ಮೆಕ್ಕೆ ಜೋಳ ಅಥವಾ ಮುಸುಕಿನ ಜೋಳದ ತೆನೆಯಲ್ಲಿ ಕಾಳುಗಳು ಎಲ್ಲವೂ ಸಾಮಾನ್ಯವಾಗಿ ಬಿಳಿ ಅಥವಾ ಹಳದಿ ಮಿಶ್ರಿತ ಬಿಳಿಯ ಬಣ್ಣವನ್ನು ಹೊಂದಿದ್ದು, ಕೆಲವೊಮ್ಮೆ ತೆನೆಯಲ್ಲಿ ಅಲ್ಲಲ್ಲಿ ಬೇರೆ ಬಣ್ಣದವನ್ನೂ ನೋಡಿರುತ್ತೀರಿ! ಕಪ್ಪು, ಕೆಂಪು ಅಥವಾ ನೀಲಿ ಹೀಗೆ.. ಇರುವ ಕಾಳುಗಳನ್ನು ನೋಡಿರಬಹುದು. ಸಾಮಾನ್ಯವಾಗಿ ಕಾಳುಗಳೆಲ್ಲಾ ಒಂದೇ ಇರದೆ ಅಲ್ಲಲ್ಲಿ ಬೇರೆಯದೇ ಕಾಳುಗಳು ಏಕಿವೆ? ಈ ಬಗೆಯ ಬೇರೆ ಬೇರೆ ಬಣ್ಣ ಇರುವಂತಹ ಕಾಳುಗಳ ತೆನೆಗಳು ವನ್ಯಮೂಲದ ಮೆಕ್ಕೆಜೋಳವನ್ನು ಗಮನಿಸಿದರೆ ಇನ್ನೂ ಹೆಚ್ಚು ಸಿಕ್ಕಾವು. ಹಾಗಾಗಲು ಕಾರಣವನ್ನು ಮೂಲಭೂತವಾಗಿ ಏನು ಎಂದು ಪ್ರಶ್ನಿಸಿ ಜೀವಿವಿಜ್ಞಾನದ ಆನುವಂಶಿಕ ತಿಳಿವಿನಲ್ಲಿ ಊಹಿಸಲೂ ಸಾಧ್ಯವಿರದ ವಿರಳವಾದ ಸಂಶೋಧನೆಯನ್ನು ನಡೆಸಿ ಅದಕ್ಕೆ “ಜಂಪಿಂಗ್ ಜೀನು”ಗಳ ಕಾರಣ ಹುಡುಕಿಕೊಟ್ಟ ವಿಶಿಷ್ಟವಾದ ಮಹಿಳಾ ವಿಜ್ಞಾನಿ ಬಾರ್ಬರಾ ಮೆಕ್ಲಿಂಟಾಕ್. ಜೀವಿವಿಜ್ಞಾನದ ವಿದ್ಯಾರ್ಥಿಗಳಂತೂ ಬಾರ್ಬರಾ ಹೆಸರಿನ ಜೊತೆಗೆ ಜಂಪಿಂಗ್ ಜೀನುಗಳನ್ನು ಸಮೀಕರಿಸಲು ಮರೆಯಲಾರರು

ಬಾರ್ಬರಾ ಮೆಕ್ಲಿಂಟಾಕ್ ಅವರು ಫಿಸಿಯಾಲಜಿ ಮತ್ತು ವೈದ್ಯಕೀಯ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿಯನ್ನು 1983ರಲ್ಲಿ ಪಡೆದರೂ ಆ ವೇಳೆಗಾಗಲೇ ಅವರ ಸಂಶೋಧನೆಯು ದಶಕಗಳಷ್ಟು ಹಳೆಯದು. ಅವರು 1940ರ ದಶಕದಲ್ಲಿ ನಡೆಸಿದ ಆ ಸಂಶೋಧನೆಗಳನ್ನು ಆಗಿನ ವಿಜ್ಞಾನ ಜಗತ್ತು ಅರಿಯದಾಗಿತ್ತು. ಅದನ್ನೆಲ್ಲಾ ಒಪ್ಪಿ ಗೌರವಿಸುವಂತಾಗಲು ಬಾರ್ಬರಾ ಅವರ ನಿರಂತರವಾದ ಶ್ರದ್ಧೆ ಮತು ತಾಳ್ಮೆಯು ಬಹು ದೊಡ್ಡ ತ್ಯಾಗವನ್ನೇ ಮಾಡಬೇಕಾಯಿತು.
ಬಾರ್ಬರಾ ಮೆಕ್ಲಿಂಟಾಕ್ ಅವರು ಇಂತಹಾ ಸಂಶೋಧನೆಯನ್ನು ಮಾಡುತ್ತಿರುವಾಗ ಇನ್ನೂ ಜೀನ್ಗಳ ಬಗ್ಗೆ ಪರಿಚಯವೇ ಇರಲಿಲ್ಲ. ಡಿ.ಎನ್.ಎ.ಯ ಬಗ್ಗೆಯೂ ಗೊತ್ತಿರಲಿಲ್ಲ. ಬರೀ ಕ್ರೋಮೋಸೋಮ್ಗಳ ಹಿಂದೆ ಹೋಗಿ ಅವರು ವಿಶಿಷ್ಟವಾದ ಜೆನೆಟಿಕ್ಸ್ನ ಸಂಗತಿಗಳಿಗೆ ಕಾರಣರಾದರು. ನಾವು ಸಾಮಾನ್ಯವಾಗಿ ಜೆನೆಟಿಕ್ಸ್ ಅಥವಾ ಆನುವಂಶಿಕ ವಿಷಯಗಳು ಬಂದಾಗ ಗ್ರೆಗೊರ್ ಜಾನ್ ಮೆಂಡಲ್ ಅವರನ್ನು ನೆನಪಿಸಿಕೊಳ್ಳುತ್ತೇವೆ. ಆನುವಂಶಿಕ ಗುಣಗಳನ್ನು ತಂದೆಯಿಂದ ಅಥವಾ ತಾಯಿಯಿಂದ ಮಕ್ಕಳಿಗೆ ಬಂದಂತಹಾ ಗುಣಗಳ ಬಳುವಳಿಗಳನ್ನು ಗಮನಿಸಿ ಜೆನೆಟಿಕ್ಸ್ ವಿಜ್ಞಾನದಲ್ಲಿ ಮಾತನಾಡುತ್ತೇವೆ. ಆದರೆ ಹಾಗೆಯೇ ಆಗಿದ್ದರೆ ಎಲ್ಲಾ ಮಕ್ಕಳು ಕೇವಲ ತಂದೆ ತಾಯಿಗಳ ತರಹ ಮಾತ್ರವೇ ಇರಬೇಕಿತ್ತು. ಆದರೆ ಹಾಗೆ ಆಗೋದಿಲ್ಲ. ಭಿನ್ನವಾಗಿಯೂ ಇರುತ್ತಾರೆ. ಇನ್ನೂ ವಿಷಯದ ಆಳಕ್ಕೆ ಊಹಿಸಿ ಯೋಚನೆ ಮಾಡಿದರೆ, ಜೀವವಿಜ್ಞಾನದಲ್ಲಿ ಅಥವಾ ಜೀವಿಸಂಕುಲದಲ್ಲಿ ನಡೆದಂತಹ ಒಂದು ಘಟನೆ ಇದೆಯಲ್ಲ ಅಂದರೆ ತಂದೆಯಿಂದ ಮಕ್ಕಳು, ಮಕ್ಕಳಿಂದ ಮೊಮ್ಮಕ್ಕಳು ಅವರಿಂದ ಮುಂದುವರೆಯುತ್ತಲೇ, ಎಲ್ಲರೂ ಒಂದೇ ತರಹವೇ ಇರಬೇಕಿತ್ತು. ಅದರೆ ಹಾಗಾಗದೆ ಎಲ್ಲರೂ ವಿಭಿನ್ನವಾಗಿ ಬೆಳೆಯುತ್ತಿದ್ದಾರೆ. ಹೀಗಾಗಲಿಕ್ಕೂ ಕೂಡಾ ಒಂದು ಕಾರಣ ಇರಬೇಕಲ್ಲ. ಇದೆಲ್ಲವೂ ಜೀವಿ ವಿಕಾಸದಲ್ಲಿ ಗುಣಗಳ ವಿಶೇಷತೆಯನ್ನು, ಭಿನ್ನತೆಯನ್ನೂ ಜೀವಿಗಳು ಪಡೆದುಕೊಂಡ ಬಗೆ! ಆದರೆ ಇದೆಲ್ಲಾ ಹೇಗೆ?
