ವಸಂತನ ಆಗಮನವನ್ನು ಯುಗಾದಿಯ ಹಬ್ಬವಾಗಿ ಆಚರಿಸುತ್ತಾ ಹೊಸ ಸಂವತ್ಸರಕ್ಕೆ ಆರಂಭಿಸುತ್ತೇವೆ. ಆಗ ಎಲ್ಲೆಲ್ಲೂ ಗಿಡಮರಗಳು ಮೈಯೆಲ್ಲಾ ಹಸಿರು ತುಂಬಿಕೊಂಡು ಹೊಸತನದಿಂದ ಅಣಿಯಾಗಿರುತ್ತವೆ. ಹೊಂಗೆ, ಮಾವು, ಬೇವು ಮುಂತಾದವುಗಳಲ್ಲಿನ ತಳಿರು ನವಚೇತನವನ್ನು ತರುತ್ತವೆ. ರಸ್ತೆಯ ತುಂಬೆಲ್ಲಾ ಹೂವಿನ ಮರಗಳು ಹೂ ಬಿಟ್ಟು ವಸಂತನ ಆಗಮನದ ಚೆಂದವನ್ನು ಹೆಚ್ಚಿಸಿರುತ್ತವೆ. ನಿಸರ್ಗದ ಜೀವಿಚೇತನ ಕಾಲಕ್ಕೆ ಸರಿಯಾಗಿ ಏನೆಲ್ಲಾ ನಡೆಸಿಕೊಂಡು ಬರುತ್ತಿದೆ. ನಾವಾದರೋ ಹುಟ್ಟಿದ ದಿನ ನೆನಪಲ್ಲಿಟ್ಟು ಲೆಕ್ಕ ಹಾಕಿ ಕಾಲವನ್ನು ಸಮೀಕರಿಸಿ ಹೀಗಾಯಿತು, ಹಾಗಾಯಿತು ಎಂಬ ಕಥನವನ್ನು ಕಟ್ಟುತ್ತೇವೆ. ಇದೇ ಕೆಲಸವನ್ನು ನಿಸರ್ಗವೂ ಅಷ್ಟೇ ಜತನದಿಂದ ಅಥವಾ ಊಹೆಗೂ ನಿಲುಕದಷ್ಟು ಜಾಗರೂಕವಾಗಿ ಮಾಡುತ್ತಾ ತನ್ನದೇ ಕ್ಯಾಲೆಂಡರ್ ನಿರ್ಮಿಸಿಕೊಂಡು ಬರುತ್ತಿದೆ. ಇದನ್ನು ಅರಿಯಲು ಮಾತ್ರ ನಮ್ಮ ಜಾಗರೂಕ ಮನಸ್ಸು ಕುತೂಹಲವನ್ನು ಬೆಸೆದುಕೊಂಡು ಚುರುಕಾಗಿರಬೇಕು. ನಮ್ಮ ಚುರುಕುತನ ಮತ್ತು ಕುತೂಹಲವನ್ನು ಸುತ್ತಮುತ್ತಲಿನ ಗಿಡ ಮರ ಬಳ್ಳಿ ಮತ್ತವುಗಳ ಸುತ್ತ ಕಾಣಬರುವ ಇತರೆ ಜೀವಿಜಂತುಗಳ ಅವಲೋಕನದಲ್ಲಿ ತೊಡಗಿಸಿಕೊಂಡಲ್ಲಿ ಈ ನಿಸರ್ಗದ ಕ್ಯಾಲೆಂಡರ್ನ ಸೂಕ್ಷ್ಮತೆಯು ಅರ್ಥವಾಗುತ್ತದೆ.
ಇಂತಹ ಸೂಕ್ಷ್ಮವಾದ ಕುತೂಹಲ ಮತ್ತು ಚುರುಕುತನವನ್ನು ಒಂದೆರಡು ವರ್ಷಗಳಲ್ಲ! ಬರೋಬ್ಬರಿ 62 ವರ್ಷ ನಿರಂತರವಾಗಿ ದಾಖಲಿಸಿ ವಿಜ್ಞಾನದ ಹೊಸತೊಂದು ಶಾಖೆಗೆ ಕಾರಣರಾದವರು ರಾಬರ್ಟ್ ಮಾರ್ಶಮ್. ಫಿನಾಲಜಿ ಎಂಬುದು ಇಂದು ಜೀವಿವಿಜ್ಞಾನದಲ್ಲಿ ಕಾಲದೊಂದಿಗೆ ಬದಲಾಗುವ ಜೈವಿಕ ಸಂಗತಿಗಳನ್ನು ಅರಿಯುವ ಅಧ್ಯಯನದ ಶಾಖೆ. ಇದರ ಹುಟ್ಟಿಗೆ ರಾಬರ್ಟ್ ಮಾರ್ಶಮ್ ಅವರ ಆಸಕ್ತಿ ಮತ್ತು ಅದರ ಜತೆಗೆ ಆ ಆಸಕ್ತಿಯೇ ಮುಂದುವರೆದು ಅವರ ಕುಟುಂಬದ ಕಾಯಕವಾಗಿದ್ದುದರ ಪರಿಣಾಮವು ಕಾರಣವಾಗಿದೆ.
