ವಿಜ್ಞಾನದ ಸಾರ್ವಜನಿಕ ತಿಳಿವಳಿಕೆ (Public Understanding of Science)ಯು ಚರ್ಚೆಗೆ ಬಂದದ್ದೇ 1985 ರಲ್ಲಿ ಹೊರ ಬಂದ ರಾಯಲ್ ಸೊಸೈಟಿಯ ಬಾಡ್‌ಮರ್ ರಿಪೊರ್ಟ್ ಮೂಲಕ! ರಾಯಲ್ ಸೊಸೈಟಿಯ Public Understanding of Science ಸಮಿತಿಯ ನೇತೃತ್ವ ವಹಿಸಿದ್ದ ಸರ್. ವಾಲ್ಟೆರ್ ಬಾಡ್‌ಮರ್ (Sir. Walter Bodmer) 80 ರ ದಶಕದಲ್ಲಿ ವಿಜ್ಞಾನದ ಸಾರ್ಜನಿಕ ಚರ್ಚೆಗಳ ಮರುಹುಟ್ಟಿಗೆ ವಿಶೇಷ ಸ್ಥಾನವನ್ನು ಕಲ್ಪಸಿಕೊಟ್ಟರು. ವಾಲ್ಟೆರ್ ಬಾಡ್‌ಮರ್ ಅವರು ಮೂಲತಃ ಗಣಿತದ ವಿದ್ಯಾರ್ಥಿಯಾಗಿದ್ದು ಆರ್. ಎ. ಫಿಶರ್ (Sir Ronald Aylmer Fisher) ಅವರ ಮಾರ್ಗದರ್ಶನದಲ್ಲಿ Population Genetics ನಲ್ಲಿ Ph.D ಪಡೆದವರು, ಮುಂದೆ ಮಾನವರ ಆನುವಂಶಿಯತೆ ಹಾಗೂ ಮಾಲೆಕ್ಯುಲಾರ್ ಜೀವಿವಿಜ್ಞಾನದ ಕಡೆಗೆ ಹೊರಳಿದವರು. ಮಾನವ ತಳಿ ನಕ್ಷೆಯು ರೂಪುಗೊಳ್ಳುವ ಸನ್ನಿವೇಶವನ್ನು ಉಂಟುಮಾಡಿದವರಲ್ಲಿ ಒಬ್ಬರು.
ವಿಜ್ಞಾನದ ಆಶಯದಲ್ಲಿ ಆರೋಗ್ಯ ವಿಜ್ಞಾನಕ್ಕೆ ತೀರಾ ಆಪ್ತವಾದ ಮೌಲ್ಯಗಳಿವೆ. ಹಾಗಂತ ವೈದ್ಯಕೀಯ ವಿಚಾರಗಳು ಸಾರ್ವಜನಿಕವಾಗಿ ಆಸಕ್ತಿಯ ಹಾಗೂ ಅವಶ್ಯಕವೂ ಆದ ಸಂಗತಿಗಳೇನೋ ಹೌದು! ಆದರೆ ಬಳಕೆಯ ಹಿತ ಮತ್ತು ವಾಸ್ತವದಲ್ಲಿ ಭಿನ್ನವಾದ ನೆಲೆಯನ್ನು ಹೊಂದಿವೆ. ವೈದ್ಯಕೀಯ ವಿಚಾರಗಳನ್ನು ವೈದ್ಯರಷ್ಟೇ ಚರ್ಚಿಸಬೇಕೆಂಬ ಅಲಿಖಿತ ತಿಳಿವಳಿಕೆ ಜನಜನಿತವಾಗಿದೆ. ರೋಗಿಯೊಬ್ಬ ತನ್ನ ಕಾಯಿಲೆಯ ಬಗೆಗೆ ಹೆಚ್ಚಿನ ತಿಳಿವಳಿಕೆಯನ್ನು ಓದಿಕೊಂಡೋ, ತಿಳಿದುಕೊಂಡೋ ವೈದ್ಯರೊಡನೆ ಚರ್ಚಿಸುವದು ಈ ಹಿಂದಿನವರೆಗೂ ಕಷ್ಟ ಸಾದ್ಯವಾಗಿತ್ತು. ಇತ್ತೀಚಿಗೆನ ಮುಕ್ತ ತಿಳಿವಳಿಕೆಯ ಕಾಲದಲ್ಲಿ ಬದಲಾಗುತ್ತಿದ್ದರೂ ಅಷ್ಟೇನೂ ಒಪ್ಪಿಕೊಂಡಂತಿಲ್ಲ. ಹಾಗಾಗಿ ವೈದ್ಯಕೀಯ/ಆರೋಗ್ಯದ ತಿಳಿವಳಿಕೆ/ಜ್ಞಾನದ ಸಮಾಜೀಕರಣ ಅಥವಾ ಮುಕ್ತವಾಗಿಸುವ ಸಂದರ್ಭವು ಅಂತಹದ್ದೊಂದು ಸನ್ನಿವೇಷಕ್ಕೆ ತೆರೆದುಕೊಳ್ಳುತ್ತದೆ. ಸಾಮಾಜಿಕವಾಗಿ ವೈದ್ಯಕೀಯ ವಿಚಾರಗಳೂ ಕೂಡ ಹೆಚ್ಚು ಆಪ್ತವಾದವು. ಈ ಹಿನ್ನೆಲೆಯಲ್ಲಿಯೇ ಜನಪ್ರಿಯವಾದ/ಸಾರ್ವಜಿನಕವಾದ ವಿಜ್ಞಾನದ ತಿಳಿವಳಿಕೆಯಲ್ಲಿ ವೈದ್ಯಕೀಯ ವಿಜ್ಞಾನವು ಹೆಚ್ಚು ಹತ್ತಿರವಾದುದು. ಅಂತಹಾ ಪ್ರಯತ್ನವನ್ನು CPUS ಕೊರೊನಾ ಸಂದರ್ಭದಲ್ಲಿ ಯಶಸ್ವಿಯಾಗಿ ನಿರ್ವಹಿಸಿ ಸುಮಾರು 20ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿತು. (ಅವೆಲ್ಲವನ್ನೂ https://rb.gy/ajfud ಲಿಂಕ್ ನಲ್ಲಿ ನೋಡಬಹುದಾಗಿದೆ).
ಹಾಗೆ ನೋಡಿದರೆ ತುಂಬಾ ಹಿಂದಿನಿಂದಲೂ ಸಾವಿರಾರು ವೈದ್ಯರು ಸೃಜನಶೀಲ ಬರಹ/ಚಟುವಟಿಕೆಗಳಲ್ಲಿ ತೊಡಗಿಕೊಂಡ ಇತಿಹಾಸ ಸಾಮಾಜಿಕವಾಗಿ ಸಾಕಷ್ಟೇ ಇದೆ. ಅವರ ಸೇವೆಯೇ ಮಾನುಕುಲ ಒಳಿತೆಗೆ ಎಂಬ ವಿಶ್ವಾಸಾರ್ಹವಾದ ನಂಬಿಕೆ ಹಾಗೂ ಪ್ರಾಕ್ಟೀಸ್ ಕೂಡ ಜನಪ್ರಿಯವೇ. ಇದೇ ಹಿನ್ನೆಲೆಯಲ್ಲಿ ವೈದ್ಯೋ ನಾರಾಯಣೋ ಹರಿ ಎಂಬ ಮಾತು ನಮ್ಮಲ್ಲಿ ಎಲ್ಲರಿಗೂ ತಿಳಿದದ್ದೇ! ಇತಿಹಾಸ ಪೂರ್ವದಿಂದಲೂ ವೈದ್ಯಕೀಯ ವೃತ್ತಿಯು ಸಮಾಜದಲ್ಲಿ ಅತ್ಯಂತ ಹೆಚ್ಚಿನ ಮನ್ನಣೆ ಹಾಗೂ ಗೌರವವನ್ನು ಪಡೆದ ವೃತ್ತಿ. ಆಧುನಿಕ ವೈಜ್ಞಾನಿಕತೆಯ ರೂವಾರಿಗಳಲ್ಲೊಬ್ಬನಾದ ನಿಕೊಲಾಸ್ ಕೊಪರ್ನಿಸ್ (Nicolaus Copernicus- 