ಅಂತಹ ಒಂದು ತಿಳಿವಿಗೆ ಸಂಶೋಧನೆಗಳನ್ನು ತಳಹದಿಯ ರೂಪದಲ್ಲಿ ವಿಶ್ವಾಸಾರ್ಹವಾದ ವಿಷಯವನ್ನು ದಾಖಲೆ ಪಡಿಸಿದವರು ಬಾರ್ಬರಾ ಮೆಕ್ಲಿಂಟಾಕ್. ಇದನ್ನೆಲ್ಲಾ ಒರೆಹಚ್ಚಲು ಅವರು ಹೋಗಿದ್ದು ಮೆಕ್ಕೆಜೋಳದ ಹಿಂದೆ. ಈ ಮೆಕ್ಕೆಜೋಳದ ಆನುವಂಶಿಕ ಗುಣಗಳ ಹಿಂದೆ. ಅದರಲ್ಲೂ ಅವರು ಸೈಟೋಜೆನೆಟಿಕ್ಸ್ (ಜೀವಿಕೋಶಗಳ ಮೂಲಕ ಆನುವಂಶೀಯ ಸಂಗತಿಗಳ ತಿಳಿವಿನ ಜ್ಞಾನಶಾಖೆ) ಎನ್ನುವ ವಿಭಾಗದ ಅಧ್ಯಯನಗಳ ಸಂದರ್ಭವನ್ನು ಅವರು ಬಳಸಿಕೊಂಡರು. ಅದಕ್ಕೆಂದು ಆಗ ತಿಳಿದಿದ್ದ ಕೇವಲ ಕ್ರೋಮೋಸೋಮ್ಗಳ ಹಿಂದೆ ಹೋಗಿ ಆಗಿನ್ನೂ ಜೀನ್ಗಳೆಂದು ಕರೆಯದೇ ಇದ್ದಂತಹವನ್ನು “ಮೂಲವಸ್ತುಗಳು” ಅಥವಾ “ಫಂಡಮೆಂಟಲ್ ಎಲಿಮೆಂಟ್ಸ್ ಎಂದು ಕರೆದರು. ಒಂದು ಬಗೆಯಲ್ಲಿ ಬೇಸಿಕ್ ಎಲಿಮೆಂಟ್ಸ್ ಅಥವಾ ಕಂಟ್ರೋಲಿಂಗ್ ಎಲಿಮೆಂಟ್ಸ್ ಎಂತಲೂ ಕರೆದರು. ಕಂಟ್ರೋಲಿಂಗ್ ಎಲಿಮೆಂಟ್ಸ್ ಎಂದು ಕರೆಯಲು ಕಾರಣ ಏಕೆ, ಎಂದರೆ ಅವುಗಳಿರುವುದು ಕ್ರೋಮೋಸೋಮ್ಗಳಲ್ಲಿ! ಕ್ರೋಮೋಸೋಮ್ ಎನ್ನುವುದು ಒಂದು ಭೌತಿಕವಸ್ತು ಅದರೊಳಗೆ ಇರುವಂತಹ ಇವುಗಳು ಕೇವಲ ಒಂದು ಪರಿಕಲ್ಪನೆಯಂತೆ! ಹಾಗಾಗಿ ಈ ಪರಿಕಲ್ಪನೆಗಳನ್ನು ಮಿತಿಯಲ್ಲಿಡುವ/ನಿರ್ಮಿಸುವ ಅವುಗಳನ್ನು, ಕಂಟ್ರೋಲಿಂಗ್ ಎಂದೇ ಕರೆದರು.
