ಇಡೀ ಜಗತ್ತನ್ನು ತಲ್ಲಣಿಸಿರುವ ಕೊವಿಡ್-19 ವೈರಸ್ (SARS-Cov-2) ಅನ್ನು ಪ್ರತಿರೋಧಿಸುವಂತೆ ಪ್ರೇರೇಪಿಸುವ ರಸಾಯನಿಕ ನಿರ್ದೇಶನಕೊಡುವ ಜೀನುಗಳು ಇರುವ ಬಗೆಗಿನ ಆಶಾದಾಯಕ ಸಂಶೋಧನೆಯ ವಿವರಗಳು ಲಭ್ಯವಾಗಿವೆ. ಅಮೆರಿಕಾದ 13 ಸಂಸ್ಥೆಗಳಲ್ಲದೇ ದಕ್ಷಿಣ ಆಫ್ರಿಕದ ಒಂದು ಸಂಸ್ಥೆಯ ಒಟ್ಟು 19 ಜನ ವಿಜ್ಞಾನಿಗಳು ಒಟ್ಟಾಗಿ ಅಧ್ಯಯನ ಮಾಡಿ ಸಂಶೋಧನೆಯ ವಿವರಗಳನ್ನು ದೊರಕಿಸಿದ್ದಾರೆ. ಜಗತ್ತಿನ ವಿಖ್ಯಾತ ವಿಜ್ಞಾನ ಪತ್ರಿಕೆ ಮಾಲೆಕ್ಯುಲಾರ್ ಸೆಲ್ (Molecular Cell) ಅದನ್ನು ಪ್ರಕಟಣೆಗೂ ಮುನ್ನವೆ ಜಾಗತಿಕವಾಗಿ ತಿಳಿಯಲೆಂದೇ ಅಂತರ್ಜಾಲದಲ್ಲಿ ಸಿಗುವಂತೆ ಮಾಡಿದೆ.
ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೊರ್ಡ್ ಬರ್ನಮ್ ವೈದ್ಯಕೀಯ ಸಂಸ್ಥೆಯಲ್ಲಿ ಇಮ್ಯುನಿಟಿ ಮತ್ತು ರೋಗಕಾರಕತೆಯ ವಿಭಾಗದ ನಿರ್ದೇಶಕರಾಗಿರುವ ವೈರಾಣು ತಜ್ಞ ಡಾ. ಸುಮಿತ್ ಚಂದಾ ಅವರ ಮುಂದಾಳತ್ವದಲ್ಲಿ ಈ ವಿವರಗಳನ್ನು ಪ್ರಕಟಿಸಲಾಗಿದೆ. ಸ್ವತಃ ಚಂದಾ ಅವರ ಪ್ರಯೋಗಾಲಯದಲ್ಲಿ ಕೊವಿಡ್-19 (SARS-Cov-2) ವೈರಾಣು ವಿರುದ್ಧವೇ ಸುಮಾರು 13,000 ರಸಾಯನಿಕಗಳ ಪರಿಣಾಮಗಳ ಅಧ್ಯಯನವು ನಡೆಯುತ್ತಿದೆ. ಇವರ ಜೊತೆಗೆ ಕೈಜೋಡಿಸಿರುವ ಇನ್ನೂ 18 ವಿಜ್ಞಾನಿಗಳೂ ಕೂಡ ವೈರಸ್ಸು ರೋಗಗಳ ಹಾಗೂ ಅವುಗಳ ನಿವಾರಣೋಪಾಯಗಳ ವಿರುದ್ಧ ನಿರಂತರವಾದ ಅಧ್ಯಯನದಲ್ಲಿ ತೊಡಗಿದ್ದಾರೆ. ಇವರೆಲ್ಲರ ಅಧ್ಯಯನದ ಅರಿವಿನ ಸಫಲತೆಯ ವಿವರಗಳು ಮಾನವ ಕುಲಕ್ಕೆ ಮುಂದೆ, ಆದಷ್ಟೂ ಶೀಘ್ರವೇ ಸಮರ್ಪಕವಾದ ಪರಿಹಾರವನ್ನೂ ಕೊಡುವ ವಿಶ್ವಾಸ ನೀಡಿವೆ.
