You are currently viewing ಕ್ಲಿಕ್‌ ಕೆಮಿಸ್ಟ್ರಿ (Click Chemistry) ಮತ್ತು ಬಯೊಆರ್ಥೊಗನಲ್‌ ಕೆಮಿಸ್ಟ್ರಿ (Bioorthogonal Chemistry)ಗಳ ಪರಿಕಲ್ಪನೆ ಮತ್ತದರ ಸಾಧ್ಯತೆ

ಕ್ಲಿಕ್‌ ಕೆಮಿಸ್ಟ್ರಿ (Click Chemistry) ಮತ್ತು ಬಯೊಆರ್ಥೊಗನಲ್‌ ಕೆಮಿಸ್ಟ್ರಿ (Bioorthogonal Chemistry)ಗಳ ಪರಿಕಲ್ಪನೆ ಮತ್ತದರ ಸಾಧ್ಯತೆ

ವಿಜ್ಞಾನದ ವಿಕಾಸವು ಕೇವಲ ಫಲಿತಾಂಶ, ಪರಿಣಾಮಗಳ ಹಿನ್ನೆಲೆಯಲ್ಲಿ ಮಾತ್ರವಲ್ಲದೆ, ಪರಿಕಲ್ಪನೆಗಳ ಹಿಂದೆಯೂ ಪ್ರಮುಖವಾದ ಚಲನಶೀಲತೆಯನ್ನು ಹೊಂದಿರುತ್ತದೆ. ವರ್ತನೆಗಳ ಹಾಗೂ ಸಂರಚನೆಗಳ ಜೊತೆಗೆ ಆಗುಹೋಗುಗಳ ಕ್ರಿಯೆಗಳಲ್ಲಿ ರಸಾಯನ ವಿಜ್ಞಾನದ ಪಾತ್ರವು ಬಹು ಮುಖ್ಯವಾದುದು. ಹದಿನೆಂಟನೇ ಶತಮಾನದಲ್ಲಿ ಆಧುನಿಕ ರಸಾಯನ ವಿಜ್ಞಾನದ ಆರಂಭವಾದ ನಂತರ, ಅನೇಕ ರಸಾಯನವಿಜ್ಞಾನಿಗಳು ಪ್ರಕೃತಿಯನ್ನು ತಮ್ಮ ರೋಲ್ ಮಾಡೆಲ್ ಆಗಿ ಬಳಸಿದ್ದಾರೆ. ರಾಸಾಯನಿಕ ಸಂಕೀರ್ಣತೆಯನ್ನು ಸೃಷ್ಟಿಸುವಲ್ಲಿ ಪ್ರಕೃತಿಯು ಅತ್ಯುನ್ನತವಾದ ಸಾಮರ್ಥ್ಯದ ಅನಂತ ಪುರಾವೆಗಳನ್ನು ಹೊಂದಿದೆ. ನಿಸರ್ಗಕ್ಕಿಂತಾ ವಿಶೇಷವಾದ ವರ್ತನೆಗಳ, ಕ್ರಿಯೆಗಳ ಉದಾಹರಣೆಗಳು ಸಿಗುವುದು ಸಾಧ್ಯವೇ ಇಲ್ಲ. ಇದನ್ನು ಅರಿಯುವ ಮತ್ತು ಬಳಸುವ ಹಿನ್ನೆಲೆಯಲ್ಲಿ ಸಸ್ಯಗಳು, ಸೂಕ್ಷ್ಮಜೀವಿಗಳು ಮತ್ತು ಪ್ರಾಣಿಗಳಲ್ಲಿ ಕಂಡುಬರುವ ಭವ್ಯವಾದ ಮಾಲೆಕ್ಯುಲಾರ್‌ (ಆಣ್ವಿಕ) ರಚನೆಗಳು, ತಮ್ಮ ವಿಶಿಷ್ಟತೆಯಿಂದ ಮತ್ತದೇ ಅಣುಗಳನ್ನು ಕೃತಕವಾಗಿ ನಿರ್ಮಿಸಲು ಪ್ರಯತ್ನಿಸಲು ಸಂಶೋಧಕರನ್ನು ಸದಾ ಉತ್ತೇಜಿಸಿವೆ. ನೈಸರ್ಗಿಕ ಅಣುಗಳನ್ನು ಅನುಕರಿಸುವುದು ಔಷಧಗಳ ಅಭಿವೃದ್ಧಿಯಲ್ಲಿ ಅಂತೂ ಅತ್ಯಂತ ಪ್ರಮುಖ ಭಾಗವಾಗಿದೆ,

