ಜೇನುತುಪ್ಪವನ್ನು ಸವಿಯದವರು ಅಪರೂಪ. ಜೇನುಗಳಾದರೋ ಹೂವುಗಳಿಂದ ಸಂಗ್ರಹಿಸಿದ ಮಕರಂದವನ್ನು ಸಂಸ್ಕರಿಸಿ ಆ ತುಪ್ಪವನ್ನು ತಯಾರಿಸಿರುತ್ತವೆ. ನಮ್ಮಲ್ಲಿ ಮಕರಂದವನ್ನೇ ನೇರವಾಗಿ ಹೂವುಗಳಿಂದ ಪಡೆದು ಸವಿದವರು ಅಪರೂಪ. ಆದಾಗ್ಯೂ ತುಂಬೆ ಹೂವಿನಿಂದ ನೇರವಾಗಿ ಮಕರಂದವನ್ನು ಹೀರಿರುವ ಬಗ್ಗೆ ಕೆಲವರಿಗಾದರೂ ನೆನಪಿದ್ದೀತು. ಈಗಲೂ ತುಂಬೆಯ ಹೂವು ಕಂಡರೆ ಪುಟ್ಟದಾದ ಅದನ್ನು ಸೂಕ್ಷ್ಮವಾಗಿ ಬಿಡಿಸಿ, ನಳಿಕೆಯಂತೆ ಇರುವ ಹೂವಿನ ತಳವನ್ನು ಬಾಯಲ್ಲಿಟ್ಟು ಹೀರಿನೋಡಿ! ಸಿಹಿಯಾದ ದ್ರವ ಬಾಯಲ್ಲಿ ಬರುತ್ತದೆ. ಬಹುಷಃ ಇಷ್ಟು ಸುಲಭವಾಗಿ ಮತ್ತಾವ ಹೂವಿನಿಂದಲೂ ನೇರವಾಗಿ ಮಕರಂದವನ್ನು ಹೀರಲಾಗದು.
ಸಾಮಾನ್ಯವಾಗಿ ಎಲ್ಲಾ ಹೂವುಗಳಲ್ಲೂ ಮಕರಂದವನ್ನು ಉತ್ಪಾದಿಸುವ ಗ್ರಂಥಿಗಳಿರುತ್ತವೆ. ಉತ್ಪಾದನೆಯಾದ ಮಕರಂದ ಹೂವಿನ ಭಾಗಗಳಾದ ದಳ, ಪುಷ್ಟಪಾತ್ರೆ ಕೇಸರಗಳು ಮುಂತಾದ ಯಾವುದೇ ಭಾಗಗಳಲ್ಲಿ ಇರುತ್ತದೆ. ಹೂವುಗಳಿಂದ ಆಕರ್ಷಣೆಗೊಂಡು ಪರಾಗಸ್ಪರ್ಶಕ್ಕೆ ನೆರವಾದ ಜೇನು ಅಥವಾ ದುಂಬಿಗಳಿಗೆ ಸಸ್ಯವು ಕೊಡುವ ಗಿಫ್ಟ್ ಅದು.

