You are currently viewing “ನೈಸರ್ಗಿಕವಾದ ಪ್ರಯೋಗಗಳನ್ನು ಬಳಸಿ ಸಮಾಜದ ಸಮಸ್ಯೆಗಳನ್ನು ಪರಿಹರಿಸುವ” ಶೋಧಕ್ಕೆ ಅರ್ಥವಿಜ್ಞಾನದ ನೊಬೆಲ್‌

“ನೈಸರ್ಗಿಕವಾದ ಪ್ರಯೋಗಗಳನ್ನು ಬಳಸಿ ಸಮಾಜದ ಸಮಸ್ಯೆಗಳನ್ನು ಪರಿಹರಿಸುವ” ಶೋಧಕ್ಕೆ ಅರ್ಥವಿಜ್ಞಾನದ ನೊಬೆಲ್‌

ಸಾಮಾನ್ಯವಾಗಿ ಪ್ರಯೋಗಗಳನ್ನು ಕೈಗೊಂಡು ಸಮಸ್ಯೆಗಳ ಕಾರಣ ಮತ್ತು ಪರಿಣಾಮಗಳನ್ನು ಹುಡುಕುವ ಅಥವಾ ಅರ್ಥಮಾಡಿಕೊಳ್ಳುವ ಕ್ರಮವನ್ನು ಕ್ಲಿನಿಕಲ್‌ ಸಂಶೋಧನೆ ಮುಂತಾದೆಡೆಗಳಲ್ಲಿ ಅನುಸರಿಸುತ್ತಾರೆ. ಅಲ್ಲಿ ಸಂಶೋಧಕರಿಗೆ ಭಾಗವಹಿಸುವ ಸಂದರ್ಭದ ಪರಿಚಯ ಹಾಗೂ ಮತ್ತಿತರ ವಿವರಗಳ ಸಂಪೂರ್ಣ ಅರಿವು ಇರುತ್ತದೆ. ಆದರೆ ಇಕಾನಾಮಿಕ್ಸ್‌ ಮುಂತಾದ ಮಾನವಿಕ ಅಧ್ಯಯನಗಳಲ್ಲಿ ತರ್ಕ ಮತ್ತು ವಾಗ್ವಾದದಗಳ ಚರ್ಚೆಯನ್ನು ಅನುಸರಿಸಿ ಸಮಾಜದ ಸಸಮ್ಯೆಗಳ ತಿಳಿವಿಗೆ ಪ್ರಯತ್ನಿಸಲಾಗುತ್ತಿತ್ತು. ಆದರೆ ಈ ಬಾರಿಯ ಅರ್ಥವಿಜ್ಞಾನದ ನೊಬೆಲ್‌ ಪ್ರಶಸ್ತಿಯ ವಿಜೇತರು ಸಮಾಜದ ಸಮಸ್ಯೆಗಳನ್ನೂ ಸಹಾ, ನೈಸರ್ಗಿಕವಾದ ಪ್ರಾಯೋಗಿಕ ಮಾದರಿಯಲ್ಲಿ ತಿಳಿಯಲು ಸಾಧ್ಯ ಎನ್ನುವ ಎಂಬ ವಿವರಣೆಯ ಸಂಶೋಧನೆಯನ್ನು ಸಾಬೀತು ಮಾಡಿದ್ದಾರೆ. ಪ್ರೊ. ಡೇವಿಡ್‌ ಕಾರ್ಡ್‌, ಪ್ರೊ. ಜೊಶ್ವಾ ಆಂಗ್ರಿಸ್ಟ್‌ ಮತ್ತು ಪ್ರೊ. ಗ್ವಿಡೊ ಇಂಬೆನ್ಸ್‌ ಈ ಮೂವರೂ ನೈಸರ್ಗಿಕವಾದ ಪ್ರಯೋಗಿಕ ಮಾದರಿಯಲ್ಲಿ ಸಮಾಜದ ಹಲವು ಸಮಸ್ಯೆಗಳ ಕಾರಣ ಮತ್ತು ಪರಿಣಾಮಗಳನ್ನು ಅರಿಯುವ ಮಾರ್ಗಗಳನ್ನು ಕಟ್ಟಿಕೊಂಟ್ಟಿದ್ದಾರೆ. ಇದು ಪ್ರಾಯೋಗಿಕ ಅಧ್ಯಯನಗಳನ್ನು ಮಾನವಿಕ ಶಿಸ್ತುಗಳಲ್ಲೂ ವಿಸ್ತರಿಸುವ ಕ್ರಾಂತಿಕಾರಿಯಾದ ಹೊಸ ಮಾರ್ಗೋಪಾಯಗಳನ್ನು ಸೃಜಿಸಿದೆ.

     ನಾವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಮಗೆ ನಮ್ಮ ಆಯ್ಕೆಗಳ ಪರಿಣಾಮಗಳ ಅರಿವು ಇರಬೇಕಾಗುತ್ತದೆ. ಸಮಾಜ ವಿಜ್ಞಾನದ ಅಧ್ಯಯನಗಳಲ್ಲಿ ದೊಡ್ಡ ದೊಡ್ಡ ಪ್ರಶ್ನೆಗಳನ್ನು ಹಾಕಿಕೊಳ್ಳುವಾಗ ಅವುಗಳು ಒಳಗೊಂಡಿರುವ ಕಾರಣ ಮತ್ತು ಪರಿಣಾಮಗಳನ್ನು ತಿಳಿಯಬೇಕಾಗುತ್ತದೆ. ಸಮಾಜವನ್ನು ಪ್ರಭಾವಿಸುವ ಶಿಕ್ಷಣ, ಆರೋಗ್ಯ, ಆದಾಯ ಮತ್ತು ಕೆಲಸ ಇವುಗಳು ಒಂದನ್ನೊಂದು ಪ್ರತಿಕ್ರಿಯಿಸುತ್ತಾ ಒಟ್ಟಾರೆಯ ಸಮಾಜದ ಹಿತವನ್ನು ಕಟ್ಟಿಕೊಡುತ್ತವೆ. ಆದರೆ ಇವುಗಳನ್ನು ಮಾಪನ ಮಾಡಿ ಸಮೀಕರಿಸುವ ಸಾದೃಶ್ಯಗಳನ್ನು ಹೀಗೆ, ಹೀಗೆ ಎಂದು ವರ್ಗೀಕರಿಸಲು ಪ್ರಾಯೋಗಿಕ ಮಾದರಿಗಳನ್ನು ನಡೆಸುವ ಉದ್ದೇಶ ಸಂಶೋಧಕರ ಮಿತಿಗಳಲ್ಲಿ ಕಷ್ಟ ಸಾಧ್ಯ. ಆದಾಗ್ಯೂ ಅಂತಹದರಲ್ಲೂ ಸ್ವಾಭಾವಿಕವಾಗಿ ಹಾಗೂ ನೈಸರ್ಗಿಕವಾಗಿಯೇ ದೊರೆಯುವ ಅವಕಾಶಗಳನ್ನು ಬಳಸಿಕೊಂಡು ಪ್ರಯೋಗಗಳನ್ನು ಸೈದ್ಧಾಂತೀಕರಿಸಿ ಕಾರಣ ಮತ್ತು ಪರಿಣಾಮಗಳನ್ನು ಹುಡುಕುವ ಜಾಣ್ಮೆಯನ್ನು ಮೂವರ ಅನುಶೋಧಗಳು ಸಾಬೀತು ಪಡಿಸಿವೆ.  

