You are currently viewing ಚಹಾದ ಎರಡು ಎಲೆ ಮತ್ತು ಕುಡಿಯೊಂದರ ಜಾಗತಿಕ ಬೆರಗು

ಚಹಾದ ಎರಡು ಎಲೆ ಮತ್ತು ಕುಡಿಯೊಂದರ ಜಾಗತಿಕ ಬೆರಗು

ಚಹಾ ಅಥವಾ ಕಾಫಿ ಇಲ್ಲದೆ, ಯಾರದ್ದಾದರೂ ಮುಂಜಾವು ಆರಂಭವಾದೀತೇ? ಬೆಳಗಾದರೆ ಸಾಕು, ಟೀ-ಕಾಫಿಗಳನ್ನು ಗುಟುಕರಿಸಿತ್ತಾ, ತಣ್ಣನೆಯ ರಾತ್ರಿಯನ್ನು ಕಳೆದು ಪೇಯದ ಬಿಸಿಯಿಂದ ಹಗಲಿಗೆ ತೆರೆದುಕೊಳ್ಳುತ್ತೇವೆ. ನಮ್ಮವಲ್ಲದ ಚಹಾ-ಕಾಫಿ ಗಿಡಗಳು ನಮ್ಮನ್ನು ಆವರಿಸಿಕೊಂಡಿರುವ ಬಗೆ ಮಾತ್ರ ರೋಮಾಂಚನಕಾರಿ. ಕೆಲವರಂತೂ ಒಂದು ಕಪ್ ಚಾ…ಕುಡಿಯದೇ ಏನನ್ನೂ ಮಾಡಲಾರರು. “ಚಾ… ಒಳಗೆ ಹೋದರೇನೆ ನಿತ್ಯಕರ್ಮಕ್ಕೂ ಒಂದು ದಾರಿ.. ಮಾರಾಯರೇ” ಎನ್ನುವ ಕೆಲವು ಗೆಳೆಯರು ಇದ್ದಾರೆ. ಅದೇನೂ ಅಲ್ಲ ಬಿಡಿ, ಜಗತ್ತಿನಲ್ಲಿ ನೀರನ್ನು ಹೊರತು ಪಡಿಸಿದರೆ ಅತೀ ಹೆಚ್ಚು ಕುಡಿಯುವ ದ್ರವ ಎಂದರೇನೇ ಚಹಾ! ಕೆಲವರಂತೂ It is a part of me, I drink loads..barrels! ಎಂದು ಉದ್ಘರಿಸುವವರೂ ಇದ್ದಾರೆ. ಇಷ್ಟೆಲ್ಲಾ ಮೋಡಿ ಮಾಡಿರುವ ಚಹಾವನ್ನು ಚೀನಾದ ಸಾಂಸ್ಕೃತಿಕ ಪರಿಸರದಿಂದ ಹೊರಗಿನ ಜಗತ್ತಿಗೆ ಕಷ್ಟಪಟ್ಟು ಕದ್ದು ತಂದುಕೊಟ್ಟರು ಎಂದರೆ ಅಚ್ಚರಿಯಾಗುವುದಲ್ಲವೆ?

ಹೌದು, ಚಹಾ ಎಂಬುದು ಚೀನಾವನ್ನು ಹೊರತು ಪಡಿಸಿ, ಹೊರ ಜಗತ್ತಿಗೆ ಒಂದು ಕುತೂಹಲದ ಸಂಗತಿಯಾಗಿತ್ತು. ಚೀನೀ ಸಂಸ್ಕೃತಿಯಲ್ಲಿ ಸಹಸ್ರಾರು ವರ್ಷಗಳ ಹಿಂದೆಯೇ ಇದ್ದರೂ ಆಧುನಿಕ ಜಗತ್ತಿಗೆ ತೆರೆದುಕೊಳ್ಳದಂತೆ ಅದನ್ನು ತೀರಾ ಇತ್ತೀಚೆಗಿನವರೆಗೂ ಗೌಪ್ಯವಾಗಿಯೇ ಇರುವಂತೆ ಚೀನಾ ಕಾಪಾಡಿಕೊಂಡಿತ್ತು. ಯೂರೋಪಿನ ದೇಶಗಳಿಗೆ ಲಾಭದ ವಹಿವಾಟಿನ ಚಹಾ ಅತಿದೊಡ್ಡ ಕೌತುಕವಾಗಿತ್ತು. ಅದೊಂದು ಸಸ್ಯದ ಉತ್ಪನ್ನ ಎಂದೂ ತಿಳಿದಿರಲಿಲ್ಲ. ಸಾಲದಕ್ಕೆ ಅದರ ಸಂಸ್ಕರಣೆಯ ಬಹುದೊಡ್ಡ ಕ್ರಿಯಾಶೀಲ ವಿಚಾರಗಳ ಪರಿಚಯವಂತೂ ಸಾಧ್ಯವೇ ಇರಲಿಲ್ಲ. ಚಹಾ ಒಂದು ಪೊದರು ಗಿಡವಾಗಿದ್ದು, ಕೃಷಿ ಮಾಡುವಲ್ಲಿ ಸಣ್ಣ ಮರ ಎನ್ನಬಹುದು. ವನ್ಯಸ್ಥಳಗಳಲ್ಲಿ ದೊಡ್ಡ ಮರಗಳೂ ಇವೆ. ಅದರ ವೈಜ್ಞಾನಿಕ ಹೆಸರಾದ Camellia sinensis ನಲ್ಲಿ ಸಂಕುಲದ ಹೆಸರಾದ Camellia ಚೀನಿ ಭಾಷೆಯ “ಚಹುವಾ” ದಿಂದ ಬಂದಿದ್ದರೆ, ಪ್ರಭೇದದ ಹೆಸರಾದ sinensis ನ ಅರ್ಥವೇ “ಚೀನಾದಿಂದ ಬಂದದ್ದು” ಎಂಬುದಾಗಿದೆ. ಸಂಕುಲದ ಹೆಸರನ್ನು 1753ರಲ್ಲೇ ಕಾರ್ಲ್‍ ಲಿನೆಯಾಸ್ ಫಿಲಿಪೈನ್ಸ್ ಸಸ್ಯಸಾಮ್ರಾಜ್ಯದ ಅನ್ವೇಷಕ ಜಾರ್ಜ್‍ ಕ್ಯಾಮೆಲ್ ಜ್ಞಾಪಕಾರ್ಥವಾಗಿ Camellia ಎಂದು ಕರೆದಿದ್ದರು. ಆಗ ಅದು ಒಂದು ಚಂದದ ಹೂಬಿಡುವ ಗಿಡವಷ್ಟೇ ಅದರ ಬಗೆಗಿನ ತಿಳಿವಳಿಕೆ. Camellia ಸಂಕುಲದಲ್ಲಿ ಸಾಕಷ್ಟು ಹೂವಿನ ಅಲಂಕಾರಿಕ ಸಸ್ಯಗಳಿವೆ.