ತುಂಬೆಯ ಹೂವು ಅಷ್ಟೇನೂ ಆಕರ್ಷಕವಲ್ಲ! ತುಂಬಾ ಚಿಕ್ಕ ಗಾತ್ರದ ಹೂವು. ಹೆಚ್ಚೆಂದರೆ ಒಂದು ಸೆಂ.ಮೀ ಉದ್ದವಾದ ಪುಟ್ಟ ಹೂವು. ಬಣ್ಣವೂ ಅಷ್ಟೇ ಮಾಸಲು ಬಿಳಿ. ಅಗಲವಾಗಿಲ್ಲದ ದಳಗಳು. ಐದು ದಳಗಳಿದ್ದರೂ ಎರಡು ಮುಂದಕ್ಕೆ ಚಾಚಿಕೊಂಡು ಒಂದಾಗಿ, ಇಬ್ಬಾಗವಾದಂತೆ ಇರುತ್ತವೆ. ಇನ್ನು ಮೂರು ದಳಗಳು ಮಡಿಚಿಕೊಂಡು ಪುಟ್ಟದಾಗಿ ಮತ್ತೊಂದು ಕೊನೆಯಲ್ಲಿ ಗೋಚರಿಸುತ್ತದೆ. ಈ ಹೂವಿಗೆ ತೊಟ್ಟು ಇರುವುದಿಲ್ಲ. ಇಡೀ ಹೂವಿನ ದಳಗಳೇ ಮತ್ತೊಂದು ಕೊನೆಗೆ ಕೂಡಿಕೊಂಡು ಸಣ್ಣ ನಳಿಕೆಯಂತೆ ಪುಷ್ಪಪಾತ್ರೆಯಲ್ಲಿ ಸೇರಿಕೊಂಡಿರುತ್ತವೆ. ತುಂಬಾ ಚಿಕ್ಕ ನಳಿಕೆಯಂತಿರುವ ಅದನ್ನೇ ಮೊದಲು ಸಿಹಿಯನ್ನು ಹೀರಲು ಪ್ರಸ್ತಾಪಿಸಿದ್ದು. ಇಂತಹಾ ಹೂವಿನಲ್ಲೂ ಸಿಹಿ ಸಾಕಷ್ಟೇ ಇರುವಂತೆ ಹೀರಿದಾಗ ಯಾರಿಗಾದರೂ ಅನ್ನಿಸಲು ಸಾಧ್ಯವಿದೆ. ಹಾಗಾಗಿಯೇ ಹೂವು ಪುಟ್ಟದಾಗಿದ್ದರೂ ಜೇನುಗಳು ಸಾವಕಾಶವಾಗಿ ತಮ್ಮ ಹೀರುಕೊಳವೆಯನ್ನು ಒಳಚಾಚಿ ಮಕರಂದವನ್ನು ಹೀರಿ, ಕೊಂಡೊಯುತ್ತವೆ. ಹೂವಿನೊಳಗೇ ಅದರ ಗಂಡು-ಹೆಣ್ಣು ಎರಡೂ ಭಾಗಗಳನ್ನೂ ಹೊಂದಿರುತ್ತದೆ.
ತುಂಬೆಯ ಗಿಡವೂ ಅಷ್ಟೇನೂ ಆಕರ್ಷಕವಲ್ಲ. ಹೆಚ್ಚೆಂದರೆ ಒಂದೂವರೆ ಅಡಿಯಿಂದ ಎರಡು ಅಡಿ ಎತ್ತರದ ಗಿಡ, ಅರ್ಧ ಅಥವಾ ಮುಕ್ಕಾಲು ಅಡಿ ಎತ್ತರದ ಗಿಡಗಳೇ ಹೆಚ್ಚು. ಸಾಮಾನ್ಯವಾಗಿ ಕಳೆಯ ಗಿಡವೆಂದೇ ಕರೆಸಿಕೊಂಡು, ನಮ್ಮ ಸಂಸ್ಕೃತಿಯಲ್ಲಿ ರೂಪವಿಲ್ಲದ್ದಕ್ಕೆ ರೂಪಕವಾಗಿದೆ. ಅಷ್ಟೇನೂ ರೂಪವಿಲ್ಲದ್ದನ್ನು ತುಂಬೆಯ ಹೂವಿಗೆ ಸಮೀಕರಿಸುವುದುಂಟು. ಇಂತಹದಕ್ಕೆ ಉದಾಹರಣೆಯಾಗಿ ತ.