You are currently viewing ಜಾಗತಿಕವಾಗಿ “ಮಿರಕಲ್‌” ಮೊರಿಂಗಾ ಎಂದೇ ಹೆಸರಾದ ನಮ್ಮ ಹಿತ್ತಲಿನ   “ನುಗ್ಗೆ ಮರ”   Moringa  olifera

ಜಾಗತಿಕವಾಗಿ “ಮಿರಕಲ್‌” ಮೊರಿಂಗಾ ಎಂದೇ ಹೆಸರಾದ ನಮ್ಮ ಹಿತ್ತಲಿನ “ನುಗ್ಗೆ ಮರ” Moringa olifera

ನಮ್ಮ ಹಿತ್ತಲಿನ ಮರವೊಂದು ಜಾಗತಿಕವಾಗಿ “ಪವಾಡ” ಮಾಡುತ್ತಿರುವ ಮರ ಎಂದೇ ಹೆಸರಾಗಿದೆ. ಹೌದು ಮಿರಕಲ್‌ ಟ್ರೀ (Miracle Tree) ಅಂತಾ ನೀವೇನಾದರೂ ಗೂಗಲಿನ ಸರ್ಚ್‌ ಇಂಜೀನಿನಲ್ಲಿ ಹುಡುಕಿದರೆ ಸಾವಿರಾರು ವೆಬ್‌ ಪುಟಗಳಿರುವುದು ತಿಳಿಯುತ್ತದೆ. ಅದರಲ್ಲಿ ನಿಮ್ಮೆದುರಿಗೆ ನುಗ್ಗೆಯ ದರ್ಶನವೂ ಆಗುತ್ತದೆ! ನುಗ್ಗೆಯನ್ನು ಮೊರಿಂಗಾ ಒಲಿಫೆರಾ (Moringa olifera) ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಮೊರಿಂಗಾ ಪದವು ತಮಿಳಿನ ಮುರುಂಗಾಯ್‌ ಅಥವಾ ಮುರುಂಗೈ (Murungai) ಅಂದರೆ ತಿರುಚಿದ ಅಥವಾ ತಿರುವಲ್ಪಟ್ಟ ಕಾಯಿ(Twisted pod) ಎಂಬ ಅರ್ಥವುಳ್ಳ ಪದದಿಂದ ಹುಟ್ಟಿದೆ. ಇದೇ ಪದವನ್ನೇ ನುಗ್ಗೆ ಕಾಯಿಯ ಸಂಕುಲ ಅಥವಾ ಕುಲದ (Genus) ಹೆಸರನ್ನು ಇಡಲಾಗಿದೆ. ಈ ಮೊರಿಂಗಾ ಪದವೇ ಇಂಗ್ಲೀಶಿನ ನುಗ್ಗೆಯಾಗಿದೆ. ಡ್ರಮ್‌ ಸ್ಟಿಕ್‌ (Drumstick) ಎಂದೂ ಕರೆಯುವ ನುಗ್ಗೆಯನ್ನು 19ನೆಯ ಶತಮಾನದ ಆದಿಯಲ್ಲೇ “ಮೊರಿಂಗಾ” ಎಂದು ಕರೆದವರು ಚಾರ್ಲ್ಸ್‌ ಡಾರ್ವಿನ್‌ ಅವರಿಗೂ ಮೊದಲಿನ ಜೀವಿವಿಕಾಸದ ಚಿಂತನೆಗಳನ್ನು ಕೊಟ್ಟ ಖ್ಯಾತ ಫ್ರೆಂಚ್‌ ಜೀವಿವಿಜ್ಞಾನಿ ಲೆಮಾರ್ಕ್‌ (Jean-Baptiste Lamarck). ಒಲಿಫೆರಾ ಎಂಬ ಪದದ ಅರ್ಥ ಎಣ್ಣೆಅಥವಾ ತೈಲವನ್ನು ಉಳ್ಳದ್ದು ಎನ್ನುವುದಾಗಿದೆ.ನಮ್ಮ ಹಿತ್ತಲಿನ ನುಗ್ಗೆಯು “ಮಿರಕಲ್‌ ಮೊರಿಂಗಾ” ಎಂದೇ ಖ್ಯಾತವಾದದ್ದು ದೊಡ್ಡ ಕಥೆ. ಅದೆಲ್ಲದರ ಜೊತೆಗೆ ನಮ್ಮ ಹಿತ್ತಲಿನ ನಂಟಿನ ಮರವನ್ನು ಇಂದಿನ ಸಸ್ಯಯಾನದಲ್ಲಿ ನೋಡೋಣ.

ನುಗ್ಗೆ ಮರ –ಮೊರಿಂಗಾ ಒಲಿಫೆರಾ (Moringa olifera) – ಮೊರಿಂಗೇಸಿಯೆ (Moringaceae) ಸಸ್ಯ ಕುಟುಂಬಕ್ಕೆ ಸೇರಿದ್ದು, ದಕ್ಷಿಣ ಏಶಿಯಾದ ತವರಿನ ಮರವೆಂಬ ಖ್ಯಾತಿ ಇದ್ದರೂ, ಅದು ಭಾರತದ್ದೇ ಎಂಬ ನಂಬಿಕೆಗಳು ಹೆಚ್ಚಾಗಿವೆ. ನಮ್ಮ ದೇಶ ಅಥವಾ ದಕ್ಷಿಣ ಏಶಿಯಾದ ಉಷ್ಣಪ್ರದೇಶವನ್ನು ತವರಾಗಿ ಹೊಂದಿದ್ದರೂ, ಆಫ್ರಿಕಾದಲ್ಲಿ ಇದರ ಸಂಬಂಧಿಗಳು ಇವೆ. ಅದರಲ್ಲಿ ಕೆಲವು ಇದರಂತೆಯೇ ಇದ್ದು ಸ್ವಲ್ಪ ದೈತ್ಯ ಮರಗಳು. ಆದರೂ ಅಲ್ಲಿಯೂ ನಮ್ಮ ಈ ನುಗ್ಗೆಯು ಕಾಲಿಟ್ಟು, ನೆಲೆಯೂರಿ “ಪವಾಡ” ಮಾಡಿದ ಕಥೆಯೂ ಇಂದಿನ ನುಗ್ಗೆಯ ವಿವರಗಳ ಭಾಗವಾಗಿದೆ. ಪವಾಡದ ಕಥನಕ್ಕೆ ದೂರದ ಅಮೆರಿಕಾದ ದ್ವೀಪಗಳ ಖ್ಯಾತಿಯ ನೆಲದ ಪ್ರಯೋಗಗಳೂ ಸೇರಿಕೊಂಡು ಖಂಡಾಂತರವಾದ ಸಂಗತಿಗಳು ಕೂಡ ಇಲ್ಲಿವೆ. ಭಾರತ ಉಪಖಂಡದ ದೇಶಗಳನ್ನು ದಾಟಿ, ಆಫ್ರಿಕಾದಲ್ಲಿ ನೆಲವನ್ನು ಕಂಡು, ದಕ್ಷಿಣ ಅಮೆರಿಕಾದ ಮೂಲಕ ಕ್ಯೂಬಾ ಸೇರಿ, ಅಲ್ಲಿನ ನೆಲವನ್ನು ಬಹುಕಾಲ ಆಳಿದ “ಫಿಡೆಲ್‌ ಕ್ಯಾಸ್ಟ್ರೊ”ನ ಹೃದಯವನ್ನೂ ಗೆದ್ದ ಮರ ಎಂದರೆ ನುಗ್ಗೆಯ ಕಥೆಯ ವಿಸ್ತಾರ ಅರ್ಥವಾಗಬಹುದು. ಇವೆಲ್ಲಕ್ಕೂ ಮೂಲ ಕಾರಣ ಈ ಸಸ್ಯವು, ತನ್ನ “ಎಲೆಗಳು, ಹೂವು, ಕಾಯಿ, ಎಳೆಯ ರೆಂಬೆ-ಕೊಂಬೆಗಳಲ್ಲಿ ತುಂಬಿಕೊಂಡ ಆರೋಗ್ಯ ನಿರ್ವಹಣೆಯ ಆಹಾರ ಪದಾರ್ಥಗಳೆಂಬುದು ಬಹು ಮುಖ್ಯವಾದ ಸಂಗತಿ. ಬರೀ ಅಷ್ಟೇ ಅಲ್ಲ, ಹೆಚ್ಚು ನೀರನ್ನೂ ಬೇಡದ ಮರ, ಜೊತೆಗೆ ಕತ್ತರಿಸಿದಷ್ಟು ಬೆಳೆಯುವ ಹವ್ಯಾಸವುಳ್ಳದ್ದು! ಇದನ್ನೇ ವ್ಯವಸ್ಥಿತವಾಗಿ ಬಳಸಿಕೊಂಡು ಆಧುನಿಕತೆಯ ವ್ಯವಹಾರಕ್ಕೂ ಹೊಂದಿಕೊಂಡು, ತನ್ನ ಉತ್ಪನ್ನಗಳಲ್ಲಿ ನಮ್ಮ ಸಾಧಾರಣ ಊಹೆಯನ್ನು ಮೀರಿ ಅಚ್ಚರಿಗೊಳಿಸಿರುವ ಮರ.