ಪರಿಕಲ್ಪನೆಗಳ ಆಧಾರಿತ ಸಂಗತಿಗಳನ್ನು ಬಳಸಿ ಇಡೀ ಕ್ರೋಮೋಸೋಮ್ ಅನ್ನು ವಿಭಾಗಿಸಿ ಒಂದೊಂದು ಭಾಗವಾಗಿ ನೋಡಿ ಆ ಭಾಗದ ಯಾವುದೋ ಒಂದು ಭಾಗ ಮತ್ತೊಂದಕ್ಕೆ ಜಂಪ್ ಆಗಬಲ್ಲದು ಅಥವಾ ಹೋಗಬಲ್ಲದು ಎನ್ನುವುದನ್ನು ಅವರು ಗುರುತಿಸಿದರು. ಮುಖ್ಯವಾಗಿ ಗುರುತಿಸಿದ್ದು ಕಂಟ್ರೋಲಿಂಗ್ ಎಲಿಮೆಂಟ್ಸ್! ಅಂದರೆ ಆ ಭಾಗಗಳು ಇಡೀ ಮನುಷ್ಯನ, ಜೀವಿಯ ಅಥವಾ ಯಾವುದೇ ಸಸ್ಯದಲ್ಲಿ ಯಾವುದೇ ಗುಣಗಳನ್ನು ಅವು ನಿರ್ಧರಿಸುತ್ತವೆ ಅನ್ನುವ ಕಾರಣಕ್ಕೆ ಅವುಗಳನ್ನು ಅವರು “ಕಂಟ್ರೋಲಿಂಗ್ ಎಲಿಮೆಂಟ್ಸ್” ಎಂದು ಕರೆದರು. ಅಲ್ಲದೆ ಅವರಿಗೆ ಇನ್ನೂ ಒಂದು ನಂಬಿಕೆ ಇತ್ತು. ಅದೇನಂದರೆ ಈ ಕಂಟ್ರೋಲಿಂಗ್ ಎಲಿಮೆಂಟ್ಸ್ಗಳು ಚಲಿಸುತ್ತವೆ. ಚಲಿಸುವುದೆಂದರೆ ಕೇವಲ ತಂದೆ ತಾಯಿಯಿಂದ ಮಕ್ಕಳಿಗೆ, ಮಕ್ಕಳಿಂದ ಮೊಮ್ಮಕ್ಕಳಿಗೆ ಮಾತ್ರ ಅಲ್ಲ. ಅದೇ ಜೀವಿಗಳೊಳಗೇ! ವಿಥ್ ಇನ್ ದ ಆರ್ಗಾನಿಸಮ್! ಅಂದರೆ ಜಂಪ್ ಆಗುವ ಮೂಲಕ!. ಅಂದರೆ ಅಲ್ಲಿಂದ ಹಾರಿ ಮತ್ತೊಂದು ಕಡೆಗೆ ಹೋಗುತ್ತವೆ. ಇವುಗಳು ಮತ್ತೊಂದೆಡೆ ಹೋಗಿದ್ದಲ್ಲದೆ ಅಲ್ಲಿ ಮತ್ತೊಂದು ರೀತಿಯಲ್ಲಿ ವರ್ತನೆಯನ್ನೂ ಮಾಡುತ್ತವೆ. ಅದಕ್ಕೂ ಸಾಲದಾಗಿ ಅಲ್ಲಿ ಹೋಗಿ ಕುಳಿತುಕೊಂಡು ಮತ್ತೊಂದು ರೀತಿಯ ವರ್ತನೆಯ ಜೊತೆಗೆ, ಪಕ್ಕದಲ್ಲಿರುವ ಅಥವಾ ಸುತ್ತಮುತ್ತಲಿನ ಅದೇ ಬಗೆಯ ವಸ್ತುಗಳನ್ನು ಕೂಡಾ ಕಂಟ್ರೋಲ್ ಮಾಡಿ ಇಡೀ ಗುಣಗಳನ್ನು ಬದಲಾಯಿಸುತ್ತವೆ. ಅಥವಾ ಇಡೀ ಗುಣಗಳನ್ನು ನಿರ್ಧರಿಸುತ್ತವೆ. ಹೀಗಾಗಿ “ಕಂಟ್ರೋಲಿಂಗ್ ಎಲೆಮೆಂಟ್ಸ್” ಎಂದು ಕರೆದ ಇವುಗಳೇ ಮುಂದೆ ಜೀನ್ಗಳೆಂದು ಗುರುತಿಸಲಾಯಿತು. ಆದ್ದರಿಂದಲೇ ಬಾರ್ಬರಾ ಕೊಡುಗೆಯನ್ನು ಈ “ಜಂಪಿಂಗ್ ಜೀನ್ಸ್” ಮೂಲಕ ಜೀವಿವಿಜ್ಞಾನದಲ್ಲಿ ಗುರುತಿಸಲಾಗುತ್ತದೆ.
ಆನುವಂಶಿಕತೆಯಿಂದಾಗಿ ಅಪ್ಪನಂತೆ ಮಗ, ಅಥವಾ ತಾಯಿಯಂತೆ ಮಗಳು, ಮುಂದೆ ಮೊಮ್ಮಕ್ಕಳು ನಿರಂತರವಾಗಿ ಎಲ್ಲರೂ ಒಂದೆ ಬಗೆಯ ಸಂತತಿಗಳನ್ನು ಮುಂದುವರಿಸುತ್ತಲೇ ಇರಬೇಕಿತ್ತು. ಆದರೆ ಹಾಗಾಗದೆ, ಜೀನ್ಗಳ ನಿಯಂತ್ರಣ ಮತ್ತು ವರ್ತನೆಯಲ್ಲಿ ವ್ಯತ್ಯಾಸ ಉಂಟುಮಾಡುವ ಕ್ರಮದಿಂದಾಗಿ ಸಂತತಿಗಳಲ್ಲಿ ಬದಲಾವಣೆಯನ್ನು ತರುತ್ತವೆ. ಈ ಕಾರಣಕ್ಕೇನೆ ಇಡೀ ಜೀವಿವ್ಯವಸ್ಥೆಯಲ್ಲಿ ವಿಕಾಸ ಉಂಟಾಗಿರೋದು! ವೈವಿಧ್ಯತೆಯು ಹುಟ್ಟಿರುವುದು! ಇಡೀ ಜೀವವ್ಯವಸ್ಥೆಯ ಗುಣಗಳಲ್ಲಿಯೂ ಬದಲಾವಣೆ ಆಗಿರೋದು, ಅಂಗಾಂಶಗಳಲ್ಲಿ ಬದಲಾವಣೆ ಆಗಿರೋದು, ನೋಟದಲ್ಲಿ ಬದಲಾವಣೆ ಆಗಿರೋದು, ಅವುಗಳ ವರ್ತನೆಯಲ್ಲಿ ಬದಲಾವಣೆ ಆಗಿರೋದು. ಎಲ್ಲಾ ತರದ ಬದಲಾವಣೆಗಳು ಇಡೀ ಬಯೋಡೈವರ್ಸಿಟಿ ಅಥವಾ ಈ ಜೀವಿವೈವಿಧ್ಯತೆಗೆ ಮೂಲ ಕಾರಣವಾದಂತಹ ಈ ಗುಣಗಳ ವೈವಿಧ್ಯತೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿವೆ.
ಇಂತಹ ಅಮೂಲ್ಯವಾದ ಮೂಲಭೂತವಾದ ಸಂಶೋಧನೆಯನ್ನು ವಿವರವಾಗಿ ಮಾಡಿದ ಬಾರ್ಬರಾ ಮೆಕ್ಲಿಂಟಾಕ್ ಅವರು 1902ರಲ್ಲಿ ಅಮೆರಿಕದ ಕನೆಕ್ಟಿಕಟ್ ರಾಜ್ಯದ ಹಾರ್ಟ್ಫೊರ್ಡ್ ಎಂಬಲ್ಲಿ ಜನಿಸಿದರು. ಹೈಸ್ಕೂಲಿನ ಅಧ್ಯಯನ ಮುಗಿದ ತಕ್ಷಣ ಅವರನ್ನು ಕಾಲೇಜು ಶಿಕ್ಷಣಕ್ಕೆ ಕಾರ್ನೆಲ್ ವಿಶ್ವವಿದ್ಯಾಲಯದ ಕೃಷಿ ಕಾಲೇಜಿಗೆ ಪದವಿ ವಿದ್ಯಾರ್ಥಿಯೆಂದು ಸೇರಿದರು. ಅಲ್ಲಿ ಆನುವಂಶಿಕ ಅಧ್ಯಯನಗಳತ್ತ ಆಕೆಯ ಆಸಕ್ತಿ ಮತ್ತು ತಿಳಿವಳಿಕೆಯನ್ನು ಮೆಚ್ಚಿದ ಆಕೆಯ ಶಿಕ್ಷಕರು ಅವರ ಜಾಣ್ಮೆಯನ್ನು ಮೊಟ್ಟ ಮೊದಲು ಗುರುತಿಸಿದ್ದರು. ಆದರೆ ಆಗಿನ್ನೂ ಮಹಿಳೆಯರಿಗೆ ವಿಜ್ಞಾನವು ಅಷ್ಟೊಂದು ತೆರೆದುಕೊಂಡಿರಲಿಲ್ಲ. ಅದರಲ್ಲೂ ಜೆನೆಟಿಕ್ಸ್-ಆನುವಂಶಿಕ ವಿಜ್ಞಾನವು ಪುರುಷರಷ್ಟೇ ಮಾಡುವ ಅಧ್ಯಯನವೆಂದೂ ಭಾವಿಸಲಾಗಿತ್ತು. ಹಾಗಾಗಿ ಆಕೆಯು ಮುಂದಿನ ಶಿಕ್ಷಣವನ್ನು ಆನುವಂಶಿಕ ವಿಜ್ಞಾನದಲ್ಲಿಯೇ ಮುಂದುವರೆಸಿದರೂ ಆಕೆಯ ಮಾಸ್ಟರ್ ಪದವಿ ಮತ್ತು ಡಾಕ್ಟೊರೇಟ್ಗಳು “ಸಸ್ಯವಿಜ್ಞಾನ”ದಲ್ಲಿ ನೀಡಲಾಯಿತು.