ಈ ವಿಜ್ಞಾನಿಗಳ ತಂಡವು ನಮ್ಮೊಳಗೂ ಇರುವ ಕೊವಿಡ್-19 ರ ಪ್ರತಿರೋಧ(ಇಮ್ಯುನಿಟಿ)ವನ್ನು ನಿರ್ದೇಶಿಸುವ ಜೀನುಗಳ (Genes) ಪತ್ತೆ ಹಚ್ಚುವ, ಆ ಮೂಲಕ ಶಾಶ್ವತ ಪರಿಹಾರವನ್ನು ಪಡೆಯಬಹುದಾದ ಸಾಧ್ಯತೆಯ ವಿಶ್ವಾಸವನ್ನು ನೀಡಿದೆ. SARS-Cov-2 ವೈರಾಣುವಿನ ಸೋಂಕು ಉಂಟಾದಾಗ ದೇಹದ ಜೀವಿಕೋಶವು ಅದನ್ನು ಎದುರಿಸಲು ನಡೆಸುವ ಹೋರಾಟಗಾರ ಇಂಟರ್ಫೆರಾನ್(Interferons)ಗಳ ಸಂಬಂಧದ ಜೀನ್‌ಗಳನ್ನು ಪತ್ತೆ ಹಚ್ಚುವ ಮೂಲಕ ಅಂತಹಾ ವಿಶ್ವಾಸದ ಕ್ಷಣವನ್ನು ನಮ್ಮೆದುರು ತಂದಿದೆ. ಇದೊಂದು ತುಂಬಾ ಸಂಕೀರ್ಣವಾದ ಕೇವಲ ಜೀವಿಕೋಶದೊಳಗೆ ಸಂಭವಿಸುವ ಜೀವಿರಸಾಯನಿಕ ವಿವರಗಳಿಂದ ಮತ್ತು ಅವುಗಳನ್ನು ನಿರ್ದೇಶಿಸುವ ಸೂಕ್ಷ್ಮಾತಿಸೂಕ್ಷ್ಮ ಪಾತ್ರಧಾರಿಗಳ ಒಳಗೊಂಡ ವಿಚಾರ. ತುಂಬಾ ವಿವರವಾಗಿಯಲ್ಲದಿದ್ದರೂ, ನಮಗೊಂದು ಬದುಕಿನ ವಿಶ್ವಾಸವನ್ನು ಕೊಡುವ ವೈಜ್ಞಾನಿಕ ತಿಳಿವನ್ನು ಪಡೆಯುವಷ್ಟು ವಿವರಗಳನ್ನು ಮುಂದೆ ನೋಡೋಣ.
ವಿಷಯವನ್ನು ಪ್ರಸ್ತಾಪಿಸುವ ಸಂದರ್ಭದಲ್ಲೇ ತುಂಬಾ ಪ್ರಸ್ತುತವಾದುದೆಂದರೆ ವೈರಸ್ಸು ಜೀವಿಕೋಶದೊಳಗೆ ತಲುಪಿದಾಗ ಉಂಟಾದ ಸೋಂಕಿಗೆ ಉತ್ತರವಾಗಿ ಉಂಟಾಗುವ ಸಂಕೀರ್ಣವಾದ ಕ್ರಿಯೆಗಳ ಚಿತ್ರಣ. ಅಂದರೆ ವೈರಾಣುವಿಗೆ ಪ್ರತಿರೋಧವಾಗಿ ಜೀವಿಕೋಶದೊಳಗೆ ನಡೆಯುವ ವಿವರಗಳು. ಇವು ಅದೆಷ್ಟು ಸಂಕೀರ್ಣ ಹಾಗೂ ಸೂಕ್ಷ್ಮ ಅಂದರೆ ಅಗೋಚರವಾದ ಕೋಶದ ಒಳಗಿನ ನೂರಾರು ರಸಾಯನಿಕ ಕ್ರಿಯೆಗಳು. ಅವೆಲ್ಲವನ್ನೂ ತಿಳಿವಿಗೆ ತರುವ ಪ್ಯಯತ್ನವನ್ನು ಡಾ. ಚಂದಾ ತಂಡದ ವಿಜ್ಞಾನಿಗಳು ನಿರ್ವಹಿಸಿದ್ದಾರೆ ಎಂಬುದು ಮಾತ್ರ ಇಲ್ಲಿನ ಹೆಮ್ಮೆಯ ವಿಷಯ. ಅದೆಲ್ಲವೂ ಸಾಧ್ಯವಾದದ್ದು ಹೇಗೆಂದರೆ ಈ ಹಿಂದೆ 2012 ಮತ್ತು 2014ರ ನಡುವೆ ಬಂದು ತುಸು ಕಾಲವಿದ್ದು ಹೊರಟುಹೋದ SARS- Cov-1 ವೈರಾಣುವನ್ನು ಅರ್ಥೈಸಿಕೊಂಡ ಜಾಣತನವನ್ನೇ ಇಲ್ಲಿಯೂ ಬಳಸಿದ್ದು. ಅದೊಂದು ಸಂಕೀರ್ಣ ಹಾಗೂ ಊಹಾತೀತವಾದ ಸಂಗತಿಯಾದರೂ ಸಾಮಾನ್ಯ ಸಾರ್ವಜನಿಕ ತಿಳಿವಿಗೆ ಒಂದೇ ಕೋಶದ ಒಳಗಿನ ವಿವರಗಳ ಚಿತ್ರವನ್ನು ಕೆಳಗೆ ನೋಡಬಹುದು.