ಸುಮಾರು 2000 ವರ್ಷಗಳ ಹಿಂದಿನಿಂದಲೇ ಚೀನಾದಲ್ಲಿ ಚಹಾ ಬಳಕೆಯಲ್ಲಿತ್ತು. ಅದರ ತಯಾರಿಯ ವಿಧಾನವನ್ನು ಅರಿಯಲು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯು ರಾಬರ್ಟ್‍ ಫಾರ್ಚೂನ್‍ ಎಂಬುವವರ ನೆರವು ಪಡೆದದ್ದಲ್ಲದೇ, ಉದ್ದೇಶಪೂರ್ವಕವಾಗಿ ಮೊಟ್ಟ ಮೊದಲಬಾರಿಗೆ ಚಹಾ ಗಿಡಗಳನ್ನು ಡಾರ್ಜಲಿಂಗ್ ಗೆ 1848ರಲ್ಲಿ ಕದ್ದು ತರಿಸಿತು. 1848 ಮತ್ತು 1851ರ ನಡುವೆ ಸುಮಾರು ಎರಡೂವರೆ ವರ್ಷಗಳ ಕಾಲ ರಾಬರ್ಟ್‍ ಚೀನಾದೊಳಗೆಲ್ಲಾ ಸುತ್ತಾಡಲು ಅನುಕೂಲವಾಗುವಂತೆ ಚೀನಿಯರಂತೆಯೇ ತಲೆಯ ಕೂದಲನ್ನು ಬೋಳಿಸಿಕೊಂಡು, ಜುಟ್ಟು ಬಿಟ್ಟು, ಗಡ್ಡ-ಮೀಸೆಗಳನ್ನೂ ಅವರಂತೆಯೇ ಬಿಟ್ಟು ವೇಷ ಮರೆಸಿ ಅಲೆದಾಡಿಕೊಂಡಿದ್ದರು. ಆಗ ಚಹಾ ತೋಟಗಳ ನಿರ್ವಹಣೆ, ಚಹಾ ಎಲೆಗಳಿಂದ ಸಂಸ್ಕರಿಸಿ ಚಹಾ ಪುಡಿಯನ್ನು ತಯಾರಿಸುವುದನ್ನು ಕಲಿತರು. ಆತ ಚೀನೀ ಭಾಷೆಯನ್ನೂ ಕಲಿತುಕೊಂಡು, ಎಲ್ಲಾ ತಂತ್ರಗಳನ್ನೂ ತಿಳಿದು ಅಲ್ಲಿಂದ ಸುಮಾರು 20,000 ಸಸ್ಯಗಳೊಂದಿಗೆ ಡಾರ್ಜಲಿಂಗ್ ತಲುಪಿ, ಅಲ್ಲಿಂದ ಅಸ್ಸಾಮಿಗೆ ನಂತರ ಬ್ರಿಟನ್ನಿಗೆ ತಂದುಕೊಟ್ಟ ವ್ಯಕ್ತಿ. ರಾಬರ್ಟ್‍ ಮೂಲತಃ ಸ್ಕಾಟ್‍ ಲ್ಯಾಂಡಿನ ನರ್ಸರಿಯಲ್ಲಿ ವೃತ್ತಿ ಮಾಡಿಕೊಂಡಿದ್ದ ವ್ಯಕ್ತಿ. ತನ್ನ ಆಸಕ್ತಿ ಮತ್ತು ಸಾಹಸಮಯ ಶ್ರದ್ಧೆಯಿಂದ ರಾಯಲ್ ತೋಟಗಾರಿಕ ಸಂಸ್ಥೆಯಲ್ಲಿ ತೋಟನಿರ್ವಹಣಾ ಮುಂದಾಳಾಗಿದ್ದಲ್ಲದೆ, ಚೀನಾ ಯಾತ್ರೆಯ ಸವಾಲನ್ನೂ ನಿರ್ವಹಿಸಿದ ಛಲಗಾರ. ಚೀನಾದಿಂದ ಅನಧಿಕೃತವಾಗಿ ಕೆಲವು ಚಹಾ ತೋಟಗಾರರನ್ನೂ ತನ್ನೊಟ್ಟಿಗೆ ಕರೆದುತಂದ ರಾಬರ್ಟ್‍ ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಚೀನಾದ ಚಹಾ-ಏಕಸ್ವಾಮ್ಯತೆಯನ್ನು ಪರ್ಮನೆಂಟಾಗಿ ಮುರಿದ ವ್ಯಕ್ತಿ!