ಬಾರ್ಬರಾ ಅವರಿಗೆ ಪಿ.ಎಚ್.ಡಿ. ಪದವಿಯು ದೊರಕಿದ್ದು 1927ರಲ್ಲಿ ಮುಂದೆ 1941ರವರೆಗೂ ನಿಗಧಿಯಾದಂತಹಾ ಶಾಶ್ವತ ನೆಲೆಯೊಂದು ಸಂಶೋಧನಾ ವೃತ್ತಿಯಾಗಿ ದೊರೆಯುದಿಲ್ಲ. ಆ ಕಾಲದ ವಿಜ್ಞಾನ ಜಗತ್ತಿನ್ನೂ ಮಹಿಳೆಯರಿಗೆ ಪೂರ್ಣ ಪ್ರಮಾಣದ ಸಂಶೋಧನಾ ವೃತ್ತಿಯನ್ನು ಸ್ವತಂತ್ರವಾಗಿ ನೀಡುತ್ತಿರಲಿಲ್ಲ! ಏನಿದ್ದರೂ ಗಂಡ ವಿಜ್ಞಾನಿಯಾಗಿದ್ದರೆ ಮಾತ್ರವೇ ಹೆಂಡತಿಯನ್ನೂ ವಿಜ್ಞಾನದ ಸಂಶೋಧನೆಯಲ್ಲಿ ತೊಡಗುವುದನ್ನು ಒಪ್ಪುತ್ತಿದ್ದ ವಿಚಿತ್ರ ಸಮಯವದು.

ಬಾರ್ಬರಾ ಅವರು ಡಾಕ್ಟರೇಟ್ ಪದವಿಯ ನಂತರ ಕಾರ್ನೆಲ್ ಅಲ್ಲಿಯೇ ಸಂಶೋಧನೆಯ ಜತೆಗೆ ಶಿಕ್ಷಕಿಯಾಗಿ ತಾತ್ಕಾಲಿಕವಾಗಿ ಮುಂದುವರೆಯುತ್ತಾರೆ. ಮುಂದೆ ಕೆಲಕಾಲ ಮಿಸ್ಸೌರಿ ವಿಶ್ವವಿದ್ಯಾಲಯ, ಮುಂತಾದೆಡೆ ಅಲೆದಾಡಿ ಕಡೆಯಲ್ಲಿ 1941ರಲ್ಲಿ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯದಲ್ಲಿ ಬಂದು ಶಾಶ್ವತವಾಗಿ ನೆಲೆಯೂರುತ್ತಾರೆ. ಅಷ್ಟೂ ಸಮಯದಲ್ಲಿ ನಿರಂತರವಾಗಿ ಜೀವಿಕೋಶದ ಆನುವಂಶೀಯತೆಯ ಅಧ್ಯಯನಗಳಲ್ಲಿ ತೊಡಗಿಕೊಂಡು ಅದಕ್ಕೆಂದು ಮೆಕ್ಕೆಜೋಳ ಸಸ್ಯದ ವೈಜ್ಞಾನಿಕ ಅಧ್ಯಯನದಲ್ಲಿ ಮುಂದುವರೆಸುತ್ತಾರೆ. ಅವರ ಇಡೀ ಅಧ್ಯಯನ ಏಕಾಂಗಿಯಾದ ಹೋರಾಟ.
ಇಂತಹ ಒಂದು ವಿಶಿಷ್ಟವಾದ ಸಂಶೋಧನೆಯನ್ನು ಮಾಡಿದರೂ ಕೂಡ ಅದನ್ನು ಪುರುಷ ಪ್ರಧಾನ ವಿಜ್ಞಾನ ಜಗತ್ತು ನಂಬುತ್ತಿರಲಿಲ್ಲ. ಅವರ ಬಗೆಗೆ ಗೌರವಗಳಿದ್ದರೂ, ಬಹಳ ಜಾಣೆ, ಬಹಳ ಒಳ್ಳೆಯ ವಿಷಯ ಆಸಕ್ತರು ಎಂದೆಲ್ಲಾ ಹೇಳುತ್ತಿದ್ದರೇ ವಿನಾಃ ಅವರ ಸಂಶೋಧನಾ ವಿಷಯವನ್ನು ನಂಬುತ್ತಿರಲಿಲ್ಲ. ಇದು ಹೇಗೆ ಸಾಧ್ಯ? ಎಲ್ಲಾದ್ರೂ ಜೀನ್ಗಳು ಹಾರಲು ಸಾಧ್ಯನಾ? ಎಲ್ಲಾದ್ರೂ ಜೀನ್ಗಳು ಹಾರಿದ್ದಲ್ಲದೆ ಪಕ್ಕದ ಜೀನ್ಗಳ ಜೊತೆ ವ್ಯವಹರಿಸಿ ಅವನ್ನು ಬದಲಾಯಿಸಲಿಕ್ಕೆ ಸಾಧ್ಯನಾ? ಈ ತರಹದ ಚರ್ಚೆಗಳೇ ಪ್ರಧಾನವಾದವು. 1970ರವರೆಗೂ ಇದೇ ಬಗೆಯ ಚರ್ಚೆಗಳಷ್ಟೇ! 1940ರಲ್ಲೇ ಅವರು ಕಂಡುಹಿಡಿದ ವಿಷಯ 1970ರವರೆಗೂ ಯಾರೂ ಕೂಡ ಅದರ ಬಗ್ಗೆ ತೀವ್ರವಾದಂತಹ ಆಸಕ್ತಿಯನ್ನು ವಹಿಸಲಿಲ್ಲ. ಆಗ ನಡೆದ ಕೆಲವು ಘಟನೆಗಳನ್ನು ಆಧಾರಿಸಿ ಅವರಿಗೆ ಒಂದು ವಿಶಿಷ್ಠವಾದ ಸ್ಥಾನಮಾನ ದೊರೆಯುವುದಕ್ಕೆ ಪ್ರಾರಂಭವಾಯಿತು.