ಆಧುನಿಕ ರಸಾಯನವಿಜ್ಞಾನವು ಪ್ರಮುಖ ಆವಿಷ್ಕಾರಗಳು ಮತ್ತು ಸುಧಾರಣೆಗಳಿಂದ ಮಾತ್ರವಲ್ಲದೆ ಹೊಸ ಅಭಿವೃದ್ಧಿಯನ್ನು ವೇಗವರ್ಧಿಸುವ ಮತ್ತು ವೇಗಗೊಳಿಸುವ ಪರಿಕಲ್ಪನೆಗಳ ಸೂತ್ರೀಕರಣದಿಂದಲೂ ನಡೆಸಲ್ಪಡುತ್ತದೆ. ಅಂತಹ ಪರಿಕಲ್ಪನೆಗಳು ವಿಭಿನ್ನ ಸವಾಲುಗಳನ್ನು ಎದುರಿಸಲು ಹೊಸ ಮಾರ್ಗಗಳನ್ನು ತೆರೆಯುವ ನವೀನ ಚಿಂತನೆ-ಪ್ರಕ್ರಿಯೆಗಳನ್ನು ಉತ್ತೇಜಿಸಬಹುದು. ಕಲ್ಪನೆ ಮತ್ತು ಪರಿಕಲ್ಪನೆಗಳೆರಡೂ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಭೂತವಾಗಿ ಪ್ರಮುಖ ತತ್ವಗಳಾಗಿವೆ, ಮೂಲಭೂತವಾಗಿ ಪ್ರಸ್ತುತ ಜ್ಞಾನದ ನಮ್ಮ ಗ್ರಹಿಕೆಯನ್ನು ವಿಸ್ತರಿಸಲು ಮತ್ತು ಹೊಸ ದೃಷ್ಟಿಕೋನಗಳನ್ನು ಒತ್ತಿಹೇಳಲು ಅನುವು ಮಾಡಿಕೊಡುತ್ತದೆ. ಮಾನವರಾಗಿ, ನಮಗೆಲ್ಲರಿಗೂ ಉತ್ತೇಜನ ನೀಡಲು ಸಾಂದರ್ಭಿಕವಾಗಿ, ಕೆಲವೊಮ್ಮೆ ಆಶ್ಚರ್ಯಕರವಾಗಿ, ಕಣ್ಣು ತೆರೆಸುವಂತಹಾ ಅಗತ್ಯಕ್ಕೆ, ನಮ್ಮ ಮನಸ್ಸು ಮತ್ತು ಪರಿಕಲ್ಪನೆಗಳು ನಮ್ಮ ಗ್ರಹಿಕೆಯನ್ನು ಶಕ್ತಿಯುತಗೊಳಿಸುತ್ತಲೇ ಇರುವುದಲ್ಲದೆ, ವಿಸ್ತರಿಸುತ್ತಲೂ ಇರುತ್ತವೆ