ನೈಸರ್ಗಿಕ ಪ್ರಯೋಗಗಳನ್ನು ಬಳಸಿಕೊಂಡು, ಡೇವಿಡ್ ಕಾರ್ಡ್ ಅವರು ಕನಿಷ್ಠ ವೇತನ, ವಲಸೆ ಮತ್ತು ಶಿಕ್ಷಣದ ಕಾರ್ಮಿಕ ಮಾರುಕಟ್ಟೆಯ ಪರಿಣಾಮಗಳನ್ನು ವಿಶ್ಲೇಷಿಸಿದ್ದಾರೆ. 1990 ರ ದಶಕದ ಆರಂಭದಿಂದಲೂ ಅವರ ಅಧ್ಯಯನಗಳು ಇಂತಹಾ ವಿಚಾರದಲ್ಲಿ ಇದ್ದಂತಹಾ ಸಾಂಪ್ರದಾಯಿಕ ತಿಳಿವಳಿಕೆಯನ್ನು ಸವಾಲು ಮಾಡಿವೆ. ಇದರಿಂದ ಅರ್ಥವಿಜ್ಞಾನದ ಅಧ್ಯಯನ ಹೊಸ ವಿಶ್ಲೇಷಣೆಗಳು ಮತ್ತು ಹೆಚ್ಚುವರಿ ಒಳನೋಟಗಳಿಗೆ ಕಾರಣವಾಯಿತು. ಫಲಿತಾಂಶಗಳು ಮತ್ತಿತರ ವಿಷಯಗಳ ಜೊತೆಗೆ,  ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಹೆಚ್ಚಿಸುವುದರಿಂದ ಅದು  ಕಡಿಮೆ ಉದ್ಯೋಗಗಳಿಗೆ ಕಾರಣವಾಗುವುದಿಲ್ಲ ಎಂದು ತೋರಿಸಿದೆ. ಒಂದು ದೇಶದ ಜನರ ಆದಾಯವು ಅಲ್ಲಿಗೆ ಬಂದಂತಹಾ ಹೊಸ ವಲಸೆಯಿಂದ ಪ್ರಯೋಜನ ಪಡೆಯಬಹುದೆಂದು ಈಗ ಅಧ್ಯಯನಗಳಿಂದ ತಿಳಿದಿದೆ.  ಆದರೆ ಈ ಹಿಂದೆ ವಲಸೆ ಬಂದ ಜನರಿಂದ ಋಣಾತ್ಮಕ ಪರಿಣಾಮ ಬೀರುವ ಅಪಾಯವಿದೆ ಎಂದೇ ತಿಳಿಯಲಾಗಿತ್ತು. ಆದರೆ ಅದು ನಿಜಕ್ಕೂ ಹಾಗಲ್ಲ. ಅದರಂತೆಯೇ ಶಾಲೆಗಳಲ್ಲಿನ ಸಂಪನ್ಮೂಲಗಳು ವಿದ್ಯಾರ್ಥಿಗಳ ಭವಿಷ್ಯದ ಉದ್ಯೋಗದ ದೃಷ್ಟಿಯ ಮಾರುಕಟ್ಟೆಯ ಯಶಸ್ಸಿಗೆ ಈ ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚು ಮಹತ್ವದ್ದಾಗಿದೆ ಎಂಬುದು ಇದೀಗ ಅರ್ಥವಿಜ್ಞಾನದ ಅಧ್ಯಯನಗಳಿಂದ ಅರಿವಿಗೆ ಬಂದಿದೆ. ಇವೆಲ್ಲದರ ತಿಳಿವು ಸಾಧ್ಯಯಾದ್ದು, ಡೇವಿಡ್‌ ಕಾರ್ಡ್‌ ನೈಸರ್ಗಿಕವಾದ ಸಮುದಾಯದ ಬದಲಾವಣೆಗಳ ಸಂದರ್ಭಗಳನ್ನೇ ಪ್ರಾಯೋಗಗಳಾಗಿ ವಿಭಾಗಿಸಿ ಅಧ್ಯಯನ ನಡೆಸಿದ್ದರಿಂದ!