ಹೀಗೆ, ಚಹಾ ಚೀನಾದ ಮೂಲದಿಂದ ಹೊರ ಜಗತ್ತಿಗೆ ಸಹಸ್ರಾರು ವರ್ಷಗಳ ನಂತರವೇ ತಿಳಿದು ಬಂದಿತು. ಯೂರೋಪ್ ಸಮುದಾಯವು 17 ಹಾಗೂ 18ನೆಯ ಶತಮಾನದಲ್ಲಿ ಜಗತ್ತಿನ ಮೂಲೆಮೂಲೆಗಳ ಹುಡುಕಾಟದಿಂದ ಗಿಡ-ಮರ-ಬಳ್ಳಿಗಳ ಅರಿವನ್ನು ಒರೆಹಚ್ಚಿ ನೋಡುತ್ತಾ ವೈಜ್ಞಾನಿಕ ಚೌಕಟ್ಟಿನೊಳಗೆ ವಿವರಿಸಲು ಪ್ರಯತ್ನಿಸಿತು. ಚಹಾ ಪೇಯದ ತಿಳಿವಳಿಕೆಯು ಒಂದು ಅಮದು ಸಂಗತಿಯಾಗಿ ಗೊತ್ತಿದ್ದರೂ, ನಿಜವಾದ ಅದರ ಹಿಂದನ ಬೆರಗಿನ ವೃತ್ತಾಂತಗಳು ತಿಳಿದಿರಲೇ ಇಲ್ಲ. ಸುಮಾರು ಮೂರು ಬಾರಿ ಚೀನಾಕ್ಕೆ ಭೇಟಿಕೊಟ್ಟ ರಾಬರ್ಟ್‍ ಸುಮಾರು 1843 ರಿಂದ 1862ರವರೆಗೂ ಸಸ್ಯಗಳ ಬೇಟೆಯಲ್ಲಿ ಅಥವಾ ಹುಡುಕಾಟದಲ್ಲಿ ಅಲೆಮಾರಿಯಾಗಿದ್ದರು. ಭಾರತವೂ ಸೇರಿದಂತೆ, ಪೂರ್ವ ರಾಷ್ಟ್ರಗಳ ಭೇಟಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ಹೆಚ್ಚೂ ಕಡಿಮೆ ಸುಮಾರು 170ರಿಂದ 200 ವರ್ಷಗಳಲ್ಲಿ ಚಹಾ ಜಗತ್ತಿನ ಅತ್ಯಂತ ಜನಪ್ರಿಯವಾದ ಪೇಯವಾಗಿದ್ದು ನಿಜಕ್ಕೂ ದೊಡ್ಡ ಅಚ್ಚರಿ. ಅದಕ್ಕೆ ಬಹು ಮುಖ್ಯವಾದ ಕಾರಣ ಅದರ ತವರೂರು ಚೀನಾ ಮತ್ತು ಪೌರ್ಯಾತ್ಯ ಪ್ರಪಂಚ. ಪಶ್ಚಿಮದ ಜಗತ್ತು ನಿರಂತರವಾಗಿ ಪೂರ್ವ ಮತ್ತು ಚೀನಾದ ಉತ್ಪನ್ನಗಳಿಗೆ ಅದರಲ್ಲೂ ಆಹಾರ ಹಾಗೂ ಔಷಧೀಯ ಲಾಭಗಳಿರುವ ವಸ್ತುಗಳಿಗೆ ಬೆರಗಿನಿಂದಲೇ ನೋಡುತ್ತಿದೆ. ಚೀನಾ ಅಷ್ಟೊಂದು ಗೌಪ್ಯವಾಗಿಟ್ಟಿರಲು ಅದರ ಲಾಭದಾಯಿಕ ಸಂಗತಿಗಳು ಕಾರಣ ಎನ್ನುವ ನಂಬಿಕೆಗಳು ದಟ್ಟವಾಗಿದ್ದವು. ಸಸ್ಯಮೂಲದ ಸಾಂಸ್ಕೃತಿಕ ಜಗತ್ತನ್ನು ಯೂರೋಪು ಬೇಟೆಯಾಡುತ್ತಲೇ ಭೂಮಿಯನ್ನು ಸುತ್ತುವ ಹುಡುಕಾಟ ಆರಂಭಿಸಿತು. ಅದರಲ್ಲೂ ಚಹಾದ ಗುಟ್ಟನ್ನು ಮುರಿಯುವ ಮಹದಾಸೆಯಿಂದ ಇದನ್ನು ಅಭಿಯಾನವಾಗಿಸಿಕೊಂಡಿತ್ತು.