ಈ ವರ್ಷದ ನೊಬೆಲ್‌ ಪುರಸ್ಕಾರವನ್ನು ಇಂತಹಾ ಮಹತ್ವದ ಪರಿಕಲ್ಪನೆಗಳ ವಿಕಾಸಕ್ಕೆ ಮತ್ತು ಅವುಗಳನ್ನು ಕ್ರಿಯಾತ್ಮಕವಾದ ಸಾಧ್ಯತೆಗಳ ರೂಪಿಸುವ ಸಂಶೋಧನಾತ್ಮಕ ಅಧ್ಯಯನಗಳಿಗೆ ನೀಡಲಾಗಿದೆ. ರಸಾಯನ ವಿಜ್ಞಾನಗಳ ಬೆಳವಣಿಗೆಯಲ್ಲಿ ಹೊಸಮಾರ್ಗಗಳ ಹುಡುಕಾಟದಿಂದ ವಿಶಿಷ್ಟವಾದ ಅಣುಗಳನ್ನು ನಿರ್ಮಿಸಿ ಅವುಗಳ ಬಳಕೆಯನ್ನು ಉತ್ತೇಜಿಸುವ ಪ್ರಕ್ರಿಯೆಯನ್ನು ಪುರಸ್ಕರಿಸಿದೆ. ಈ ಪ್ರಕ್ರಿಯೆಗಳ ನಿರ್ಮಿತಿಯ ಹಾದಿಯಲ್ಲಿ ಅಡ್ಡ ಬರುವ ಉಪಯೋಗವಿಲ್ಲದ ಅಣುಗಳನ್ನೂ ತಡೆಹಿಡಿದು, ಫಲಿತವನ್ನು ಕಾಣಬೇಕಾಗುತ್ತದೆ. ಸಂಕೀರ್ಣವಾದ ಅಣುಗಳ ರಚನೆಯಲ್ಲಿ ಅನೇಕ ಮೆಟ್ಟಿಲುಗಳನ್ನು ದಾಟುವುದೂ ಅನಿವಾರ್ಯ. ಇದು ಹೆಚ್ಚು ಶ್ರಮ, ಸಮಯ ಹಾಗೂ ವೆಚ್ಚವನ್ನೂ ಬೇಡುತ್ತದೆ. ಇದೆಲ್ಲವನ್ನೂ ದಾಟಿ  ಹೊಸ ಅಧ್ಯಯನ ಶಾಖೆಯನ್ನೇ ರೂಪಿಸಿದ ಕೀರ್ತಿಗೆ ಈ ವರ್ಷದ ರಸಾಯನ ವಿಜ್ಞಾನದ ನೊಬೆಲ್‌ ಪುರಸ್ಕಾರವು ಲಭಿಸಿದೆ.  “ಕ್ಲಿಕ್‌ ಕೆಮಿಸ್ಟ್ರಿ ಮತ್ತು ಬಯೊಆರ್ಥೊಗನಲ್‌ ಕೆಮಿಸ್ಟ್ರಿ” ಎಂಬ ಆ ಎರಡು ಶಾಖೆಗಳೂ, ಪರಿಕಲ್ಪನೆ ಮತ್ತು ಆನ್ವಯತೆಯಲ್ಲಿ ಪೂರಕವಾಗಿ ಇರುವುದಲ್ಲದೆ, ಒಂದರಿಂದ ಮತ್ತೊಂದರ ಮೂಲಕ ಇನ್ನೂ ಹೆಚ್ಚಿನ ಸಾಧ್ಯತೆಗಳನ್ನು ಹುಟ್ಟು ಹಾಕಿವೆ.  

 ಪುರಸ್ಕೃತರಲ್ಲಿ ಒಬ್ಬರಾದ ಬ್ಯಾರಿ ಶಾರ್ಪ್‌ಲೆಸ್‌ (Barry Sharpless) ಮೊಟ್ಟ ಮೊದಲ ಬಾರಿಗೆ “ಕ್ಲಿಕ್‌ ಕೆಮಿಸ್ಟ್ರಿ” ಎಂಬ ಪದವನ್ನು ಬಳಸಿ ಈ ಪರಿಕಲ್ಪನೆಯನ್ನು ರೂಪಿಸಿದರು. ಅವರ ಪ್ರಕಾರ ಇದೊಂದು ವಿಶಿಷ್ಟವಾದ ರಸಾಯನಿಕ ಪ್ರಕ್ರಿಯೆಯಾಗಿದ್ದು, ಅದು ವಿಶಿಷ್ಟವಾಗಿಯೂ ಫಲವನ್ನು ಕೊಡುವ ಹಾಗೂ ಶಕ್ತಿದಾಯಕವೂ ಆದ ರಸಾಯನಿಕ ಪರಿಕಲ್ಪನೆ. ಇದರ ಮೂಲಕ ಎರಡು ಅಣುಗಳನ್ನು ಅಥವಾ  ಹೆಚ್ಚು ಜೊತೆಗೆ  ಅಣುಗಳನ್ನು ಒಂದನ್ನೊಂದು ಪರಸ್ಪರ ತಾಕಿ ಉಂಟಾಗುವ “ಕ್ಲಿಕ್‌” ಸಂಯೋಜನೆಯ ಮೂಲಕ ರಸಾಯನ ಕ್ರಿಯೆಗೆ ಅಣಿಗೊಳಿಸುವುದಾಗಿದೆ. ಆದರೆ ಇಂತಹಾ ಪ್ರಕ್ರಿಯೆಗಳು ಸಹಜವಾದವಲ್ಲ. ಅಂತಹಾ ಸಾಧ್ಯತೆಗೆ ವಿಶಿಷ್ಟವಾದ ಉದಾಹರಣೆಯೊಂದಿಗೆ ಫಲವನ್ನು ಕಂಡುಕೊಳ್ಳಲಾಯಿತು.