ಈ ಸಾಂಕ್ರಾಮಿಕ ರೋಗವು ಹರಡಲು ಆರಂಭಿಸಿದಂತೆಯೇ ಚಿಕಿತ್ಸಕರು ಈ SARS Cov-2 ವೈರಾಣುವಿಗೆ ಸೋಂಕಿತರಲ್ಲಿ ದುರ್ಬಲವಾದ ಇಂಟರ್ಫೆರಾನ್‌ಗಳನ್ನು ಕಂಡುಕೊಂಡರು. ಜೊತೆಗೆ ಅದರ ದುರ್ಬಲತೆ ಹಾಗೂ ಪ್ರಬಲತೆಯ ವಿವಿಧ ಬಗೆಯ ವರ್ತನೆಯನ್ನೂ ಕೂಡ. ಪ್ರಸ್ತುತ ಅಧ್ಯಯನವು ಮೂಲತಃ ಹುಡುಕಿದ್ದೆಂದರೆ ಹೋರಾಟಗಾರ ಇಂಟರ್ಫೆರಾನ್‌ಗಳು ಪ್ರಚೋದಿಸುವ ಜೀನುಗಳನ್ನು! ಅವುಗಳನ್ನು ಇಂಟರ್ಫೆರಾನ್‌ಗಳು ಪ್ರಚೋದಿಸುವ Interferon-Stimulated Genes (ISGs) ಜೀನುಗಳೆಂದು ಕರೆಯಲಾಗಿದೆ. ಇವು SARS Cov-2 ಸೋಂಕನ್ನು ಮಿತಿಗೊಳಿಸುತ್ತವೆ. ಇವೆಲ್ಲವುಗಳನ್ನೂ ಅವುಗಳ ಒಟ್ಟಾರೆಯ ವರ್ತನೆಗಳನ್ನು ಅರಿಯುವ ಮೂಲಕ ಹುಡುಕಿ ಪತ್ತೆಹಚ್ಚಲಾಗಿದೆ. ಇದೇ ತಂಡವು ಈ ಹಿಂದಿನ SARS Cov-1 ವೈರಾಣುವಿನ ಅಧ್ಯಯನದಲ್ಲೂ ಕಂಡುಕೊಂಡ ಮಾದರಿಗಳಿಂದ ಇದೀಗ Covid-19 ವೈರಾಣುಗಳು ಸೋಂಕಾದಾಗ ಉಂಟುಮಾಡುವ ಪ್ರಾಯೋಗಿಕ ಪರೀಕ್ಷೆಗಳನ್ನು ಕೃತಕವಾಗಿ ಸೃಜಿಸಿ ಅರಿತಿದ್ದಾರೆ.
