ಕೋವಿಡ್-19 ಸರಣಿಯಲ್ಲಿ ಕಳೆದ ವಾರ ಮೂರು ಲೇಖನಗಳನ್ನು ಓದಿದ್ದೀರಿ. ಜೊತೆಗೆ ಹಲವರು ಕೆಲವು ಪ್ರಶ್ನೆಗಳನ್ನು ನಮ್ಮ ಜಾಲತಾಣದಲ್ಲಿ ಮತ್ತು ವೈಯಕ್ತಿಕವಾಗಿ ಕೇಳಿದ್ದಿರಿ. ಹಾಗಾಗಿ ಈ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕ ವೈಜ್ಞಾನಿಕ ಆಧಾರವುಳ್ಳ ಉತ್ತರವನ್ನು ನೀಡಲು ಈ ಸಂಚಿಕೆ ರೂಪಿಸಿದ್ದೇವೆ. ವಿಪತ್ತಿನ ಈ ಸಂದರ್ಭದಲ್ಲಿ, ಇಂತಹ ಪ್ರಶ್ನೆಗಳನ್ನು ಕೆಲವರೇ ಕೇಳಿದ್ದರೂ, ಆ ವಿಚಾರಗಳು ಬಹು ಮಂದಿಯ ಅನುಮಾನಗಳಾಗಿರಲೂ ಸಾಧ್ಯವಿದೆ. ಮಾಹಿತಿಯ ಪ್ರವಾಹದಲ್ಲಿ ಜೊಳ್ಳೆಷ್ಟು ಕಾಳೆಷ್ಟು ಎಂದು ಪ್ರತ್ಯೇಕಿಸುವುದೇ ಕಷ್ಟವಾಗಿರುವಾಗ, ಓದಿರಲಿ ಇಲ್ಲದಿರಲಿ ಎಲ್ಲವನ್ನೂ ಸುಮ್ಮನೆ ಫಾರ್ವರ್ಡ್ ಮಾಡುವ ಉಮೇದಿನಲ್ಲಿರುವ ಬೆರಳುಗಳಿರುವಾಗ, ಸುದ್ದಿಯ ಸತ್ಯಾಸತ್ಯತೆ ಅರಿಯಲು ಬೇಕಾದ ಆಕರಗಳು ಲಭ್ಯವಿದ್ದರೂ ವಿವೇಚಿಸಲು ಶ್ರಮ ಹಾಕದ ಕಾರಣ, ಹೀಗೆ ಹಲವು ಕಾರಣಗಳಿಂದಾಗಿ ಕೋವಿಡ್-19 ಖಾಯಿಲೆಯ ಬಗ್ಗೆ ತಿಳಿಯಬೇಕಾದ ವೈಜ್ಞಾನಿಕ ತಿಳಿವು ಎಲ್ಲರ ಅಗತ್ಯವಾಗಿರುವ ಈ ಸಮಯದಲ್ಲಿ, ಈ ಉತ್ತರಗಳು ಎಲ್ಲರಿಗೂ ಅವಶ್ಯ ಸಹಕಾರಿಯಾಗಲಿವೆ ಎಂಬ ನಂಬಿಕೆಯೊಂದಿಗೆ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
1. ವೈರಸ್ ಗಳು ನೈಸರ್ಗಿಕವಾಗಿ ಬಂದಿವೆಯೇ ಅಥವಾ ಮಾನವ ನಿರ್ಮಿತವೇ ಎಂದು ತಿಳಿಯಲು ಯಾವುದಾದರೂ ಮಾರ್ಗಗಳಿವೆಯೇ?
ಈ ಪ್ರಶ್ನೆ ಬಹಳ ಕಠಿಣವಾದದ್ದು. ವೈರಸ್ ಗಳ ಮೂಲ, ಅವುಗಳ ಜೀನೋಮಿಕ್ ವಿವರಗಳು, ಅವು ಉತ್ಪಾದಿಸುವ ಪ್ರೊಟೀನ್‌ಗಳು, ಅವುಗಳ ಕುಟುಂಬ ಮತ್ತು ಕುಲದಲ್ಲಿ ಇರಬಹುದಾದ ಇತರೆ ಪ್ರಬೇಧಗಳು, ಬೇರೆ ಬೇರೆ ಹಂತಗಳಲ್ಲಿ ಅವು ಮೂಲದಿಂದ ಇತರೆ ಪ್ರಾಣಿಗಳಿಗೆ ಮಾನವರಿಗೆ ಹರಡಿರಬಹುದಾದ ವಿವರಗಳು ಈ ಎಲ್ಲಾ ಸಂಗತಿಗಳನ್ನು ಆಧರಿಸಿ ಅವುಗಳ ಮೂಲವನ್ನು ನಿರ್ಧರಿಸಬಹುದು.