ಪೂರ್ವ ಇಂಗ್ಲಂಡಿನ ನಾರ್ಫೊಕ್ (Norfolk) ಎಂಬ ಕೌಂಟಿಯ ಸ್ಟ್ರಾಟನ್ ಸ್ಟ್ರಾಲೆಸ್ (Stratton Strawless) ಎಂಬ ಹಳ್ಳಿಯಲ್ಲಿ ಎಸ್ಟೇಟ್ ಒಂದನ್ನು ಹೊಂದಿದ್ದ ಮಾರ್ಶಮ್ ಕುಟುಂಬದ ರಾಬರ್ಟ್ ತಮ್ಮ ತೋಟವನ್ನು ನಿರಂತರವಾಗಿ ಗಮನಿಸುತ್ತಾ ವಸಂತದ ಬದಲಾವಣೆಗೆ ಸ್ಫೂರ್ತಿಯಾಗುವ ಸಂಗತಿಗಳನ್ನು 1736 ರಿಂದ ಆರಂಭಿಸಿ ತಮ್ಮ ಜೀವಿತಾವಧಿಯ 1797ವರೆಗೂ ವರ್ಷ ವರ್ಷವೂ ದಾಖಲಿಸುತ್ತಾ ಬಂದರು. ಇಡೀ ತೋಟದ ಜವಾಬ್ದಾರಿಯನ್ನು ವಹಿಸಿಕೊಂಡ ಅವರು, ಅಪ್ರತಿಮ ಕುತೂಹಲಿಯ ಆಗಿದ್ದು ಅಲ್ಲಿನ ಗಿಡ-ಮರಗಳ ಪೋಷಣೆಯ ಆಸಕ್ತಿಯಿಂದ ಅವರು ಇಂತಹ ಸಂಗತಿಗಳಲ್ಲಿ ಕುತೂಹಲ ಬೆಳಸಿಕೊಂಡವರು. ರಾಬರ್ಟ್ ತಮ್ಮ ಅವಲೋಕನವನ್ನು “ವಸಂತದ ಆಗಮನ ಸ್ಫೂರ್ತಿ (Indications of Springs)” ಎಂದೇ ದಾಖಲಿಸಿದ್ದರು. ಅದು ರಾಯಲ್ ಸೊಸೈಟಿಯ ಫಿಲಾಸಾಫಿಕಲ್ ಟ್ರಾಂಜಾಕ್ಷನ್ಸ್ (Philosophical Transactions of the Royal Society) ಯಲ್ಲಿ ಪ್ರಕಟಗೊಂಡಿತ್ತು. ಮುಂದೆ ಇದೇ ಕಾಲದೊಡನೆ ಜೈವಿಕ ಕ್ರಿಯೆಗಳ ಸಮೀಕರಣದ ಅಧ್ಯಯನಕ್ಕೆ ನಾಂದಿಯಾಯಿತು. ಇಂತಹದ್ದೊಂದು ಕೆಲಸವನ್ನು 18ನೇ ಶತಮಾನದ ಆದಿಯಲ್ಲೇ ಅವರು ಮಾಡಿದ್ದರೆಂಬುದು ಮಾತ್ರ ಅಚ್ಚರಿಯ ಸಂಗತಿ.