ಇಂಡಿಯಾಕ್ಕೆ ಬಂದ ಮೇಲೆ ಚಹಾ ಸಸ್ಯವು ಮೂರು ಮುಖ್ಯ ನೆಲೆಗಳನ್ನು ಸ್ಥಿರವಾಗಿ ಇರಿಸಿಕೊಂಡಿತು. ಮೊದಲು ಡಾರ್ಜಲಿಂಗ್ ಬೆಟ್ಟಗಳಲ್ಲಿ ನೆಲೆಕಂಡು, ಅಸ್ಸಾಂನಲ್ಲಿ ವಿಸ್ತಿರಿಸಿಕೊಂಡು ಮುಂದೆ ದಕ್ಷಿಣಕ್ಕೆ ಚಾಚಿ ನೀಲಗಿರಿಯಲ್ಲೂ ಸಾಮ್ರಾಜ್ಯವನ್ನು ಕಟ್ಟಿತು. ಭಾರತೀಯ ಚಹಾ ಈ ಮೂರು ಬಗೆಯ ವರ್ಗೀಕರಣವನ್ನು ವಹಿವಾಟಿನಲ್ಲಿ ತೊಡಗಿಸಿದೆ. ನಂತರ ಹಿಂದೂ ಸಾಗರವನ್ನು ದಾಟಿ ಶ್ರೀಲಂಕಾಗೂ ಕಾಲಿಟ್ಟು, ಬೇರು ಬಿಟ್ಟು ವಹಿವಾಟಿನ ನೆಲೆಯನ್ನು ಕಂಡಿತು. ಬ್ರಿಟೀಷ್ ಸಾಮ್ರಾಜ್ಯಶಾಹಿಯ ಭಾಗವಾಗಿ ಚಹಾದ ವಿಸ್ತರಣೆ ಮಾರಾಟ ಇತ್ಯಾದಿಗಳ ಮೂಲಕ ಬಹು ದೊಡ್ಡ ರಾಜಕೀಯ ಪ್ರೇರಣೆಯನ್ನು ಈ ಒಂದು ಸುಂದರ ಹೂವಿನ ಗಿಡ ತಂದೊಡ್ಡಿದೆ ಎಂದರೆ ಅಚ್ಚರಿಯ ಜೊತೆಗೆ ಭಯವೂ ಆಗಬಹುದು. ಅಮೆರಿಕಾದ ವಸಾಹತು ನೆಲಕ್ಕೆ ಬ್ರಿಟನ್ ದೇಶವು ತನ್ನ ಈಸ್ಟ್‍ ಇಂಡಿಯಾ ಕಂಪನಿಯ ಮೂಲಕ ಚೀನಾದ ಚಹವನ್ನು ಮಾರುವ ಕಾಯಿದೆಯನ್ನು ವಿರೋಧಿಸುವ ಚಳುವಳಿಯಾದ “ಬೋಸ್ಟನ್ ಟೀ ಪಾರ್ಟಿ”ಯು ಮುಂದೆ ಅಮೆರಿಕಾದ ಕ್ರಾಂತಿಗೆ ಕಾರಣವಾಯಿತು. ಅದರ ನಂತರದಲ್ಲಿ 1835 ಮತ್ತು 60ರ ನಡುವೆ ಚೀನಾದಿಂದ ಚಹಾ ಸಂಸ್ಕರಣದ ತಂತ್ರಗಳ ಕದಿಯುವ ಬೇಹುಗಾರಿಕೆಯ ಸಂದರ್ಭದಲ್ಲಿ ಚೀನಾದೊಡನೆ ಬ್ರಿಟನ್ ಎರಡು ಬಾರಿ ಅಫೀಮು ಯುದ್ದಗಳನ್ನೂ ನಿಭಾಯಿಸಬೇಕಾಯಿತು. ಇವೆಲ್ಲವೂ ವ್ಯಾಪಾರ-ವಹಿವಾಟುಗಳು ತಂದಿಟ್ಟ ಯುದ್ದಗಳು. ಅಂತೂ ಶತಮಾನಗಳ ಕಾಲ ವಹಿವಾಟು, ಮೋಹ, ಲಾಭಗಳ ಮುಂದಿಟ್ಟು ಚಹಾ ಗಿಡ ಅಕ್ಷರಶಃ ಜಗತ್ತಿನ ಬದುಕನ್ನು ಬದಲಾಯಿಸಿದ ಸಸ್ಯವಾಗಿದ್ದು ಮನುಕುಲ ಅನುಭವಿಸಿದ ಅದ್ಭುತವೇ ಸರಿ.