ಸದ್ಯದ ಕೋವಿಡ್-19 ಖಾಯಿಲೆಗೆ ಕಾರಣವಾಗಿರುವ SARS-CoV-2 ಬಾವಲಿಗಳಿಂದ ನೈಸರ್ಗಿಕವಾಗೇ ಬಂದಿರುವುದು ಎಂದು ತಜ್ಞರ ಖಚಿತ ಅಭಿಪ್ರಾಯ. ಅಮೆರಿಕಾದ ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಕ್ರಿಸ್ಚಿಯಾನ್ ಜಿ. ಆಂಡರ್ಸನ್ ಮತ್ತು ಸಹ-ಸಂಶೋಧಕರ ಅಭಿಪ್ರಾಯ. ಅವರ ಪ್ರಬಂಧ ಪ್ರಸಿದ್ಧ “ನೇಚರ್” ಪತ್ರಿಕೆಯಲ್ಲಿ ಪ್ರಕಟವಾಗಿದೆ ಕೂಡ. ಅದನ್ನು ಓದಲು ಈ ಲಿಂಕ್ ಬಳಸಿ – https://www.nature.com/articles/s41591-020-0820-9.
2. ಕ್ಲೋರೋಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಔಷಧಿಗಳಿಂದಾಗುವ ದುಷ್ಪರಿಣಾಮಗಳು ಏನು?
ಈಗಾಗಲೇ SARS-COV-2 ವೈರಸ್ಸಿನಿಂದ ಹರಡುತ್ತಿರುವ ಕೋವಿಡ್-19 ಎಂಬ ಈ ರೋಗಕ್ಕೆ ಜಗತ್ತಿನಾದ್ಯಂತ ಹಲವಾರು ಆಸ್ಪತ್ರೆಗಳು ಕ್ಲೋರೋಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಔಷಧಿಗಳನ್ನು ರೋಗಿಗಳಿಗೆ ಕೊಡಲಾರಂಭಿಸಿವೆ. ಮಲೇರಿಯಾ ರೋಗಕ್ಕೆ ಕೊಡುತ್ತಿದ್ದ ಈ ಔಷಧಿಗಳನ್ನು ಕೋವಿಡ್-19 ರೋಗಕ್ಕೆ ಕೊಡುತ್ತಿದ್ದೇವೆ ಎಂದು ಮೊದಲು ಹೇಳಿಕೆ ಕೊಟ್ಟದ್ದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು. ಅಮೇರಿಕಾದ ಅಧ್ಯಕ್ಷರು ಆ ಹೇಳಿಕೆ ಕೊಟ್ಟ ತಕ್ಷಣ ಜಗತ್ತಿನ ಹಲವು ಕಡೆ ಕೋವಿಡ್-19 ರೋಗಿಗಳು ವೈದ್ಯರ ಸಲಹೆಯೇ ಇಲ್ಲದೆ ಕ್ಲೋರೋಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗಳನ್ನು ತಮ್ಮಷ್ಟಕ್ಕೆ ತಾವೇ ತೆಗೆದುಕೊಳ್ಳಲಾರಂಭಿಸಿದರು. ಇದರಿಂದ ನೈಜೀರಿಯಾ ದೇಶದಲ್ಲಿ ಹಲವು ಸಾವುಗಳ ಮಾಹಿತಿ ಹೊರಬಿತ್ತು. ಅಮೆರಿಕಾದಲ್ಲೂ ಮುಂಜಾಗರೂಕತೆಯಿಂದ ಈ ಔಷಧಿ ತೆಗೆದುಕೊಂಡ ವ್ಯಕ್ತಿ ಅಸುನೀಗಿದ, ಹಲವರು ಆಸ್ಪತ್ರೆ ಸೇರಿದರು. ಅಸ್ಸಾಮಿನಲ್ಲಿ ವೈದ್ಯರೊಬ್ಬರು ಮುಂಜಾಗರೂಕತೆಯಿಂದ ಈ ಔಷಧಿ ತೆಗೆದುಕೊಂಡು ಸತ್ತಿರುವ ಸುದ್ದಿ ಬಂದಿದೆ.
ಈ ಕ್ಲೋರೋಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ತೆಗೆದುಕೊಳ್ಳುವಾಗ ರೋಗಿಯ ದೇಹದ ತೂಕದ ಬಗ್ಗೆ ಜ್ಞಾನವಿರಬೇಕು. ದೇಹದ ತೂಕಕ್ಕೆ ತಕ್ಕಂತೆ ಔಷಧಿ ತೆಗೆದುಕೊಳ್ಳದೇ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡರೆ ತಕ್ಷಣವೇ ದೃಷ್ಟಿ ಮಂದವಾಗುವುದು, ತಲೆ ನೋವು, ವಾಂತಿ ಬರುವುದು, ತಲೆ ಸುತ್ತುವುದು, (headache, dizziness, ringing in your ears,nausea, vomiting, stomach pain;loss of appetite, weight loss;mood changes, feeling nervous or irritable; skin rash or itching or hair loss) ಈ ಎಲ್ಲಾ ಸಾಧ್ಯತೆಗಳು ಹೆಚ್ಚಿರುತ್ತವೆ. ಇನ್ನು ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡರೆ ಸಾವು ಕಟ್ಟಿಟ್ಟ ಬುತ್ತಿ.
