಕು. ಹಾಗಾಗಲು ಕಾಯಿಯಿಂದ ಸುಲಭವಾಗಿ ಬೀಜಗಳು ಸಿಡಿದು ನೆಲ ಸೇರಬೇಕು. ಆದರೆ ದಾಳಿಂಬೆಯಲ್ಲಿ ಹಾಗಿಲ್ಲ. ಮಾಗಿದಷ್ಟು ಒಣಗಿ ಕಲ್ಲಿನಂತಾಗುತ್ತದೆ. ತಂದಿಟ್ಟು, ವಾರಗಟ್ಟಲೆ ಬಿಟ್ಟು ಒಣಗಿದರೂ ಬೀಜಗಳು ರಸವತ್ತಾಗಿರುವುದರಿಂದ ತಿನ್ನಲು ನಮಗೇನೋ ಅನುಕೂಲವೇ ಸರಿ. ಆದರೆ ಗಿಡಕ್ಕೆ…? ಒಣಗಿದ ಮೇಲೆ ಸಿಪ್ಪೆಯನ್ನು ಒಡೆದು ಬೀಜಗಳನ್ನು ಬಿಡಿಸಿ ನೋಡಿದವರಿಗಂತೂ ಕಷ್ಟ ಗೊತ್ತು. ಅಲ್ಲವೇ? ನಿಸರ್ಗದ ಕಾಯಿಯನ್ನು ಹಣ್ಣು ಮಾಡಿ ಒಣಗುತ್ತಲೇ ಒಳ್ಳೆಯ ಕಲ್ಲು-ಗುಂಡಿನಂತಾಗಿ, ಪುಟ್ಟ “ಹಣ್ಣಿನ-ಬಾಂಬು” ರೆಡಿಯಾಗುತ್ತದೆ.
ಇದರ ಪ್ರಭೇದದ ಹೆಸರಾದ ಗ್ರನೇಟಮ್ (Granatum)ಮೂಲತಃ ಮಧ್ಯಕಾಲೀನ ಲ್ಯಾಟಿನ್ ಪದ. ಇದರ ಅರ್ಥವು “ಕಡುಗೆಂಪಾದ – of a dark red color” ಎಂದಾಗಿದ್ದು, ಅದು ದಾಳಿಂಬೆಯ ತಿರುಳಿನ ಬಣ್ಣವನ್ನು ಉದ್ದೇಶಿಸಿದೆ. ಇದರ ಜೊತೆಗೆ ಕಾಳುತುಂಬಿದ ಎಂಬರ್ಥದ ಗ್ರನಮ್ (granum) ನಿಂದಲೂ ಪ್ರಭಾವ ಪಡೆದಿದೆ. ಇದೇ ಫ್ರೆಂಚ್‌ನಲ್ಲಿ ದಾಳಿಂಬೆಗೆ -ಗ್ರನೇಡ್ (Grenade) ಎಂಬ ಹೆಸರು ಪಡೆಯಲು ಕಾರಣವಾಗಿದೆ. ಇದೇ ಮಿಲಿಟರಿಯ ಗ್ರನೇಡ್ (Grenade) ಹೆಸರಿಗೂ ಪ್ರಭಾವಿಸಿದೆ. ಹೇಗೂ ಹಣ್ಣು ಒಣಗಿದ ಮೇಲೆ ಕಲ್ಲು-ಗುಂಡಿನಂತೆಯೇ ಇರುವುದು ತಾನೇ! ಇಂಗ್ಲೀಶಿನ ಪೊಮೆಗ್ರಾನೇಟ್ (Pomegranate) ಕೂಡ “Apple of Grenada”— ಎಂದೇ ಆಗಿರುವುದೂ ಇದೇ ಕಾರಣಕ್ಕೇನೇ! ಇದರ ಸಂಕುಲದ ಹೆಸರಾದ ಪ್ಯುನಿಕಾ ಅಥವಾ ಪುನಿಕಾ (Punica) ಒಂದು ಪ್ರದೇಶದ ಹೆಸರಿನಿಂದ ಬಂದದ್ದು. ರೋಮನ್ ಚಕ್ರಾಧಿಪತ್ಯವು ತನ್ನ ಅಧೀನದ ಪುನಿಯಾ ಎಂಬ ಪ್ರದೇಶದಿಂದ ದಾಳಿಂಬೆಯನ್ನು ಆಮದು ಮಾಡಿಕೊಳ್ಳುತ್ತಿತ್ತು, ಇದೇ ಪುನಿಕಾ ಹೆಸರಿಗೆ ಕಾರಣ. ರೋಮನ್ನರ ಕಾಲದ ಪುನಿಯಾ (Punia) ಪ್ರದೇಶವು ಉತ್ತರ ಆಫ್ರಿಕಾದ ಈಗಿನ ಟುನಿಸಿಯಾ (Tunisia) ಪ್ರದೇಶವಾಗಿದೆ. ಸಸ್ಯವೈಜ್ಞಾನಿಕವಾಗಿ ಪ್ಯುನಿಕಾ ಗ್ರನೇಟಮ್(Punica granatum) ಆದ ದಾಳಿಂಬೆಯು ಲೈಥ್ರೆಸಿಯೆ(Lythraceae) ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ. ಹಿಂದೆ ದಾಳಿಂಬೆಯನ್ನು ಪ್ಯುನಿಕೇಸಿಯೆ (Punicaceae)ಕುಟುಂಬವೆಂದು ಗುರುತಿಸಲಾಗುತ್ತಿತ್ತು. ಪ್ಯುನಿಕಾ ಸಂಕುಲದಲ್ಲಿ ಕೇವಲ ಎರಡೇ ಪ್ರಭೇದಗಳಿದ್ದು ಮತ್ತೊಂದು ಪ್ರಭೇದವಾದ ಪ್ಯುನಿಕಾ ಪ್ರೊಟೊಪ್ಯುನಿಕಾ (Punica protopunica) ಸಸ್ಯವು ದಾಳಿಂಬೆಯನ್ನು ಹೋಲುತ್ತಿದ್ದು ಯೆಮನ್ ದೇಶಕ್ಕೆ ಸೇರಿದ ಸಾಕೊಟ್ರ (Socotra)ಎಂಬ ದ್ವೀಪಕ್ಕೆ ಮಾತ್ರವೇ ಸೀಮಿತವಾಗಿದೆ.