ಈ ಮೂಲಕ ಈ ಅಧ್ಯಯನದಲ್ಲಿ ಒಟ್ಟು ಸುಮಾರು 65 ಇಂಟರ್ಫೆರಾನ್‌ಗಳು ಪ್ರಚೋದಿಸುವ Interferon-Stimulated Genes (ISGs) ಜೀನುಗಳನ್ನು ಪತ್ತೆ ಹಚ್ಚಿದ್ದಾರೆ. ಈ ಜೀನ್‌ಗಳಲ್ಲಿ ಕೆಲವು ವೈರಸ್ಸು ಜೀವಿಕೋಶವನ್ನೇ ಒಳಹೋಗದಂತೆಯೂ ತಡೆಯಬಲ್ಲ ಶಕ್ತವಂತರಾಗಿ ಇರುವುದನ್ನೂ ಕಂಡುಕೊಂಡಿದ್ದಾರೆ. ಬಹುಶಃ ಇದೇ ಕಾರಣಕ್ಕೆ ಕೆಲವರಲ್ಲಿ ಸೋಂಕಾದರೂ ಏನೂ ಕಾಣದಿರುವುದು ಇದ್ದೀತು. ಮತ್ತೂ ವಿಶಿಷ್ಟವೆಂದರೆ ಇದೇ ಇಂಟರ್ಫೆರಾನ್ ಜೀನುಗಳಲ್ಲಿ ಕೆಲವು, ಸಂಬಂಧವಿಲ್ಲದ ಇತರೆ ವೈರಸ್ಸುಗಳಾದ ಫ್ಲೂ, ಎಚ್‌ಐವಿ ಮುಂತಾದವುಗಳನ್ನು ಎದುರಿಸುವ ಶಕ್ತಿಯನ್ನೂ ಹೊಂದಿವೆಯಂತೆ! ಸುಮಾರು 8 ಇಂಟರ್ಫೆರಾನ್‌ಗಳು ಪ್ರಚೋದಿಸುವ Interferon-Stimulated Genes (ISGs) ಜೀನುಗಳು SARS Cov -1 & 2 ಈ ಎರಡೂ ಬಗೆಯ ವೈರಸ್ಸು ಸೋಂಕು ಕೋಶದೊಳಗೆ ಆದ ಕೂಡಲೇ ವೈರಸ್ಸು ವೃದ್ಧಿಯಾಗುವುದನ್ನು ತಡೆಗಟ್ಟುವುದನ್ನು ಕಂಡುಕೊಂಡಿದ್ದಾರೆ. ಇದಕ್ಕೆಲ್ಲಾ ವೈರಸ್ಸಿಗೆ ಬೇಕಾದ ಆರ್‌ಎನ್‌ಎ (RNA) ಯ ತಯಾರಿಯನ್ನು ಕುಂಠಿತಗೊಳಿಸಿ ತಡೆಯುಂಟು ಮಾಡುತ್ತವೆಯಂತೆ! ತಂಡದ ಒಟ್ಟಾರೆಯ ವಿಶ್ವಾಸವೆಂದರೆ ಇನ್ನೂ ತಿಳಿಯಬೇಕಾದ್ದು ಅದರಲ್ಲೂ ಮುಖ್ಯವಾಗಿ ವೈರಸ್ಸಿನ ಜೈವಿಕತೆ, ಜೊತೆಗೆ ಅವುಗಳ ವೃದ್ಧಿಯ ನಿಯಂತ್ರಿಸುವ ಇಂಟರ್ಫೆರಾನ್‌ಗಳು ಪ್ರಚೋದಿಸುವ Interferon-Stimulated Genes (ISGs) ಜೀನುಗಳ ಆನುವಂಶಿಕ ವಿವಿಧತೆ ಇದ್ದೇ ಇದೆಯಂತೆ. ಆದರೆ ಈಗಿನ ಸಮಾಧಾನದಂತೆ ಈ ಸಂಗತಿಯು ಒಟ್ಟಾರೆಯ ನಿಯಂತ್ರಣಕ್ಕೆ ಪೂರಕ ಮಾಹಿತಿಯ ಪ್ರಮುಖ ಸಂಗತಿ.
ಮುಂದೆ ಇದನ್ನು ಹೇಗೆ ನಿರ್ವಹಿಸಿದರು ಎಂಬುದರ ಪುಟ್ಟ ವಿವರಣೆ ಹಾಗೂ ಇದು ನಮ್ಮ ನಿಮ್ಮೊಳಗೂ ಹುಟ್ಟಿಸಬಹುದಾದ ಪ್ರಶ್ನೆಗಳಿಗೆ ಒಂದಷ್ಟು ಉತ್ತರಗಳನ್ನು ನೋಡೋಣ. ಮೊದಲು ಸಂಶೋಧನೆಯ ನಿರ್ವಹಣೆಯ ವಿವರ. ಅದು ಹೀಗಿದೆ.