ಇಷ್ಟೊತ್ತು ನುಗ್ಗೆಯ ರುಚಿಯನ್ನು ಹೇಳದೆ ಇದ್ದರೆ ಅದರ ಸಂಗತಿಗಳಿಗೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ಮದುವೆ, ಮುಂತಾದ ಸಮಾರಂಭದ ಊಟಗಳಲ್ಲಿ ಸಾರು ಅಥವಾ ಸಾಂಬಾರಿಗೆ ರುಚಿಯನ್ನು ತರಿಸಲೆಂದೇ ನುಗ್ಗೆಕಾಯಿಯನ್ನು ಖಡ್ಡಾಯವಾಗಿ ಬಳಸುತ್ತಾರೆ. ಅದರ ರುಚಿಯಂತೂ ಅಕ್ಷರಗಳಲ್ಲಿ ಹೇಗೆ ಹೇಳುವುದು, ಅದು ನಾಲಿಗೆಗಷ್ಟೇ ತಿಳಿಯುವ ಸಂಗತಿ. ನನ್ನ ವಿದ್ಯಾರ್ಥಿ ಜೀವನದಲ್ಲಿ ಶಿವಮೊಗ್ಗದಲ್ಲಿ ನಾನೊಂದು ಹಾಸ್ಟೆಲಿನಲ್ಲಿದ್ದಾಗ ನುಗ್ಗೆಕಾಯಿಯ ಸಾಂಬಾರು ಮಾಡಿದ ದಿನ ಕಡೆಯಲ್ಲಿ ಹೋದವರಿಗೆ ಸಾಂಬಾರು ಸಿಗದೇ ಹೋಗಿತ್ತು. ಅದರ ರುಚಿಯ “ಪವಾಡ” ಇನ್ನು ಮುಂದೆ ತಡವಾಗಿ ಊಟಕ್ಕೆ ಹೋಗಬಾರದು ಎಂಬ ಪಾಠವನ್ನು ಕಲಿಸಿತ್ತು. ತೀರಾ ಬಲಿಯದ ಆದರೆ ಎಳೆಯವೂ ಅಲ್ಲದ ಕಾಯಿಯಲ್ಲಿ ಒಂದು ಬಗೆಯ ವಿಶೇಷ ಪರಿಮಳವಿದೆ. ಅದರ ನೆನಪಾಗಿ ಇಂದು ಪ್ರಬಂಧವನ್ನು ನಿಮ್ಮ ಓದಿಗೆ ತೆರೆಯುವಷ್ಟರಲ್ಲಿ ನುಗ್ಗೆಕಾಯಿಯ ರುಚಿಯನ್ನು ನಾನಂತೂ ಸವಿದಿದ್ದೇನೆ. ನಿಮ್ಮಲ್ಲಿ ಅನೇಕರಿಗೆ ಹಾಗೇಯೆ ಆಗಿದ್ದಿರಬಹುದು.

ನುಗ್ಗೆಯ ಮರವನ್ನು ಬೀಜಗಳನ್ನು ಬಳಸಿ ಸಸಿಮಾಡಿಕೊಂಡು ನಾಟಿ ಮಾಡಿ ಬೆಳೆಸುವುದು ಸುಲಭ ವಿಧಾನ. ತೀರಾ ಕಡಿಮೆ ಮಳೆ (250 ಮಿ.ಮೀ) ಬೀಳುವ ಪ್ರದೇಶದಿಂದ ಮೊದಲಾಗಿ ಹೆಚ್ಚು ಮಳೆಯ (3000 ಮಿ.ಮೀ) ಪ್ರದೇಶದಲ್ಲೂ ಸೊಗಸಾಗಿ ಬೆಳೆಯುತ್ತದೆ. ಆದರೆ ಬುಡದಲ್ಲಿ ನೀರು ನಿಲ್ಲದೆ ಬಸಿದು ಹೋಗುವಂತಹಾ ಮಣ್ಣಿನ ನೆಲವಾಗಿರಬೇಕು. ಅಲ್ಲದೆ, ಕಡಿಮೆ ರಸಸಾರ (pH) ಅಂದರೆ 5ರಿಂದ, ಹೆಚ್ಚು ರಸಸಾರ ಅಂದರೆ 9 (pH) ಇರುವ ಮಣ್ಣಿನಲ್ಲೂ ಹೊಂದಿಕೊಳ್ಳಬಲ್ಲದು. ಸರಿ ಸುಮಾರು 20 ರಿಂದ 40 ಅಡಿಗಳಷ್ಟು ಎತ್ತರದ ಮರಗಳು ಸಾಮಾನ್ಯವಾದವು. ಆದರೆ ಹೆಚ್ಚು ಸಂಖ್ಯೆಯ ಮರಗಳನ್ನು ಜಮೀನಲ್ಲಿ ಬೆಳೆಸುವವರು ಆಗಾಗ್ಗೆ ಮರಗಳ ರೆಂಬೆ – ಕೊಂಬೆಗಳನ್ನು ಕಡಿದು ಎತ್ತರಕ್ಕೆ ಹೋಗದಂತೆ ಮಾಡಿ, ಕಾಯಿಗಳನ್ನು ಕೀಳುವುದನ್ನು ಸುಲಭವಾಗಿಸಿಕೊಳ್ಳುತ್ತಾರೆ. ಇದನ್ನೇ ಅತ್ಯಂತ ಜಾಣತನದಿಂದ ವ್ಯಾವಹಾರಿಕವಾಗಿ ಬೆಳೆಸಿದ ಆಫ್ರಿಕಾದ ಕಥನವೊಂದನ್ನು ಮುಂದೆ ನೋಡೋಣ. ಮಾಸಲು ಬಿಳಿಯ ಮುಖ್ಯ ಕಾಂಡದ ಮೇಲೆ ಹಸಿರು ಮಿಶ್ರಿತ ಬಿಳಿಯ ರೆಂಬೆ-ಕೊಂಬೆಗಳಲ್ಲಿ ಬಿಳಿ ಮಿಶ್ರ ಹಸಿರಿನ ಎಲೆಗಳ ಮರ ನುಗ್ಗೆ. ಎಲೆಗಳು ದಟ್ಟವಾಗಿ ಸೊಂಪಾಗಿ ಬೆಳೆದರೂ, ತೀರಾ ನೆರಳಾಗುವ ಚಾವಣೆಯನ್ನೇನೂ ಕೊಡುವುದಿಲ್ಲ.