ಬಾರ್ಬರಾ ಮೆಕ್ಲಿಂಟಾಕ್ ಅವರನ್ನು ಗಮನಿಸಬೇಕಾದ್ದು ಬಹಳ ಪ್ರಮುಖವಾಗಿದೆ. ಏಕೆಂದರೆ ನಮ್ಮ ಹೆಣ್ಣುಮಕ್ಕಳು ವಿಜ್ಞಾನದಲ್ಲಿ ಹಿಂದೆ ಹೋದವರು, ಹೋಗುವ ಆಸಕ್ತಿ ಇದ್ದವರು ಬಾರ್ಬರಾ ಮೆಕ್ಲಿಂಟಾಕ್ ಅವರನ್ನು ನಿಜಕ್ಕೂ ಗಮನಿಸಿ ಆಲೋಚಿಸಿದರೆ ಅವರಿಗೆ ಇದ್ದಂತ ತಾಳ್ಮೆ, ಅವರಿಗೆ ಇದ್ದಂತಹ ಓದಿನ ಶಿಸ್ತು, ಅವರಿಗೆ ಇದ್ದಂತಹ ಸಂಶೋಧನೆಯ ಶಿಸ್ತನ್ನು ಅರ್ಥಮಾಡಿಕೊಳ್ಳಬೇಕು. ನಿರಂತರವಾಗಿ ಬಾರ್ಬರಾ ಒಂಟಿಯಾಗಿಯೇ ಸಂಶೋಧನೆಯಲ್ಲಿ ತೊಡಗಿದವರು. ಅವರ ಅಧ್ಯಯನವೂ ಒಂಟಿಯಾಗಿಯೇ! ಜೀವನ ಪಯಣದಲ್ಲೂ ಒಂಟಿಯೇ! ಮದುವೆಯಿಲ್ಲ ಮಕ್ಕಳೂ ಇಲ್ಲ! ಎಲ್ಲವನ್ನೂ ನಿಭಾಯಿಸಿ 1939ರಲ್ಲಿ ಮೊದಲ ಬಾರಿಗೆ ಅಮೆರಿಕದ ಜೆನೆಟಿಕ್ಸ್ ಸೊಸೈಟಿಯ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುತ್ತಾರೆ. ಮುಂದೆ 1944ರಲ್ಲಿ ಅದರ ಅಧ್ಯಕ್ಷರೂ ಆಗಿ ಆಯ್ಕೆಯಾಗುತ್ತಾರೆ. ಅಲ್ಲಿಂದ ಮುಂದೆ ಇವರ ಸಂಶೋಧನಾ ಜೀವನದ ಬದಲಾವಣೆಯ ಪರ್ವ ಪ್ರಾರಂಭವಾಗುತ್ತದೆ.
ಮೆಕ್ಲಿಂಟಾಕ್ ಅವರ ಸಂಶೋಧನಾ ಕಾರ್ಯವು ಕಾಲದಲ್ಲಿ ಸಾಕಷ್ಟು ಮುಂದಿತ್ತು. ಹಾಗಾಗಿ ಅದನ್ನು ಗ್ರಹಿಸುವಲ್ಲಿ ಆ ಸಮಯದಲ್ಲಿ ತಿಳಿವಳಿಕೆಯ ಅಭಾವ ಜೊತೆಗೆ ಮಹಿಳೆಯರ ಬಗೆಗಿದ್ದ ನಿರ್ಲಕ್ಷಿತ ಗ್ರಹಿಕೆಯೂ ಕಾರಣವಾಗಿತ್ತು. ಅನೇಕ ವರ್ಷಗಳವರೆಗೆ ಅವರ ಸಹ ವಿಜ್ಞಾನಿಗಳಿಂದ ಅವರ ಸಂಶೋಧನೆಯು ತುಂಬಾ ಆಮೂಲಾಗ್ರವಾಗಿದೆಂದೂ ಪರಿಗಣಿಸಲ್ಪಟ್ಟಿದ್ದರೂ, ಅದು ಕೇವಲ ಸರಳವಾಗಿದೆ ಎಂದೂ ನಿರ್ಲಕ್ಷಿಸಲ್ಪಟ್ಟಿತ್ತು. ತನ್ನ ಸಹೋದ್ಯೋಗಿಗಳೊಂದಿಗೆ ಈ ಬಗೆಯ ಗ್ರಹಿಕೆಯಿಂದ ತೀವ್ರವಾಗಿ ನಿರಾಶೆಗೊಂಡ ಬಾರ್ಬರಾ ಅವರು ತನ್ನ ಕೆಲಸದ ಫಲಿತಾಂಶಗಳನ್ನು ಪ್ರಕಟಿಸುವುದನ್ನು ನಿಲ್ಲಿಸಿಬಿಟ್ಟರು. ಅವರ ಸಂಶೋಧನೆಗಳನ್ನು ಆಧರಿಸಿದ ವಿಷಯಗಳ ಉಪನ್ಯಾಸಗಳನ್ನು ನೀಡುವುದನ್ನೂ ನಿಲ್ಲಿಸಿದರು, ಆದರೂ ಅವರು ತಮ್ಮ ಸಂಶೋಧನೆಯನ್ನು ಏಕಾಂಗಿಯಾಗಿಯೇ ಮುಂದುವರೆಸಿದರು. ಕಾಲದ ಮುಂದುವರಿದಂತೆ 1960 ಮತ್ತು 70ರ ದಶಕದ ಅಂತ್ಯದವರೆಗೆ, ಜೀವಿವಿಜ್ಞಾನಿಗಳು ಆನುವಂಶಿಕ ವಸ್ತು ಡಿ.ಎನ್.ಎ. ಎಂದು ನಿರ್ಧರಿಸಿದ ನಂತರ, ವೈಜ್ಞಾನಿಕ ಸಮುದಾಯದ ಸದಸ್ಯರು ಅವರ ಆರಂಭಿಕ ಸಂಶೋಧನೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದರು. ಅಂತಿಮವಾಗಿ ಮಾನ್ಯತೆ ಬಂದಾಗ, ಬಾರ್ಬರಾ ಮೆಕ್ಕ್ಲಿಂಟಾಕ್ ಅವರು ಪ್ರಶಸ್ತಿಗಳು ಮತ್ತು ಗೌರವಗಳಿಂದ ಮುಳುಗಿ ಹೋದರು. ಅದರಲ್ಲಿ ಅತ್ಯಂತ ಪ್ರಮುಖವಾದ 1983ರ ಶರೀರಕ್ರಿಯಾ ವಿಜ್ಞಾನ ಅಥವಾ ವೈದ್ಯಕೀಯ ನೊಬೆಲ್ ಪ್ರಶಸ್ತಿ. ಈ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಯಾರೊಡನೆಯೂ ಹಂಚಿಕೊಳ್ಳದೆ ಏಕಾಂಗಿಯಾಗಿ ವಿಜೇತರಾದ ಮೊಟ್ಟ ಮೊದಲ ಮಹಿಳೆ. (ಈ ದಾಖಲೆಯು ಇನ್ನೂ ಮುಂದುವರೆದಿದೆ).