1473 – 1543) ಕೂಡ ಓರ್ವ ವೈದ್ಯನಾಗಿದ್ದ! ಅದಕ್ಕಿಂತಾ ಮೊದಲೂ ವೈದ್ಯಕೀಯ ತಿಳಿವಳಿಕೆಯ ಜೊತೆಗೆ ಅನೇಕ ಸಮಾಜಿಕ ಹಿನ್ನೆಲೆಯಲ್ಲಿ ಮಾನವತೆಯನ್ನು ಬೆಳಗಿದವರು ಎಲ್ಲ ಸಂಸ್ಕೃತಿಗಳಲ್ಲೂ ಇದ್ದವರೇ! ನಂತರದಲ್ಲೂ ಇತ್ತೀಚೆಗಿನವರೆಗೂ ಸಾವಿರಾರು ವೈದ್ಯ ಲೇಖಕರು ಮಾನವ ಹಿತವನ್ನು ತಮ್ಮ ಅರಿವಿನ ಬೆಳಕಿನಿಂದ ಸಮಾಜೀಕರಣದ ಉನ್ನತಿಯನ್ನು ಎತ್ತಿ ಹಿಡಿದಿದ್ದಾರೆ. ಹದಿನೆಂಟನೆಯ ಶತಮಾನದ ಎಡ್ವರ್ಡ್ ಜೆನ್ನರ್ (ಸಿಡುಬಿಗೆ ಲಸಿಕೆಯನ್ನು ಕಂಡುಹಿಡಿದ ವೈದ್ಯವಿಜ್ಞಾನಿ) ಓರ್ವ ಕವಿಯಾಗಿಯೂ ಖ್ಯಾತನಾಗಿದ್ದರು. ರೋಮ್ಯಾಂಟಿಕ್ ಕಾವ್ಯಗಳ ಜಾನ್ ಕೀಟ್ಸ್ ಕೂಡ ಸ್ವತಃ ಈಗಿನ ಕಿಂಗ್ಸ್ ಕಾಲೇಜ್ ಲಂಡನ್ ಅಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು. ಶೆರ್ಲಾಕ್ ಹೊಮ್ಸ್ ಖ್ಯಾತಿಯ ಸರ್ ಆರ್ಥರ್ ಕಾನನ್ ಡೈಲ್ ಕೂಡ ಸ್ವತಃ ವೈದ್ಯರಾಗಿದ್ದರು. ಮನೋವಿಜ್ಞಾನದ ಕೊಡುಗೆಗಳಿಂದ ಆಧುನಿಕ ವಿಜ್ಞಾನಕ್ಕೆ ಹೊಸತೊಂದು ಬದಲಾವಣೆಯನ್ನು ತಂದುಕೊಟ್ಟ ಸಿಗ್ಮಂಡ್ ಫ್ರಾಯ್ಡ್ ವೈದ್ಯರಾಗಿದ್ದರು. ಹೀಗೆ ನೂರಾರು ಉದಾಹರಣೆಗಳು ನಮ್ಮ ಮುಂದಿವೆ. ಪ್ರಸ್ತುತ ಚಾಲಿಯಲ್ಲೂ ಖ್ಯಾತಿಯಲ್ಲೂ ಅತ್ಯಂತ ಜನಪ್ರಿಯರೂ ಭಾರತೀಯರೂ ಆಗಿರುವ ಅತುಲ್ ಗಾವಾಂಡೆ, ಸಿದ್ಧರ್ಥ ಮುಖರ್ಜಿ ತಮ್ಮ ಬರಹಗಳ ಮೂಲಕ ವೈದ್ಯಕೀಯ ತಿಳಿವಳಿಕೆಯ ಸಮಾಜೀಕರಣಕ್ಕೆ ದೊಡ್ಡ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ. ಕನ್ನಡದ ರಾ.ಶಿ. ಅವರಂತೂ ಮನೋವೈದ್ಯಕೀಯ ಸಂಗತಿಗಳನ್ನು ಜನಮಾನಸದಲ್ಲಿ ತುಂಬಿದವರು.