ಹಸಿರೆಲೆಗಳ ಮಧ್ಯದ ಹಳದಿ ಮಿಶ್ರಿತ ಬಿಳಿಯ ಹೂವುಗಳು ಆಕರ್ಷಕವಾಗಿದ್ದು ಪರಿಮಳಯುಕ್ತವಾಗಿರುತ್ತವೆ. ಹೂವುಗಳಲ್ಲಿ ಗಂಡು-ಹೆಣ್ಣುಗಳೆರಡರ ಭಾಗಗಳೂ ಇದ್ದು ಸಾಕಷ್ಟು ಜೇನು-ದುಂಬಿಗಳನ್ನು ಆಕರ್ಷಿಸುತ್ತವೆ. ಸಹಜವಾಗಿ ಏಪ್ರಿಲ್‌ ತಿಂಗಳಿಂದ ಜೂನ್‌ ವರೆಗೆ ಹೂವಾಡುವ ನುಗ್ಗೆಯು ಅದೇ ಸಮಯದಲ್ಲಿ ನೀಳವಾಗಿ ಇಳಿಬಿದ್ದಂತೆ ಕಾಣುವ ಕಾಯಿಗಳನ್ನು ತುಂಬಿಕೊಳ್ಳುತ್ತದೆ. ತಂಪಾದ ವಾತಾವರಣದಲ್ಲಿ ವರ್ಷಕ್ಕೆ ಎರಡು ಬಾರಿ ಹೂವುಗಳನ್ನೂ ಬಿಡುವ ಮರಗಳಿವೆ. ಇದನ್ನೇ ವರ್ಷವಿಡೀ ಹೂವಾಗುವಂತೆಯೂ ಬೆಳೆಯುವ ಸಾಧ್ಯತೆಗಳಲ್ಲಿ ಕಾಣಬಹುದು. ಹಾಗಾಗಿ ವರ್ಷವಿಡೀ ಕಾಯಿಗಳು ಸಿಗಬಲ್ಲವು. ಹೂವುಗಳಲ್ಲಿ ಐದು ವಿವಿಧ ಅಳತೆಯ ದಳಗಳಿರುತ್ತವೆ. ಪ್ರತೀ ಹೂವೂ ಒಂದರಿಂದ ಎರಡು ಸೆಂ.ಮೀ ಇದ್ದು 10 ರಿಂದ 25 ಸೆಂ.ಮೀ ಉದ್ದದ ಗೊಂಚಲುಗಳಲ್ಲಿ ಹೂವುಗಳು ತುಂಬಿಕೊಂಡಿರುತ್ತವೆ. ಇಳಿಬಿದ್ದಂತೆ ಕಾಣುವ ಹೂಗೊಂಚಲುಗಳು, ಸಣ್ಣ ರೋಮವುಳ್ಳ ರೆಂಬೆಗಳಲ್ಲಿ ಬಿಟ್ಟು ಅರಳಿರುತ್ತವೆ. ಇವುಗಳು ಪರಾಗಸ್ಪರ್ಶಗೊಂಡು ತಿರುಚಿದಂತಹಾ ಮೂರು ಮೇಲ್ಮಯ್ಯ ಕಾಯಿಗಳನ್ನು ಬಿಡುತ್ತವೆ. 10 ಸೆಂ. ಮೀನಿಂದ 40 ಸೆಂ.ಮೀವರೆಗೂ ಉದ್ದವಾದ ಕಾಯಿಗಳು ಸಹಜವಾದವು. ಕಾಯಿಗಳೊಳಗಿನ ಬೀಜಗಳು ರೆಕ್ಕೆಗಳನ್ನು ಕಟ್ಟಿಕೊಂಡಂತಿದ್ದು, ಗಾಳಿಯಲ್ಲಿ ಅಥವಾ ನೀರಿನಲ್ಲಿ ಪ್ರಸಾರವಾಗುವಂತೆ ಕಾಣುತ್ತವೆ.

ಈಗ, ಜಗತ್ತಿಗೆ “ಮಿರಕಲ್‌ ಮರ” ಎನ್ನಿಸಲು ಭಾರತದಿಂದ ಖಂಡಾಂತರಗೊಂಡು, ಕ್ಯೂಬಾ ತಲುಪಿದ್ದಲ್ಲದೆ, ಆಫ್ರಿಕಾದಲ್ಲೂ ಬೆಳೆಸಲು ಕಾರಣವಾದ ಆಹಾರಾಂಶದ ಗುಣಗಳನ್ನು ನೋಡೋಣ. ನುಗ್ಗೆಯ ಎಲೆಗಳು, ಹೂವುಗಳು, ಕಾಯಿ ಎಲ್ಲವೂ ಸಾಕಷ್ಟು ಆಹಾರಾಂಶಗಳನ್ನು ತುಂಬಿಕೊಂಡಿವೆ.

ಎಲೆಗಳು: ಎಲೆಗಳಲ್ಲಿ ಸಾಕಷ್ಟು ಪ್ರೊಟೀನು, ವಿಟಮಿನ್ನುಗಳು ಮತ್ತು ಖನಿಜಾಂಶಗಳನ್ನು ತುಂಬಿಕೊಂಡಿದೆ. ತಾಜಾ ಎಲೆಗಳಲ್ಲಿ ಪ್ರತಿಶತ 9.4ರವರೆಗೂ ಪ್ರೊಟೀನು, 8ರಷ್ಟು ಕಾರ್ಬೊಹೈಡ್ರೇಟು, 1- 1.5 ರಷ್ಟು ಕೊಬ್ಬು ಇರುತ್ತದೆ. ಇದರ ಜೊತೆಗೆ 2% ನಾರಿನಂಶವೂ ಸೇರಿರುತ್ತದೆ. ನುಗ್ಗೆಯ ಸೊಪ್ಪು ವಿಟಮಿನ್‌ “ಎ” ಗೆ ಹೆಸರುವಾಸಿ. ಜೊತೆ “ಬಿ”ವಿಟಮಿನ್‌ ಗಳಾದ ಥಯಾಮಿನ್‌ (B1), ರೈಬೊಫ್ಲೇವಿನ್‌(B2), ನಿಯಾಸಿನ್‌ (B3), ಪೆಂಟಾಥೆನಿಕ್‌ ಆಮ್ಲ (B5), ವಿಟಮಿನ್‌ (B6) ಅಲ್ಲದೆ “ಸಿ” ವಿಟಮಿನ್‌ ಕೂಡ ಇರುತ್ತದೆ. ಇದರ ಜೊತೆಗೆ ಖನಿಜಾಂಶಗಳೂ ಹೇರಳವಾಗಿರುತ್ತವೆ. ಕ್ಯಾಲ್ಸಿಯಂ, ಕಬ್ಬಿಣ ಪೊಟ್ಯಾಸಿಯಂಗಳೂ ಸಮೃದ್ಧವಾಗಿವೆ. ಇದನ್ನು ಬಳಸಿಯೇ ಹಸಿರು ಎಲೆಗಳ ಒಣಗಿಸಿ ಪುಡಿಮಾಡಿ ಕ್ಯಾಪ್ಸೂಲ್‌ ಗಳಲ್ಲಿ ಗುಳಿಗೆಗಳಲ್ಲಿ, ಮಾರಾಟ ಮಾಡುವ ಸಂಸ್ಥೆಗಳು ಹುಟ್ಟಿಕೊಂಡಿವೆ. ನುಗ್ಗೆಯ ಆಹಾರಾಂಶಗಳ ಸಮೃದ್ಧತೆಯಲ್ಲಿ ಎಲೆಗಳದ್ದೇ ಶ್ರೀಮಂತಿಕೆ, ಏಕೆಂದರೆ ಕಡಿದಷ್ಟು ಬೆಳೆಯುವ ಸಸ್ಯವಾದ್ದರಿಂದ ಸಾಕಷ್ಟು ಹಸಿರೆಲೆಗಳನ್ನು ಕೊಯಿಲು ಮಾಡಬಹುದು. ಸಾಧಾರಣವಾಗಿ ಪ್ರತೀ ಹೆಕ್ಟೇರಿಗೆ 6ರಿಂದ 10 ಟನ್ನುಗಳಷ್ಟು ಕೊಯಿಲನ್ನು ಧಾರಾಳವಾಗಿ ಮಾಡಬಹುದು. ಪ್ರತೀ 60ದಿನಗಳಿಗೆ ಒಂದು ಕೊಯಿಲಿಂತೆ ವರ್ಷಕ್ಕೆ 6-7 ಕೊಯಿಲು ಮಾಡುವ ಉದ್ಯಮಗಳಿವೆ. ಆಫ್ರಿಕಾದಲ್ಲಿ ಇದರ ಉತ್ಪಾದನೆಯ ಉದ್ಯಮವೊಂದು ಒಂದು ಹೆಕ್ಟೇರಿನಲ್ಲಿ ಹತ್ತು ಲಕ್ಷ ಸಸಿಗಳನ್ನು ಬೆಳೆಸಿ, ಪ್ರತೀ ವರ್ಷ 9 ಕೊಯಿಲಿನಂತೆ ನಾಲ್ಕು ವರ್ಷಗಳ ಕಾಲ ಮಾಡಿ ಸರಾಸರಿ ವರ್ಷಕ್ಕೆ 150 ಟನ್ನುಗಳಿಗೂ ಹೆಚ್ಚು ಕೊಯಿಲನ್ನು ಮಾಡಿದೆ. ಸಾಧಾರಣವಾಗಿ ಹತ್ತಿಪ್ಪತ್ತು ಟನ್ನುಗಳನ್ನು ಕಟಾವು ಮಾಡುವಲ್ಲಿ 150 ಟನ್ನುಗಳು ಎಂದರೆ, ಈ ಕಾರಣಕ್ಕೂ “ಮಿರಕಲ್‌ ಮರ” ಎನ್ನಿಸಿರುವುದರಲ್ಲಿ ಅಚ್ಚರಿಯೇನಿಲ್ಲ.