ರಾ.ಸುಬ್ಬರಾವ್ ಅವರ ಕಾದಂಬರಿಯನ್ನು ಆಧರಿಸಿದ ಜನಪ್ರಿಯ ಚಲನ ಚಿತ್ರವೊಂದರಲ್ಲಿ ಒಂದು ಸನ್ನಿವೇಶವಿದೆ. “ಚಂದನದ ಗೊಂಬೆ” ಹೆಸರಿನ ಚಿತ್ರದಲ್ಲಿ ಖ್ಯಾತ ನಟ ಲೋಕೇಶ್ ಅವರದ್ದು ಕಾಮುಕನ ಪಾತ್ರ. ಚಿತ್ರದ ವಿಲನ್-ನಂತೆ ಕಾಮುಕನ ಪಾತ್ರದಲ್ಲಿ ಒಮ್ಮೆ ಹಳ್ಳಿಯ ಹಾದಿಯಲ್ಲಿ ಹಾದು ಹೋಗುವ ಕುರೂಪಿ ಹೆಂಗಸನ್ನು ಕುರಿತು “ಇದ್ಯಾವುದೋ ಹೊಸಾ ಹೂವೂ…” ಎಂದು ತನ್ನ ಶಿಷ್ಯನ ಮೂಲಕ ರೇಗಿಸುತ್ತಾರೆ. ಶಿಷ್ಯನ ಪಾತ್ರಧಾರಿ ನಟ ಉಮೇಶ್ “ತುಂಬೆ ಹೂವು ಸಾವ್ಕಾರ್ರೇ” ಎಂದು ಉತ್ತರಿಸುತ್ತಾ ತುಂಬೆಹೂವನ್ನೂ ಆಕರ್ಷಕವೇನೂ ಅಲ್ಲ ಎಂಬುದನ್ನು ರೂಪಕವಾಗಿಸಿ ಉತ್ತರಿಸುತ್ತಾರೆ. ಚಿತ್ರದಲ್ಲಿ ಇದನ್ನು ತುಂಬಾ ಮುಖ್ಯ ಎನ್ನುವಂತೆ ಕಾಮುಕ ಪಾತ್ರವನ್ನು ವಿರೂಪಗೊಳಿಸಲು ಬಳಸಿದ್ದರೂ “ತುಂಬೆ”ಯ ಹೋಲಿಕೆಯು ತುಂಬಾ ಪ್ರಮುಖವಾಗಿಯೇ ಇದೆ.

ಇಷ್ಟು ಮಾತ್ರವೇ ಅಲ್ಲ. ಸಹಜವಾಗಿ ದೇವರ ಪೂಜೆಗೆ ಬಳಸುವುದೂ ಅಪರೂಪವೇ. ಒಂದು ಬಿಡಿಸುವ ಕಷ್ಟವಿರಬಹುದು. ನೂರಾರು ಹೂಬಿಡಿಸಿದರೂ ಹೂವಿನ ಬುಟ್ಟಿ ತುಂಬುವುದಿಲ್ಲವಲ್ಲ! ಅದೇ ದಾಸವಾಳದಂತ ಹೂವಾದರೇ, ಇನ್ನೂ ಸೂರ್ಯಕಾಂತಿಗೆ ಹೋಲಿಸಲೇ ಆಗದು. ಅಷ್ಟು ಪುಟ್ಟ ಗಾತ್ರ ತಾನೆ. ಬಣ್ಣವೂ ಅಷ್ಟೇ ಅಲ್ಲವೇ ಅದಕ್ಕೆ ವಿಷ್ಣುವು ಈ ಹೂವನ್ನು ಇಷ್ಟಪಡುವುದಿಲ್ಲವೆಂದು ವೈಷ್ಣವರ ಗೊಣಗು. ತುಳಸಿ ಮಾಲೆ, ಮಲ್ಲಿಗೆಯ ದಂಡೆ, ಸೇವಂತಿಗೆಯ ಬಣ್ಣ, ದಾಸವಾಳದ ಆಕರ್ಷಣೆ, ಗುಲಾಬಿಯ ರಂಗು ಮುಂತಾದವುಗಳ ಮಧ್ಯೆ “ತುಂಬೆ”ಯು ಯಾರಿಗೂ ಬೇಡ. ಯಾರೂ ಇಷ್ಟ ಪಡದ ಹೂವನ್ನೂ ಸ್ವೀಕರಿಸುವವನನ್ನೂ ನಾವು ಸೃಷ್ಟಿಸಿದ್ದೇವೆ! ಶಿವನಿಗೆ ತುಂಬೆಯ ಹೂವುಗಳೆಂದರೆ ತುಂಬಾ ಪ್ರೀತಿ. ಅದಕ್ಕೆ ಶೈವ ಪುರಾಣಗಳಲ್ಲಿ ಕೊಟ್ಟಿರುವ ಮಹತ್ವ ಎಷ್ಟೆಂದರೆ, ಸಮುದ್ರ ಮಥನ ಕಾಲದಲ್ಲಿ ಇನ್ನೂ ಲಕ್ಷ್ಮಿಯು ಹುಟ್ಟದ ಮುನ್ನ ಬಂದಂತಹಾ “ವಿಷ”ವನ್ನು ಕುಡಿದ ಶಿವ ನೀಲಕಂಠನಾದನಲ್ಲವೇ? ಆಗ ವಿಷಮುಕ್ತನಾಗಲು ಪರಿಹಾರಕ್ಕೆ ಬಳಸಿದ್ದೇ ತುಂಬೆಯ ಗಿಡದ ರಸವಂತೆ. ಸತ್ಯಾಸ್ಯತೆಗಳೇನೇ ಇರಲಿ. ತುಂಬೆಯನ್ನೂ ನಮ್ಮ ಸಾಂಸ್ಕೃತಿಕ ಸದಸ್ಯನನ್ನಾಗಿಸಲು ಮಾಡಿದ ಪ್ರಯತ್ನ ಎಂಬುದಂತೂ ನಿಜ.
ತುಂಬೆ- ಪದವೂ ಸಹಾ ಶೈವ ಸಂಸ್ಕೃತಿಯಂತೆಯೇ ದ್ರಾವಿಡ ಮೂಲದ್ದು. “ತುಂಬಾಯ್” ಎಂಬ ತಮಿಳು, “ತುಂಬೈ” ಎಂಬ ಮಲೆಯಾಳಂ ಮೂಲದಿಂದ ವಿಕಾಸಗೊಂಡಿದೆ ಎಂದು ಅಭಿಪ್ರಾಯ ಪಡಲಾಗಿದೆ. ಮೂಲ ಭಾರತೀಯವಾದ ದ್ರಾವಿಡ ಪರಂಪರೆಯ ಶಿವ ಸಂಸ್ಕೃತಿಯಲ್ಲಿ ಎಲ್ಲವನ್ನೂ ಒಳಗೊಳ್ಳುವಿಕೆಯ ಪ್ರೀತಿಯಿದೆ. ಅದನ್ನೇ ತುಂಬೆಯನ್ನು ಶಿವನ ಪ್ರೀತಿಗೆ ಒಳಪಡಿಸಿ ಗೌರವಿಸಲಾಗಿದೆ. ಸಾಮಾನ್ಯವಾದ ಸಂದರ್ಭಗಳಲ್ಲಿ ಒಂದು ಅಡಿಗಿಂತಲೂ ಕಡಿಮೆ ಎತ್ತರದ ಗಿಡ, ಎಲೆಗಳು ಅಷ್ಟೇ ತುಂಬಾ ಕಿರಿದಾದವು, ಹೂವೂ ಅಷ್ಟೇ ಮಾಸಲು ಬಿಳಿಯ ಬಣ್ಣದವು! ಸಾಮಾನ್ಯವಾದ ನೊಣದಷ್ಟೇ ಗಾತ್ರದ ಪುಟ್ಟ ಹೂವು. ಅಂತಹದ್ದನ್ನೂ ಶಿವರಾತ್ರಿಯಂದು ಶಿವನಿಗೆ ಅರ್ಪಿಸಲೇಬೇಕೆಂದು ವೈಷ್ಣವರೂ ಪೇಚಾಡುತ್ತಾರೆ. ಒಂದು ರೀತಿಯಲ್ಲಿ ಕಡೆಗಾಣಿಸಿದ್ದಕ್ಕೆ ಪ್ರಾಯಶ್ಚಿತ್ಯದಂತೆ! ಇದೆಲ್ಲವೂ ನಮ್ಮ ಸಂಸ್ಕೃತಿಯ ಪ್ರೀತಿ-ಪ್ರೇಮಗಳ ಹೊಂದಾಣಿಕೆಯಾಗಿಸುವ ಭಾಗವೆಂಬುದಂತೂ ನಿಜ.