ದಾಳಿಂಬೆ ಪದವು ಸಂಸ್ಕೃತದ ದಾದಿಮ(Dadima) ಅಥವಾ ದಾಳಿಮಾ(Dalim)ದಿಂದಲೋ ಅಥವಾ ಪರ್ಷಿಯನ್‌ನ ದುಳಿಮ್ ಅಥವಾ ದುಳಿಮಾ (Dulim or Dulima)ದಿಂದ ವಿಕಾಸಗೊಂಡಿದೆ. ಏಕೆಂದರೆ ದಾಳಿಂಬೆಯ ತವರು ನೆಲೆ ಇರಾನ್ (ಪರ್ಷಿಯನ್)ನಿಂದ ಹಿಮಾಲಯದ ಉದ್ದಕ್ಕೂ ಹಬ್ಬಿದೆ. ಹಾಗಾಗಿ ಇಲ್ಲಿನ ವಿಕಾಸವನ್ನೇ ತನ್ನಲ್ಲಿ ಉಳಿಸಿಕೊಂಡೇ ಇದೆ. (ಹೀಗೆ ತಮ್ಮನ್ನು ಹೆಸರಿಸಿಕೊಳ್ಳುವಲ್ಲಿ ಸಸ್ಯಗಳು, ತವರು ಬಳಸುವ ನೆಲ, ಹೊಂದಿಕೊಂಡ ಸಂಸ್ಕೃತಿ-ಮುಂತಾಗಿ ಒಟ್ಟಾರೆ ಸಮಾಜೀಕರಣದ ಪ್ರತಿಫಲನವನ್ನು ಸದಾ ಬಿಂಬಿಸುತ್ತವೆ).
ದಾಳಿಂಬೆಯು ಗಿಡವೂ ಅಲ್ಲ ಮರವೂ ಅಲ್ಲ. ದೊಡ್ಡ ಗಿಡ ಅಥವಾ ಸಣ್ಣ ಮರ. ನಸುಗೆಂಪಾದ ಪುಷ್ಟಪಾತ್ರೆಯಲ್ಲಿ ಕೆಂಪಾದ ದಳಗಳನ್ನು ಸೊಗಸಾಗಿ ಜೋಡಿಸಿಟ್ಟಂತಿರುವ ಹೂವುಗಳಿರುವ ಸಸ್ಯ. ಸಸ್ಯವು ಮನಿಸಿಯಸ್(Monecious) ಅಂದರೆ ಗಂಡು – ಹೆಣ್ಣು ಹೂವುಗಳನ್ನು ಬೇರೆ-ಬೇರೆಯಾಗಿ ಆದರೆ ಒಂದೇ ಗಿಡದಲ್ಲೇ ಹೊಂದಿರುತ್ತದೆ. ಹಾಗಾಗಿ ಕೆಲವೊಮ್ಮೆ ಗಂಡು ಹೂವುಗಳೇ ಹೆಚ್ಚಾಗಿ ಕಾಯಿ ಬಿಡದಂತಿರುವುದನ್ನು ಮನೆಗಳ ಆವರಣದಲ್ಲಿ ಬೆಳೆದಿರುವವರ ಅನುಭವವಿರಬಹುದು. ಸರಿ ಸುಮಾರು 20-30 ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ದಾಳಿಂಬೆಯು ಸಾಕಷ್ಟು ರೆಂಬೆ-ಕೊಂಬೆಗಳಿಂದ ಸದಾ ಹಸಿರಾದ ಎಲೆಗಳನ್ನು ಹೊಂದಿರುವ ಸೊಗಸಾದ ನೋಟವನ್ನು ಕೊಡುತ್ತದೆ. ಎಷ್ಟೋ ವರ್ಷಗಳ ಕಾಲವೂ ಈ ಮರಗಳು ಕಾಯಿ ಬಿಡುತ್ತಲೇ ಇರುತ್ತವೆ. ಕೆಲವೊಂದು ಪ್ರದೇಶಗಳಲ್ಲಿ ನೂರಾರು