ಮಾಗಿದ ಹಣ್ಣುಗಳ ಮೇಲೆ ಅಥವಾ ಬಾಳೆಹಣ್ಣನ್ನು ತಿಂದೆಸದ ಸಿಪ್ಪೆಯ ಹತ್ತಿರ, ಅದೂ ಅಲ್ಲದೆ ಅಡುಗೆ ಮನೆಯಲ್ಲಿ, ಆಗಾಗ ಅಲ್ಲಲ್ಲಿ ಹಾರಾಡುವ ಸಣ್ಣ ಸಣ್ಣ ಕೀಟಗಳನ್ನು ಗಮನಿಸಿಯೇ ಇರುತ್ತೀರಿ. ಅವು ಹಣ್ಣು ನೊಣಗಳು (Fruit Flies)! ಮಾಗಿದ ಹಣ್ಣುಗಳ ಪರಿಮಳಕ್ಕೆ ಆಕರ್ಷಿತವಾಗುವ ಈ ಪುಟ್ಟ ಕೀಟಗಳು ಡ್ರಾಸೊಫಿಲಾ (Drosophila) ಎಂಬ ಸಂಕುಲಕ್ಕೆ ಸೇರಿವೆ. ಅದರಲ್ಲಿರುವ 1500 ಪ್ರಭೇದಗಳಲ್ಲಿ ಒಂದು ಪ್ರಭೇದವಾದ ಡ್ರಾಸೊಫಿಲಾ ಮೆಲಾನೊಗಾಸ್ಟರ್ (Drosophila melanogaster) ಆನುವಂಶಿಕ ಜೈವಿಕ ಸಂಶೋಧನೆಗಳಲ್ಲಿ ಭಾಗಿಯಾಗಿ ಒಂದೆಡಲ್ಲ ಆರು ನೊಬೆಲ್ ಬಹುಮಾನಗಳನ್ನು ಕೊಡಿಸಿದೆ. ಈ ಫ್ರೂಟ್ ಫ್ಲೈ ಬಳಸಿ ಸಂಶೋಧನೆಯಲ್ಲಿ ತೊಡಗಿದ್ದ ಡ್ರಾಸೊಫಿಲಿಸ್ಟರು (Drosophilists) ಎಂದೇ ಕರೆಯಿಸಿಕೊಳ್ಳುವ 11 ವಿಜ್ಞಾನಿಗಳನ್ನು ವೈದ್ಯಕೀಯ ವಿಭಾಗದ ನೊಬೆಲ್ ಪುರಸ್ಕೃತ ವಿಜ್ಞಾನಿಗಳನ್ನಾಗಿಸಿದೆ. ನೊಬೆಲ್ ಪುರಸ್ಕಾರದ ನಿರೀಕ್ಷೆಯ ಇಂದಿನ ಓದಿನಲ್ಲಿ ಒಂದಷ್ಟು ವಿವರಗಳಿವು.
ಒಟ್ಟಾರೆ ಹನ್ನೊಂದು ವಿಜ್ಞಾನಿಗಳನ್ನು ನೊಬೆಲಿಗರನ್ನಾಗಿಸಿದ ಹೀರೋ ಈ ಪುಟ್ಟ ಫ್ರೂಟ್ ಫ್ಲೈ- ಹಣ್ಣು ನೊಣ ಡ್ರಾಸೊಫಿಲಾ ಮೆಲಾನೊಗಾಸ್ಟರ್ (Drosophila melanogaster) ಬಹು ಪಾಲು ಮಾನವರ ಆನುವಂಶಿಕ ಅಧ್ಯಯನಗಳನ್ನು ನಿರ್ಧರಿಸುತ್ತಿದೆ. ಕಳೆದ ಶತಮಾನದ ಆದಿಯಲ್ಲಿ 1933ರಲ್ಲಿ ಮೊಟ್ಟ ಮೊದಲ ಬಾರಿಗೆ ಥಾಮಸ್ ಹಂಟ್ ಮೊರ್ಗನ್ (Thomas Hunt Morgan) ಅವರಿಗೆ ಕ್ರೋಮೊಸೋಮುಗಳ ಮೇಲಿನ ಜೀನುಗಳು ಮುತ್ತು ಪೋಣಿಸಿದಂತೆ ಕುಳಿತ ವಿವರಗಳ ಆನುವಂಶಿಕ ಕಥನದ ಶೋಧಕ್ಕೆ ವೈದ್ಯಕೀಯ ವಿಭಾಗದ ನೊಬೆಲ್ ಪುರಸ್ಕಾರ ಲಭಿಸಿತ್ತು. ಮೊಟ್ಟ ಮೊದಲ ಬಾರಿಗೆ ಮಾನವ ಆನುವಂಶಿಯತೆಯ ಅಧ್ಯಯನಗಳಿಗೆ ಪುಟ್ಟ ಕೀಟವೊಂದರ ಜೀವಿಕೋಶಗಳ ನೆರವು ಸಿಕ್ಕಿತ್ತು. ಅದರಿಂದ ಶರೀರವಿಜ್ಞಾನದ ಸಂಶೋಧನೆಯ ಆನುವಂಶಿಯತೆಯ ಅಧ್ಯಯನಗಳಿಗೆ ಹೊಸತೊಂದು ಬಾಗಿಲು ತೆರೆದಿತ್ತು.