ಇಷ್ಟು ಮಾತ್ರವಲ್ಲದೇ ತುಂಬೆಯೂ ಸಹ ಸಸ್ಯಜಗತ್ತಿನಲ್ಲಿ ಮತ್ತು ಮಾನವಕುಲದ ಮುಖಾಮುಖಿಯಲ್ಲಿ ತನ್ನದೇ ಛಾಪು ಮೂಡಿಸಿದೆ. ತುಂಬೆಯು ಸಸ್ಯಜಗತ್ತಿನಲ್ಲಿ ಪರಿಮಳ ಭರಿತ ಸಸ್ಯಗಳ ಕುಟುಂಬಕ್ಕೆ ಸೇರಿದ ಗಿಡ. ಲ್ಯಾಮಿಯೇಸಿಯೆ(Lamiaceae) ಸಸ್ಯ ಕುಟುಂಬವು ಪರಿಮಳ ಸೂಸುವ ಸಸ್ಯಗಳ “ಮಿಂಟ್ ಕುಟುಂಬ” ಎಂದೇ ಹೆಸರುವಾಸಿ. ತುಳಸಿ, ಪುದಿನ, ಲ್ಯಾವೆಂಡರ್, ಮುಂತಾದವೆಲ್ಲವೂ ತುಂಬೆಯ ಸಂಬಂಧಿಗಳೇ. ಈ ಕುಟುಂಬದ ಸರಿ ಸುಮಾರು 7000 ಪ್ರಭೇದಗಳಲ್ಲಿ ಬಹುಪಾಲು ವಿಶೇಷ ವಾಸನೆಯುಳ್ಳವು. ಕೆಲವೊಂದು ಪರಿಮಳ ಅಹಿತಕರವೂ ಆಗಿರಬಹುದು. ಕೆಲವೊಂದು ಪುದಿನ, ತುಳಸಿಯಂತೆ ಆಕರ್ಷಕವೂ ಹೌದು. ತುಂಬೆಯ ಎಲೆಗಳನ್ನು ಕೈಯಲ್ಲಿ ಒಂದಷ್ಟು ಉಜ್ಜಿ ಪರಿಮಳವನ್ನು ಮೂಸಿ ನೋಡಿ, ಅದರ ಹಿತವಾದ ವಾಸನೆಯು ತಿಳಿಯುತ್ತದೆ.
ತುಂಬೆಯನ್ನು ಸಸ್ಯವೈಜ್ಞಾನಿಕವಾಗಿ ಲ್ಯೂಕಸ್ ಆಸ್ಪೆರಾ (Leucas aspera) ಎಂದು ಕರೆಯಲಾಗುತ್ತದೆ. ಭಾರತದಾದ್ಯಂತ ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಕಳೆ ಗಿಡವಾಗಿ ಒಣ ಬಂಜರು ನೆಲದಲ್ಲಿ ಕಂಡು ಬರುತ್ತದೆ. ಹೆಚ್ಚು ಎತ್ತರವಿರದಿದ್ದರೂ ಕಾಂಡದಲ್ಲಿ ವಿಶೇಷತೆಯಿರುವ, ಎಲೆಗಳೂ ಕಿರಿದಾಗಿದ್ದೂ ಬೆರಳಿನಂತೆ ಹರಡಿಕೊಂಡಿರುವ ಸಸ್ಯ. ಸಾಮಾನ್ಯವಾಗಿ ಗಿಡ-ಮರಗಳ ಕಾಂಡವು ದುಂಡಾಗಿರುವುದು. ಆದರೆ ತುಂಬೆಯ ಕಾಂಡವು ನಾಲ್ಕು ಕೋನ ಹಾಗೂ ಮೇಲ್ಮೈಯಿರುವ ಚೌಕಾಕಾರದ್ದಾಗಿರುತ್ತದೆ. ಸುಮಾರು ರೆಂಬೆಗಳಾಗಿರುವ, ಅವುಗಳಲ್ಲಿ ಅಲ್ಲಲ್ಲಿ ಗಂಟುಗಳಂತೆ ಕಾಣುವಲ್ಲಿ ಹೂಗಳ ಗುಂಪುಗಳನ್ನು ಕಾಣಬಹುದು. ಈ ಗುಂಪಾದ ಗಂಟಿನಾಕಾರವೂ ವಿಶೇಷವಾದದ್ದೇ, ಇದು ವರ್ಟಿಸೆಲಾಸ್ಟರ್ ಎಂದು ಕರೆಯಲಾಗುವ ಹೂಗೊಂಚಲು.