ಹೆಚ್ಚೇನೂ ಪ್ರಕ್ರಿಯೆಗೆ ಒಳಗಾಗದ ಸಾರಜನಕದ ಹಾಗೂ ಇಂಗಾಲದ ಎರಡು ಗುಂಪುಗಳನ್ನು ಸೇರಿಸಿದಾಗ ಯಾವುದೇ ಸಂಯೋಜನೆಯು ಉಂಟಾಗುವುದಿಲ್ಲ. ಆದರೆ ಅವೆರಡೂ ಸೇರಿ ಒಂದು ಮಿಶ್ರಣವಾಗಬಹುದಷ್ಟೇ. ರಸಾಯನಿಕ ಸಂಯೋಜನೆಯು ಉಂಟಾಗಲು ಜೊತೆಗೆ ತಾಮ್ರ (Cu) ಅನ್ನು ಸೇರಿಸಿದರೆ ಎರಡನ್ನೂ ಸೇರಿಸಿ ಸಂಯೋಜನೆಗೆ ರೆಡಿ ಮಾಡುವುದಲ್ಲದೆ, ಇಡೀ ಪ್ರಕ್ರಿಯೆಯ ವೇಗವನ್ನೂ ವರ್ಧಿಸಬಲ್ಲುದು. ಹೀಗೆ ತಾಮ್ರದ ವೇಗವರ್ಧನೆಯಿಂದ “ಕ್ಲಿಕ್‌” ಸಂಯೋಜನೆಯು ಸಾಧ್ಯವಾಗುವುದಲ್ಲದೆ, ಅತ್ಯಂತ ಹೆಚ್ಚಿನ ಆನ್ವಯತೆಗಳನ್ನೂ ವೇಗವನ್ನೂ ಹೊಂದಿರುತ್ತದೆ. ಈ ಪ್ರಕ್ರಿಯೆಗಳನ್ನು ಮಾರ್ಟೆನ್‌ ಮೆಲ್ಡಲ್‌ (Morten Meldal) ಮತ್ತು ಬ್ಯಾರಿ ಶಾರ್ಪ್‌ಲೆಸ್‌ (Barry Sharpless)  ಸ್ವತಂತ್ರವಾಗಿ ರೂಪಿಸಿದರು.

ಇದು ಸಾಧ್ಯವಾದ ಕೂಡಲೆ ಕ್ಲಿಕ್‌ ಕೆಮಿಸ್ಟ್ರಿಯೆಂಬ ಸಾಧ್ಯತೆಯ ಜೊತೆಗೆ ಹೊಸ ಬಗೆಯ ಪ್ರಕ್ರಿಯೆಯನ್ನೂ ಮತ್ತು ಅದರ ಉತ್ಪನ್ನದಿಂದ ಹೆಚ್ಚಿನ ವೇಗವನ್ನೂ ಕಂಡುಕೊಳ್ಳಲಾಯಿತು. ಕೂಡಲೆ ಕ್ಲಿಕ್‌ ಕೆಮಿಸ್ಟ್ರಿಯು ಚಲಾವಣೆಗೆ ಬಂದಿತು. ಈ ರಸಾಯನಿಕ ಕ್ರಿಯೆಯು ಕ್ಲಿಕ್‌ ಕೆಮಿಸ್ಟ್ರಿಗೆ ಅತ್ಯಂತ ಪ್ರಮುಖವಾದ ಉದಾಹರಣೆಯೆಂಬಂತೆ ಬಳಕೆಗೆ ಬಂತು. ಮುಂದೆ ಇದನ್ನು ಬಳಸಿಕೊಂಡು ಅನೇಕ ಸಂಕೀರ್ಣವಾದ ಸಂಯೋಜನೆಗಳನ್ನು ರೂಪುಗೊಳಿಸಿ ಬೃಹತ್‌ ಅಣುಗಳನ್ನು ತಯಾರಿಸಲು ಸಾಧ್ಯವಾಯಿತು. ಬಗೆ ಬಗೆಯ ಆಕಾರದ ಸಂಕೀರ್ಣ ಅಣುಗಳ ತಯಾರಿಯಲ್ಲಿ ಇದರ ಉಪಯೋಗವನ್ನು ಶೀಘ್ರದಲ್ಲೇ ಕಂಡುಕೊಳ್ಳಲಾಯಿತು.