ಕಾಯಿಗಳು: ಸಾಮಾನ್ಯವಾಗಿ ಸಸ್ಯವನ್ನು ನಾಟಿ ಮಾಡಿ ಒಂದು ವರ್ಷಕ್ಕೆ ಮರದಲ್ಲಿ ಕಾಯಿಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚು ಸಾಂದ್ರವುಳ್ಳ ತೋಟ, ಜಮೀನುಗಳಲ್ಲಿ ಬೆಳೆಸಲು, ಕಸಿ ಕಟ್ಟಿದ ಸಸಿಗಳನ್ನು ನಾಟಿ ಮಾಡಿದಲ್ಲಿ 6-8 ತಿಂಗಳಿಗೆ ಫಲವನ್ನು ಪಡೆಯುವುದು ಸಾಧ್ಯವಿದೆ. ಆದರೂ ಬೀಜದಿಂದ ಪಡೆದ ಸಸಿಗಳನ್ನೇ ಹೆಚ್ಚು ನಾಟಿ ಮಾಡುವುದು ರೂಢಿಯಲ್ಲಿದೆ. ಮೊದಲ ವರ್ಷದಲ್ಲಿ ಕಾಯಿಗಳು ನೂರು ಬಿಟ್ಟರೂ ಎರಡನೆಯ ವರ್ಷದಿಂದ 300 ಕಾಯಿಗಳು ಬಿಡಲಾರಂಭಿಸಿ, 500 ನ್ನು ದಾಟಿ ನಾಲ್ಕಾರು ವರ್ಷಗಳಲ್ಲಿ 1000ಕ್ಕೂ ಹೆಚ್ಚು ಕಾಯಿಗಳನ್ನು ಒಂದೇ ಮರದಿಂದ ಪಡೆಯಬಹುದು. ಭಾರತದಲ್ಲಿ ಪ್ರತಿ ಎಕರೆಗೆ 30ರಿಂದ 50 ಟನ್ನುಗಳಷ್ಟು ಕಾಯಿಗಳನ್ನು ಕೊಯಿಲು ಮಾಡಲಾಗುತ್ತದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಇಳುವರಿ ಹೆಚ್ಚು. ಕೆಲವೊಮ್ಮೆ ದಕ್ಷಿಣ ಭಾರತದಲ್ಲಿ ಎರಡು ಕಟಾವುಗಳನ್ನು ಪಡೆಯುವರು.

ಆಹಾರಾಂಶಗಳನ್ನು ನೀಡುವಲ್ಲಿ ಕಾಯಿಗಳಲ್ಲೂ ಕೂಡ ಸಾಕಷ್ಟು ಪ್ರಮುಖವಾದ ಸಂಗತಿಗಳಿವೆ. ಆದರೂ ಎಲೆಗಳಿಗೆ ಹೋಲಿಸಿದರೆ, ಕಾಯಿಗಳಲ್ಲಿ ಪ್ರೊಟೀನ್‌ ಕಡಿಮೆ ಇರುತ್ತದೆ. ಎಲೆಗಳಲ್ಲಿ 9% ಇದ್ದರೆ ಕಾಯಿಗಳಲ್ಲಿ 2% ಮಾತ್ರ ಪ್ರೊಟೀನ್‌ ಸಿಗುತ್ತದೆ. ಆದರೆ ನಾರಿನಾಂಶವು ಎಲೆಗಳಿಗಿಂತಾ ಹೆಚ್ಚು. ಕಾರ್ಬೋಹೈಡ್ರೇಟು ಎಲೆಗಳಂತೆಯೇ ಸುಮಾರು 8.5% ಇರುವುದು. ಎಲೆಗಳಲ್ಲಿರುವ ವಿಟಮಿನ್ನುಗಳು ಕಾಯಿಗಳಲ್ಲಿ ಇದ್ದರೂ ಎಲೆಗಳಿಗಿಂತಾ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಖನಿಜಾಂಶಗಳೂ ಸಹಾ ಎಲೆಗಳಿಗಿಂತಾ ಕಡಿಮೆಯಿದ್ದು ಅದೇ ಖನಿಜಾಂಶಗಳನ್ನೂ ಕಾಯಿಯಿಂದ ಪಡೆಯುವುದು ವಿಶೇಷವೇನಲ್ಲ. ತಾಜಾ ಕಾಯಿಗಳನ್ನಲ್ಲದೆ, ಒಣಗಿಸಿಟ್ಟುಕೊಂಡು ಪುಡಿಯಾಗಿಸಿ ಸಾಂಬಾರು, ಪಲ್ಯ ಮುಂತಾದ ಖಾದ್ಯಗಳಿಗೆ ಪರಿಮಳ ಕೊಡಲು ಬಳಸುವುದೂ ನಮ್ಮಲ್ಲಿಯೇ ರೂಢಿಯಲ್ಲಿದೆ.