ಆದಾಗ್ಯೂ, ನೈಸರ್ಗಿಕ ಪ್ರಯೋಗದಿಂದ ಡೇಟಾವನ್ನು ಅರ್ಥೈಸುವುದು ಕಷ್ಟ. ಉದಾಹರಣೆಗೆ, ಒಂದು ಗುಂಪಿನ ವಿದ್ಯಾರ್ಥಿಗಳಿಗೆ ಕಡ್ಡಾಯ ಶಿಕ್ಷಣವನ್ನು ಒಂದು ವರ್ಷ ವಿಸ್ತರಿಸುವುದು ಆ ಗುಂಪಿನ ಎಲ್ಲರನ್ನೂ ಒಂದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಕೆಲವು ವಿದ್ಯಾರ್ಥಿಗಳು ಹೇಗಾದರೂ ಸ್ವಪ್ರಯತ್ನಗಳನ್ನು ಮುಂದುವರೆಸಿಯಾದರೂ ಅಧ್ಯಯನ ಮಾಡುತ್ತಾರೆ. ಹಾಗಾಗಿ ಅವರಿಗೆ, ಶಿಕ್ಷಣದ ಮೌಲ್ಯವು ಸಾಮಾನ್ಯವಾಗಿ ಇಡೀ ಗುಂಪಿನ ಪ್ರತಿನಿಧಿಯಾಗಿರುವುದಿಲ್ಲ. ಆದ್ದರಿಂದ, ಶಾಲೆಯಲ್ಲಿ ಹೆಚ್ಚುವರಿ ವರ್ಷದ ಪರಿಣಾಮದ ಬಗ್ಗೆ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವೇ? ಅಂದರೆ ಒಟ್ಟಾರೆಯಾಗಿ ಹೆಚ್ಚು ವರ್ಷಗಳ ಶಿಕ್ಷಣಾವಧಿಯು ಬೀರುವ ಪರಿಣಾಮವನ್ನು ಅರಿಯುವ ಬಗೆಯು ಸ್ವಾಭಾವಿಕವಾಗಿ ಅರಿಯುವ ಕಷ್ಟ ಇದ್ದೇ ಇರುತ್ತದೆ. ಆದರೆ ಇವೆಲ್ಲವನ್ನೂ 1990 ರ ಮಧ್ಯದಲ್ಲಿ, ಜೋಶುವಾ ಆಂಗ್ರಿಸ್ಟ್ ಮತ್ತು ಗ್ವಿಡೊ ಇಂಬೆನ್ಸ್ ಅವರ ವೈಧಾನಿಕದ ಅದ್ಯಯನಗಳು ವಿಧಾನದ ಸಮಸ್ಯೆಯನ್ನು ಪರಿಹರಿಸಿದವು.  ನೈಸರ್ಗಿಕ ಪ್ರಯೋಗಗಳಿಂದಲೂ ಕೂಡ ಕಾರಣ ಮತ್ತು ಪರಿಣಾಮದ ಬಗ್ಗೆ ಎಷ್ಟು ನಿಖರವಾದ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಅವರು ತೋರಿಸಿದರು.

“ಸಮಾಜಕ್ಕೆ ಮತ್ತು ಆಂಗ್ರಿಸ್ಟ್ ಮತ್ತು ಇಂಬೆನ್ಸ್ ಅವರ ಕ್ರಮಶಾಸ್ತ್ರೀಯ ಕೊಡುಗೆಗಳ ಪ್ರಮುಖ ಪ್ರಶ್ನೆಗಳ ಕಾರ್ಡ್ ಅಧ್ಯಯನಗಳು ನೈಸರ್ಗಿಕ ಪ್ರಯೋಗಗಳು ಜ್ಞಾನದ ಶ್ರೀಮಂತ ಮೂಲಗಳೆಂದು ತೋರಿಸಿವೆ. ಅವರ ಸಂಶೋಧನೆಯು ಸಮಾಜಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡಿದ ವಿವರಗಳುಳ್ಳ ಕಾರಣಗಳನ್ನು ತಿಳಿಸುವ ಪ್ರಶ್ನೆಗಳಿಗೆ ಉತ್ತರಿಸುವ ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ,

ಪ್ರೊ. ಡೇವಿಡ್‌ ಕಾರ್ಡ್‌ ಅವರು ಮೂಲತಃ ಕೆನಡಾದವರು. ಅಮೆರಿಕದ ಪ್ರಿನ್ಸ್‌ಟನ್‌ ವಿಶ್ಶವಿದ್ಯಾಲಯದಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದವರು. ಲೇಬರ್‌ ಇಕಾನಾಮಿಕ್ಸ್‌ ಇವರ ಆಸಕ್ತಿಯ ಕ್ಷೇತ್ರ. ಪ್ರಸ್ತುತ ನೊಬೆಲ್‌ ಪುರಸ್ಕೃತ ಅಧ್ಯಯನದಲ್ಲಿ ನ್ಯೂಜರ್ಸಿಯ ಆಹಾರ ಉದ್ಯಮದ ಕಂಪನಿಗಳ ಕನಿಷ್ಠ ವೇತನ ಹೆಚ್ಚುಗಾರಿಕೆಯ ಬಳಸಿ ನಿರ್ವಹಿಸಿದ್ದಾರೆ. ಅವರ ಈ ಅಧ್ಯಯನವು ಕನಿಷ್ಠ ವೇತನ ಮತ್ತು ಕೆಲಸಗಾರರ/ಕೆಲಸದ ದೊರಕುವಿಕೆಯ ಮೇಲೆ ಹಿಂದೆ ನಂಬಿಕೊಂಡಿದ್ದ ತಿಳಿವಳಿಕೆಯನ್ನು ಬದಲಿಸಿ ಮರು ಚಿಂತನೆಗೆ ಒಳಪಡಿಸಿದೆ. ಇದರಿಂದ ಒಟ್ಟಾರೆ ಕಾರ್ಮಿಕ ಸಮುದಾಯದ ಮೇಲೆ ಉಂಟಾಗುವ ಒಳಿತಿನ ಪರಿಣಾಮಗಳು ಸಮಾಜದ ಅಧ್ಯಯನಗಳಲ್ಲಿ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸ್ವಾಭಾವಿಕವಾಗಿ ಸಿಗುವ ಅವಕಾಶಗಳನ್ನೇ ಪ್ರಯೋಗಗಳಾಗಿಸುವ ಬಗ್ಗೆ ಹೊಸ ತಿಳಿವಳಿಕೆಯನ್ನು ನೀಡಿದ್ದಾರೆ. ಇವರಿಗೆ ನೊಬೆಲ್‌ನ ಅರ್ಧ ಮೊತ್ತದ ಬಹುಮಾನ ಲಭಿಸಿದೆ.