ವೈರಸ್ಸು ಸೋಂಕಾದ ಕೂಡಲೆ, ಮೊಟ್ಟ ಮೊದಲು ಅದರ ವಿನ್ಯಾಸವನ್ನು ಗುರುತಿಸುವ ಕೆಲಸ ಕೋಶದೊಳಗೆ ನಡೆಯುತ್ತದೆ. ಅದರ ಸೂಚನೆಗಳಿಗೆ ಅನುಗುಣವಾಗಿ ಸೈಟೊಕೈನಿನ್‌ಗಳ ಧಾರೆಯು ಉಂಟಾಗುತ್ತದೆ. ಇದರೊಟ್ಟಿಗೆ ಇಂಟರ್ಫೆರನ್‌ಗಳೂ ಉಂಟಾಗುತ್ತವೆ. ಈ ಇಂಟರ್ಫೆರಾನ್‌ಗಳನ್ನು ವೈರಸ್ಸನ್ನು ಗ್ರಹಿಸುವ ವಸ್ತುವಿಗೆ ಬಂಧವನ್ನು ಉಂಟುಮಾಡಿ, ಇಂಟರ್ಫೆರಾನ್‌ಗಳು ಪ್ರಚೋಧಿಸುವ (ISGs) ಜೀನುಗಳ ಪ್ರತಿಗಳ ವೃದ್ಧಿಯ ಸಕ್ರಿಯಗೊಳಿಸುವಿಕೆ (Transcriptional Activation) ಉಂಟಾಗಿ ನೂರಾರು ISG ಗಳು ಉಂಟಾಗುತ್ತವೆ. ಇದನ್ನೆಲ್ಲವನ್ನೂ ಈಗಾಗಲೇ ಗುರುತಿಸಿ ಪ್ರಕಟಿಸಿದ ಒಟ್ಟಾರೆಯ ಜೀನುಗಳ (ISGs) ಸಮೀಕರಿಸಿ ಅವುಗಳನ್ನು ಮೌಲ್ಯೀಕರಿಸಿದ್ದಾರೆ. ಇಷ್ಟಲ್ಲದೆ ಈ ಜೀನುಗಳ ಪ್ರಕ್ರಿಯೆಗಳನ್ನು ಕೇವಲ ಶ್ವಾಸಕೋಶದ ಜೀವಿಕೋಶಗಳಿಗಷ್ಟೇ ಸಂಬಂಧಿಸಿ ನಡೆಸಿದ್ದು ಅದೊಂದು ಅಧ್ಯಯನದ ಮಿತಿಯೂ ಹೌದು ಎಂದಿದ್ದಾರೆ.
ಅಧ್ಯಯನದಲ್ಲಿ ಪ್ರತಿಕಾಯಗಳನ್ನು, ಪ್ಲಾಸ್ಮಿಡ್‌ಗಳನ್ನು, ಅಧ್ಯಯನಕ್ಕೆ ಬೇಕಾದ ಪ್ರೈಮರ್‌ಗಳನ್ನು, ಆರ್‌ಎನ್‌ಎ. ಮಾದರಿಗಳ ಪ್ರಯೋಗಿಕ ಪರೀಕ್ಷೆಗಳು, ಸೋಂಕು ಮಾದರಿಗಳ ನಕ್ಷೆಗಳು, ವೈರಸ್ಸುಗಳ ನೆಟ್‌ವರ್ಕ್‌ಗಳು, ಹೀಗೆ ಅನೇಕಾನೇಕ ಸಂಕೀರ್ಣ ಸಂಗತಿಗಳ ಮಾಹಿತಿಯ ಮಹಾಪೂರವೇ ಇದೆ. ಇವೆಲ್ಲವೂ ಅಪ್ಪಟ ಆನುವಂಶಿಕ ಮಾಹಿತಿ ಹಾಗೂ ಜೀವಿ ರಸಾಯನಿಕ ಸಂಕೀರ್ಣ ವಿಚಾರಗಳಾಗಿವೆ. ಒಂದಂತೂ ಸ್ಪಷ್ಟವಾಗಿದೆ. ಅದೆಂದರೆ ಕೊವಿಡ್-19 ಅನ್ನು ಗೆಲ್ಲುವ ಜೀನುಗಳಂತೂ ನಮ್ಮೊಳಗಿವೆ. ಆದರೆ ಅವುಗಳಿಂದ ನಿರ್ದೇಶಿಯವಾಗಿ ಕಾರ್ಯನಿರ್ವಹಿಸುವ ಹೋರಾಟಗಾರ ಇಂಟೆರ್ಫೆರಾನ್‌ಗಳ ಹರವಾದ ವರ್ತನೆಗಳ ಬಗೆಗೆ ಮತ್ತು ಅವುಗಳನ್ನು ಪ್ರಚೋದಿಸಲು ಬೇಕಾದ ಚಿಕಿತ್ಸೆಗೆ ಹುಡುಕಾಟ ನಡೆದಿದೆ.