ಚಹಾ ಗಿಡವು ಥೀಯೇಸಿಯೇ ಎಂಬ ಸಸ್ಯಕುಟುಂಬದ ಸದಸ್ಯ. ಇದೇ ಸಂಕುಲದ ಬಹುತೇಕ ಅಲಂಕಾರಿಕ ಹೂವಿನ ಗಿಡಗಳು ಜಗತ್ತಿನಾದ್ಯಂತ ಜನಪ್ರಿಯವಾಗಿವೆ. ಚಹಾದ ಎಲೆಗಳನ್ನು ಹದವಾಗಿ ಮುರುಟಿಸಿ (ಇದೊಂದು ವಿಶೇಷ ಕಲೆಯೇ ಸರಿ), ಹಾಗೇ ಬಿಸಿ ನೀರಿನಲ್ಲಿ ತಯಾರಿಸುವ ಗ್ರೀನ್ ಚಹಾದಿಂದ ಮೊದಲ್ಗೊಂಡು ಅದನ್ನು ಸಂಸ್ಕರಿಸಿ ವೈವಿಧ್ಯಮಯ ಚಹಾ ತಯಾರಿಗಳೂ ಇವೆ. ಸಂಸ್ಕರಣೆಯಲ್ಲೂ ಕಲೆಗಾರಿಕೆಯುಳ್ಳ ವೈಧಾನಿಕತೆಯು ಪ್ರಮುಖವಾಗಿದೆ. ಸಾಧಾರಣವಾಗಿ ನಾವೆಲ್ಲ ಹೋಟೆಲ್ಲುಗಳಲ್ಲಿ ಹಾಲು ಬೆರೆಸಿ ಬಳಸುವ ಕಪ್ಪುಚಹಾವು, ಎಲೆಗಳನ್ನು ಮುರುಟಿಸಿ, ನಂತರ ಹದವಾಗಿ ಹುದುಗು ಬರಿಸುವ ವಿಧಾನದಿಂದ ತಯಾರಿಸಲಾಗುತ್ತದೆ. ಇದರಲ್ಲೂ ಮಂದವಾದ ಹುದುಗಿಸುವಿಕೆ ಹಾಗೂ ತೀವ್ರವಾದ ಹುದುಗಿಸುವಿಕೆಗಳು ಎಂಬ ಎರಡು ಪ್ರಮುಖ ಮಾದರಿಗಳೂ ಬಳಕೆಯಲ್ಲಿವೆ.

ಇಷ್ಟೆಲ್ಲಾ ವೈಧಾನಿಕತೆಯಿಂದ ವಿಂಗಡಿಸಿದ್ದರೂ ಚಹಾ ಪೇಯದ ತಯಾರಿಯಲ್ಲಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಲೆಕ್ಕವಿಲ್ಲದಷ್ಟು ವಿಶಾಲವಾದ ಬಗೆಗಳನ್ನು ಕಾಣಬಹುದು. ನೀವೇನಾದರೂ ಗೆಳೆಯ-ಗೆಳತಿಯರ ಮನೆಗೆ ಹೋದಾಗ, “ಟೀ ಮಾಡ್ತೀನಿ ಇರಿ” ಎನ್ನುವುದು ಸಹಜವಾದ ಮಾತು. ಕೆಲವರಂತೂ ನಾನು ತುಂಬಾ ಚೆನ್ನಾಗಿ ಚಹಾ ಮಾಡುತ್ತೇನೆ ಎಂದೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕಾಫಿಯಲ್ಲಿ ಈ ಬಗೆ-ಬಗೆಯ ವಿಂಗಡಣೆಗಳು ಸಿಗಲಾರವು. ನನಗೆ ಕಾಫಿ ಮಾಡಲು ಬರುವುದಿಲ್ಲ, ಎನ್ನುವ ತೀರ್ಮಾನಗಳೇ ಹೆಚ್ಚು! ಅದಕ್ಕೆ ಇವೆಲ್ಲಾ ಗೊಡವೆಯೇ ಬೇಡ, ಸುಮ್ಮನೆ ಬಿಸಿ ಹಾಲಿಗೆ ಬೆರೆಸಿ ಬಳಸುವ ಇನ್ಸ್ಟಂಟ್ ಕಾಫಿ ಬಂದಿದ್ದು! ಅಂತಹ ಇನ್ಸ್ಟಂಟ್ ಮಾದರಿಗಳಿಗೆ ಚಹಾದಲ್ಲಿ ಅಷ್ಟು ಬೇಡಿಕೆ ಇಲ್ಲ. ಅದೇನಿದ್ದರೂ ಒಲೆಯ ಮೇಲೆ ಹದವಾಗಿ ಭಟ್ಟಿ ಇಳಿಸುವ ಮಾದರಿಯ ಸೃಜನಶೀಲತೆಯನ್ನು ನೆಚ್ಚಿಕೊಂಡಿದೆ. ನಿಜ, ಚಹಾ ತಯಾರಿ ಒಂದು ಅತ್ಯಂತ ಸೃಜನಶೀಲ ಕ್ರಿಯೆ. ಹಾಗಾಗಿ ಒಂದೇ ಬಗೆಯ ಚಹಾ ರುಚಿಯು ಅಂತೇನೂ ಇಲ್ಲ. ಭಟ್ಟಿ ಇಳಿಸುವಾಗ ಹೆಚ್ಚು ಕಡಿಮೆಯಾದರೆ ಅದರ ರುಚಿಯೇ ಬಲಾಗುವುದು ನಿಶ್ಚಿತ. ಚಹಾ ತಯಾರಿಯಲ್ಲಿ ಅದರಲ್ಲಿರುವ ಥಿಯೇನ್ ಮಾತ್ರವೇ ಕಷಾಯಕ್ಕೆ ಇಳಿದು ಬರಬೇಕು. ಹೆಚ್ಚೂ-ಕಡಿಮೆಯಾದರೆ ಟ್ಯಾನಿನ್ ಸಮೇತ ಇಳಿದು ಕಹಿಯನ್ನಾವರಿಸುವುದು ತಿಳಿದ ಸಂಗತಿಯೇ! ಇದೆಲ್ಲವೂ ತಯಾರಿಯ ಭಾಗವಾಗಿದ್ದರಿಂದಲೇ ಉತ್ತಮ ಚಹಾ ತಯಾರಿ ಒಂದು ಕಲೆಯೇ ಸರಿ.