ಈ ವರ್ಟಿಸೆಲಾಸ್ಟರ್ ಹೂಗೊಂಚಲು ಒಂದು ಅಕ್ಷವನ್ನು ಹೊಂದಿದ್ದು ಅದರ ಸುತ್ತಲೂ ಪರ್ಯಾಯವಾಗಿ ಹೂವುಗಳು ಹೊಂದಿಕೊಂಡಿರುತ್ತವೆ. ತುಂಬೆಯ ಹೂವುಗಳಿಗೆ ಈ ಹಿಂದೆಯೇ ತಿಳಿಸಿರುವಂತೆ ತೊಟ್ಟು ಇರುವುದಿಲ್ಲ. ದಳಗಳೇ ಒಂದು ಕೊನೆಯಲ್ಲಿ ಕೂಡಿಕೊಂಡು, ಸಣ್ಣ ನಳಿಕೆಯಂತಾಗಿ ಪುಷ್ಪಪಾತ್ರೆಯ ಒಳಕ್ಕೆ ಸೇರಿಕೊಂಡಿರುತ್ತದೆ. ಪುಷ್ಪಪಾತ್ರೆಯೂ ಸಹಾ ಹೂಎಲೆ ಎಂದುಕರೆಯುವ ಭಾಗವನ್ನು ಅಂಟಿಕೊಂಡು ಚೂಪಾದ ಕಪ್ಪಿನಂತಿರುವ ಭಾಗದಲ್ಲಿ ಒಂದಾಗಿರುತ್ತದೆ. ಹಾಗಾಗಿ ಪುಷ್ಪಪಾತ್ರೆ ಹಾಗೂ ಹೂಎಲೆ ಒಂದಾಗಿ ಹೂವಿನ ತಳದ ನಳಿಕೆಯನ್ನು ಹಿಡಿಕೊಂಡಿರುತ್ತವೆ. ಒಟ್ಟಾಗಿ ಸುತ್ತಲೂ ಜೋಡಿಸಿದಂತೆ ಕಾಣುವ ಈ ಹೂಗೊಂಚಲು ತುಂಬೆಯ ವಿಶೇಷ ಕೂಡ. ಆ ಗುಂಪಿನ ಗಂಟಿಗೆ ತಾಗಿಕೊಂಡಂತೆ ಸುತ್ತುವರಿದ ಎಲೆಗಳು ಕೈ ಬೆರಳಿನಂತೆ ತೆರೆದುಕೊಂಡು ಹೂಗೊಂಚಲಿನ ಬುಡಕ್ಕೆ ಸುಂದರವಾದ ವಿನ್ಯಾಸವನ್ನು ಕೊಟ್ಟಿರುತ್ತವೆ.