ಪ್ರೊ. ಜೊಶ್ವಾ ಆಂಗ್ರಿಸ್ಟ್‌, ಅವರು ಪ್ರಿನ್ಸ್‌ ಟನ್‌ ವಿಶ್ವವಿದ್ಯಾಲಯದ ತಮ್ಮ ಪದವಿ ಅಧ್ಯಯನದಲ್ಲಿ ಪ್ರೊ. ಡೇವಿಡ್‌ ಅವರ ವಿದ್ಯಾರ್ಥಿ. ಮೂಲತಃ ಇಸ್ರೇಲಿನವರು. ಸದ್ಯಕ್ಕೆ ಮಸಾಚುಸೇಟ್ಸ್‌ ತಾಂತ್ರಿಕ ಸಂಸ್ಥೆಯಲ್ಲಿ ಪ್ರೊಪೆಸರ್‌ ಆಗಿದ್ದಾರೆ. ಕಳೆದ ವರ್ಷ 2019ರ ನೊಬೆಲ್‌ ಪ್ರಶಸ್ತಿ ಪಡೆದ ಏಸ್ತರ್‌ ಡುಫ್ಲೊ ಇವರ ವಿದ್ಯಾರ್ಥಿನಿ. ಲೇಬರ್‌ ಇಕಾನಾಮಿಕ್ಸ್‌, ಅರ್ಬನ್‌ ಇಕಾನಾಮಿಕ್ಸ್‌ ಮತ್ತು ಶೈಕ್ಷಣಿಕ ಅರ್ಥವಿಜ್ಞಾನ ಇವರ ಆಫ್ತ ಕ್ಷೇತ್ರಗಳು.

ಪ್ರೊ. ಗ್ವಿಡೊ ಇಂಬೆನ್ಸ್‌ ಇವರು ಡಚ್‌ ಅಮೆರಿಕನ್‌. ಮೂಲತಃ ನೆದರ್‌ಲ್ಯಾಂಡ್‌ ದೇಶದವವರು. ಇದೀಗ ಸ್ಟಾನ್‌ಫೊರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿದ್ದಾರೆ. ಕಳೆದ 2019 ರಿಂದ ವಿಖ್ಯಾತ ಅರ್ಥವಿಜ್ಞಾನ ಪತ್ರಿಕೆ Econometrica ದ ಸಂಪಾದಕರಾಗಿದ್ದಾರೆ. ಪ್ರೊ. ಆಂಗ್ರಿಸ್ಟ್‌ ಮತ್ತು ಪ್ರೊ. ಇಂಬೆನ್ಸ್‌ ತಲಾ 25 % ಪ್ರಶಸ್ತಿಯ ಪಾಲುದಾರಿಕೆಯನ್ನು ಪಡೆದಿದ್ದಾರೆ.

 CPUS ಈ ಮೂವರೂ ಅರ್ಥವಿಜ್ಞಾನಿಗಳಿಗೂ ಕನ್ನಡಿಗರೆಲ್ಲರ ಪರವಾಗಿ ವಿಶೇಷವಾಗಿ  CPUS ನ ಓದುಗರ ಪರವಾಗಿ ಹಾರ್ಧಿಕ ಅಭಿನಂದನೆಗಳನ್ನು ತಿಳಿಸುತ್ತದೆ.   

ನಮಸ್ಕಾರ

ಡಾ. ಟಿ.ಎಸ್‌. ಚನ್ನೇಶ್.‌

Leave a Reply