ರಾಬರ್ಟ್ ಮಾರ್ಶಮ್ ಅವರು 1708ರ ಜನವರಿ 27ರಂದು ಇಂಗ್ಲಂಡಿನಲ್ಲಿ ಜನಿಸಿದ್ದರು. ಮುಂದೆ ಕೇಂಬ್ರಿಜ್ನ ಕ್ಲೇರ್ ಕಾಲೇಜಿಗೆ ಅಧ್ಯಯನಕ್ಕೆ 1728ರಲ್ಲಿ ಸೇರಿದರು. ಅಲ್ಲಿದ್ದಾಗಲೇ ನಿಸರ್ಗದ ಪ್ರೀತಿಯನ್ನು ಗಳಿಸಿಕೊಂಡಿದ್ದ ಅವರಿಗೆ ನಾರ್ಫೊಕ್ನಲ್ಲಿ ಎಂದು ಎಸ್ಟೇಟ್ ಒಂದನ್ನು ಹೊಂದಲು ಪ್ರೇರೇಪಿಸಿತು. ಅಂದಿನ ಬ್ರಿಟನ್ನಿನ ಪಕ್ಷಿತಜ್ಞ ಹಾಗೂ ನಿಸರ್ಗತಜ್ಞ ಗಿಲ್ಬರ್ಟ್ ವೈಟ್ ಅವರ ಜೊತೆಗೂಡಿ ನಿಸರ್ಗದ ಅಧ್ಯಯನ ಮತ್ತು ಬದಲಾವಣೆಯ ಸ್ಥಿತಿಗತಿಗಳನ್ನು ತಿಳಿವಿನ ಪರಿಧಿಗೆ ತರುವ ಮತ್ತು ಅದನ್ನು ಕಾಲದ ಪಂಚಾಂಗದ ಅರಿವೆಂಬಂತೆ ವಿಶ್ಲೇಷಣೆಗೆ ತೊಡಗಿದ್ದರು.
ರಾಬರ್ಟ್ ಮಾರ್ಶಮ್ ಅವರು ನಿಸರ್ಗದ ಇತಿಹಾಸವನ್ನು ಅರಿಯುವ ಹಂಬಲದಿಂದ ತಮ್ಮ ತೋಟದಲ್ಲಾಗುವ ಬದಲಾವಣೆಗಳನ್ನು ತಿಳಿವಿಗೆ ತರುತ್ತಾ ಅದನ್ನೇ ಟಿಪ್ಪಣಿಗಳಾಗಿಸಿ ಬರೆದಿಡತೊಡಗಿದರು. ಸುಮಾರು 1736ರಲ್ಲಿ ಆರಂಭಿಸಿದ್ದ ತಮ್ಮ ಕೆಲಸವನ್ನು ವಸಂತ ಋತುವಿನ ಆಗಮನದ ಅರಿವನ್ನು ಸುಮಾರು 27 ಸೂಚಕಗಳಾಗಿ ದಾಖಲಿಸಿದ್ದರು. ಅವುಗಳಲ್ಲಿ ಮುಖ್ಯವಾಗಿ ನಾಲ್ಕು ಜಾತಿಯ ಗಿಡಮರಗಳ ಹೂ ಬಿಡುವ ಸೂಚನೆಗಳೂ, ಹದಿಮೂರು ಬಗೆಯ ಸಸ್ಯಗಳ ಚಿಗುರೆಲೆಗಳೂ, ವಲಸೆ ಹಕ್ಕಿಗಳ ಉಲಿವ ಗಾನದ ದನಿಯೂ, ಕಪ್ಪೆಯೇ ಮುಂತಾದ ಜಲಚರಗಳ ಸಂತಾನೋತ್ಪತ್ತಿಯ ಆರಂಭದ ಸೂಚನೆಗಳೂ ಸೇರಿಕೊಂಡಿದ್ದವು. ಅವೆಲ್ಲವೂ ವಸಂತ ಕಾಲದಲ್ಲಿ ಮೊದಲು ಕಾಣಿಸುವ ಜೀವಪರ ಸಂಗತಿಗಳಾಗಿದ್ದವು.