ಇಂತಹಾ ಪ್ರಕ್ರಿಯೆಗಳಿಗೆ ಹೆಚ್ಚಿನ ಆನ್ವಯತೆ ಮತ್ತು ಬೇಡಿಕೆ ಇದ್ದುದೆಂದರೆ ಜೀವಿ ವಿಜ್ಞಾನದಲ್ಲಿ! ಕಾರಣ ಜೀವಿ ವಿಜ್ಞಾನ ಅಥವಾ ಜೀವಿ ರಸಾಯನ ವಿಜ್ಞಾನದಲ್ಲಿ ಇಂತಹಾ ಪ್ರಕ್ರಿಯೆಗಳನ್ನು ಬಳಸಿ ಗೊತ್ತಾದ ಗುರಿಯನ್ನು ತಲುಪುವಂತೆ ಅಣುಗಳನ್ನು ಕಳಿಸುವುದು ಸಾಧ್ಯವಾಗಬಹುದಿತ್ತು. ಆದರೆ ಜೀವಿಕೋಶಗಳನ್ನು ತಾಮ್ರವು ಸೇರುವುದು ಎಂದರೆ, ಅದು ಆಗದ ವಿಚಾರ. ಜೀವಿಕೋಶಗಳಲ್ಲಿ ತಾಮ್ರವು ಹೆಚ್ಚಿನ ಪಾಲು ಸೇರಿದಲ್ಲಿ ಅನವಶ್ಯಕವಾಗಿ ವಿಷಕಾರಿಯಾಗಬಲ್ಲ ಸಾಮರ್ಥ್ಯವನ್ನು ತಾಮ್ರವು ಹೊಂದಿತ್ತು. ಹಾಗಿದ್ದಲ್ಲಿ ತಾಮ್ರರಹಿತವಾದ ಆದರೂ ಕ್ಲಿಕ್‌ ಸಂಯೋಜನೆಯನ್ನು ಒಪ್ಪಬಲ್ಲ ಪ್ರಕ್ರಿಯೆಗಳನ್ನು ರೂಪಿಸಬೇಕಿತ್ತು. ಅದಕ್ಕೆ ನೆರವಿಗೆ ಬಂದವರು ಕರೊಲಿನ್‌ ಬರ್ಟೊಸಿ  (Carolyn R. Bertozzi).

ಕರೊಲಿನ್‌ ಬರ್ಟೊಸಿ ಅವರು ರೂಪಿಸಿದ ಪರ್ಯಾಯವಾದ ಪ್ರಕ್ರಿಯೆಯು ಮತ್ತೊಂದು ಪರಿಕಲ್ಪನೆಯನ್ನು ರಸಾಯನ ವಿಜ್ಞಾನಕ್ಕೆ ಕೊಟ್ಟಿತ್ತು. ಅದೇ ಬಯೊಆರ್ಥೊಗನಲ್‌ ಕೆಮಿಸ್ಟ್ರಿ. ಜೀವಿಕೋಶಗಳ ಅಂಚಿನಲ್ಲಿ ಕಾರ್ಬೋಹೈಡ್ರೇಟುಗಳ ಮತ್ತು ಆಲ್ಕೈಡುಗಳ ನಡುವೆ ಕ್ಲಿಕ್‌ ಸಂಯೋಜನೆಯನ್ನು ನಡೆಸಿ ಅದೇ ಮಾರ್ಗದ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗುದನ್ನು ಕರೊಲಿನ್‌ ಬರ್ಟೊಸಿ ಕಂಡುಹಿಡಿದರು. ಇಲ್ಲಿ ತಾಮತ್ರದ ಬಳಕೆಯ ಬದಲಾಗಿ ಆಲ್ಕೈಡುಗಳ ಬಳಕೆಯಿಂದ ಯಾವುದೇ ಹಾನಿಯನ್ನು ತಪ್ಪಿಸಬಹುದಾಗಿತ್ತು. ಹೀಗೆ ಬಯೊಆರ್ಥೊಗನಲ್‌ ಕೆಮಿಸ್ಟ್ರಿ. (Bioorthogonal Chemistry) ಎಂಬ ಹೊಸತೊಂದು ಪರಿಕಲ್ಪನೆಯ ಶಾಖೆಯ ಅನಾವರಣವಾಯಿತು. ಇಲ್ಲಿ ಸರಳವಾಗಿ ಹೇಳಿದೆಯಾದರೂ ಇವುಗಳೆಲ್ಲವೂ ಅತ್ಯಂತ ಸಂಕೀರ್ಣವಾದ ಸಾಧ್ಯತೆಗಳ ಪರಿಕಲ್ಪನೆಗಳು. ಇವುಗಳಲ್ಲಿ ಒಂದು ಉತ್ತೇಜನೆಯ ಸಂಗತಿಯನ್ನು ಬರ್ಟೊಸಿ ಕಂಡುಹಿಡಿದಿದ್ದರು. ಈ ಬಗೆಯ ಕ್ಲಿಕ್‌ ಸಂಯೋಜನೆಯಲ್ಲಿ ಬಳಸಿದ ಅಣುವನ್ನು ಗುರುತು ಮಾಡಿ ಅದರ ಚಲನೆಯನ್ನು ಕಂಡುಕೊಳ್ಳುವ ಸಾಧ್ಯತೆಯನ್ನೂ ಬರ್ಟೊಸಿ ಕಂಡುಕೊಂಡಿದ್ದರು. ಇದೊಂದು ಅತ್ಯಂತ ಮಹತ್ವದ ಶಾಖೆಯಾಗಿ ವೈದ್ಯಕೀಯ, ಶರೀರಕ್ರಿಯಾ ವಿಜ್ಞಾನ ಇತ್ಯಾದಿಗಳಲ್ಲಿ ಬಳಸಲು ಅನೇಕ ಉಪಕಾರಿ ಆನ್ವಯತೆಯನ್ನು ಕೊಟ್ಟವು. ಪ್ರಮುಖವಾಗಿ ಔಷಧಿಯ ಅಧ್ಯಯನಗಳಲ್ಲಿ ಬಳಸಿದ ರಸಾಯನಿಕವು ಗೊತ್ತಾದ ಸ್ಥಳವನ್ನು ತಲುಪಲು ಈ ಕ್ಲಿಕ್‌ ಸಂಯೋಜನೆಯ ಪ್ರಕ್ರಿಯೆಗಳು ಸಹಕಾರಿಯಾಗುವುದನ್ನು ಆಕೆಯ ಆಧ್ಯಯನದಿಂದ ಸಾಬೀತುಗೊಂಡವು. ಜೊತೆಗೆ ಆ ಪ್ರಮುಖವಾದ ರಸಾಯನಿಕದ ಅಣುಗಳನ್ನು ಗುರುತು ಮಾಡಿ, ಅದರ ಚಲನೆಯನ್ನೂ ಗಮನಿಸಬಹುದಿತ್ತು. ಇದೊಂದು ಔಷಧೀಯ ಬಳಕೆಯ ಆನ್ವಯತೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿದೆ.

ಡ್ರಗ್‌ ಡಿಲೆವರಿ, ಔಷಧಗಳ ಗೊತ್ತಾದ ತಲುಪುವಿಕೆಯು ಕ್ಲಿಕ್‌ ಪ್ರಕ್ರಿಯೆಗಳಲ್ಲಿ ಬಯೊಆರ್ಥೋಗನಲ್‌ ಮೂಲಕ ಬರ್ಟೊಸಿಯವರು ರೂಪಿಸಿಕೊಟ್ಟಿದ್ದರು. ಇಂತಹಾ ವಿಶೇಷವಾದ ಪರಿಕಲ್ಪನೆಗಳನ್ನೂ ಆ ಮೂಲಕ ಹೊಸ ಬಗೆಯ ರಸಾಯನಿಕ ವಿಜ್ಞಾನದ ಶಾಖೆಗಳನ್ನೇ ಈ ಸಹಸ್ರಮಾನವು ದೊರಕಿಸಿಕೊಟ್ಟಿದೆ.