ವರ್ಷಗಳಷ್ಟು ಹಳೆಯ ದಾಳಿಂಬೆ ಮರಗಳಿವೆ. ಮೆಡಿಟರೇನಿಯನ್ ನೆಲೆಯಿಂದ ಆಫ್ರಿಕಾ, ಯೂರೋಪು, ಇಂಡಿಯಾದ ಪೂರ್ವ ತುದಿಯವರೆಗೂ ಹಿಂದಿನಿಂದಲೇ ಹಬ್ಬಿರುವ ದಾಳಿಂಬೆಯು, ಇತ್ತೀಚೆಗೆ ಹೆಚ್ಚು ಕೃಷಿಗೆ ಒಳಗಾದ ಹಣ್ಣು. ಹಣ್ಣೊಳಗಿನ ಬೀಜಗಳು ರಸಭರಿತವಾದ ತಿರುಳಿಂದ ಮುಚ್ಚಿಕೊಂಡು ತೆಳುವಾದ ಚರ್ಮದಂತಹಾ ಬಿಳಿ-ಹಳದಿಯ ಪದರದಿಂದ ಬೇರ್ಪಡುವ ಜೋಡಣೆಗಳಿಂದ ಅಚ್ಚುಕಟ್ಟಾಗಿ ಹೊಂದಿಸಲ್ಪಟ್ಟಿರುತ್ತವೆ. ಹಾಗಾಗಿಯೇ ಅಂತಹಾ ಸುಂದರವಾದ, ಅಚ್ಚುಕಟ್ಟಾದ ಜೋಡಣೆಯನ್ನು ಹಲ್ಲುಗಳ ಜೋಡಣೆಗೆ ಹೋಲಿಸುತ್ತೇವೆ.
ಹೂವು ಬಿಟ್ಟು-ಕಾಯಿ ಕಟ್ಟುವಲ್ಲಿ ದಾಳಿಂಬೆ ನಿಜಕ್ಕೂ ವಿಶೇಷವಾದುದು. ಅನೇಕ ಬಹು ವಾರ್ಷಿಕ ಹಣ್ಣಿನ ಮರಗಳು 3ರಿಂದ 8 ವರ್ಷಗಳ ಬಾಲ್ಯ ಮತ್ತು ಹರೆಯವನ್ನು ಹೊಂದಿರುತ್ತವೆ. ದಾಳಿಂಬೆ ಈ ಮಾತಿಗೆ ಅಪವಾದ. ನೂರಾರು ವರ್ಷಗಳ ಕಾಲ ಬಾಳುವ ಗಿಡದ ಬಾಲ್ಯ ಒಂದು ವರ್ಷದ ಒಳಗೇನೇ! ಬೀಜದಿಂದಲೇ ಸಸಿ ಪಡೆದು ನಾಟಿ ಮಾಡಿದ ಗಿಡಗಳೂ ಮೊದಲ ವರ್ಷವೇ ಹೂ ಬಿಡಲು ಆರಂಭಿಸುತ್ತವೆ. ಎರಡನೆಯ ವರ್ಷಕ್ಕಂತೂ ಹೂವು ಬಿಟ್ಟು ಕಾಯಾಗುವುದು ಗ್ಯಾರಂಟಿ. ಮಾವು 4-5 ವರ್ಷ ತೆಗೆದುಕೊಂಡರೆ, ಹಲಸು 8-9 ವರ್ಷ, ನೇರಳೆ 6-10 ವರ್ಷ ಬಾಲ್ಯ-ಹರೆಯವನ್ನು ಹೊಂದಿರುತ್ತವೆ. ಅವುಗಳಿಗಿಂತಲೂ ದೀರ್ಘಾಯುಷಿಯಾದ ದಾಳಿಂಬೆ ಮಾತ್ರ ಬಾಲ್ಯವನ್ನೂ ಬೇಗನೆ ಮುಗಿಸಿ, ಹೂ-ಹಣ್ಣು ಬಿಡುತ್ತಾ ಮಾನವನ ಜೀವನದ ಉದ್ದಕ್ಕೂ ಜೊತೆಗಿದ್ದು, ಮತ್ತೂ ಮಕ್ಕಳಿಗೋ ಮೊಮ್ಮಕ್ಕಳಿಗೋ ಹೂ-ಹಣ್ಣು ಕೊಡುತ್ತಲೇ ಇರುತ್ತದೆ.
ದಾಳಿಂಬೆಯ ಹೂವುಗಳು ಮತ್ತು ಹಣ್ಣು ಸಾಕಷ್ಟು ಕಲಾತ್ಮಕತೆಯನ್ನೂ ತಮ್ಮೊಟ್ಟಿಗೆ ಇಟ್ಟುಕೊಂಡಿವೆ. ಬಗೆ ಬಗೆಯ ಹೂವೂಗಳೂ ಕೂಡ. ಈ ಹಿಂದೆಯೇ ಹೇಳಿದಂತೆ ಗಂಡು – ಹೆಣ್ಣು ಹೂಗಳನ್ನು ಬೇರೆ-ಬೇರೆಯಾಗಿ ಆದರೆ ಒಂದೇ ಗಿಡದಲ್ಲೇ ಹೊಂದಿರುತ್ತದೆ. ಇವುಗಳ ಜೀವನ ಕ್ರಮವೂ ವಿಶಿಷ್ಟವೇ. ಇದೇ ಕಾರಣದಿಂದ ಯಾರದ್ದೋ ಮನೆಯ ಹಿತ್ತಿಲ ದಾಳಿಂಬೆ ಗಿಡದ ಒಂದು ಹಣ್ಣು ಕೀಳಲು ಹೋಗಿ ಹಲವು ಹೂ-ಹೀಚು ಉದುರಿಸಿ ಬೈಸಿಕೊಂಡಿದ್ದರೆ, ಕಾರಣ ಇಲ್ಲಿದೆ. ಒಂದೇ ಗಿಡದಲ್ಲಿ ಮೂರು ಬಗೆಯ ಹೂವುಗಳಿರುತ್ತವೆ. ಗಂಡು, ಹೆಣ್ಣು(ದ್ವಿಲಿಂಗಿ) ಮತ್ತು ಮಧ್ಯಂತರದ ಹೂವು. ಗಂಡು ಗಂಟೆಯಾಕಾರದ್ದು, ಹೆಣ್ಣು ಒಳ್ಳೆಯ ಹೂದಾನಿ (ವಾಜ್)ಯಂತಹ ಪುಷ್ಟಪಾತ್ರೆಯನ್ನು ಹೊಂದಿರುತ್ತದೆ. ಕಾಯಾಗುವ ಈ ಹೆಣ್ಣು ನಿಜಕ್ಕೂ ದ್ವಿಲಿಂಗಿ. ಇದು ಕಾಯಾಗುತ್ತದೆ. ಇದರ ತೊಟ್ಟೂ ಭದ್ರವಾದದ್ದು. ಆದರೆ ಗಂಡು ಮತ್ತು ಮಧ್ಯಂತರದ ಹೂವು ಅಭದ್ರವಾದ ತೊಟ್ಟನ್ನು ಹೊಂದಿರುತ್ತದೆ. ಕಾಯಿ ಕೀಳುವಾಗ ಇವು ಸುಲಭವಾಗಿ ಬೀಳುತ್ತವೆ. ಮಧ್ಯಂತರದ ಹೂವೂ ಕಾಯಾಗುತ್ತದೆ. ಆದರೆ ಮಾಗಿ ಹಣ್ಣಾಗುವುದು ಅಪರೂಪ. ಹಣ್ಣಾದರೂ ಸರಿಯಾದ ಆಕಾರ ಹೊಂದಿರುವುದಿಲ್ಲ. ಸರಿಯಾದ ಆಕಾರ ಹೊಂದಿದ್ದರೂ ರುಚಿಯಾಗಿರುವುದಿಲ್ಲ. ಹೆಚ್ಚಿನ ಸಮಯ ಹೀಚು ಅಥವಾ ತುಸು ದೊಡ್ಡದಾದಾಗ ಉದುರುವುದೇ ಹೆಚ್ಚು! ಗಂಡು ಹೂಗಳಂತೂ ಸುಲಭವಾಗಿ ಉದುರುತ್ತವೆ. ಹೀಗೆ ನಮ್ಮದಲ್ಲದ ತಪ್ಪಿಗೆ ಬೈಸಿಕೊಂಡಿರುತ್ತೇವೆ. ಹೂವುಗಳು ಒಂಟಿಯಾಗಿ ಅಥವಾ ಜೊತೆಯಾಗಿ ಅಥವಾ ಗುಂಪಾಗಿಯೂ ಇರುವುದುಂಟು.