ಇಷ್ಟೆಲ್ಲಾ ಸಮಾಧಾನ ನಡುವೆಯೂ ಮಹತ್ತರವಾದ ಪ್ರಶ್ನೆಗಳನ್ನು ಇದು ನಮ್ಮ-ನಿಮ್ಮೆಲ್ಲರ ಮನಸ್ಸಿನಲ್ಲಿ ಹುಟ್ಟಿಸುತ್ತದೆ. ಪ್ರಬಲವಾದ್ದೆಂದರೆ ಆನುವಂಶಿಕ ವ್ಯತ್ಯಯವಿರುವ ಮಾನವಕುಲವೆಲ್ಲವೂ ಅದೇ ಜೀನುಗಳನ್ನು ಹೊಂದಿರುವುದೆ? ಇದೇನು ಜೀನು ನಿರ್ವಹಣೆಯ ಕ್ಲಿಷ್ಟವಾದ ಚಿಕಿತ್ಸೆಯ ಕಡೆಗೆ ಹೋಗಬೇಕಾದೀತೆ? ಅಂತಹಾ ಔಷಧಿಯ ಶೋಧಕ್ಕೆ ತಡವಾದೀತೆ? ಇತ್ಯಾದಿ ಪ್ರಶ್ನೆಗಳು ಖಂಡಿತಾ ಉದ್ಬವಿಸುತ್ತವೆ. ಇವುಗಳಿಗೆಲ್ಲಾ ಪರಿಹಾರಗಳ ಕಾರಣವಾಗಿ ಜೊತೆಗೆ ಸಮಾಧಾನಕರವಾದ ಮನಸ್ಥಿತಿಗೆ ಮುಂದಿನ ವಿವರಣೆಗಳು ಸಹಾಯವಾಗುವ ಆಶಯವಿದೆ.
(ಜಾಗತಿಕ ಗುಣಮಟ್ಟದ ವೈಜ್ಞಾನಿಕ ಸಂಸ್ಥೆಗಳ ಅನುಶೋಧಗಳನ್ನು ಅಧ್ಯಯನ ಮಾಡಿ, ಸಂಕೀರ್ಣವಾದ ಸಂಗತಿಗಳನ್ನು ವಿಶ್ವಾಸಾರ್ಹವಾದ ತಜ್ಞರೊಂದಿಗೆ ಮರು ಪರಿಶೀಲಿಸಿ, ವಿಚಾರಗಳನ್ನು ಮರು ವಿಮರ್ಶೆಗೆ ಒಳಪಡಿಸಿ ಕ್ರೋಢಿಕರಿಸಿ ಸಾರ್ವಜನಿಕ ತಿಳಿವಿಗೆ CPUS ಮೂಲಕ ತೆರೆದಿಡುವ ವಿಶ್ವಾಸ ಮತ್ತು ಶ್ರದ್ಧೆಯನ್ನು ದೃಢವಾಗಿ ಪಾಲಿಸಲಾಗಿದೆ.)