ಮೊದಲು ಕಾಣಬರುವ ಪಾತರಗಿತ್ತಿ, ಮೊದಲ ಕೋಗಿಲೆಯ ಗಾನದ ಇಂಪು ಸಹ ಇವರ ದಾಖಲೆಗಳಲ್ಲಿ ಬೆರೆತಿದ್ದವು. ಇದರ ಜತೆಗೆ ಹವಾಮಾನದ ಸಂಗತಿಗಳನ್ನೂ ಕೂಡಿ ನಿರ್ಧಾರಕ್ಕೆ ಅನುಕೂಲತೆಗಳನ್ನು ಕಲ್ಪಸಿಕೊಂಡಿದ್ದರು. ವಾತಾವರಣದ ಉಷ್ಣತೆ, ಗಾಳಿಯ ಬೀಸು ದಿಕ್ಕು ಮತ್ತು ತೀವ್ರತೆ, ಅವಕ್ಕೆ ಹೊಂದಿಕೊಂಡಂತಹ ಗಿಡಮರಗಳ ಬೆಳವಣಿಗೆಯ ಗತಿ ಎಲ್ಲವೂ ಅವರ ಅರಿವಿನಿಂದ ದಾಖಲೆಗಳಾಗಿಸಿ ಕಾಲದ ತಿರುವನ್ನು ಸಮೀಕರಿಸಲು ನೆರವಾಗಿದ್ದವು. ಇವೆಲ್ಲಾ ದಾಖಲೆಗಳು ಮುಂದೆ 1789 ರಲ್ಲಿ ರಾಯಲ್ ಸೊಸೈಟಿಯ ವರದಿಗಳಲ್ಲಿ ಪ್ರಕಟಗೊಂಡವು. ಮುಂದೆ ಇವೇ ಫಿನಾಲಜಿಯ ಅಧ್ಯಯನಗಳ ಆರಂಭಕ್ಕೆ ಮೊದಲ ಹೆಜ್ಜೆಗಳಾದವು. ರಾಬರ್ಟ್ ತಮ್ಮ 89ನೇ ವಯಸ್ಸಿನಲ್ಲಿ 1797ರ ಸೆಪ್ಟೆಂಬರ್ 4ರಂದು ಮರಣ ಹೊಂದುವವರೆಗೂ ದಾಖಲೆಗಳಲ್ಲಿ ನಿರತರಾಗಿದ್ದರು. ಒಟ್ಟಾರೆ ತಮ್ಮ ಬದುಕಿನ 62 ವರ್ಷಗಳನ್ನು ಇದರಲ್ಲಿಯೇ ತೊಡಗಿಸಿಕೊಂಡಿದ್ದರು ಎಂಬುದು ಮಾತ್ರ ಅದ್ಭುತವೇ ಸರಿ. ಇದೆಲ್ಲಕ್ಕೂ ಮಿಗಿಲಾದ ಅಚ್ಚರಿಯ ಮತ್ತೊಂದು ಸಂಗತಿಯೆಂದರೆ ಮುಂದೆ ಆತನ ಕುಟುಂಬದ ಸದಸ್ಯರು 1958ರವರೆಗೂ ಅದೇ ಕೆಲಸವನ್ನು ಮುಂದುವರೆಸಿಕೊಂಡು ಬಂದರು. ಅಂದರೆ ಒಂದೇ ಕುಟುಂಬದ ಸದಸ್ಯರು ಸುಮಾರು ಎರಡು ಶತಮಾನಗಳಿಗಿಂತಲೂ ಹೆಚ್ಚು ಕಾಲ -ತಮ್ಮದೇ ಆದರೂ- ಇಡೀ ತೋಟದ ಕಾಲದೊಂದಿಗಿನ ಬದಲಾವಣೆಗಳನ್ನು ದಾಖಲಿಸಿದರು. ಇದೊಂದು ಮಹತ್ವದ ದಾಖಲೆಯಾಗಿ ಇಂದಿಗೂ ಬಹುಮುಖ್ಯ ಸಂಗತಿಗಳ ತಿಳಿವಿಗೆ ಕಾರಣವಾಗಿದೆ. ಹೆಚ್ಚೂ ಕಡಿಮೆ 18,19, ಮತ್ತು 20ನೇ ಶತಮಾನದ ಕಾಲದೊಡನೆಯ ಜೀವಿಸಂಗಮದ ಈ ಕಥನ ಜೀವಿವಿಜ್ಞಾನದಲ್ಲಿ ಈಗ ಬಹು ದೊಡ್ಡ ಆಸ್ತಿ. ಇದೀಗ ರಾಯಲ್ ಸೊಸೈಟಿ ಹಾಗೂ ಇತರೆ ವೈಜ್ಞಾನಿಕ ಸಂಸ್ಥೆಗಳು ಈ ದಾಖಲೆಗಳನ್ನು ಕಾಡಿನ ವಿನಾಶ ಅಥವಾ ಬದಲಾವಣೆಯ ಊಹೆಗಳ ಅಧ್ಯಯನಕ್ಕೆ ಬಳಸುವ ಬಗೆಗೆ ಚಿಂತನೆಗಳನ್ನು ನಡೆಸಿವೆ. ರಾಬರ್ಟ್ ಮಾರ್ಶಮ್ ಅವರನ್ನು ಫಿನಾಲಜಿಯ ಸ್ಥಾಪಕ ಪಿತಾಮಹರೆಂದು ವಿಜ್ಞಾನದಲ್ಲಿ ಗುರುತಿಸಲಾಗುತ್ತಿದೆ.