ಕಾಯಾಗುವ ಹೂವೂ ಇಡೀ ಬದಲಾವಣೆಯು ತುಂಬಾ ಕಲಾತ್ಮಕವಾದ ನೋಟವನ್ನು ಕೊಡುತ್ತದೆ. ಹೂವೇ ಸುಂದರವಾದುದು. ಹೂವು ಪರಾಗಸ್ಪರ್ಶವಾದ ಮೇಲೆ ದಳಗಳನ್ನು ಉದುರಿಸಿ ಮತ್ತೊಂದು ನೋಟದ ಸೌಂದರ್ಯವನ್ನು ಪಡೆಯುತ್ತದೆ. ಆಗ ಪುಷ್ಪಪಾತ್ರೆಯು ಹೂವಿನ ತಳವಾಗಿ ಚಕ್ರಾಕಾರದ ಸುತ್ತುವರೆದಿರುತ್ತದೆ. ಇದೇ ಪುಷ್ಟಪಾತ್ರೆಯು ಇಡೀ ಕಾಯಿ-ಹಣ್ಣನ್ನು ಆವರಿಸಿಕೊಂಡು ಮುಂದೆ ಬಂದು ಹಣ್ಣಿನ ಕಿರೀಟವಾಗಿ ಮಾರ್ಪಡುತ್ತದೆ. ಕೆಲವು ಹೂವುಗಳು ಗಿಡ್ಡ, ಕೆಲವು ಉದ್ದ, ಕೆಲವು ಸುತ್ತಿಕೊಂಡ ವಿಚಿತ್ರದವು. ಕಾಯಾಗತೊಡಗಿದಂತೆಯೇ ನೋಟದಲ್ಲೂ ಬಗೆ ಬಗೆಯ ಸೌಂದರ್ಯವನ್ನು ಕೊಡುತ್ತಾ, ಕಾಯಿಗೂ ಕಿರೀಟವನ್ನಿಟ್ಟು ತೀರಾ ಭಿನ್ನವಾದ ಹಣ್ಣಿನಲ್ಲಿ ಕೊನೆಯಾಗುತ್ತದೆ. ಇದರ ಸೌಂದರ್ಯ ಇಲ್ಲಿಗೇ ಮುಗಿಯುವುದಿಲ್ಲ. ಕಾಯಿ ಕೆಲವೊಮ್ಮೆ ಸಿಡಿಯುವಂತಾಗಿ ದಟ್ಟ ಕೆಂಬಣ್ಣದ ಬೀಜಗಳು ಬಿರಿದು “ಹೃದಯ”ಸ್ಪರ್ಶ(ಚಿತ್ರ)ದ ನೋಟವನ್ನು ಕೊಡುತ್ತದೆ. ಅದರ ಸೊಗಸಾದ ಆರೋಗ್ಯದ ಕನಸುಗಳನ್ನೂ ತುಂಬಿ ಕಲಾಕಾರರಿಗೂ ವಿಭಿನ್ನ ರೂಪಕಗಳಲ್ಲಿ ತೆರೆದುಕೊಂಡಿದೆ. (ಬಹುಶಃ ಇದೇ ಮುಂದೆ ತಿಳಿಯುವ ಜಗತ್ ಪ್ರಸಿದ್ಧ ಕಲಾಕೃತಿಗೂ ಕಾರಣವಾಗಿದೆ).
ಸಾಕಷ್ಟು ಉಷ್ಣದ ವಾತಾವರಣ ಬಯಸುವ ಗಿಡ, ಹೆಚ್ಚಾಗಿ ನೀರನ್ನು ಬಯಸದು. ಕೆಲವು ಕಡೆಯ ಉಷ್ಣವಲಯದಲ್ಲಿ ವರ್ಷವಿಡೀ ಹೂವು ಬಿಟ್ಟರೂ, ಮೂರು ಪ್ರಮುಖ ಕಾಲದಲ್ಲಿ ಹೂಬಿಟ್ಟು ಕಾಯಾಗುತ್ತದೆ. ಜನವರಿ-ಫೆಬ್ರವರಿ, ಜೂನ್-ಜುಲೈ ಮತು ಸೆಪ್ಟೆಂಬರ್-ಅಕ್ಟೋಬರ್ ಗಳು ಆ ಮೂರು ಕಾಲಗಳು. ಶೀತ ಮತ್ತು ಸಮಶೀತೋಷ್ಣವಲಯದಲ್ಲಿ ಇದು ವಿಪರೀತ ಹವಾಮಾನದ ಪ್ರಭಾವಕ್ಕೆ ಒಳಗಾಗುವುದುಂಟು. ಇತ್ತೀಚೆಗೆ ಹೆಚ್ಚಿನ ಕೃಷಿಗೆ ಹಣ್ಣಿನ ಇಳುವರಿಯತ್ತ ತಳಿಗಳನ್ನು ಪಡೆಯುವಲ್ಲಿ ಸಫಲರಾಗಿ ಬಗೆ ಬಗೆಯ ತಳಿಗಳು ಜನಪ್ರಿಯತೆಯನ್ನು ಪಡೆದಿವೆ. ಭಾರತದಲ್ಲಿ 30-50 ತಳಿಗಳಿದ್ದರೆ, ಜಗತ್ತಿನಾದ್ಯಂತ 500ಕ್ಕೂ ಹೆಚ್ಚು ತಳಿಗಳು ಬಳಕೆಯಲ್ಲಿವೆ. ಇವುಗಳಲ್ಲೆಲ್ಲಾ ಹಲವು ಸಂಕರಗಳು, ತಳಿ ಅಭಿವೃದ್ಧಿಗಳೂ ನಡೆದು ಒಟ್ಟಾರೆ ಹೆಚ್ಚು ಹಣ್ಣಿನ ಇಳುವರಿಯಲ್ಲಿ ಗುರಿ ಹೊಂದಿವೆ. ಅದೇನೇ ಆದರೂ ನಿಜಕ್ಕೂ ಗಿಡ ಪುಟ್ಟ ಬಾಲ್ಯವನ್ನು ಹೊಂದಿದ್ದು, ಮಾನವ ಜೀವನಕ್ಕೂ ಹೆಚ್ಚಿನ ಕಾಲದ ಕಲಾತ್ಮಕವಾದ ಲೈಂಗಿಕ ಬದುಕನ್ನು ಇಟ್ಟುಕೊಂಡು ಮಾನವ ಕುಲವನ್ನು ವ್ಯಾಮೋಹದೊಳಗೆ ಬಂಧಿಸಿದೆ.