ಜೀನುಗಳು ನಮಗಿವೆಯೋ ಇಲ್ಲವೋ ಎನ್ನುವ ಪ್ರಶ್ನೆಯೇ ಬೇಕಿಲ್ಲ. ಬೇಕಿರುವುದೇನೆಂದರೆ ಅವುಗಳಿಂದ ನಿರ್ದೇಶಿತವಾಗುವ ಹೋರಾಟಗಾರ ಇಂಟೆರ್ಫೆರಾನ್‌ಗಳ ಪ್ರಚೋದನೆ ಹಾಗೂ ವರ್ತನೆಗಳು. ಮಾನವಕುಲವು ವಿಕಾಸಗೊಂಡು 2 ಲಕ್ಷ ವರ್ಷಗಳಾಗಿದ್ದು, ಈ ಇಡೀ ಕಾಲವೂ ನೈಸರ್ಗಿಕ ಒತ್ತಡಗಳಾದ ಶೀತ, ಉಷ್ಣ, ಗಾಳಿ-ಮಳೆ ಮುಂತಾದವುಗಳ ಜೊತೆ-ಜೊತೆಗೇ ತಮ್ಮ ಬದುಕನ್ನು ನವೀಕರಿಸಿಕೊಳ್ಳುತ್ತಾ ನಾಗರಿಕವಾಗಿದೆ. ಅದರೊಳಗೆ ಎಲ್ಲವನ್ನೂ ಗೆಲ್ಲುವ ಹುಚ್ಚು ಸಾಹಸವನ್ನೂ ಮಾಡಿದೆ. ಅದೇ ವಿನಾಕಾರಣ ಇಂತಹ ಸಾಂಕ್ರಾಮಿಕ ಸ್ಥಿತಿಗಳನ್ನು ಎಳೆದುಕೊಂಡದ್ದು. ಎಲ್ಲೋ ಬಾವಲಿಗಳಲ್ಲಿ, ಚಿಪ್ಪು ಹಂದಿಯಲ್ಲಿ ಮತ್ತಾವುದೋ ವನ್ಯ ಪ್ರಾಣಿಯಲ್ಲಿ ಅವುಗಳಿಗೇನೂ ತೊಂದರೆಕೊಡದೆ ತಾವೂ ಸುಖವಾಗಿದ್ದ ವೈರಸ್ಸುಗಳಿಂದು ನಮ್ಮೊಳಗೂ ಬಂದಿವೆ.
ವಾಸ್ತವವಾಗಿ ಜೀವಿಗಳೇ ಅಲ್ಲದಿದ್ದರೂ ಜೀವಿಗಳೊಳಗೆ ಜೀವಿಗಳಂತೆ ಪ್ರತಿಗಳ ವೃದ್ಧಿಸಿಕೊಳ್ಳುವ ವೈರಸ್ ಇದೀಗ ತನ್ನ ಬದುಕನ್ನು ನಮ್ಮೊಳಗೂ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದೆ. ಬಾವಲಿಗಳಂತಾ ಸ್ಥಿತಿಯನ್ನು ತುಸುವಾದರೂ ನಮ್ಮೊಳಗೂ ಪಡೆಯಲು ತನ್ನೊಳಗೇ ಬದಲಾವಣೆಗಳ ವಿಕಾಸವನ್ನು ನಿರ್ಮಿಸಲು ಮ್ಯೂಟೇಷನ್ ಮೂಲಕ ನಿಭಾಯಿಸಲು ಶತಗತಾಯ ಪ್ರಯತ್ನವನ್ನು ಮಾಡುತ್ತಿದೆ. ಸಂಪೂರ್ಣ ಮಾನವಕುಲವನ್ನು ನಾಶ ಮಾಡಿದರೆ ಅದು ಬದುಕುವುದಾದರು ಹೇಗೇ? ಅದೂ ಇರಬೇಕು-ನಾವೂ ಇರಬೇಕು ಎನ್ನುವ ಹೋರಾಟ ನಿಜವಾದ ಜೀವ ಪ್ರೀತಿಯ ಹೋರಾಟ. ಅದಕ್ಕೊಂದು ಸಮಸ್ಥಿತಿ ಬರಲೇಬೇಕು. ಆದರೆ … ಆದರೆ…. ಅದಕ್ಕೂ ಇದೊಂದು ಜೀವನ್ಮರಣದ ಪ್ರಶ್ನೆ… ಇದರಲ್ಲಿ ಒಂದಷ್ಟು ಜೀವಿಗಳ (ಕೊವಿಡ್-ವೈರಸ್ ಹಾಗೂ ಮಾನವಕುಲ) ತ್ಯಾಗ ಅನಿವಾರ್ಯ. ನೈಸರ್ಗಿಕ ಜಾಣತನವೆಂದರೆ ಅಂತಹಾ ಅಪಾಯದಿಂದ ದೂರವಿರುವುದು. ಯುದ್ಧ ನಿಶ್ಚಿತವಾದಾಗ ಯುದ್ಧ ಭೂಮಿಯಿಂದ ದೂರ ಇರುವುದು ಜಾಣತನ. ಇದನ್ನೇ ವೈರಸ್ ಕೂಡ ಮಾಡುತ್ತಾ ಸುಖವಾಗಿ ಬಾವಲಿಗಳಲ್ಲಿ… ಮತ್ತೆಲ್ಲೋ ನೆಮ್ಮದಿಯನ್ನು ಕಂಡುಕೊಂಡಿತ್ತು. ನಮ್ಮ ಮೂರ್ಖತನದಿಂದಾಗಿ ಅದಕ್ಕೂ ನೆಮ್ಮದಿಯನ್ನು ಹಾಳು ಮಾಡಿ ನಮ್ಮ ಮನೆಯೊಳಗೂ ನೆಮ್ಮದಿಯನ್ನು ಕೆಡಿಸಿಕೊಂಡಿದ್ದೇವೆ. ಅದರ ಜೊತೆಗೆ ಸಹಕರಿಸಬೇಕೆಂದರೆ ನಮ್ಮ ಕ್ಯಾಂಪೇನ್‌ಗಳಂತಹಾ ಜನ ಸೇರಿಸುವ ಆ ಮೂಲಕ ಅವರಿವರಿಗೆ ವೈರಸ್ಸುಗಳನ್ನು ಹಂಚಿ ಅವುಗಳ ಕೋಪವನ್ನು ಹೆಚ್ಚಿಸಬಾರದಷ್ಟೇ! ನಮ್ಮೊಳಗೆ ಹಂಚಿಕೊಳ್ಳುವುದೆಂದರೆ ಅವುಗಳಿಗೂ ನಮ್ಮೊಳಗೆ ಬದುಕುವ ಹೋರಾಟವನ್ನು ಆಹ್ವಾನಿಸಿದಂತೆ.
ಹಾಗಾಗಿ ಅಂತಹಾ ಸಮಸ್ಥಿತಿಯು ಬಂದೇ ಬರುತ್ತದೆ. ಸಹಕರಿಸಿ ಜಾಣತನವನ್ನು ಪ್ರದರ್ಶಿಸುವುದು ನಮ್ಮ ಕರ್ತವ್ಯ. ಸಹಕರಿಸುವುದು ಎಂದರೆ ಹರಡುವಿಕೆಯನ್ನು ತಡೆಯುವುದು. ಹರಡುವಿಕೆಯನ್ನು ಹೆಚ್ಚಿಸುವ ಯಾವುದೇ ಕೆಲಸ ಮೂರ್ಖತನದ ಪರಮಾವಧಿ. ಜನ ಉಪವಾಸವಿರಲಿ, ಆರೋಗ್ಯದಿಂದರಲಿ ಬಿಡಲಿ, ಕುಡಿಯಲು ನೀರಿರಲಿ ಅಥವಾ ಕೊಂಡು ಕುಡಿಯಲಿ, ಪ್ರಾಥಮಿಕ ಶಾಲೆಗಳು ಹೇಗಾದರೂ ಇರಲಿ, ಎಂತಹಾ ಸಾಂಕ್ರಮಿಕ ರೋಗಗಳೇ ಇರಲಿ ಆದರೆ… ಆದರೆ.. ವಿರೋಧ ಪಕ್ಷಗಳು ಮಾತ್ರ ಇಲ್ಲದಿರಲಿ ಎನ್ನುವ ಸರ್ಕಾರಗಳು So Called ಪ್ರಜಾತಂತ್ರದಲ್ಲಿರುವಾಗ ಜನ ಜಾಣರಾಗಬೇಕು. ವೈರಸ್ಸೂ ಕೂಡ ತನ್ನ ಬದುಕಿಗೆ ಜಾಣನಾಗಲೆಂದೇ ಮ್ಯೂಟೇಷನ್ ಮಾಡಿಕೊಳ್ಳುತ್ತಿದೆ. ಅದನ್ನಾಳುವ ಮಾನವ ಎಂಬ ಸರ್ಕಾರ ಮೂರ್ಖ ಎಂದು ಅದೇ ತಿಳಿದಿರುವಾಗ, ಜಾಣರೆಂದು ಬಿಂಬಿಸಿಕೊಳ್ಳುವ ನಾವು ಹೇಗಿರಬೇಕು, ಅಲ್ಲವೇ?
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.