ತೋಟದ ಮನೆಯಾಗಿದ್ದ ಅವರ ಮನೆಯು (Stratton Strawless Hall,) ಸುಮಾರು 32 ಮಲಗುವ ಕೋಣೆಗಳ ದೊಡ್ಡ ಮನೆಯಾಗಿತ್ತು, ಅಲ್ಲಿ ಹೆಚ್ಚೂ ಕಡಿಮೆ 30 ಕುದುರೆಗಳನ್ನು ಕಟ್ಟುವ ಲಾಯವೂ ಇತ್ತು. ಇಡೀ ತೋಟದ ಒಟ್ಟು ವಿಸ್ತೀರ್ಣ ಸುಮಾರು 2520 ಎಕರೆಗಳಷ್ಟು ವಿಶಾಲವಾಗಿತ್ತಂತೆ. ಇಂತಹ ತೋಟದ ಮಾಲೀಕರಾದ ರಾಬರ್ಟ್ ಮಾರ್ಶಮ್ ತಮ್ಮ ತೋಟದಲ್ಲಿ ಆದಾಯ ಗಳಿಕೆಗಾಗಿ ಮರದ ತೋಪುಗಳನ್ನು ಬೆಳೆಸಿದ್ದರು. ಅದರ ಲಾಭದಾಯಕ ಕೃಷಿಗೆಂದು ಕಾಲಕಾಲಕ್ಕೆ ತೋಟದಲ್ಲಾಗುವ ಬದಲಾವಣೆಗಳನ್ನು ಅರ್ಥೈಸಿಕೊಂಡು ಕೃಷಿ ಮಾಡುವ ಹಂಬಲದಲ್ಲಿ ಅದನ್ನು ಜಾಗರೂಕವಾಗಿಯೇ ಗಮನಿಸಲು ಆರಂಭಿಸಿದ್ದರು. ತಮ್ಮ ದಾಖಲೆಯನ್ನು ವಸಂತ ಋತುವಿನ ಆಗಮನಕ್ಕೆ ನಿಸರ್ಗದ ತಯಾರಿ ಎಂದು ಕರೆದ ರಾಬರ್ಟ್ ಅವರಿಗೆ ಮುಂದೊಂದು ದಿನ ಅದು ಮಹತ್ವದ ವೈಜ್ಞಾನಿಕ ಶಾಖೆಯಾದೀತೆಂಬ ಅನಿಸಿಕೆಯು ಇದ್ದಂತೆ ಕಾಣುವುದಿಲ್ಲ. ಅವರ ಕುತುಹಲ ಮತ್ತು ಶ್ರದ್ಧೆಯನ್ನು ಗುರುತಿಸಿದ ರಾಯಲ್ ಸೊಸೈಟಿಯು 1780ರಲ್ಲಿ ಸೊಸೈಟಿಯ ಫೆಲೋ ಆಗಿ ಗೌರವಿಸಿತು.
ರಾಬರ್ಟ್ ಮಾರ್ಶಮ್ ಅವರು 1742 ರಲ್ಲಿ ತಮ್ಮ ಎಸ್ಟೇಟಿನಲ್ಲಿ ಸಿಡಾರ್ ಮರ (Cedrus atlantica) ವೊಂದನ್ನು ನೆಟ್ಟು ಬೆಳೆಸಿದ್ದರು. ಈಗಲೂ ಜೀವಂತವಾಗಿರುವ ಅದನ್ನು ಸಿಡಾರ್ ಹೆಮ್ಮರ -ಗ್ರೇಟ್ ಸಿಡಾರ್ ಎಂದು ಕರೆಯಲಾಗುತ್ತಿದೆ. ಸ್ಟ್ರಾಟನ್ ಸ್ಟ್ರಾಲೆಸ್ ಹಾಲ್ನ ಪೂರ್ವಕ್ಕಿರುವ ರೆಡ್ ಹೌಸ್ ತೋಟದಲ್ಲಿರುವ ಈ ಗ್ರೇಟ್ ಸಿಡಾರ್ ಮರವನ್ನು ಕಳೆದ 2000ದಲ್ಲಿ ಅಳತೆ ಮಾಡಿದಾಗ ಅದರ ಎತ್ತರ 102 ಅಡಿಗಳಷ್ಟಿತ್ತು. ಅದರ ಬುಡದ ಕಾಂಡದ ದಪ್ಪ ಸುಮಾರು 23 ಅಡಿಗಳಾಗಿತ್ತು.