ಚಹಾ ಗಿಡಗಳನ್ನು ಬೆಳೆಸುವುದು ಒಂದು ವಿಶಿಷ್ಟ ಪದ್ದತಿಯಾದರೆ, ಚಹಾ ಎಲೆಗಳನ್ನು ಬಿಡಿಸಿ ಹದಮಾಡಿ ಪುಡಿಯಾಗಿಸುವುದು ಮತ್ತೊಂದು ವಿಶಿಷ್ಟತೆ. ಪುಡಿಯನ್ನು ಬಳಸಿ ಚಹಾ ತಯಾರಿಸುವುದರ ಬಗೆಗಳು ಮಾನವ ಜನಾಂಗಗಳಲ್ಲಿ ಹಂಚಿಹೋಗಿ ವೈವಿಧ್ಯಮಯ ಹೊಳಹುಗಳನ್ನು ಕಂಡಿರುವ ಅತ್ಯಂತ ಜನಪ್ರಿಯ ಪೇಯವಾಗಿದೆ. ಇಷ್ಟೆಲ್ಲಾ ಸಂಕಥನಗಳ ಹೊತ್ತ ಚಹಾ…ದಲ್ಲೇನಿದೆ?

ಚಹಾ ಸಸ್ಯವು ಭಾರತೀಯ ಉಪಖಂಡವೂ ಸೇರಿದಂತೆ, ಚೀನಾ ಭಾಗಗಳನ್ನೊಳಗೊಂಡ ಪೂರ್ವ ಏಶಿಯಾದಲ್ಲಿ ವಿಕಾಸಗೊಂಡಿದೆ. ನಿತ್ಯ ಹರಿದ್ವರ್ಣದ ಹಾಗೂ ಸುಂದರವಾದ ಹೂವುಗಳನ್ನೂ ಬಿಡುವ ಬಹುವಾರ್ಷಿಕ ಸಸ್ಯ. ಮರವಾಗಿ ಬೆಳೆಯದ ಸಣ್ಣ ಮರದ ಹಾಗೆ ನಿಭಾಯಿಸುವಿಕೆಯಿಂದ ಪೋಷಿಸಲಾಗುವ ಗಿಡ. ಇದರ ಹೂಗಳು ಫಲವಂತವಾಗಿ ಬಿಡುವ ಕಾಯಿಗಳಿಂದ ದೊರಕುವ ಬೀಜಗಳಿಂದ ಟೀಎಣ್ಣೆಯನ್ನು ತೆಗೆಯಬಹುದು. ಇದು ಔಷಧೀಯವಾಗಿ ಹಾಗೂ ಸೌಂದರ್ಯವರ್ಧಕವಾಗಿ ಉಪಕಾರಿಯಾಗಿದೆ. ವಹಿವಾಟಿನ ಮೂಲವಾದ ಎಲೆಗಳು ಸುಮಾರು ಶೇ 4ರಷ್ಟು ಕೆಫೀನ್ ಭರಿತವಾಗಿದ್ದು ಹಲವಾರು ದೈಹಿಕ ಹಿತವನ್ನು ತರಬಲ್ಲ ರಾಸಾಯನಿಕಗಳನ್ನು ತುಂಬಿಕೊಂಡಿದೆ. ಎಲೆಗಳ ಬಲಿಯುವಿಕೆಯನ್ನು ಅನುಸರಿಸಿ ಅದರಲ್ಲಿನ ರಾಸಾಯನಿಕಗಳು ತುಂಬಿರುತ್ತವೆ. ಹಾಗಾಗಿ ವಿವಿಧ ಎಲೆಗಳ ವಯಸ್ಸಿನ ಆಧಾರದ ಮೇಲೆ ಅದನ್ನು ಬಳಸಿ ತಯಾರಿಸಲಾದ ಚಹಾವನ್ನು ವಿಂಗಡಿಸುತ್ತಾರೆ. ಸಾಮಾನ್ಯವಾದ ಕೊಯಿಲಿನಲ್ಲಿ ತುದಿಯ 2-3 ಎಲೆಗಳ ಒಳಗೊಂಡ ಕುಡಿಯನ್ನು ಹದಮಾಡಿ ಬಳಸಲಾಗುತ್ತದೆ. ಹೆಚ್ಚು ಮಳೆ ಬೀಳುವ, ನೀರು ನಿಲ್ಲದ ಬೆಟ್ಟ-ಗುಡ್ಡಗಳ ಇಳಿಜಾರು ಪ್ರದೇಶಗಳು ಚಹಾ ಎಸ್ಟೇಟುಗಳ ಪ್ರಮುಖ ತಾಣಗಳು. ಜೊತೆಗೆ ಸದಾ ಬಿಸಿಲನ್ನೂ ಬಯಸುವ ಸಸ್ಯ.