ಡ್ರಾಸೊಫಿಲಾ ಮೆಲಾನೊಗಾಸ್ಟರ್ ಪ್ರಭೇದದ ಡಿ.ಎನ್.ಎ. ಮತ್ತು ನಮ್ಮ ದೇಹದ ಜೀವಿಕೋಶದೊಳಗಿರುವ ಡಿ.ಎನ್.ಎ. ಸರಿ ಸುಮಾರು ಪ್ರತಿಶತ 60ರಷ್ಟು ಒಂದೇ ಬಗೆಯಲ್ಲಿವೆ. ಹಾಗಾಗಿ ಡ್ರಾಸೊಫಿಲಾ ನಮ್ಮನ್ನು ಅರಿಯುವ ವೈದ್ಯಕೀಯ ಶೋಧಗಳಲ್ಲಿ ಸದಾ ಜೊತೆಯಾಗಿದೆ. ಈ ನೊಣದ ಜೀವನ ಚಕ್ರ ಕೇವಲ ಎರಡು ವಾರ ಮಾತ್ರ! ಜೊತೆಗೆ ಈ ನೊಣದಲ್ಲಿ ಆನುವಂಶಿಕ ಗುಣಗಳ ಹಠಾತ್ ರೂಪಾಂತರಗೊಳ್ಳುವಿಕೆಯು ಬಗೆಬಗೆಯಾಗಿರುತ್ತವೆ. ಆದ್ದರಿಂದ ಆನುವಂಶಿಕತೆಯನ್ನು ತಿಳಿವಳಿಕೆಯಾಗಿಸುವಲ್ಲಿ ನೊಣದ ಪಾಲು ದೊಡ್ಡದು. ಜೀವಿವಿಜ್ಞಾನದಲ್ಲಿ ಆನುವಂಶಿಕ ಜೈವಿಕತೆಯನ್ನು ಅರಿಯಲು ಆರಂಭಿಸಿದ ದಿನದಿಂದಲೂ ಈ ನೊಣವು ನಮ್ಮ ಆನುವಂಶಿಕೆಯ ವಿವಿಧ ಬಗೆಯ ತಿಳಿವಳಿಕೆಯನ್ನು ಸಾಧ್ಯಮಾಡಿದೆ. ನಮ್ಮ ದೇಹವನ್ನು ಆವರಿಸುವ ಸುಮಾರು 75% ಕಾಯಿಲೆಗಳನ್ನು ವಿವರಿಸುವ ಜೀನ್ಗಳನ್ನು ಈ ನೊಣದಲ್ಲಿಯೂ ಕಾಣಬಹುದಾಗಿದೆ. ಆಲ್ಜೈಮರ್ಸ್, ಆಟಿಸಂ, ಮಧುಮೇಹ, ಬಹುಪಾಲು ಎಲ್ಲ ಬಗೆಯ ಕ್ಯಾನ್ಸರ್ಗಳ ಕುರಿತ ಅಧ್ಯಯನಗಳಲ್ಲಿ ಈ ನೊಣದ ಸಹಾಯವನ್ನು ಪಡೆಯಲಾಗಿದೆ. ಈ ನೊಣವನ್ನು ಆಧಾರವಾಗಿಟ್ಟುಕೊಂಡು ನಡೆಯುವ ಅಧ್ಯಯನಗಳು ಎಷ್ಟು ಜನಪ್ರಿಯ ಎಂದರೆ, ಈ ಹಣ್ಣು ನೊಣದ ಆಧಾರದ ಅಧ್ಯಯನ ಎಂಬುದು ವೈದ್ಯಕೀಯ ಅಧ್ಯಯನಗಳಲ್ಲಿ ಗುಣವಾಚಕವಾಗಿದೆ.