ಕಳೆದ 2008 ನೆಯ ವರ್ಷದಲ್ಲಿ ಮಾರ್ಶಮ್ ಎಸ್ಟೇಟ್ನಲ್ಲಿ ಮಾರ್ಶಮ್ ಅವರ ಮೂರನೆಯ ಶತಮಾನದ ಆಚರಣೆಯನ್ನು ಇಂಗ್ಲಂಡ್ ಆಚರಿಸಿತು. ಎಸ್ಟೇಟಿಗೆ ಭೇಟಿ, ರಾಬರ್ಟ್ ಅವರ ಸಂಗ್ರಹಗಳು ಅವರನ್ನು ಕುರಿತ ಪ್ರದರ್ಶನ ಇತ್ಯಾದಿಗಳು ತಿಂಗಳುಗಟ್ಟಲೇ (ಏಪ್ರಿಲ್, ಮೇ, ಜೂನ್ 2008) ನಡೆದವು.
ಇರಲಿ. 21ನೇ ಶತಮಾನವನ್ನು ಎರಡು ದಶಕಕ್ಕೂ ಹೆಚ್ಚು ಸವೆಸಿರುವ ನಮಗೆ ರಾಬರ್ಟ್ ಅವರ ಕೆಲಸ ದೊಡ್ಡ ಸ್ಫೂರ್ತಿಯಾಗಬೇಕಿದೆ. ನಮ್ಮ ಸ್ಥಳೀಯ ಉದಾಹರಣೆಗಳನ್ನು ಇಂತಹದ್ದೇ ಸಂಗತಿಗಳ ಜತೆ ಸಮೀಕರಿಸಿ ನೋಡಲು ಸಾಧ್ಯವಿದೆ. ಆದರೆ ಅವೆಲ್ಲಾ ನಮ್ಮ ಪಾರಂಪರಿಕ ಜ್ಞಾನಗಳಾಗಿದ್ದು ಆಧುನಿಕತೆಯ ದೌಡಿನಲ್ಲಿ ಮರೆಯಾಗತೊಡಗಿವೆ. ಯಾವುದೇ ಮುಂದಾಲೋಚನೆಯೂ ಇಲ್ಲದೆ ರಸ್ತೆಗಳ ನಿರ್ಮಿಸಿ ಇದೀಗ ಅಗಲೀಕರಣದ ಹಂಬಲದಲ್ಲಿ ಸುಲಭವಾಗಿ ಧರೆಗುರುಳುತ್ತಿರುವ ಹೆಮ್ಮರಗಳ ಕುರಿತೋ, ಅದರ ಸುತ್ತಮುತ್ತಲಿನ ಇತರೆ ಜೀವಿ ಸಂಕುಲದ ಬಗೆಗೋ ಯಾವುದಾದರೂ ಮಾಹಿತಿ, ದಾಖಲೆಗಳ ಮಹತ್ವಗಳು ನಮಗೆ ಇಂದು ಅರ್ಥವಾಗಲಾರವು.
ನಿರಂತರವಾಗಿ ಬೆಳೆಯುತ್ತಿರುವ ಇಂದಿನ ಸಣ್ಣ-ಪುಟ್ಟ ಪಟ್ಟಣಗಳು ಮುಂದೆ ನಗರಗಳಾಗಿ ಆವರಿಸಿಕೊಳ್ಳುವ ಬದಲಾವಣೆಗಳಲ್ಲಿ ಗಿಡ-ಮರಗಳು ಕೊಡುವ ಸೂಚನೆಗಳನ್ನು ಎಗ್ಗಿಲ್ಲದೆ ಕೊನೆಯಾಗಿಸುತ್ತಿರುವ ಈ ಹೊತ್ತು ವಾತಾವರಣದ ಬದಲಾವಣೆಯ ಅರಿವಿನಲ್ಲಿ ಪಶ್ಚಾತ್ತಾಪಕ್ಕೆ ಗುರಿಯಾಗುತ್ತಿದ್ದೇವೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್