ಬೀಜಗಳು ಮತ್ತು ಬೀಜದಿಂದ ಪಡೆಯುವ ತೈಲ: ಕೆಲವೊಮ್ಮೆ ಬಲಿತ ಕಾಯಿಗಳಿಂದ ಬೀಜಗಳನ್ನು ಪಡೆದು ಯಾವುದೇ ಕಾಳುಗಳಂತೆ ಬಳಸಬಹುದು. ಹುರಿದು ಕೂಡ ತಿನ್ನಬಹುದು. ವಿಟಮಿನ್‌ “ಸಿ”ಯು ಬೀಜಗಳಲ್ಲಿ ಹೆಚ್ಚು ಪ್ರಮಾಣದಲ್ಲಿದ್ದು, “ಬಿ” ವಿಟಮಿನ್ನು ಸಾಧಾರಣವಾಗಿ ಇರುವುದು. ಸಾಕಷ್ಟು ಬಲಿತ ಬೀಜಗಳಿಂದ ಎಣ್ಣೆಯನ್ನು ಪಡೆಯಬಹುದು. ಬೀಜಗಳು 35-40%ರಷ್ಟು ತೈಲವನ್ನು ಹೊಂದಿರುತ್ತವೆ. ಈ ನುಗ್ಗೆಯ ರಿಫೈನ್ಡ್‌ ಎಣ್ಣೆಯು ಬಣ್ಣರಹಿತವಾಗಿದ್ದು, ವಾಸನೆಯಿಂದಲೂ ಮುಕ್ತವಾಗಿರುತ್ತದೆ. ಇದರ ವಿಶೇಷವೆಂದರೆ ಇತರೇ ಸಸ್ಯ ಜನ್ಯ ಎಣ್ಣೆಗಳಂತೆ ಇದು ಕಮಟಾಗುವುದಿಲ್ಲ. ಈ ಎಣ್ಣೆಯನ್ನು ಇತರೇ ಯಾವುದೆ ಎಣ್ಣೆಯಂತೆಯೇ ಬಳಸಬಹುದು. ಎಣ್ಣೆಯನ್ನು ತೆಗೆದ ಉಳಿದ ಹಿಂಡಿಯಿಂದ ನೀರನ್ನು ಶುದ್ಧೀಕರಿಸಲು ಬಳಸಬಹುದು. ಬೀಜವು ನೀರಿನಲ್ಲಿ ಕದಡಿದ ಕಣಗಳನ್ನು ಸಾಂದ್ರೀಕರಿಸಿ ತಳಕ್ಕಿಳಿಸಿ ಬೇರ್ಪಪಡಿಸಲು ಸಹಾಯ ಮಾಡುವುದು. ಹಾಗಾಗಿ ಬೀಜವನ್ನು ಕೆಲವು ಸಮುದಾಯಗಳಲ್ಲಿ ನೀರಿನ ಶುದ್ಧೀಕರಣಕ್ಕೆ ಬಳಸುತ್ತಾರೆ.

ಬೇರುಗಳು: ನುಗ್ಗೆಯ ಬೇರುಗಳಲ್ಲಿ ಹೆಚ್ಚಿನ ಸಾಂದ್ರವಾದ ರಾಸಾಯನಿಕಗಳಿದ್ದು, ಪರಿಮಳಯುಕ್ತವಾಗಿರುತ್ತವೆ. ಹಾಗಾಗಿ ಅವುಗಳನ್ನು ಸಾಂಬಾರು ಪದಾರ್ಥಗಳಲ್ಲಿ ಬಳಸಲಾಗುತ್ತದೆ.

ಆಹಾರಆರೋಗ್ಯದ ಹಿತದಲ್ಲಿ ನುಗ್ಗೆಯ ಕೊಡುಗೆ:

ನುಗ್ಗೆಯ ಸೊಪ್ಪು, ಕಾಯಿಗಳನ್ನು ಬಳಸುವುದು, ನಮಗೆಲ್ಲಾ ಹೊಸತೇನಲ್ಲ. ಆದರೆ ಇದನ್ನು ಕಂಡುಕೊಂಡು ತೀವ್ರ ಬಳಕೆಯನ್ನು ಪ್ರಚಲಿತಗೊಳಿಸಿ, ಉದ್ಯಮವನ್ನಾಗಿ ರೂಪಸಿದ್ದು ಪಶ್ಚಿಮದ ದೇಶಗಳು.. ಇರಲಿ ಅದಕ್ಕಿಂತ ಮೊದಲು ಆರೋಗ್ಯದ ಹಿತಗಳನ್ನು ನೋಡೋಣ. ಈ ಹಿಂದೆ ಎಲೆಗಳು ಮತ್ತು ಕಾಯಿಗಳಿಂದ ದೊರಕುವ ಆಹಾರಾಂಶಗಳನ್ನು ತಿಳಿದೆವಲ್ಲವೇ? ಅದರಿಂದಲೇ ಹೆಚ್ಚಿನ ಲಾಭಗಳನ್ನು ಆರೋಗ್ಯದಲ್ಲಿ ನೀಡುತ್ತದೆ. ಬಹುಪಾಲು ಜನಪದೀಯ ನಂಬಿಕೆಗಳಲ್ಲಿ ಬಳಕೆಗಳಾಗಿರುವ ನುಗ್ಗೆಯ ಲಾಭಗಳನ್ನು ಇದೀಗ ಒರೆಹಚ್ಚಿ ನೋಡಲಾಗುತ್ತಿದೆ. ಅಂತಹಾ ಪ್ರಯತ್ನಗಳಲ್ಲಿ ಕ್ಯೂಬಾ ದೇಶದ ಪ್ರಯೋಗಗಳು ಮಹತ್ತರವಾದವು.

ನುಗ್ಗೆಯ ಬಳಕೆಯು ಮಧುಮೇಹಿಗಳಿಗೆ ವರದಾನ. ಇದರಲ್ಲಿರುವ ನಾರಿನಾಂಶ ಮತ್ತು ಕಡಿಮೆ ಶಕ್ತಿಯನ್ನು ಒದಗಿಸಿ, ಹೆಚ್ಚು ಆಹಾರಾಂಶಗಳನ್ನು ದೊರಕಿಸುವ ಗುಣವು ರಕ್ತದಲ್ಲಿನ ಸಕ್ಕರೆಯನ್ನು ಮಿತವಾಗಿಡಲು ಸಹಾಯ ಮಾಡುತ್ತದೆ. ನುಗ್ಗೆಯಲ್ಲಿ ವಿಟಮಿನ್ನುಗಳು ಪ್ರಮುಖವಾಗಿ “ಎ” ಮತ್ತು “ಬಿ” ಆರೋಗ್ಯ ವೃದ್ಧಿಗೆ ಮತ್ತು ರೋಗ ಪ್ರತಿರೋಧವನ್ನು ಹೆಚ್ಚಿಸಲು ಸಹಾಯಮಾಡುತ್ತವೆ. ಹೃದಯದ ಆರೋಗ್ಯಕ್ಕೂ ನುಗ್ಗೆಯ ಬಳಕೆಯು ಫಲಪ್ರದವಾಗಿದೆ. ಇದರಲ್ಲಿರುವ ಕಬ್ಬಿಣ ಮತ್ತು ಕ್ಯಾಲ್ಸಿಯಂ ಖನಿಜಾಂಶಗಳು ಒಟ್ಟಾರೆಯ ಆರೋಗ್ಯಕ್ಕೂ ಹಾಗೂ ರಕ್ತ ಹಾಗೂ ಎಲುಬಿನ ರಕ್ಷಣೆಗೂ ಸಹಾಯಮಾಡುತ್ತವೆ. ಈ ಕಾರಣದಿಂದ ರಕ್ತ ಪರಿಚಲನೆ ಸಹಾಯದಿಂದ ಹೃದಯಕ್ಕೆ ಗಟ್ಟಿಯಾದ ಎಲುಬುಗಳ ಆರೋಗ್ಯದಿಂದ ದೈಹಿಕ ಶಕ್ತಿಗೆ ನುಗ್ಗೆಯು ವರದಾನವಾಗಿದೆ.