ಒಟ್ಟಾರೆ ಗಿಡ ಕಲೆ-ಜೀವನ-ಆಹಾರ ಆರೋಗ್ಯ- ಎಲ್ಲವನ್ನೂ ಮಾನವನ ಜೀವನದುದ್ದಕ್ಕೂ ಪ್ರಭಾವಿಸಿದೆ. ದಾಳಿಂಬೆಯು ಹಣ್ಣು ಹಾಗೂ ವಿವಿಧ ಸಸ್ಯದ ಭಾಗಗಳೂ ಬಳಕೆಯಲ್ಲಿ ಯೋಗ್ಯವಾಗಿದ್ದು ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ. ಹಣ್ಣಂತೂ ಸಾಕಷ್ಟು ಆಂಟಾಕ್ಸಿಡೆಂಟುಗಳ ತುಂಬಿಕೊಂಡು ದೇಹಕ್ಕೆ ಸಾಕಷ್ಟು ಲಾಭಗಳನ್ನು ತಂದುಕೊಡುತ್ತದೆ. ಸಸ್ಯದ ಎಲೆ, ಹೂವು ಮುಂತಾದ ಭಾಗಗಳನ್ನೂ ಸಹಾ ಔಷಧವಾಗಿ ಬಳಸುವ ಬಗೆಗೆ ಅರಿಯಲಾಗಿದೆ. ದಾಳಿಂಬೆಯ ಹಣ್ಣಿನ ಜ್ಯೂಸ್‌ನಲ್ಲಿ ಪ್ರಮುಖವಾಗಿರುವ ರಾಸಾಯನಿಕಗಳೆಂದರೆ ಪಾಲಿ ಫೀನಾಲ್‌ಗಳು, ಟ್ಯಾನಿನ್‌ಗಳು, ಜೊತೆಗೆ ಗ್ಯಾಲಿಕ್ ಆಮ್ಲ ಮುಂತಾದವು. ಗಣನೀಯ ಪ್ರಮಾಣದ ವಿಟಮಿನ್ನುಗಳು ಹಣ್ನೀನಲ್ಲಿವೆ. ವಿಟಮಿನ್ ಬಿ1, ಬಿ2, ಬಿ3, ಬಿ5, ಬಿ6 ಅಲ್ಲದೆ “ಸಿ” “ಇ” ಮತ್ತು “ಕೆ” ವಿಟಮಿನ್ನುಗಳೂ ಇವೆ. ಖನಿಜಗಳಲ್ಲಿ ಪೊಟ್ಯಾಸಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನಿಸಿಯಂಗಳಿಂದಲೂ ಸಮೃದ್ಧವಾಗಿದೆ. ಹಣ್ಣಿನ ರಸದ ಬಣ್ಣಕ್ಕೆ ಕಾರಣವಾದ ರಾಸಾಯನಿಕಗಳು ಡೆಲ್ಫಿಡಿನ್, ಸಯನಿಡಿನ್ ಪೆಲಗೊಡಿನ್‌ಗಳೆಂಬ ಆಂಥೊಸಾಯನಿನ್ ಗಳು. ಬಳಕೆಯಲ್ಲಿ ಮತ್ತು ಹಣ್ಣಿನ ಹಾಗೂ ಗಿಡದ ಅಲಂಕಾರಿಕೆಯ ಹಿತದಿಂದ ದಾಳಿಂಬೆಯು ಹಳೆಯ ಪ್ರಪಂಚದಲ್ಲೇ ಅಲ್ಲದೆ, 1621ರ ನಂತರ ಹೊಸ ಜಗತ್ತು-ಅಮೆರಿಕದ ನೆಲವನ್ನೂ ಹೊಕ್ಕಿದೆ. ಕ್ರಿ.ಶ. 1416ಕ್ಕೂ ಹಿಂದೆಯೇ ಪೂರ್ವದ ಇಂಡೊನೇಶಿಯಾ ತಲುಪಿ ಜಪಾನ್ ವರೆಗೂ ವ್ಯಾಪಿಸಿದೆ. ಎಲ್ಲೆಲ್ಲಿ ಉದ್ದವಾದ ಹಗಲೂ, ಉಷ್ಣ ವಾತಾವರಣ ಒಣ ಹವೆ ಇದೆಯೋ ಅಲ್ಲೆಲ್ಲಾ ದಾಳಿಂಬೆ ಸೊಗಸಾಗಿ ಬೆಳೆಯುತ್ತದೆ. ಭಾರತ ಹಾಗೂ ಇರಾನ್ ಜಗತ್ತಿನಲ್ಲಿ ಅತಿ ಹೆಚ್ಚು ದಾಳಿಂಬೆ ಬೆಳೆವ ದೇಶಗಳು. ದಾಳಿಂಬೆಯು ಇರಾನಿನ ರಾಷ್ಟ್ರೀಯ ಹಣ್ಣು. ಆದರೂ ಆಫ್‌ಘಾನಿಸ್ತಾನದ ದಾಳಿಂಬೆಯು ಜಗತ್ ಪ್ರಸಿದ್ಧ.
ಭೌಗೋಳಿಕ ಹರಹಿನ ಜೊತೆಗೆ ಸಾಂಸ್ಕೃತಿಕವಾಗಿಯೂ ಅಪಾರ ಮುಖಾಮುಖಿಯನ್ನು ದಾಳಿಂಬೆಯು ಸಾಧಿಸಿದೆ. ವಿವಿಧ ಸಂಸ್ಕೃತಿಗಳು ದಾಳಿಂಬೆಯನ್ನು ವಿವಿಧ ಬಗೆಯಲ್ಲಿ ಗ್ರಹಿಸಿ, ಪೋಷಿಸಿ ಬಳಸಿಕೊಂಡಿವೆ. ಅನೇಕ ನಂಬಿಕೆಗಳನ್ನು ರೂಢಿಸಿಕೊಳ್ಳಲೂ ಕಾರಣಗಳಾಗಿವೆ. ಹಿಂದು ಸಂಸ್ಕೃತಿಯು ದಾಳಿಂಬೆಯನ್ನು ಸಮೃದ್ಧಿ ಮತ್ತು ಫಲವತ್ತತೆಗೆ ರೂಪಕವಾಗಿ ಗ್ರಹಿಸಿದೆ. ಬೌದ್ಧ ಧರ್ಮವು ದಾಳಿಂಬೆಯನ್ನು ಆಶೀರ್ವಾದದ ಹಣ್ಣು ಎಂದು ಪರಿಗಣಿಸುತ್ತದೆ. ಪರ್ಷಿಯನ್ ಸಂಸ್ಕೃತಿಯು ಸೌಂದರ್ಯ, ಫಲವತ್ತತೆ ಮತ್ತು ಜೀವನದ ನಿರಂತರತೆಯನ್ನು ದಾಳಿಂಬೆಗೆ ಹೋಲಿಸಿದೆ. ಕ್ರಿಶ್ಚಿಯನ್ ಸಂಸ್ಕೃತಿಯು ಬೀಜಗಳನ್ನು ಒಂದೇ ಆಗಿ ಹಿಡಿದಿಟ್ಟದ್ದನ್ನು ಸಮುದಾಯದ ನಂಬಿಕೆ ಮತ್ತು ಒಗ್ಗಟ್ಟಿಗೆ ಹೋಲಿಸುತ್ತದೆ. ಜೊತೆಗೆ ಜೀಸಸ್‌ನ ತಾಯಿ ಮೇರಿಯನ್ನು ಚಿತ್ರಿಸಲು ಬಳಸಿಕೊಂಡಿದೆ. ಅಂತಹಾ ಒಂದು ಕೃತಿಯು ಜಗದ್ವಿಖ್ಯಾತವಾಗಿದ್ದು ಅದರ ವಿವರವನ್ನೂ ಮುಂದೆ ನೋಡೋಣ. ಯಹೂದಿಯರು ತಮ್ಮ ಹೊಸ ವರ್ಷವಾದ ರೋಶ್ ಹೋಶ್‌ನಾವನ್ನು ಆರಂಭಿಸುವುದೇ ಬಿಡಿ-ಬಿಡಿಯಾದ ದಾಳಿಂಬೆಯ ಬೀಜಗಳ ಸೇವನೆಯಿಂದ. ಯಹೂದಿ ಸಂಪ್ರದಾಯ ಜೂಡಾಯಿಸಂನ 613 ಟೊರಾ ದಾರ್ಮಿಕ ಆಜ್ಞೆಗಳನ್ನು (613 Commandments of the Torah) ದಾಳಿಂಬೆಯ ಸರಾಸರಿ ಬೀಜಗಳ ಸಂಖ್ಯೆಯೆಂದೇ ಪರಿಗಣಿಸಿದೆ. ವಾಸ್ತವವಾಗಿ ದಾಳಿಂಬೆ ಹಣ್ಣಿನಲ್ಲಿ 165 ರಿಂದ 1370ಬೀಜಗಳಿರುತ್ತವೆ, ಆದರೂ ಸರಾಸರಿ 613ಇರುವುದನ್ನು ಕೆಲವು ಅಧ್ಯಯನಗಳು ಒಪ್ಪಿವೆ. ಇದೊಂದು ನಂಬಿಕೆಯಷ್ಟೇ ಆದರೂ ಯಹೂದಿ ಗುರುಗಳಾದ ರಬ್ಬಿಯರು ಸರಾಸರಿಯಾದ ಬೀಜಗಳ ಸಂಖ್ಯೆಯಂತೂ ಇವೆಯಲ್ಲ ಎಂದೇ ನಂಬುತ್ತಾರೆ.