ತುಂಬಾ ಹಿಂದಿನಿಂದಲೂ ಚಹಾ ಬಳಕೆಯ ಔಷಧಗುಣಗಾನ ನಡೆಯುತ್ತಲೇ ಇದೆ. ಮಿತವಾಗಿ ಬಳಸಿದಾಗ ಇದರ ಲಾಭಗಳು ದೊರಕಿದಂತೆ, ಅತೀ ಬಳಕೆಯಿಂದ ಯಾವ ಲಾಭವನ್ನೂ ಕಾಣಲು ಸಾಧ್ಯವಿಲ್ಲ. ಬಳಕೆಯ ಹಲವಾರು ಆರೋಗ್ಯ ನಂಬಿಕೆಗಳ ಒರೆಹಚ್ಚಿ ನೊಡುವ ಕೆಲಸವನ್ನು ವಿಜ್ಞಾನ ನಿರಂತರವಾಗಿ ಮಾಡುತ್ತಿದೆ. ಆದರೆ ಲಾಭದಾಯಿಕ ಹುನ್ನಾರಗಳಿಗೆ ಕಂಪನಿಗಳು ಹೆಚ್ಚು ಒಲವನ್ನು ತೋರಿಸುತ್ತಿದ್ದು, ಅಂತಹವುಗಳೇ ಎದ್ದು ಕಾಣುತ್ತಿವೆ.

ಉತ್ಪಾದನೆ ಹಾಗೂ ಬಳಕೆಯಲ್ಲೂ ಜಗತ್ತಿನಲ್ಲಿ ಎರಡನೆಯ ಸ್ಥಾನ ಭಾರತದ್ದು. ಚೀನಾ ಮೊದಲಿನದು. ಅದರಲ್ಲಿನ ಚಹಾ ಎಲೆಗಳು ಭಾರತದ ಚಹಾ ಎಲೆಗಳಿಗಿಂತಾ ಚಿಕ್ಕವು. ವೈವಿದ್ಯಮಯ ಚಹಾ ಮಾದರಿಗಳು ಎಲೆಗಳ ವಯಸ್ಸು, ಅವುಗಳನ್ನು ಮುರುಟಿಸುವ ವಿಧಾನ, ನಂತರ ಹುದುಗು ಬರಿಸುವಿಕೆ ಹಾಗೂ ಇವೆಲ್ಲವುಗಳಲ್ಲಿ ಬಳಸಲಾಗುವ ಉಷ್ಣತೆಯನ್ನೂ ಅನುಸರಿಸುತ್ತವೆ. ಇವೆಲ್ಲದರ ಜೊತೆಗೆ ಲಿಂಬು ಅಲ್ಲದೆ ಏಲಕ್ಕಿ, ಶುಂಠಿ ಮೊದಲಾದ ಸಂಬಾರು ಪದಾರ್ಥಗಳ ಮಿಶ್ರಣ ಇತ್ಯಾದಿಗಳಿಂದ ವೈವಿದ್ಯತೆಯನ್ನು ವಿಕಾಸಗೊಳಿಸಲಾಗಿದೆ. ಇಂತಹಾ ಭಾಗ್ಯವನ್ನು ಇದರ ಪ್ರತಿಸ್ಪರ್ಧಿಯಾದ ಕಾಫಿ ಪಡೆಯಲಾಗಿಲ್ಲ. ಕಾಫಿಯಲ್ಲಿ ಸಿಗುವ ಕೆಫೀನು ಚಹಾದಲ್ಲೂ ಸಿಗುತ್ತದೆ. ಹದವಾಗಿ ಅದರ ಜೊತೆಗೆ ಇತರೇ ರಾಸಾಯನಿಕಗಳು ಬೆರೆತು ಚಹಾವನ್ನು ವಿಶೇಷವಾಗಿಸಿ ನಾಲಿಗೆಗೆ ಒಗ್ಗಿಸಿವೆ.

ಚಹಾದ ಎಲೆಗಳ ರಸಾಯನಿಕತೆಯೂ ಅದರ ಮಾಧುರ್ಯವನ್ನು ಸಾಧಿಸಲು ನೆರವಾಗಿದೆ. ಸಾಮಾನ್ಯವಾಗಿ ಚೆನ್ನಾಗಿ ಒಣಗಿದ ಎಲೆಗಳಲ್ಲಿ ಪ್ರತಿಶತ 3-4 ರಷ್ಟು ಕೆಫೀನು ಇರುವುದುಂಟು. ನಮ್ಮ ಬಳಕೆಯ 150 ಮಿ.ಲೀ ಕಪ್ ಚಹಾದಿಂದ 15 ಮಿ.ಗ್ರಾಂನಿಂದ 60 ಮಿ.ಗ್ರಾಂ ಕೆಫೀನು ದೊರಕುತ್ತದೆ. ಕಪ್ಪುಚಹಾದಲ್ಲಿ ಹೆಚ್ಚು ಕೆಫೀನು ಇದ್ದು, ಗ್ರೀನ್ ಟೀ ಯಲ್ಲಿ ಕಡಿಮೆ ಇರುತ್ತದೆ. ಕಡು ಚಹಾ ಎನ್ನುವುದು ಅದರಲ್ಲಿರುವ ಪಾಲಿಫೀನಾಲ್ಗಳ ಹಾಗೂ ಸಂಸ್ಕರಣೆಯ ವಿಧಾನಗಳಿಂದ ಬರುವಂತಹಾ ಸ್ವಾದ. ಟೀ ಯಲ್ಲಿ ಉತ್ತೇಜಕ ರಾಸಾಯನಿಕಗಳಾದ ಗ್ಸಾಂತೀನ್ಗಳು, ಥಯೋಫೀನೈಲ್ ಮುಂತಾದವು ಕೂಡ ಇರುತ್ತವೆ. ಇವುಗಳು ಕೆಫೀನ್ ನಂತೆಯೇ ಆಹ್ಲಾದಕರ ಮನಸ್ಥಿತಿಯನ್ನು ಪಡೆಯುವುದಕ್ಕೆ ಸಹಕರಿಸುತ್ತವೆ. ಹಿತ ಮಿತವಾದ ಚಹಾ ಬಳಕೆಯು ಆರೋಗ್ಯಕರವಾದುದು. ಜೊತೆಗೆ ಹೃದಯ ಸಂಬಂಧಿ, ರಕ್ತ ಸಂಬಂಧಿ ಸಂಕಟಗಳ ನಿವಾರಣೆಗೂ ಸಹಕಾರಿ. ಅಷ್ಟಲ್ಲದೇ ಚೀನಿಯರು, ಜಪಾನಿಯರು ಚಹಾವನ್ನು ಸಾಂಸ್ಕೃತಿಕ ಭಾಗವಾಗಿಸಿ ಚಕ್ರಾಧಿಪತ್ಯವನ್ನು ಸ್ಥಾಪಿಸಿ ಮೆರೆಯುತ್ತಿದ್ದರೇ? ನಾವು ಭಾರತೀಯರು ಏನು ಕಡಿಮೆ ಅಲ್ಲವೇ?