ಪಾರಂಪರಿಕ ವೈದ್ಯ ಪದ್ದತಿಯು ಅನೇಕ ಲಾಭಗಳನ್ನು ಗುರುತಿಸಿದ್ದರೂ, ಆಧುನಿಕ ಸಂಶೋಧನೆಗಳಿಂದ ನಮ್ಮ ರಕ್ತದ ಲಿಪಿಡ್‌ ಪ್ರೊಫೈಲ್‌ ಅಂದರೆ ಕೊಬ್ಬಿನ ಬಗೆಗಳ ಬಗ್ಗೆ ಮತ್ತು ಇನ್ಸುಲಿನ್‌ ಉತ್ಪಾದನೆಯ ಮೇಲಿನ ನೇರ ಪ್ರಭಾವವನ್ನು ಅರಿಯಲಾಗಿದೆ. ಎಲೆಗಳಲ್ಲಿರುವ ಪಾಲಿಫೀನಾಲ್‌ಗಳು ಮಾನವ ದೇಹದ ಮೇಲೆ ಬೀರುವ ವಿವಿಧ ಪ್ರಭಾವಗಳನ್ನೂ ವಿವಿಧ ಅಧ್ಯಯನಗಳು ಸಾಬೀತು ಪಡಿಸಿವೆ. ನೇರವಾದ ಚಿಕಿತ್ಸಾ ಆಧ್ಯಯನಗಳನ್ನು ನಡೆಸದಿದ್ದರೂ ವಿವಿಧ ಬಗೆಯ ದಾಖಲೆಗಳು ಬಳಕೆಯ ಲಾಭಗಳನ್ನು ಸಾಕ್ಷೀಕರಿಸುತ್ತವೆ. ಅದೆಲ್ಲಕ್ಕಿಂತಲೂ ಈ ಮುಂದಿನ ಎರಡು ಪ್ರಮುಖ ದಾಖಲೆಗಳು ನುಗ್ಗೆಯ ಪವಾಡವನ್ನು ಜಾಗತಿಕವಾಗಿರುಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ.

ಕ್ಯೂಬಾದ ಫಿಡೆಲ್‌ ಕ್ಯಾಸ್ಟ್ರೊ ಮತ್ತು ನುಗ್ಗೆಯ ಮರ

ಕ್ಯೂಬಾದ ಕ್ರಾಂತಿಯ ನಂತರದ ಬೆಳವಣಿಗೆಯಲ್ಲಿ ಫಿಡೆಲ್‌ ಕ್ಯಾಸ್ಟ್ರೊಗೆ ಕ್ಯೂಬಾದ ಆರೋಗ್ಯದ ಹಿತದಲ್ಲಿ ನಂಬಿಕೆಯನ್ನು ಕೊಟ್ಟ ವಿಶಿಷ್ಟ ಸಸ್ಯ ನುಗ್ಗೆ! ಕ್ಯಾಸ್ಟ್ರೊ ಅವರ ಸಹವರ್ತಿ ಅರ್ಜೇಂಟೈನಾದ “ಚೆ-ಗುವಾರ” ಬ್ರೆಜಿಲ್‌ ನಿಂದ ನುಗ್ಗೆಯನ್ನು ಕ್ಯೂಬಾಗೆ 1960 ರಲ್ಲಿಯೇ ಪರಿಚಯಿಸಿದನೆಂದು ನಂಬಲಾಗಿದ್ದರೂ ಆಗ ಅಷ್ಟು ಹೆಚ್ಚು ಪ್ರಚಾರವಾಗಿರಲಿಲ್ಲ. ಅದರ ನಂತರದ ಬೆಳವಣಿಗೆಯಲ್ಲಿ ಮುಂದೊಮ್ಮೆ ಫಿಡೆಲ್‌ ಕ್ಯಾಸ್ಟ್ರೊ ತೀವ್ರವಾದ ಹೊಟ್ಟೆಯ ನೋವಿನಿಂದ ನರಳುತ್ತಿದ್ದು, ಕ್ಯಾನ್ಸರ್‌ ಇರಬಹುದೆಂಬ ಅನುಮಾನಗಳನ್ನೂ ಮೀರಿ ನುಗ್ಗೆಯ ಫಲಿತಗಳನ್ನು ಬಳಸಿ ಗುಣಮುಖನಾಗಿದ್ದರಿಂದ, ಫಿಡೆಲ್‌ ಕ್ಯಾಸ್ಟ್ರೊ ನುಗ್ಗೆಯನ್ನು “ಭಾರತದ ಮಿರಕಲ್‌ ಟ್ರೀ” ಎಂದೇ ಕರೆದನು. ಅದಕ್ಕಾಗಿ ಕೇರಳದಿಂದ ಪಡೆದಿದ್ದ ನುಗ್ಗೆಯ ಬೀಜಗಳನ್ನು ತನ್ನ ಮನೆಯಂಗಳದಲ್ಲಿ ಬೆಳೆಸಿದ್ದನು. ಅದಕ್ಕೆಂದೇ ಡಾ. ಕೆಂಪಾ ಹುಗೊ ಎಂಬ ಜೀವಿರಸಾಯನ ತಜ್ಞರನ್ನು ಭಾರತಕ್ಕೆ ಕಳಿಸಿ ನುಗ್ಗೆಯನ್ನು ಬೆಳೆಸುವ ಬಗೆ ಮುಂತಾದ ವಿವರಗಳನ್ನು ಪಡೆದಿದ್ದನು. ಆಕೆಯ ಆಸಕ್ತಿಯಿಂದಲೇ, ಇನ್ನೂ ಹೊರ ಪ್ರಪಂಚಕ್ಕೆ ತಿಳಿಯಬೇಕಿರುವ ಕ್ಯೂಬಾದ ವಿಶಿಷ್ಠ ವೈದ್ಯಕೀಯ ಪ್ರಯೋಗಗಳಲ್ಲಿ ನುಗ್ಗೆಯನ್ನು ಬಳಸಿರುವ ಬಗ್ಗೆ ನಂಬಲಾಗಿದೆ. ಡಾ. ಕೆಂಪಾ ಪ್ರತಿರೋಧ ಕುರಿತ ಮಹತ್ವದ ಶೋಧಗಳನ್ನು ನಡೆಸಿದವರು, ಜೊತೆಗೆ ನುಗ್ಗೆಯ ವಿವಿಧ ರಾಸಾಯನಿಕಗಳ ಬಗೆಗೂ ಸಂಶೋಧಿಸಿದವರು. (ಇದೀಗ ಕೊರೋನಾ ಜಗತ್ತಿನಾದ್ಯಂತ ಕಾಡುತ್ತಿರುವ ಹಿನ್ನೆಲೆಯಲ್ಲಿ ಕ್ಯೂಬಾದ ವೈದ್ಯಕೀಯ ನೆರವನ್ನು ಪಡೆಯುವ ಹಾಗೂ ಅದನ್ನೂ ಮಾನ್ಯ ಮಾಡುವ ಒತ್ತಾಯವಿರುವುದನ್ನು ನೆನೆದರೆ, ಅಂತಹಾ ವಿಶೇಷ ಸಂಶೋಧನೆ ಮತ್ತಿತರ ಶ್ರದ್ಧೆಗೆ ಕೆಂಪಾ ಅವರ ಕೊಡುಗೆಯಿರುವುದೂ ತಿಳಿಯುತ್ತದೆ. ಇವರೇ ನುಗ್ಗೆಯ ವಿಶೇಷತೆಗಳನ್ನೂ ಸಂಶೋಧಿಸಿದ ವಿವರಗಳೂ ಹೊರ ಜಗತ್ತಿಗೆ ತಿಳಿಯಬೇಕಿದೆ). ಫಿಡೆಲ್‌ ಕ್ಯಾಸ್ಟ್ರೊ ನುಗ್ಗೆಯ ಬಹಳ ದೊಡ್ಡ ಅಭಿಮಾನಿ ಹಾಗೂ ಕ್ಯೂಬಾದಲ್ಲಿನ ಡಾ. ಕೆಂಪಾ ನೇತೃತ್ವದಲ್ಲಿ ಬಯೋಟೆಕ್ನಾಲಜಿ ಸಂಸ್ಥೆಯಲ್ಲಿ ನುಗ್ಗೆಯ ವಿಶಿಷ್ಠ ಪ್ರಯೋಗಗಳಿಗೆ ಕಾರಣನಾದನು. ತನ್ನನ್ನು ಬದುಕಿಸಿ ಆರೋಗ್ಯದಿಂದ ಇರಿಸಿದ್ದೇ ಭಾರತದ ನುಗ್ಗೆ ಎಂದು ಹೊಗಳುತ್ತಿದ್ದನು. ತನ್ನ ಮನೆಯ ಅಂಗಳದಲ್ಲೇ ನುಗ್ಗೆಯನ್ನು ಬೆಳೆದಿದ್ದ ಕ್ಯಾಸ್ಟ್ರೊ ಈ ಮರದ ಬಹಳ ದೊಡ್ಡ ಬೆಂಬಲಿಗರಾಗಿದ್ದರು. ಕ್ಯಾಸ್ಟ್ರೊ ನಿವೃತ್ತಿಯ ನಂತರ ತೊಡಗಿದ್ದ ಹವ್ಯಾಸಗಳಲ್ಲಿ ನುಗ್ಗೆಯ ಬೆಳೆಸುವ ಮತ್ತು ಪ್ರಚಾರ ಪಡಿಸುವ ಕಾರ್ಯವೂ ಬಹು ಮುಖ್ಯವಾದುದು.