ಇತ್ತೀಚೆಗಿನ ಮಾರುಕಟ್ಟೆ ಆಧಾರಿತ ಸಂಸ್ಕೃತಿಯು ಆರೋಗ್ಯವನ್ನು ಮಾರಾಟಕ್ಕೆ ಇಟ್ಟ ವಸ್ತುವಾಗಿ ನೋಡುವಂತೆ ಪ್ರೇರೇಪಿಸಿದ್ದು, ವೈದ್ಯಕೀಯ ಸಂಗತಿಗಳನ್ನೇ ಸುಲಭವಾದ ಮಾನವ ಹಿತದಿಂದ ದೂರ ಸರಿಸಿದೆ. ಹಾಗಾಗಿ ರೋಗಗಳನ್ನೇ ಮಾರಟಕ್ಕಿಟ್ಟ ಸಂದರ್ಭವನ್ನು “ಸೆಲ್ಲಿಂಗ್ ಸಿಕ್‌ನೆಸ್” (Selling sickness: how the world’s biggest pharmaceutical companies are turning us all into patients by Moynihan R, and Cassels A.) ಪುಸ್ತಕವು ಬಹುವಿವರವಾಗಿ ಚರ್ಚಿಸುತ್ತದೆ. ಇಂತಹವನ್ನು ಇವುಗಳ ಜೊತೆಗೆ ಅಪಾರ ಮಾನವಹಿತ ಹಾಗೂ ತಿಳಿವಳಿಕೆಯ ಸಂಗತಿಗಳನ್ನೂ ದಶಕಗಳ ಕಾಲ ಚರ್ಚಿಸಿದ್ದು ಡಾ. ಬಿ.ಕೆ ಸುಬ್ಬರಾವ್. ವಿಜ್ಞಾನದ ಸಾರ್ವಜನಿಕ ತಿಳಿವಳಿಕೆಯ ಕೇಂದ್ರದಲ್ಲಿ ಅವರೊಬ್ಬ ಹಿರಿಯ ಮಾರ್ಗದರ್ಶಕರಾಗಿ ಜೊತೆಗಿದ್ದರು.
ವೈಯಕ್ತಿಕವಾಗಿ ನನಗೆ 90 ರ ದಶಕದಲ್ಲಿ ಮೊದಲು ಪರಿಚಿತರಾದ ಡಾ. ಸುಬ್ಬರಾವ್ ವೈದ್ಯರಾಗಿ ತಮ್ಮ ವಿಶೇಷ ತರಬೇತಿಯಾದ ಮನೋವೈದ್ಯಕೀಯದ ಪ್ರಾಕ್ಟೀಸಿಗೆ ಬೇಕಾದ ಸಂಭಾಷಣೆ ಮತ್ತು ವೈಯಕ್ತಿಕ ಪರಿಚಯದ ಮಾತುಗಳಿಂದಲೇ ಹತ್ತಿರವಾದರು. ಹಾಗಂತ ಕ್ಲಿನಿಕ್ ಅಥವಾ ಆಸ್ಪತ್ರೆಯ ಮೂಲಕ ಪ್ರಾಕ್ಟೀಸು ಮಾಡುತ್ತಿರಲಿಲ್ಲ ಎಂಬುದು ಮುಂದೆ ನಂತರದಲ್ಲಿ ತಿಳಿದದ್ದು. ಅಲ್ಲಿಂದ ತಮ್ಮ ಕೊನೆಯ ದಿನಗಳವರೆಗೂ ಸುಮಾರು ಎರಡು ಮುಕ್ಕಾಲು ದಶಕಗಳ ಕಾಲ ಅವರ ಪರಿಚಯ ಮತ್ತು ಒಡನಾಟದಲ್ಲಿ ಅವರಿಗಿದ್ದ Demystifying of Knowledge ನ ಅದರಲ್ಲೂ ವೈದ್ಯಕೀಯ ವಿಜ್ಞಾನದ ಸಮಾಜೀಕರಣದ ಹಾಗೂ ಆ ಮೂಲಕ ಮಾನವ ಜನಾಂಗದ ಆರೋಗ್ಯದ ಹಿತವನ್ನು ಹಂಚಿಕೊಳ್ಳುತ್ತಿದ್ದದು ಅಪ್ಯಾಯಮಾನವಾದ ವಿಚಾರವಾಗಿತ್ತು. ಅವರ ಹಿತಾಸಕ್ತಿಗಳ ವಿಚಾರವನ್ನು ಹಿಂದೊಮ್ಮೆ ಹಂಚಿಕೊಂಡ ಲೇಖನವನ್ನು CPUS ನ ವೆಬ್‌ಪುಟ https://cfpus.org ನಲ್ಲಿ https://rb.gy/curxo ಲಿಂಕ್ ಮೂಲಕ ನೋಡಬಹುದು.