ಕ್ಲಿಕ್‌ ಕೆಮಿಸ್ಟ್ರಿಯು ಔಷಧಗಳ ಅಭಿವೃದ್ಧಿಗೊಳಿಸುವಲ್ಲಿ, ಡಿ.ಎನ್.ಎ. ಅನುಕ್ರಮಣ (ಸೀಕ್ವೆನ್ಸ್‌) ಗೊಳಿಸುವಲ್ಲಿ ಹಾಗೂ ಕ್ರಿಯಾತ್ಮಕ ವಸ್ತುಗಳ ರೂಪಿಸುವಲ್ಲಿ ಬಹಳ ದೊಡ್ಡ ಬದಲಾವಣೆಗಳನ್ನು ತರಲಿವೆ. ಈ ಮೂಲಕ ರಸಾಯನ ವಿಜ್ಞಾನದಲ್ಲಿ ಕ್ರಿಯಾತ್ಮಕತೆಯ ಯುಗವೊಂದು ವಿಕಾಸವಾದರೂ ಅಚ್ಚರಿ ಏನಿಲ್ಲ.  ಬಯೊಆರ್ಥೋಗನಲ್‌  ಕೆಮಿಸ್ಟ್ರಿಯು ಜೈವಿಕ ಅಣುಗಳು ಜೀವಿಕೋಶದ ಒಳಗೆ ಹೇಗೆ ವರ್ತಿಸುತ್ತವೆ ಎಂಬ ಅರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ರೋಗಗಳ ಆಣ್ವಿಕ (ಮಾಲಕ್ಯುಲಾರ್) ತಿಳಿವುಗಳೂ ಲಭ್ಯವಾಗಲಿವೆ. ಇದರ ಜೊತೆಗೆ ಔಷಧಗಳ ಬಳಕೆಯಲ್ಲಿ ಗೊತ್ತಾದ ಗುರಿಯನ್ನು ತಲುಪುವ ಸಾಧ್ಯತೆಯು ಹೆಚ್ಚಾಗಲಿದೆ. ಗಾಯಕ್ಕೆ ಸರಿಯಾಗಿ ಮದ್ದು ಕೊಡಲು ಅಲ್ಲಿಗೇ ಔಷಧವನ್ನು ಕಳಿಸುವ ಆ ಮೂಲಕ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ರೂಪಿಸುವಲ್ಲಿಯೂ ಸಹಕಾರಿಯಾಗಲಿದೆ.  

ಬ್ಯಾರಿ ಶಾರ್ಪ್‌ಲೆಸ್‌ (Barry Sharpless) ಈಗಾಗಲೇ 2001ರಲ್ಲಿ ನೊಬೆಲ್‌ ಬಹುಮಾನವನ್ನು ಪಡೆದವರು. ಇದೀಗ ಎರಡನೆಯ ಬಾರಿ 21 ವರ್ಷಗಳ ನಂತರ ಅದೇ ವಿಭಾಗದಲ್ಲಿ ಪಡೆದಿದ್ದಾರೆ. ಮೆಸಾಚುಸೇಟ್ಸ್‌ ತಾಂತ್ರಿಕ ಸಂಸ್ಥೆ, ಸ್ಟ್ಯಾನ್‌ ಫೋರ್ಡ್‌ ವಿಶ್ವದ್ಯಾಲಯ ಮುಂತಾದಡೆಗಳಲ್ಲಿ ಪ್ರೊಫೆಸರ್‌ ಆಗಿದ್ದ ಶಾರ್ಪ್‌ಲೆಸ್‌, 1990 ರಿಂದ ಸ್ಕ್ರಿಪ್ಸ್‌ ಸಂಶೋಧನಾ ಸಂಸ್ಥೆಯಲ್ಲಿ ರಸಾಯನ ವಿಜ್ಞಾನದ ಪ್ರೊಫೆಸರ್‌ ಆಗಿದ್ದಾರೆ. ಅಚ್ಚರಿಯ ವಿಷಯವೆಂದರೆ 1970ರಲ್ಲಿ MIT ಯಲ್ಲಿ ವೃತ್ತಿ ಆರಂಭದಲ್ಲೇ ಪ್ರಯೋಗಾಲಯದಲ್ಲಿ ನಡೆದ ರಸಾಯನಿಕ ಅಪಘಾತದಲ್ಲಿ ಒಂದು ಕಣ್ಣನ್ನು ಕಳೆದುಕೊಂಡಿದ್ದಾರೆ. ಮುಂದೆ 50 ವರ್ಷಗಳಿಗೂ ಹೆಚ್ಚು ಕಾಲ ಒಂಟಿ ಕಣ್ಣಿನಲ್ಲೇ ಸಂಶೋಧನೆ, ಅಧ್ಯಯನ ಮಾಡಿ ಎರಡು ನೊಬೆಲ್‌ ಪ್ರಶಸ್ತಿಯನ್ನು ಗಳಿಸಿದ್ದಾರೆ. ಏಪ್ರಿಲ್‌ 28, 1941 ರಲ್ಲಿ ಜನಿಸಿದ ಶಾರ್ಪ್‌ಲೆಸ್‌ ಅವರಿಗೆ ಇದೀಗ 81ರ ಹರೆಯ.