ಉಗಾಂಡದ ಸಾಮಾಜಿಕ ವ್ಯಾವಹಾರಿಕ ಸಂಸ್ಥೆಯ ಮಹಿಳೆ ಪಮೇಲಾ ಸರೊತಿಮತ್ತು ನುಗ್ಗೆಯ ಉತ್ಪನ್ನಗಳು

ಪಮೆಲಾ ಸರೊತಿ ಎಂಬಾಕೆ ಉಗಾಂಡದ ಸಾಮಾಜಿಕ ಸಂಸ್ಥೆಯೊಂದರ ಮುಖ್ಯ ಕಾಯನಿರ್ವಾಹಕ ಅಧಿಕಾರಿ. ಉಗಾಂಡದಲ್ಲಿ ಸಾವಿರಾರು ಮಹಿಳೆಯರನ್ನು ಸಂಘಟಿಸಿ ಅವರನ್ನು ನುಗ್ಗೆಯ ಸಾಂದ್ರ ಬೇಸಾಯದಲ್ಲಿ ತೊಡಗಿಸಿ, ಅದನ್ನು ವಿವಿಧ ನುಗ್ಗೆಯ ಉತ್ಪನ್ನವಾಗಿಸಿ ಜಾಗತಿಕವಾದ ಮಾರುಕಟ್ಟೆಯನ್ನು ನಿರ್ವಹಿಸಿತ್ತಿರುವ ಹೆಣ್ಣು ಮಗಳು. ಮೂಲತಃ ಪಮೇಲಾ ಅವರು ಜಾನ್‌ ಎಫ್‌. ಕೆನಡಿಯವರು ಸ್ಥಾಪಿಸಿದ್ದ “ಶಾಂತಿ ಯೋಧರು” – “ಪೀಸ್‌ ಕಾಪ್ಸ್‌ (Peace Corps)” – ಎಂಬ ಸಾಮಾಜಿಕ ಸಂಸ್ಥೆಯ ಸ್ವಯಂ ಸೇವಕಿಯಾಗಿದ್ದಾಕೆ. ಮುಂದೆ “Kuli Kuli Foods” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ CEO-ಮುಖ್ಯ ಕಾರ್ಯ ನಿರ್ವಾಹಕಿಯಾಗಿದ್ದಾರೆ. ಹೆಂಗಸರು ಮತ್ತು ಮಕ್ಕಳ ಆರೋಗ್ಯದ ಹಿತದಲ್ಲಿ ಲಾಭವನ್ನು ಗಳಿಸದ ಸಂಸ್ಥೆಯಂತೆ ನಡೆಸಲಾಗುತ್ತಿರುವ ಇದರಲ್ಲಿ Kuli Kuli Farms ಕೂಡ ಇದೆ. ಇದು ಹೆಣ್ಣು ಮಕ್ಕಳೇ ನುಗ್ಗೆಯನ್ನು ಬೆಳೆದು ಉತ್ಪನ್ನಗಳಾಗಿಸಿ Kuli Kuli Foods ಮೂಲಕ ಮಾರಾಟ ಮಾಡುವ ಅಂತರಾರಾಷ್ಟ್ರೀಯ ವ್ಯವಹಾರದ ಸಂಸ್ಥೆ. ಇದು ಲಕ್ಷಾಂತರ ನುಗ್ಗೆಯ ಮರಗಳನ್ನು ಬೆಳೆಸಿದೆಯಲ್ಲದೆ, ಹೆಣ್ಣು ಮಕ್ಕಳ ಮತ್ತು ಮಕ್ಕಳ ಆರೋಗ್ಯಕ್ಕಾಗಿ ತೊಡಗಿಕೊಂಡಿರುವ ಸಂಸ್ಥೆ. ಪಮೇಲಾ ಸ್ವತಃ ನುಗ್ಗೆಯ ಪಾಕಶಾಸ್ತ್ರ ಪ್ರವೀಣೆ. ವಿವಿಧ ನುಗ್ಗೆಯ ಸೊಪ್ಪಿನ ಖಾದ್ಯಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆಗಳನ್ನೂ ನಡೆಸುತ್ತಾರೆ. ಈ ಮೂಲಕ ನುಗ್ಗೆಯ ಬಳಕೆಯನ್ನೂ ಪ್ರಚಾರ ಮಾಡುತ್ತಾರೆ. ನುಗ್ಗೆಯ ಸೊಪ್ಪು ಇತರೇ ಯಾವುದೇ ಸಸ್ಯ ಜನ್ಯ ಉತ್ಪನ್ನಗಳಿಗಿಂತಾ ಹೆಚ್ಚಿನ ಕ್ಯಾಲ್ಸಿಯಂ, ಕಬ್ಬಿಣ ಪ್ರೊಟೀನು ಮತ್ತು ನಾರಿನಾಂಶವನ್ನು ಕಡಿಮೆಯ ದರದಲ್ಲಿ ಹೆಚ್ಚಾಗಿ ಒದಗಿಸುವ ನಿಸರ್ಗದ ಅಪೂರ್ವ ಕೊಡುಗೆ ಎಂದೇ ಪಮೇಲಾ ವಿವರಿಸುತ್ತಾರೆ. ಎರಡೂವರೆ ನಿಮಿಷಗಳ ಆಕೆಯ ಕುರಿತ ಪುಟ್ಟ ವಿಡಿಯೋವನ್ನು ಈ ಲಿಂಕ್‌ ನಲ್ಲಿ ನೋಡಬಹುದು. https://www.youtube.com/watch?v=pgMH0jjmi4k

ಶ್ರೀಗಂಧ ಬೆಳೆದು, ಅದಕ್ಕೆ ಚಿಪ್‌ ಹಾಕಿಸಿದೆಯೆಂದು ಏನೆಲ್ಲಾ ಹೇಳುತ್ತಾ (ಕೇಳುಗರ ಬಾಯಿಯ ಬೀಗ ಹಾಕಿಸಿ) ಕೋಟ್ಯಾಂತರ ರುಪಾಯಿಗಳ ಲಾಭಗಳ ಬಾಯಿ ಪರಾಕುಗಳ ಸೋಜಿಗ ಹಿಡಿಸಿರುವ ಮಹಿಳೆಯ ಮಾತು ಕೇಳಿರುವವರಿಗೆ ಈ ಆಫ್ರಿಕಾದ ಉಗಾಂಡದ ಹೆಣ್ಣುಮಗಳು ಪಮೇಲಾ ಸರೊತಿಯದು ನಿಜಕ್ಕೂ ಒಂದು ಪವಾಡ ಎನ್ನಿಸಿದರೆ ಅಚ್ಚರಿ ಏನಿಲ್ಲ. ಹೇಳಿ-ಕೇಳಿ ಹಿತ್ತಿಲ ಗಿಡ ನುಗ್ಗೆಯನ್ನು ಬಳಸಿ ಅದರಿಂದ ಸಾವಿರಾರು ಕೈಗಳಿಗೆ ಕೆಲಸ ಕೊಡಿಸುವ ಪಮೇಲಾಳ ಕೆಲಸವೇ ಪವಾಡವೇ ಸರಿ!