ಈ ಹಣ್ಣು ನೊಣದಲ್ಲಿ ಕೇವಲ ನಾಲ್ಕು ಜೊತೆ ಕ್ರೋಮೊಸೋಮುಗಳಿದ್ದು, ನಮ್ಮ ದೇಹದಲ್ಲಿ ಇರುವ 23 ಜೊತೆಗಳಿಗೆ ಹೋಲಿಸಿದರೆ ತುಂಬಾ ಸುಲಭವಾಗಿ ಅಧ್ಯಯನಕ್ಕೆ ಒಳಪಡಿಸಬಹುದಾಗಿದೆ. ಹಾಗೂ ಈ ನೊಣಗಳ ಜೀವನಾವಧಿಯೂ 10-15 ಮಾತ್ರ! ಅಲ್ಲದೆ, ನಮ್ಮ ಹಣ್ಣು- ಆಹಾರದ ಮೇಲಿನ ಹಾರಾಟದ ಹೊರತಾಗಿ ಯಾವುದೇ ಹಾನಿಯೂ ಈ ನೊಣದಿಂದ ಇಲ್ಲ! ಆದ್ದರಿಂದ ಇದು ಕೇವಲ ನಮ್ಮ ಸಂಶೋಧನೆಯ ಅಧ್ಯಯನಗಳಿಗೆಂದೇ ವಿಕಾಸಗೊಂಡಿದೆಯಾ ಎನ್ನಿಸಿದರೂ ಅಚ್ಚರಿಯಲ್ಲ. ಇದನ್ನು ಬಳಸಿ ಮಾಡಿದ ಅಧ್ಯಯನಗಳಲ್ಲಿ ಜೀನ್ಗಳ ರೂಪಾಂತರಕ್ಕೆ ಸಂಬಂಧಿಸಿದ ಅಧ್ಯಯನಗಳು ವೈವಿಧ್ಯಮಯ ಹಾಗೂ ಜನಪ್ರಿಯ. 1946ರ ನೊಬೆಲ್ ಪುರಸ್ಕೃತ ವಿಜ್ಞಾನಿ ಹರ್ಮನ್ ಮುಲ್ಲರ್ (Hermann J. Muller)ಅವರಿಗೆ ಕ್ಷ-ಕಿರಣಗಳನ್ನು (X-Rays) ಬಳಸಿ ಆನುವಂಶಿಕತೆಯ ರೂಪಾಂತರವನ್ನು ಅರಿಯಲು ಮಾಡಿದ ಶೋಧದಲ್ಲೂ ಈ ನೊಣವೇ ಹೀರೋ!
ಮುಂದೆ 1995ರ ವೈದ್ಯಕೀಯ ನೊಬೆಲ್ ಬಹುಮಾನವನ್ನು ಭ್ರೂಣದ ಅಭಿವೃದ್ಧಿಯ ಆನುವಂಶೀಯ ತಿಳಿವಳಿಕೆಯ ಮೂಲಕ ಅನುವಾಗಿಸಿಕೊಟ್ಟದ್ದೂ ಈ ಹಣ್ಣು ನೊಣವೇ! ಎಡ್ವರ್ಡ್ ಲೆವಿಸ್ (Edward B Lewis) ಮತ್ತು ಕ್ರಿಸ್ಟಿಯಾನ್ ವಾಲ್ಹರ್ಡ್ (Christiane Nüsslein-Volhard) ಮತ್ತು ಎರಿಕ್ ವೈಶಸ್ (Eric F Wieschaus) ಅವರಿಗೆ 1995ರ ನೊಬಲ್ ಪ್ರಶಸ್ತಿಯ ಪಡೆದವರು.
ಕ್ಯಾನ್ಸರ್ ಜೀವಿಕೋಶಗಳು ಸಾವನ್ನಪ್ಪದೆ ಬೆಳೆಯುತ್ತಲೇ ಇದ್ದು, ಟ್ಯೂಮರ್ (ಗಂಟು)ಗಳನ್ನು ಉಂಟುಮಾಡುತ್ತವೆ. ಆದರೆ ಜೀವಿಕೋಶಗಳು ಜೈವಿಕವಾಗಿ ಸಾವನ್ನಪ್ಪಬೇಕು. ಕ್ಯಾನ್ಸರ್ ಜೀವಿಕೋಶಗಳಲ್ಲೂ ಆತ್ಮಹತ್ಯೆಯನ್ನು ಮೊದಲು ಅರಿಯಲು ಸಾದ್ಯವಾಗಿದ್ದು ಈ ನೊಣದ ಜೀವಿಕೋಶಗಳಲ್ಲೇ! ಯಾವುದೇ ಜೀವಿಕೋಶವು ಊನವಾದರೆ, ಅದು ಸಾವನ್ನಪ್ಪಿ ಅಂಗಾಂಶದ ಆರೋಗ್ಯಕ್ಕೆ ದಾರಿ ಮಾಡಿಕೊಡಲು ಜೀವಿಕೋಶಗಳ ಸಾವು ಮುಖ್ಯವಾಗುತ್ತದೆ. ಆದರೆ ಕ್ಯಾನ್ಸರ್ ಜೀವಿಕೋಶಗಳು ಮಾತ್ರ ಊನವಾದರೂ ಸಾವನ್ನಪ್ಪದೆ ಮುಂದುವರೆಯುತ್ತಲೇ ಇರುತ್ತವೆ. ಜೀವಿಕೋಶವೊಂದು ಆತ್ಮಹತ್ಯೆಯ ಮೂಲಕ ಸಾವನ್ನಪ್ಪುವಿಕೆಯು ಅದನ್ನು ಸಹಿಸುವ ಪ್ರೊಟೀನ್ ಸ್ರವಿಸುವಿಕೆಯ ಮೂಲಕ ಕಡಿಮೆಯಾಗುತ್ತದೆ. ಇಂತಹ ಪ್ರೊಟೀನನ್ನೂ ಈ ನೊಣದ ಮೂಲಕವೇ ಅರಿತಿದ್ದು, ಇದೀಗ ಅಂತಹಾ ಪ್ರೊಟೀನುಗಳ ಉತ್ಪದನೆಯ ತಡೆಯಲು ರಸಾಯನಿಕ ಕ್ರಮಗಳ ಶೋಧಗಳನ್ನು ನಿರಂತರವಾಗಿಸಿವೆ.