ಸಾಂಡರ್ರೊ ಬಾಟಿಚೆಲ್ಲಿ (Sandro Botticelli) ಎಂಬಾತ ಇಟಲಿಯ ವಿಖ್ಯಾತ ಕಲಾವಿದ ರಚಿಸಿದ “ಮಡೊನ್ನಾ ಆಫ್ ಪಾಮಿಗ್ರನೇಟ್ – Madonna of the Pomegranate ಇಟಲಿಯ ಫ್ಲಾರೆನ್ಸ್ ನಲ್ಲಿದೆ. ಈತ ಸರಿ ಸುಮಾರು 1482ರ ಹೊತ್ತಿಗೆ ರಚಿಸಿರಬಹುದಾದ ಈ ಚಿತ್ರವು ಬಾಲ ಏಸುವನ್ನು ಎತ್ತಿಕೊಂಡ, ವರ್ಜಿನ್ ಮೇರಿಯು ದೇವತೆಗಳಿಂದ ಸುತ್ತುವರಿದಿದ್ದಾಳೆ. ಅಮ್ಮನ ಕೈಯಲ್ಲಿರುವ ದಾಳಿಂಬೆಯನ್ನು ಬಾಲ ಏಸುವೂ ಹಿಡಿದಿರುವ ಕಾರಣ ಈ ಹೆಸರು. ಏಸುವಿನ ತಾಯಿ ಮೇರಿಯನ್ನು ಪ್ರಮುಖವಾಗಿ ಚಿತ್ರಿಸಿರುವ ಕಲಾವಿದ ಆಕೆಯ ಮುಖದಲ್ಲೂ ಹಾಗೂ ಮಗುವಿನ ಮುಖದಲ್ಲೂ ಮುಂದೊಮ್ಮೆ ಜರುಗುವ ದುಃಖವನ್ನು ತುಂಬಿರುವನೆಂದೂ ವ್ಯಾಖ್ಯಾನಿಸಿದ್ದಾರೆ. ಅದಕ್ಕೂ ಪ್ರಮುಖವಾದ ಮತ್ತೊಂದು ವ್ಯಾಖ್ಯಾನವು ದಾಳಿಂಬೆಯನ್ನು 15ನೆಯ ಶತಮಾನದ ಹಿಂದಿನ ಪಾರಂಪರಿಕ ವೈದ್ಯಕೀಯ ಶಿಸ್ತನ್ನು ನೆಪವಾಗಿಸಿ ಹೃದಯದ ಆರೋಗ್ಯದ ಹಿತವನ್ನು ಅಂದಾಜಿಸಿರುವನೆಂದೂ ನಂಬಲಾಗಿದೆ. ಹಾಗಾಗಿ ಕಲಾವಿದ ಬಾಟಿಚೆಲ್ಲಿಗಿದ್ದ ವೈದ್ಯಕೀಯ ಆಸಕ್ತಿಯನ್ನು ಹೃದಯದ ಅಂಗರಚನೆಯ ಉದ್ದೇಶವನ್ನು ದಾಳಿಂಬೆಯಲ್ಲಿ ರೂಪಕವಾಗಿರಿಸಿ ಅದರ ರಕ್ಷಣೆಯ ಹಿತವನ್ನೂ ತಾಯಿ-ಮಗುವಿನ ಸಂಬಂಧದಲ್ಲಿ ಇರಿಸಿರುವನೆಂದೂ ಕಲಾವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ದಾಳಿಂಬೆಯ ಸಿಡಿದು ಬೀಜಗಳು ಹೊರಗೆ ಕಂಡರೆ ಹೃದಯದಂತೆಯೇ ಕಾಣುವ ಸಾದೃಶ್ಯವನ್ನು ಕಲಾವಿಮರ್ಶಕರು ಕೊಡುತ್ತಾರೆ.
ದಾಳಿಂಬೆಯ ಹಿತಾಸಕ್ತಿಯು ಸಸ್ಯವೈಜ್ಞಾನಿಕ ಸಂಗತಿಗಳಾಚೆ, ಕಲೆ, ಸುಖ-ದುಃಖ, ಆಹಾರ-ಆರೋಗ್ಯ, ರಂಗು-ರಂಗಾದ ಒಳ-ಹೊರಮೈ ಚಿತ್ರಣವನ್ನೂ ತುಂಬಿಕೊಂಡಿದೆ. ಇತ್ತೀಚೆಗೆ ಕೃಷಿಯಲ್ಲಿ ತೊಡಗಿಕೊಂಡ ರೈತರ ಕಷ್ಟ-ಸುಖಗಳನ್ನೂ ಕೂಡ. ಇವೆಲ್ಲವನ್ನೂ ಮೀರಿ ಒಂದು ಜೀವಿಯಾಗಿ ಅದು ಮಾನವ ಸಾಂಗತ್ಯವನ್ನು ಬಹುಮುಖಿಯಾಗಿ ಅಪ್ಪಿಕೊಂಡು ಕಾಪಾಡುವ ಹೊಣೆ ಹೊತ್ತಿದೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
Nice and brief information sir ?