ಡಾ. ಸುಬ್ಬರಾವ್ ಅವರ ನೆನಪಿನಲ್ಲಿ ಪ್ರತೀ ಆಗಸ್ಟ್ (ಅವರ ಜನ್ಮದಿನ ಆಗಸ್ಟ್ 6) ತಿಂಗಳಲ್ಲಿ CPUS ವೈದ್ಯವಿಜ್ಞಾನದ ಸಾರ್ಜನಿಕ ತಿಳಿವಳಿಕೆಯ ಉಪನ್ಯಾಸವನ್ನು ಏರ್ಪಡಿಸುತ್ತಿದ್ದು, ಈ ವರ್ಷ ಆ ಸರಣಿಯ ಮೂರನೆಯ ಉಪನ್ಯಾಸವನ್ನು ಖ್ಯಾತ ಪ್ರಸೂತಿ ವಿಜ್ಞಾನ ಹಾಗೂ ಸ್ತ್ರೀ ರೋಗ ತಜ್ಞ ವೈದ್ಯರಾದ ಡಾ. ಆಶಾ ಚಂದ್ರರೆಡ್ಡಿಯವರು ನಡೆಸಿಕೊಡಲಿದ್ದಾರೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವೈದ್ಯಕೀಯ ಸಂಸ್ಥೆಗಳ ಸಹಯೋಗದಿಂದ ತಮ್ಮ ವೃತ್ತಿಯನ್ನು ಅತ್ತಂತ ಆಪ್ತವಾಗಿಸಿಕೊಂಡ ಡಾ. ಆಶಾ ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯಕೀಯ ಸೇವೆಯಲ್ಲಿ ತೊಡಗಿಕೊಂಡಿರುವ ಅವರು CPUS ಗೆಂದೇ “ಸುರಕ್ಷಿತ ತಾಯ್ತನದ ಪಾಲನಾ ಕ್ರಮಗಳು –(Safe Motherhood Protocol) ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಈ ಹಿಂದಿನ ಎರಡು ಉಪನ್ಯಾಸಗಳನ್ನು ವಾಷಿಂಗ್‌ಟನ್ ಸ್ಟೇಟ್ ವಿಶ್ವವಿದ್ಯಾಲಯದ ಪ್ರೊ. ಮೋಹನ್ ಕುಮಾರ್ ಮತ್ತು ಜನಪ್ರಿಯ ವೈದ್ಯರಾದ ಡಾ. ಪ್ರಕಾಶ್ ರಾವ್ ನೀಡಿದ್ದರು.
ವೈದ್ಯಕೀಯ ತಿಳಿವಳಿಕೆಯ ಸಮಾಜೀಕರಣದಲ್ಲಿ ವಿಶಿಷ್ಟ ಆಸಕ್ತಿ ಹಾಗೂ ಪ್ರೀತಿಯನ್ನು ಹೊಂದಿದ್ದ ಡಾ. ಸುಬ್ಬರಾವ್ ಅವರ ಸ್ಮರಣೆಗೆ ವಿಜ್ಞಾನದ ಸಾರ್ವಜನಿಕ ತಿಳಿವಳಿಕೆಯ ಹಿತದಲ್ಲಿ ತೊಡಗಿಕೊಂಡಿರುವ CPUS ನೀಡುತ್ತಿರುವ ಪುಟ್ಟ ಕೊಡುಗೆ ಇದು.
ನಮಸ್ಕಾರ.
ಡಾ. ಟಿ.ಎಸ್. ಚನ್ನೇಶ್.