ನಾವು ವಾಸನೆಯ ಗ್ರಹಿಸುವ ರಸಾಯನಿಕತೆಯ ತಿಳಿವಳಿಕೆಗಾಗಿ 2004ರಲ್ಲಿ ರಿಚರ್ಡ್ ಆಕ್ಸೆಲ್ (Richard Axel) ಮತ್ತು ಲಿಂಡಾ ಬಕ್ (Linda Buck) ಎಂಬ ಇಬ್ಬರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿಗೆ ಈ ನೊಣದ ಬಳಕೆಯ ಅನುಶೋಧವು ನೆರವಾಗಿತ್ತು. ಮುಂದೆ 2011ರ ವೈದ್ಯಕೀಯ ವಿಭಾಗದ ಆನುವಂಶಿಕ ರೋಗರಕ್ಷಣೆಯ ಕುರಿತ ಸಂಶೋಧನೆಯನ್ನು ನಡೆಸಿದ ಜೂಲ್ಸ್ ಹಾಫ್ಮನ್ (Jules A Hoffmann) ಅವರಿಗೆ ನೊಬೆಲ್ ಪ್ರಶಸ್ತಿಗೂ ಈ ಫ್ರೂಟ್ ಫ್ಲೈ ಕಾರಣವಾಗಿದೆ.
ತೀರಾ ಇತ್ತೀಚೆಗಿನ 2017ರ ವೈದ್ಯಕೀಯ ನೊಬೆಲ್ ಪುರಸ್ಕಾರಕ್ಕೆ ಒಳಗಾದ ಅನುಶೋಧವಾದ ಹಗಲು-ರಾತ್ರಿಗಳನ್ನು ನಾವು ಗ್ರಹಿಸುವಿಕೆಯ ಮಾಲೆಕ್ಯೂಲಾರ್ ಅಧ್ಯಯನಗಳಲ್ಲಿ ಡ್ರಾಸೊಫಿಲಾವನ್ನು ಬಳಸಲಾಗಿತ್ತು. ಈ ಅಧ್ಯಯನದ ಪ್ರಶಸ್ತಿಗೆ ಜೆಫ್ರಿ ಹಾಲ್ ( Jeffrey C Hall), ಮೈಕೆಲ್ ರಾಸ್ಬಾಸ್ ( Michael Rosbash) ಮತ್ತು ಮೈಕೆಲ್ ಯಂಗ್ (Michael W Young) ಪಾಲುದಾರರು.
ಪುಟ್ಟ ಹಣ್ಣು ನೊಣ ಡ್ರಾಸೊಫಿಲಾ ಮೆಲಾನೊಗಾಸ್ಟರ್ (Drosophila melanogaster) 1933 ರಿಂದ ಈವರೆವಿಗೂ ನಿರಂತವಾಗಿ ವಿವಿಧ ವೈಜ್ಞಾನಿಕ ಸಂಶೋಧನೆಗಳಲ್ಲಿ ಭಾಗಿಯಗಿ 6 ನೊಬೆಲ್ ಪ್ರಶಸ್ತಿಗಳ ಮೂಲಕ 11 ವಿಜ್ಞಾನಿಗಳನ್ನು ನೊಬೆಲ್ ವಿಜ್ಞಾನಿಗಳಾಗಿಸಿದೆ.
ನಾಳೆ ಮತ್ತೊಂದು ವಿಶೇಷ ನೊಬೆಲ್ ಸಂಗತಿಯು CPUS ವೆಬ್ಪುಟಗಳ ಮೂಲಕ ನಿಮ್ಮೆಲ್ಲರಿಗೂ ತೆರೆದುಕೊಳ್ಳಲಿದೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್