ತುಂಬೆಯು ಪರಿಮಳಯುಕ್ತವಾಗಿದ್ದು ಸಾಕಷ್ಟು ರಾಸಾಯನಿಕಗಳಿಂದ ಔಷಧಿಯ ವಿಜ್ಞಾನದ ಅಧ್ಯಯನಕ್ಕೆ ಒಳಪಟ್ಟಿದೆ. ಶಿವನು ನುಂಗಿದ್ದ ವಿಷವನ್ನೇ ಪರಿಹರಿಸಿರುವ ಪಾತ್ರವನ್ನು ನಮ್ಮ ಪರಂಪರೆಯಲ್ಲಿ ಕೊಟ್ಟಿದ್ದೇವಲ್ಲವೇ? ತುಂಬೆಯ ಇಡೀ ಗಿಡವನ್ನು ಔಷಧಗಳಲ್ಲಿ ಬಳಸಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ನನಗೂ ಬಾಲ್ಯದಲ್ಲಿ ಅನೇಕ ಸಲ ಗಂಟಲು ನೋವು ಬರುತ್ತಿತ್ತು. ಗಂಟಲಲ್ಲಿ ಗಂಟುಗಳಾದಂತೆ ನುಂಗಲು ಕಷ್ಟವಾಗುವ ಪರಿಸ್ಥಿತಿ ಅನೇಕರಿಗೆ ಅನುಭವಕ್ಕೆ ಬಂದಿರಬಹುದು. ಅಂತಹಾ ಸಂದರ್ಭಗಳಲ್ಲಿ ಹಲವು ಬಾರಿ ತುಂಬೆಯ ಎಲೆಯನ್ನು ಚೆನ್ನಾಗಿ ಅರೆದು ಚಟ್ಣಿ(ಪೇಸ್ಟ್) ಮಾಡಿ, ಗಂಟಲು, ಕೆನ್ನೆಗೆಲ್ಲಾ ಸವರುತ್ತಿದ್ದರು. ನನ್ನ ಅಜ್ಜಿಯು ಹಾಗೆ ಮಾಡಿದ್ದುಂತೂ ನನ್ನ ನೆನಪಲ್ಲಿ ತುಂಬೆಯನ್ನು ಶಾಶ್ವತವಾಗಿಸಿದೆ. ಮಾತ್ರವಲ್ಲ, ಅನೇಕ ಬಾರಿ ದನಕರುಗಳಿಗೆ ತುಂಬೆಯ ಗಿಡವನ್ನು ಅರೆದು ಮೈಗೆಲ್ಲಾ ಸವರುತ್ತಿದ್ದುದೂ ನೆನಪಲ್ಲಿದೆ. ಕೆಲವು ಸಮುದಾಯಗಳು ತುಂಬೆಯ ಎಲೆಗಳನ್ನು ಮಾಮೂಲಿ ಅಡುಗೆಯಲ್ಲಿ ಪರಿಮಳವನ್ನು ತರಲು ಬಳಸುವ ಬಗೆಗೂ ಕೆಲವು ಗೆಳೆಯರು ಹೇಳುವುದನ್ನೂ ಕೇಳಿದ್ದೇನೆ.
ಚರ್ಮದ ಹಲವು ಬಗೆಯ ತುರಿಕೆಗಳಿಗೂ ಹುಣ್ಣುಗಳಿಗೂ, ತುಂಬೆಯ ರಸವು ನಿವಾರಕವಾಗಿದೆ. ಹೂಗಳನ್ನು ಬಳಸಿ ತಯಾರಿಸಿದ ಕಷಾಯವು ಕೆಮ್ಮಿಗೆ ಪರಿಹಾರವನ್ನು ಕೊಡುತ್ತದೆ. ಇಡೀ ಗಿಡದ ಸಸ್ಯರಾಸಾಯನಿಕ ವಿಶೇಷಣಗಳ ಹಲವಾರು ಅಧ್ಯಯನಗಳು ಆಧುನಿಕ ಔಷಧವಿಜ್ಞಾನದಲ್ಲಿ ನಡೆದಿವೆ. ಒಲಿಯೆನಿಕ್ ಆಮ್ಲ, ಆರ್ಸೊಲಿಕ್ ಆಮ್ಲ ಹಾಗೂ ಕೆಲವೊಂದು ಬಗೆಯ ಸ್ಟಿರಾಲ್ಗಳನ್ನು ಸಸ್ಯದಲ್ಲಿ ಪತ್ತೆ ಹಚ್ಚಲಾಗಿದೆ. ಕೆಲವೊಂದು ಬಗೆಯ ಶಿಲೀಂದ್ರಗಳನ್ನೂ ತಡೆಗಟ್ಟಬಲ್ಲ ಗುಣವನ್ನು ತುಂಬೆಯಲ್ಲಿ ಕಂಡುಕೊಳ್ಳಲಾಗಿದೆ. ತುಂಬೆಯ ಗಿಡದ ಹೊಗೆಯು ಕೆಲವೊಂದು ಕೀಟಗಳಿಗೆ ನರದೌರ್ಬಲ್ಯವನ್ನು ತರುತ್ತದೆ. ಆದ್ದರಿಂದ ಇದನ್ನು ಸೊಳ್ಳೆಯ ಹೊಗೆಕಾರಕ ಮ್ಯಾಟ್ ಗಳಲ್ಲಿ ಬಳಸುವ ಪ್ರಯತ್ನಗಳಾಗಿವೆ. ಹಾಗಾಗಿ ದನಕರುಗಳ ಮೈಮೇಲಿನ ಉಣ್ಣೆ, ಚಿಗಟ ಮುಂತಾದ ಕೀಟಗಳ ಪರಿಹಾರಕ್ಕೂ ತುಂಬೆಯ ಇಡೀ ಗಿಡ ಅಥವಾ ಎಲೆಗಳ ರಸವನ್ನು ಬಳಸುತ್ತಾರೆ.