ಹೀಗೆ ಅವರು ತಮ್ಮನ್ನು ವಿಜ್ಞಾನ ಜಗತ್ತು ಗುರುತಿಸದೆ ಇರುವಂತಹ ಸಾಕಷ್ಟು ನೋವುಗಳನ್ನು ಅನುಭವಿಸುತ್ತಲೇ ಅವೆಲ್ಲವನ್ನೂ ನಿವಾರಿಸಿ ಮೇಲೆ ಬಂದರು. ತಾವು 1930ರ ದಶಕದಲ್ಲಿ ಆರಂಭಿಸಿ ಸಾಕಷ್ಟು ನಿಖರವಾದ ಫಲಿತಾಂಶಗಳನ್ನು ಪಡೆದೂ ಹೆಚ್ಚೂ ಕಡಿಮೆ ಅರ್ಧ ಶತಮಾನಗಳ ನಂತರ 1983ರಲ್ಲಿ ನೊಬೆಲ್ ಪಾರಿತೋಷಕವನ್ನು ಕೂಡ ಪಡೆದರು. ಇದೆಲ್ಲವೂ ಸಾಧ್ಯವಾದದ್ದು ಅವರ ತಾಳ್ಮೆ ಮತ್ತು ಶಿಸ್ತಿನಿಂದ ಅಧ್ಯಯನಶೀಲತೆಯನ್ನು ಮುಂದುವರೆಸಿಕೊಂಡು ಹೋಗುವಂತಹ ಛಲ.
ಮೆಕ್ಲಿಂಟಾಕ್, ಮೆಕ್ಕೆ ಜೋಳ ಮತ್ತು ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯ

ಬಾರ್ಬರಾ ಅವರು 1944ರ ಬೇಸಿಗೆಯ ಆರಂಭದಲ್ಲಿ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯದಲ್ಲಿ ಮೆಕ್ಕೆ ಜೋಳದ ಕಾಳುಗಳ ಆನುವಂಶಿಯತೆಯ ಬಗೆಗೆ ವ್ಯವಸ್ಥಿತವಾದ ಅಧ್ಯಯನವನ್ನು ಆರಂಭಿಸಿದರು. ಅವರ ಮೊದಲ ಪ್ರಶ್ನೆಯು ತೆನೆಯ ಕಾಳುಗಳಲ್ಲಿ ಅಲ್ಲಲ್ಲಿನ ಭಿನ್ನ ಬಣ್ಣವು, ಮುಂದಿನ ಸಂತತಿಗಳಲ್ಲಿ ಆನುವಂಶಿಕವಾಗಿ ಇರದಂತಹಾ ವಿಚಾರ! ಆಗ ಅಲ್ಲಿ ಮೂಲತಃ ಎರಡು ಪ್ರಮುಖವಾಗಿ ವರ್ತಿಸುವ ಆನುವಂಶಿಕ ಸ್ಥಳ/ಭಾಗಗಳನ್ನು ಗುರುತಿಸಿ ಕ್ರೋಮೊಸೋಮನ್ನು ವಿಭಜಿಸುವ ಭಾಗ (Dissociation –Ds) ಮತ್ತು ವರ್ತನೆಗೆ ಅಣಿಗೊಳಿಸುವ ಭಾಗ (Activator –Ac) ಎಂದು ಹೆಸರಿಸುತ್ತಾರೆ. ಇದರಲ್ಲಿ Ds ಕೇವಲ ಕ್ರೊಮೋಸೋಮನ್ನು ಕೇವಲ ಕ್ರೋಮೋಸೋಮನ್ನು ವಿಭಜಿಸುವ ಕಾರ್ಯದಲ್ಲಿ ಮಾತ್ರ ಭಾಗಿಯಾಗದೆ ಪಕ್ಕದ ಭಾಗದಲ್ಲಿಯೂ Activator –Ac ಜೊತೆಯಾಗಿ ವರ್ತಿಸುತ್ತಾ ಅನೇಕ ಬದಲಾವಣೆಗಳಿಗೆ ಕಾರಣವಾಗುತ್ತಿತ್ತು. ಇದರಿಂದಾಗಿ ಹಲವಾರು ಬಾರಿ ಸ್ಥಿರವಾದ ಬದಲಾವಣೆಗಳಲ್ಲಿ ಫಲಿತಾಂಶವನ್ನು ನೀಡುತ್ತಿತ್ತು. ಬಾರ್ಬರಾ ಅವರು 1948ರಲ್ಲಿ ಈ ವಿಭಜಿಸುವ ಭಾಗ (Dissociation –Ds) ಮತ್ತು ವರ್ತನೆಗೆ ಅಣಿಗೊಳಿಸುವ ಭಾಗ (Activator –Ac) ಗಳೆರಡೂ ಹಾರಾಡುವ, ತಮ್ಮ ಸ್ಥಳವನ್ನು ಬದಲಾಯಿಸುವ ಮಹತ್ವದ ಶೋಧವನ್ನು ಮಾಡಿದರು.

ಈ ಮಹತ್ವದ ಶೋಧವನ್ನು ಕೆಲವು ನಿಯಂತ್ರಿತವಾದ ಮೆಕ್ಕೆಜೋಳದ ಸಂಕರಗಳಲ್ಲಿ ಮೇಲೆ ಹೇಳಿದ ಭಾಗಗಳು ಸ್ಥಳಾಂತರಗೊಂಡು ಕಾಳುಗಳಲ್ಲಿ ಬಣ್ಣಗಳ ಮೂಲಕ ವ್ಯಕ್ತವಾಗುವುದನ್ನು ಸೂಕ್ಷ್ಮದರ್ಶಕದ ವಿಶ್ಲೇಷಣೆಗಳಿಂದ ವಿವರಿಸಿದರು. ಹಾಗೆಯೇ Ac ಯು ನಿಯಂತ್ರಿಸುವುದನ್ನೂ Ds ಯು ಕ್ರೋಮೋಸೋಮನ್ನು ವಿಭಜಿಸುವುದನ್ನೂ ನಿಖರವಾಗಿ ಗುರುತಿಸಿದರು. Ds ಯು ಚಲಿಸಿದಾಗ ಅದರ ಮೂಲ ಬಣ್ಣವು ನಿಸ್ತೇಜಗೊಂಡು ಜೀವಿಕೋಶದಲ್ಲಿ ಮತ್ತೊಂದು ಬಗೆಯ ಬಣ್ಣದ ವಿಕಾಸದ ಹುಟ್ಟಿಗೆ ಕಾರಣವಾಗುವುದನ್ನೂ ಗುರುತಿಸಿದರು. ಅದರ ಜೊತೆಗೆ ಈ ಬಗೆಯ ಚಲನೆಯ ಅಥವಾ ಹಾರಾಟವು ಗೊತ್ತಾದ ಮಾದರಿಯಲ್ಲಿ ಇರದೆ, ಹೇಗೆಂದರೆ ಹಾಗೆ ಇರುವುದನ್ನೂ ಸಹಾ ಅವರು ದಾಖಲಿಸಿದರು. ಆದ್ದರಿಂದಲೇ ಒಂದೊಂದೂ ಒಂದೊಂದು ಬಗೆಯ ಮೊಸಾಯಿಕ್ಗಳಾಗಿ ಪ್ರದರ್ಶಿತಗೊಳ್ಳುತ್ತಿದ್ದವು. ಜೊತೆಗೆ ಇವು ಆನುವಂಶಿಕವಾಗಿಲ್ಲದೆ ಆಯಾ ಮಾದರಿಯಲ್ಲಿ ಸೀಮಿತವೂ ಆಗಿರುತ್ತಿದ್ದವು. Ds ಮತ್ತು Ac ಗಳು ಒಂದು ಜೀವಿಕೋಶದಲ್ಲಿ ಅವಲಂಭಿತವಾಗಿ ಕಾರ್ಯ ನಿರ್ವಹಿಸುತ್ತಾ ಇರುವುದನ್ನೂ ಸಹಾ ಮೆಕ್ಲಿಂಟಾಕ್ ಅವರು ಕಂಡುಹಿಡಿದರು.