ಆರೋಗ್ಯ, ಹಣ, ವಹಿವಾಟು, ಲಾಭ, ಮೋಹ, ಮತ್ಸರ, ಯುದ್ಧಗಳು ಅಂತರರಾಷ್ಟ್ರೀಯ ಒಪ್ಪಂದಗಳು, ಅಂತರ್ ಯುದ್ಧಗಳು, ಆಧಿಪತ್ಯಗಳ ಸ್ಥಾಪನೆ-ಪತನ, ಜೊತೆಗೆ ಸಾಂಸ್ಕೃತಿಕ ಪ್ರೀತಿ ಈ ಎಲ್ಲವನ್ನು ಎರಡು ಎಲೆಗಳು ಹಾಗೂ ಒಂದು ಕುಡಿ ನಿಭಾಯಿಸುವುದೆಂದರೆ ಸುಲಭದ ಮಾತಲ್ಲ. ಜಗತ್ತಿನ ಆರ್ಥಿಕ ವಹಿವಾಟಿನ ಏರು-ಪೇರುಗಳೂ ಚಹಾದ ಎಲೆಗಳ ಮೇಲೆ ನರ್ತಿಸುವುದನ್ನು ಸಣ್ಣ ಸಂಗತಿಯಾಗಿಸಲು ಸಾಧ್ಯವಿಲ್ಲ. ಒಂದು ಕಪ್ ಚಹಾ ನಾಲಿಗೆಯನ್ನು ಮೀಯಿಸುವುದಲ್ಲದೇ ಇಡೀ ಮನುಕುಲದ ಬದುಕನ್ನೂ ಬದಲಿಸಿದೆ.

ನಮಸ್ಕಾರ

ಚನ್ನೇಶ್

This Post Has 3 Comments

 1. Ansar Pasha G

  “ಅದೇನಿದ್ದರೂ ಒಲೆಯ ಮೇಲೆ ಹದವಾಗಿ ಭಟ್ಟಿ ಇಳಿಸುವ ಮಾದರಿಯ ಸೃಜನಶೀಲತೆಯನ್ನು ನೆಚ್ಚಿಕೊಂಡಿದೆ. ನಿಜ, ಚಹಾ ತಯಾರಿ ಒಂದು ಅತ್ಯಂತ ಸೃಜನಶೀಲ ಕ್ರಿಯೆ”
  ಚನ್ನೇಶ ರವರ ಮಾತು ಅಕ್ಷರಶಃ ಸತ್ಯ.ಲೇಖನ ಹಾಗೂ ವಿಷಯ ಬಹಳ ಚೆನ್ನಾಗಿ ಮೂಡಿಬಂದಿದೆ.
  ಅನ್ಸರ್.

 2. ಶ್ರೀಹರಿ, ಕೊಚ್ಚಿನ್

  ಚಹಾಕ್ಕಿರುವ ವೈವಿಧ್ಯಮಯ ರುಚಿ ಪರಿಮಳದ ಬಗೆಗಳು ಯಾವುದೇ ಇತರ ಪಾನೀಯಗಳಿಗಿಲ್ಲ ಎನ್ನುವುದು ಸರಿ .ಹಾಲುಹಾಕಿ ಚಹಾ ತಯಾರಿಕೆಗಳು ಒಂದು ಬಗೆಯಾದರೆ ಹಾಲಿಲ್ಲದೆ ತಯಾರಿಕೆಗಳು ಕಟ್ಟನ್ ..ಪೊಡಿಕಟ್ಟನ್ ಗಳು ತುಸುವೇ ಪುಡಿ ಬಳಸಿ ಮಾಡುವ ಚಹಾಗಳು ಕೇರಳದಲ್ಲಿ ತುಂಬಾ ಪ್ರಸಿದ್ಧಿ . ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ..

 3. Dr. Channesh Honnali

  Very interesting and informative article. Congratulations. Thank you very much.

Leave a Reply