ತುಂಬೆಯು ಒಂದು ಸಾಮಾನ್ಯ ಚಿಕ್ಕ ಕಳೆ-ಗಿಡವಾಗಿದ್ದೂ ಆಧುನಿಕ ವಿಜ್ಞಾನದ ಸಂಶ್ಲೇಷಣೆಯಲ್ಲಿಯೂ ಪಾತ್ರವಹಿಸಿದೆ. ಬೆಳ್ಳಿಯ ನೈಟ್ರೈನಿನ ನ್ಯಾನೋಕಣಗಳನ್ನು ಪಡೆಯುವ ಪ್ರಯತ್ನಗಳಲ್ಲಿ ವಿವಿಧ ಕಷಾಯಗಳನ್ನೂ ಬಳಕೆ ಮಾಡಲಾಗಿದೆ. ತುಂಬೆಯ ಕಷಾಯವನ್ನು ಬಳಸಿ ಪಾಂಡಿಚೆರಿಯ ಕಾರೈಕಲ್ ಆಯುರ್ವೇದ ಕಾಲೇಜು ಹಾಗೂ ಅಲ್ಲಿನ ವಿಜ್ಞಾನ ಕಾಲೇಜಿನ ಭೌತವಿಜ್ಞಾನ ವಿಭಾಗಗಳೆರಡೂ ಸೇರಿ ಬೆಳ್ಳಿಯ ನ್ಯಾನೋಕಣಗಳ ದ್ರಾವಣವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೆನೂ ಹೆಸರು ಮಾಡದ ಪುಟ್ಟ ಗಿಡವೊಂದು ಅತ್ಯಾಧುನಿಕವಾದ ವಿವಿಧ ವಸ್ತುಗಳ ಹುಡುಕಾಟದ ನ್ಯಾನೋಕಣವಿಜ್ಞಾನದಲ್ಲೂ ಪಾತ್ರವಹಿಸಿದೆ. ತುಂಬೆಯು ತುಂಬಾ ಹೊಸ ತಂತ್ರಜ್ಞಾನದ ಜೊತೆಯ ಹುಡುಕಾಟದ ಸಾಹಸವನ್ನೂ ಮೆರೆಯಬಲ್ಲ ಸಾಧ್ಯತೆಯನ್ನೂ ಪ್ರತಿಷ್ಠಾಪಿಸಿದೆ. ಅದೇನೆ ಇರಲಿ, ಸದ್ಯಕ್ಕೆ ಎಲ್ಲಾದರೂ ತುಂಬೆಯು ಕಂಡರೆ, ಅದರ ಹೂವನ್ನು ಮೆದುವಾಗಿ ಬಿಡಿಸಿ ಮಕರಂದವನ್ನು ಹೀರುವುದನ್ನು ಮಾತ್ರ ಮರೆಯಬೇಡಿ.
ನಮಸ್ಕಾರ,
ಚನ್ನೇಶ್