ಬಾರ್ಬರಾ ಅವರು 1948 ಮತ್ತು 1950 ನಡುವೆ ಇದನ್ನೆಲ್ಲಾ ಒಂದು ಸಿದ್ಧಾಂತವಾಗಿ ಅಭಿವೃದ್ಧಿಪಡಿಸಿ ಒಟ್ಟಾರೆಯ ನಿಭಾಯಿಸುವಿಕೆಯನ್ನು “ಕಂಟ್ರೋಲಿಂಗ್ ಯುನಿಟ್”ಗಳು ಎಂದೂ ಕರೆದರು. ಹಾಗಾಗಿ ಒಂದು ಜೀವಿಯ ಜೀನೋಮಿನಲ್ಲಿಯ ಸ್ಥಿರತೆಯ ಪರಿಕಲ್ಪನೆಗೆ ಮೆಕ್ಲಿಂಟಾಕ್ ಅವರು ಸವಾಲು ಒಡ್ಡಿದರು. ಎಲ್ಲಾ ಒಂದು ಗೂಡಿದ ಸಂಶೋಧನಾ ವಿವರಗಳನ್ನು “The origin and behavior of mutable loci in maize” ಎಂಬುದಾಗಿ 1950ರಲ್ಲಿ ಮಹತ್ವದ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಿಸಿದರು. ನಂತರ ಮುಂದಿನ 1951ರ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ನ ಬೇಸಿಗೆಯ ಸಮ್ಮೇಳನದಲ್ಲಿ ಅದನ್ನೇ ವಿವರವಾಗಿ ಮಂಡಿಸಿದರು. ಇದೊಂದು ಜೀವಿವಿಜ್ಞಾನದಲ್ಲಿ ಈವರೆಗೂ ಊಹಿಸಿರಲಾರದಂತಹಾ ಸಂಶೋಧನೆಯಾಗಿ ಹೊರಬಂದಿತು.
ವಿಜ್ಞಾನದಲ್ಲಿ ಹೊಸ ವಿಷಯಗಳು ಪ್ರಕಟಗೊಂಡಾಗ ಹೀಗೂ ಇರಬಹುದಾ ಎಂಬ ಅಭಿಪ್ರಾಯಗಳ ವ್ಯಕ್ತ ಪಡಿಸುವಿಕೆಯು ಆರಂಭವಾಗುತ್ತದೆ. ಅದೇ ಸುಮಾರಿಗೆ 1970ರಲ್ಲಿ ಅಮೆರಿಕ ಅಧ್ಯಕ್ಷರಿಂದ “ನ್ಯಾಶನಲ್ ಮೆಡಲ್ ಆಫ್ ಸೈನ್ಸ್” ಪುರಸ್ಕಾರದಿಂದ ಅವರ ಪ್ರಭಾವಳಿಯೇ ಬದಲಾಗಿ ಬಿಡುತ್ತದೆ. ಮುಂದೆ ವಿಜ್ಞಾನ ಜಗತ್ತಿಗೆ ಖ್ಯಾತರಾಗಿ ತೆರೆದುಕೊಳ್ಳುವ ಕಾಲ ಆರಂಭವಾಗುತ್ತದೆ.
ಅವರ ಜೀವನ ಅಧ್ಯಯನ ಮಾಡಿದಂತಹ ವಿಜ್ಞಾನಿಗಳು ಹೇಳುತ್ತಾರೆ, ಅವರಿಗೆ ನೊಬೆಲ್ ಪ್ರಶಸ್ತಿ ಬಂದದ್ದು ಈ ಜಂಪಿಂಗ್ ಜೀನ್ಸ್ ಇಂದ ಎಂಬುದೇನೋ ಸರಿಯೇ, ಆದರೆ ಬರಬೇಕಾಗಿದ್ದು ಮತ್ತು ವಿಜ್ಞಾನವು ಇನ್ನೂ ಗಮನಿಸಬೇಕಾಗಿದ್ದು ಏನು ಎಂದರೆ ಆ ಜೀನ್ಗಳು ಜಂಪ್ ಆಗೋದು ಅಷ್ಟೇ ಅಲ್ಲ, ಜಂಪ್ ಆದ ಮೇಲೆ ಅಲ್ಲಿ ಮಾಡುವ ಬದಲಾವಣೆ ಇದೆಯಲ್ಲ ಅದನ್ನೂ ಕೂಡಾ ಅವರು ಊಹಿಸಿ ಅರ್ಥ ಮಾಡಿಕೊಳ್ಳಬೇಕು ಅಂದುಕೊಂಡಿದ್ದಕ್ಕೆ! ಹಾಗೆಯೇ ಅಗಿರುವುದರಿಂದಲೇ ಇವತ್ತು ಇಷ್ಟೊಂದು ವೈವಿಧ್ಯತೆ ಇರೋದು. ಇಷ್ಟೊಂದು ಜೀವವಿಜ್ಞಾನದ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಆಗಿರೋದು. ಮತ್ತೆ ಇಡೀ ಜೀವವಿಜ್ಞಾನವನ್ನು ಆ ಮಾಲಿಕ್ಯುಲರ್ ಲೆವೆಲ್ನಲ್ಲಿ ಅಂದರೆ ಜೀನ್ಗಳ ಹಿಂದೆ ಹೋಗಿ ಅದರ ವೈವಿಧ್ಯತೆಯನ್ನು ಕಲಿಯಲು ಸಾಧ್ಯ ಅಗಿರೋದು ಮೆಕ್ಲಿಂಟಾಕ್ ಅವರ ಸಂಶೋಧನೆ ಮೂಲಕ. ಇಂದು ಅನೇಕ ಔಷಧಿಗಳ ವಿಜ್ಞಾನದಲ್ಲಿ, ಅನೇಕ ವೈದ್ಯಕೀಯ ಅಧ್ಯಯನಗಳಲ್ಲಿ, ಅನೇಕ ರೋಗರುಜಿನಗಳನ್ನು ವಾಸಿ ಮಾಡುವ, ಅರ್ಥ ಮಾಡಿಕೊಳ್ಳುವ ವಿವಿಧ ವೈಜ್ಞಾನಿಕ ಸಂಗತಿಗಳಲ್ಲಿ ಇದರ ಬಳಕೆ ತುಂಬಾ ಆಗುತ್ತಿದೆ. ಹೀಗಾಗಿ ಒಬ್ಬ ಸಾಧಾರಣ ಮನೆತನದಲ್ಲಿ ಹುಟ್ಟಿದಂತಹ ಹೆಣ್ಣುಮಗಳು, ಶಾಲೆಗೆ ಕಳಿಸುವುದಕ್ಕೂ ಯೋಚನೆ ಮಾಡುವಂತಹ, ಹೆಚ್ಚಿನ ಓದಿಗೆ ಅನುಮಾನ ಪಡತಕ್ಕಂತಹ ಒಂದು ಕುಟುಂಬದಲ್ಲಿ ಹುಟ್ಟಿದ ಒಬ್ಬ ಹೆಣ್ಣುಮಗಳು ನೊಬೆಲ್ ಪ್ರಶಸ್ತಿಯವರೆಗೂ ಬೆಳೆದದ್ದಲ್ಲದೆ ಇಡೀ ವಿಜ್ಞಾನವನ್ನೇ ಬದಲಾಯಿಸಿ ಹೊಸ ವಿಜ್ಞಾನವನ್ನು ಹುಟ್ಟಿ ಹಾಕಿದರು. ಇವತ್ತು ಜೆನೆಟಿಕ್ಸ್ ಏನಾದರೂ ಹೊಸತನ ಕಂಡುಕೊಂಡಿದ್ದರೆ, ಇವತ್ತಿನ ವಿಜ್ಞಾನ ಜಗತ್ತು “ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್, ಸೆಂಟರ್ ಫಾರ್ ಮಾಲಿಕ್ಯುಲರ್ ಬಯಾಲಜಿ, ಮುಂತಾದ ಅಧ್ಯಯನ ಕೇಂದ್ರಗಳನ್ನು ಕಂಡಿದ್ದರೆ, ಅವೆಲ್ಲಕ್ಕೂ ಹೊಸ ಆಯಾಮಗಳು ಏನಾದರೂ ಸಿಕ್ಕಿದ್ದರೆ ಅದು ಬಾರ್ಬರಾ ಮೆಕ್ಲಿಂಟಾಕ್ ಅವರ ಆಲೋಚನೆಯ ಶೋಧಗಳಿಂದ! ಅಂತಹ ಒಬ್ಬ ಆತ್ಮವಿಶ್ವಾಸ ಉಳ್ಳ ಹೆಣ್ಣುಮಗಳು ಬಾರ್ಬರಾ ಮೆಕ್ಲಿಂಟಾಕ್ ಆಗಿದ್ದರು. ಹಾಗಾಗಿ ಈ ಮೆಕ್ಕೆಜೋಳ ಅದರ ಕಾಳಿನ ಬಣ್ಣದ ಒಂದು ಸಣ್ಣ ಕಾರಣದಿಂದ ಹುಟ್ಟಿದಂತಹ ಯೋಚನೆ ಮೆಕ್ಲಿಂಟಾಕ್ರವರ ಆತ್ಮವಿಶ್ವಾಸದ ಮತ್ತು ಅವರ ಆತ್ಮಶ್ರದ್ಧೆಯಿಂದ ವಿಜ್ಞಾನವಾಗಿ ಇವತ್ತು ನಮ್ಮ ಜೊತೆ ಇದೆ. ಮೆಕ್ಲಿಂಟಾಕ್ ರವರು ಎಲ್ಲ ಹೆಣ್ಣುಮಕ್ಕಳಿಗೂ ಅದರಲ್ಲೂ ವಿಜ್ಞಾನವನ್ನು ಕಲಿಯುವ ಎಲ್ಲ ಹೆಣ್ಣುಮಕ್ಕಳಿಗೂ ನಿಜಕ್ಕೂ ಆದರ್ಶಪ್ರಾಯರು.
ನೊಬೆಲ್ ಪುರಸ್ಕಾರದ ಸಮಯದಲ್ಲಿ ಅವರ ಆಲೋಚನೆ ಮತ್ತು ಅಧ್ಯಯನಗಳು ನಡೆದು 30 ವರ್ಷಗಳ ನಂತರವಷ್ಟೇ ಗುರುತಿಸಿದ್ದನ್ನು ಗ್ರೆಗೊರ್ ಜಾನ್ ಮೆಂಡಲ್ ಅವರಿಗೂ ಆನುವಂಶಿಕ ಸಂಗತಿಗಳ ವಿಚಾರದಲ್ಲಿ ಯಾರಿಗೆ ತಿಳಿಯದಂತೆ ಆಗಿದ್ದನ್ನು ಬಾರ್ಬರಾ ಅವರಿಗೂ ಸಮೀಕರಿಸಿ ನೆನೆಪಿಸಿಕೊಳ್ಳಲಾಯಿತು. 1986ರಲ್ಲಿ “ನ್ಯಾಶನಲ್ ವುಮನ್ ಆಫ್ ಹಾಲ್ ಆಫ್ ಫೇಮ್” ಗೌರವವನ್ನು ನೀಡಲಾಯುತು. ಮುಂದೆ 1989ರಲ್ಲಿ ರಾಯಲ್ ಸೊಸೈಟಿಯ ವಿದೇಶಿ ಸದಸ್ಯೆ ಎಂದೂ ನಂತರ 1993ರಲ್ಲಿ ಅಮೆರಿಕದ ಫಿಲಾಸಾಫಿಕಲ್ ಸೊಸೈಟಿಯಿಂದ ಬೆಂಜಾಮಿನ್ ಫ್ರಾಂಕ್ಲಿನ್ ಮೆಡಲ್ ಯಿಂದಲೂ ಗೌರವಿಸಲಾಯಿತು. ತಮ್ಮ 90ನೆಯ ವಯಸ್ಸಿನಲ್ಲಿ 1992ರ ಸೆಪ್ಟೆಂಬರ್ 2ರಂದು ನ್ಯೂಯಾರ್ಕ್ನ ಹ್ಯೂಟಿಂಗ್ಟನ್ ಅಲ್ಲಿ ವಯೋ ಸಹಜವಾದ ಮರಣವನ್ನು ಹೊಂದಿದರು.
ಹೆಚ್ಚಿನ ಓದಿಗೆ:
Keller, Evelyn Fox.,1983. A feeling for the organism: the life and work of Barbara McClintock New York: W.H. Freeman.
The Nobel Prize in Physiology or Medicine 1983. NobelPrize.org. Nobel Prize Outreach AB 2024. Wed. 12 Jun 2024. https://www.nobelprize.org/prizes/medicine/1983/summary/
“Barbara McClintock.” Famous Scientists. famousscientists.org. 11 Dec. 2015. https://www.famousscientists.org/barbara-mcclintock/