ಚಲನಚಿತ್ರಗಳಲ್ಲಿ ನುಗ್ಗೆಕಾಯಿಗಳು: ಇಷ್ಟೆಲ್ಲಾ ಅಂತರರಾಷ್ಟ್ರೀಯ ಮಟ್ಟದ ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಪ್ರಭಾವಿಸಿರುವ ನುಗ್ಗೆಯ ಬಗ್ಗೆ ನಮ್ಮ ಚಿತ್ರರಂಗ ಮಾತ್ರ ಕೆಟ್ಟದಾಗಿ ನಡೆಸಿಕೊಂಡಿದೆ. ನುಗ್ಗೆಕಾಯಿಗೂ ಈ ಸಿನಿಮಾ ಮಂದಿಗೂ ಅದೇನೋ ವಿಚಿತ್ರವಾದ ನಂಟು. ಅದರಲ್ಲೂ ಖ್ಯಾತ ತಮಿಳು ನಾಯಕರಿಗೂ, ಹೆಸರಾಂತ ನಿರ್ದೇಶಕರಿಗೂ ನುಗ್ಗೆಕಾಯನ್ನು ಒಂದು ರೀತಿ ಕಾಮಪ್ರಚೋದಕ ವಸ್ತು ಎಂಬಂತೆ ಹಲವಾರು ಚಿತ್ರಗಳಲ್ಲಿ ಬಿಂಬಿಸಿ, ತಮ್ಮ ಸಾಂಸ್ಕೃತಿಕ ಅಭಿರುಚಿಯು ಅದ್ವಾನವಾಗಿರುವುದನ್ನು ಪದೆ ಪದೆ ತೋರಿಸಿಕೊಟ್ಟಿದ್ದಾರೆ. ಹೀರೋಯಿನ್‌ಗಳ ಕೈಯಲ್ಲಿ ನುಗ್ಗೆಕಾಯಿಗಳನ್ನಿರಿಸಿ ಡ್ಯಾನ್ಸ್‌ ಮಾಡಿಸಿ ಆಕರ್ಷಕ ಭಂಗಿಗಳ ಪ್ರದರ್ಶನಕ್ಕೆ ಒಳಪಡಿಸುವುದರಲ್ಲಿ ಅದೇನು ಆಸಕ್ತಿಯೋ ಹೇಳಲಾಗದು. ಅಂತಹಾ ಕಾಮಪ್ರಚೋದಕ ರಾಸಾಯನಿಕಗಳೇನೂ ನುಗ್ಗೆಯಲ್ಲಿ ಇಲ್ಲದಿರುವುವಾಗ ಇದು ಬಂದದ್ದಾದರೂ ಹೇಗೆ? ಸಾಲದಕ್ಕೆ ಮುಂದುವರೆಯುತ್ತಲೇ ಇರುವ ಚಿತ್ರರಂಗದ ನುಗ್ಗೆಕಾಯಿಯ ಜೋಕುಗಳು, ನಮ್ಮ ಕೀಳು ಸಂಸ್ಕೃತಿಯನ್ನು ದಾಟಿಸುತ್ತಿರುವುದರ ಬಗ್ಗೆ ಅಸಹ್ಯ ಹುಟ್ಟಿಸುತ್ತದೆ.

ಇದನ್ನು ಬರೆಯುತ್ತಿದ್ದಂತೆ ಇದೇ ಸಂಗತಿಯನ್ನು ಆತ್ಮೀಯ ಗೆಳೆಯರೊಂದಿಗೆ ಮಾತಾನಾಡುತ್ತಿದ್ದೆ. ಸಾಕಷ್ಟು ಓದಿಕೊಂಡಿರುವ ಸಾಹಿತ್ಯದ ವಿದ್ಯಾರ್ಥಿಯಾದ ಅವರೂ ಸಹಾ ಇತ್ತೀಚಿಗೆ ಮಾತ್ರವೇ ತಮಿಳರಿಂದ ಕರ್ನಾಟಕ ಕೂಡ ನುಗ್ಗೆ ಬಳಸುವುದನ್ನು ತಿಳಿದಿದೆ ಎನ್ನುವ ಮಾತನ್ನು ಸೇರಿಸಿದರು. ತಕ್ಷಣವೇ ಈ ಪ್ರಬಂಧದ ಆರಂಭದಲ್ಲೇ ಪ್ರಸ್ತಾಪಿಸಿರುವ ನುಗ್ಗೆ 19ನೆಯ ಶತಮಾನದ ಆದಿಯಲ್ಲೇ ಫ್ರೆಂಚರಿಗೂ ತಿಳಿದಿತ್ತು, ಅವರೇ ಮೊರಿಂಗಾ ಎಂದೂ ಕರೆದಿದ್ದಾರೆ, ಎಂದು ವಿವರಿಸಬೇಕಾಯಿತು. ಈಗ 21ನೆಯ ಶತಮಾನದಲ್ಲಿ ಇಂತಹ ಮಾತುಗಳು ಚರ್ಚೆಗಳಾಗುತ್ತಿದ್ದರೆ, ನಾವು ಇತಿಹಾಸವನ್ನು ಅರ್ಥೈಸಿ ರೂಪಿಸುವುದರ ಬಗೆಗೆ ಯೋಚನೆ ಮಾಡಬೇಕಾಗುತ್ತದೆ. ಫ್ರೆಂಚರಿಗೇ 19ನೆಯ ಶತಮಾನದಲ್ಲಿ ತಿಳಿದಿರಬೇಕಾದರೆ, ಕರ್ನಾಟಕವು ತಮಿಳು ನೆಲಕ್ಕೆ ಹೊಂದಿಕೊಂಡೇ ಇರುವುದರಿಂದ, ಅದೆಷ್ಟು ಹಿಂದೆಯೇ ತಿಳಿದಿರಬೇಕಲ್ಲವೇ? ಇನ್ನೂ ಹಲವು ಶತಮಾನಗಳಿಗೂ ಮೊದಲಿದ್ದೀತು.

ಜಾಗತಿಕವಾಗಿ ನಿಜಕ್ಕೂ “ಪವಾಡದ ಮರ”ವಾಗಿರುವ ನುಗ್ಗೆಯ ಬಗೆಗೆ ನಮ್ಮಲ್ಲಿ ಇಂತಹಾ “ಪವಾಡ”ದ ಸಂದರ್ಭಗಳನ್ನು ಕಾಣಬೇಕಿರುವುದು ನಮ್ಮ ದುರಾದೃಷ್ಟವೇನೋ?

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌

This Post Has One Comment

  1. Akash B

    ನುಗ್ಗೆ ಮರಗಳು, ಮಂಗಳೂರು ಪ್ರದೇಶಗಳಲ್ಲಿ ಮೆಣಸು ಮತ್ತು ವೀಳ್ಯದೆಲೆ ಗಳ ಕೃಷಿಯಲ್ಲಿ ಬಳಕೆಯಾಗುತ್ತಿದ್ದ ವಿವರಗಳನ್ನು 1807 ರಲ್ಲಿ ಫ್ರಾನ್ಸಿಸ್‌ ಬುಕನನ್‌ ದಾಖಲಿಸಿದ್ದಾರೆ. ಇನ್ನೂ ಕಾರೇಹಳ್ಳಿ-ನುಗ್ಗೆಹಳ್ಳಿ ಎಂಬ ಊರುಗಳು ಚನ್ನರಾಯಪಟ್ಟಣದಿಂದ ತಿಪಟೂರಿಗೆ ಹೋಗುವ ದಾರಿಯಲ್ಲಿ ಸಿಗುತ್ತವೆ. ಹುಡುಕಿದರೆ ಇತಿಹಾಸಕ್ಕೆ ಮತ್ತಷ್ಟು ಪುರಾವೆ ಸಿಕ್ಕಾವು.

Leave a Reply