ಕ್ಲಿಕ್‌ ಕೆಮಿಸ್ಟ್ರಿಯ ವಿವರಗಳನ್ನು K. Barry Sharpless ಅವರಿಂದಲೇ ಕೇಳಲು, ಅವರ- New Developments in Click Chemistry ಎಂಬ ಉಪನ್ಯಾಸವನ್ನು ಈ ಲಿಂಕ್‌ ಅಲ್ಲಿ ನೋಡಿ.

  ಮಾರ್ಟೆನ್‌ ಮೆಲ್ಡಲ್‌ (Morten Meldal) ಅವರು ಜನವರಿ 16, 1954ರಲ್ಲಿ ಡೆನ್‌ ಮಾರ್ಕ್‌ ಅಲ್ಲಿ ಜನಿಸಿದ ರಸಾಯನಿಕ ವಿಜ್ಞಾನಿ. ಮೂಲತಃ ಕೆಮಿಕಲ್‌ ಇಂಜನಿಯರ್‌. ಡೆನ್‌ಮಾರ್ಕ್‌ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು, ಕೊಪನ್‌ ಹೇಗನ್‌ ವಿಶವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿದ್ದಾರೆ.

ಕರೊಲಿನ್‌ ಬರ್ಟೊಸಿ  (Carolyn R. Bertozzi) ಅವರು ಅಕ್ಟೊಬರ್‌ 10, 1966 ರಲ್ಲಿ ಜನಿಸಿದ ಅಮೆರಿಕನ್‌ ರಸಾಯನ ತಜ್ಞೆ. ಹಾರ್ವರ್ಡ್‌ ವಿಶ್ವವಿದ್ಯಾಲಯ, ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಮುಗಿಸಿದ ಬರ್ಟೊಸಿ ಸದ್ಯಕ್ಕೆ ಸ್ಟ್ಯಾನ್‌ಫೊರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿದ್ದಾರೆ. ಬಯೊಆರ್ಥೊಗನಲ್‌ ಕೆಮಿಸ್ಟ್ರಿಯ ಸ್ಥಾಪಕಿಯಾದ ಬರ್ಟೊಸಿ ಅವರು ತಮ್ಮ 33 ರ ಚಿಕ್ಕ ವಯೋಮಾನದಲ್ಲೇ ಮ್ಯಾಕಾರ್ಥರ್‌ ಜೀನಿಯಸ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಈ ಮೂವರೂ ವಿಜ್ಞಾನಿಗಳಿಗೆ ಹೊಸತಾದ ರಸಾಯನಿಕ ವಿಜ್ಞಾನದ ಶಾಖೆಗಳನ್ನು ತೆರೆಯುವ ಸಂಶೋಧನೆಗಳಿಗಾಗಿ ನೊಬೆಲ್‌ ಪಡೆದ ಈ ಸಂದರ್ಭದಲ್ಲಿ  CPUS ಮತ್ತು ಅದರ ಹಿತೈಷಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

Leave a Reply