ಅದರಲ್ಲೂ ರೋಗಿಗಳಿಗೆ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿದ್ದರೆ ಅವರ ಮೇಲೆ ಈ ಔಷಧಗಳು ಇನ್ನು ಹೆಚ್ಚು ಅಡ್ಡ ಪರಿಣಾಮ ಬೀರುವವು.
SARS-CoV-2 ವೈರಸ್ಸು ಮನುಷ್ಯನ ದೇಹದ ಜೀವಕೋಶಗಳ ಒಳಗೆ ಸೇರಿಕೊಳ್ಳಲು ( cell surface enzyme called angiotensin-converting enzyme 2 (ACE2)) ಎಸಿಇ2 ಎಂಬ ಕಿಣ್ವದ ಸಹಾಯ ಪಡೆಯುತ್ತವೆ. SARS-CoV-2 ವೈರಸ್ಸು ಸೋಂಕು ತಗುಲಿದಾಗ ಎಸಿಇ೨ ಎಂಬ ಕಿಣ್ವದ ಪ್ರಮಾಣ ದೇಹದ ಜೀವಕೋಶಗಳ ಮೇಲೆ ಹೆಚ್ಚಾಗುತ್ತದೆ. ಇದರಿಂದ ರೋಗ ಹೆಚ್ಚು ಉಲ್ಭಣಗೊಳ್ಳುತ್ತದೆ. ನೈಸರ್ಗಿಕವಾಗಿ ಎಸಿಇ೨ ಎಂಬ ಕಿಣ್ವ ರಕ್ತದ ಒತ್ತಡವನ್ನು ಹತೋಟಿಯಲ್ಲಿಟ್ಟಿರುತ್ತದೆ. SARS-CoV-2 ವೈರಸ್ಸು ಎಸಿಇ2 ಕಿಣ್ವದ ಪ್ರಮಾಣ ಹೆಚ್ಚು ಮಾಡಿ ರಕ್ತದ ಒತ್ತಡವನ್ನು ಸಾಮಾನ್ಯ ಮಟ್ಟಕ್ಕಿಂತ ಕಡಿಮೆಮಾಡಬಹುದು.
ಅದೇ SARS-CoV-2 ವೈರಸ್ಸು ಜೀವಕೋಶಗಳ ಒಳಗೆ ಸೇರಿಕೊಳ್ಳುವುದನ್ನು ತಡೆಯಲು ಈ ಕ್ಲೋರೋಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನಗಳು ತೆಗೆದುಕೊಂಡಾಗ ಅಥವಾ ಕೊಟ್ಟಾಗ ಅವುಗಳು ಈ ಕಿಣ್ವದ ಪ್ರಮಾಣವನ್ನು ದೇಹದಲ್ಲಿ ಕಡಿಮೆಮಾಡಿ ರಕ್ತದ ಒತ್ತಡವನ್ನು ಹೆಚ್ಚು ಮಾಡಬಹುದು. ಈಗಾಗಲೇ ಮೊದಲೇ ಅಧಿಕ ರಕ್ತದ ಒತ್ತಡ ಇದ್ದವರು ಕ್ಲೋರೋಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನಗಳನ್ನು ತೆಗೆದುಕೊಂಡರೆ ಕಿಣ್ವದ ಪ್ರಮಾಣ ಕಡಿಮೆಯಾಗಿ ಆ ರೋಗಿಯ ರಕ್ತದ ಒತ್ತಡ ಇನ್ನು ಹೆಚ್ಚಾಗಿ ಹೃದಯಾಘಾತದಿಂದ ಆ ವ್ಯಕ್ತಿ ಸಾಯಬಹುದು. ಇದಲ್ಲದೇ ಉರಿಯೂತವನ್ನು ಹೆಚ್ಚು ಮಾಡುವ TNF-alpha ಮತ್ತು IL-6 ಎಂಬ ಪ್ರೊಟೀನುಗಳನ್ನು ಕ್ಲೋರೋಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನಗಳು ಕಡಿಮೆಮಾಡಿ ಉರಿಯೂತವನ್ನು ಮತ್ತು ಅದರಿಂದ ಆಗುವ ದುಷ್ಪರಿಣಾಮಗಳನ್ನು ಕಡಿಮೆಮಾಡಬಹುದು. ಆದರೆ, ಈ TNF-alpha ಮತ್ತು IL-6 ಎಂಬ ಪ್ರೊಟೀನುಗಳು ದೇಹದ ಇತರೆ ಕಾರ್ಯಗಳಲ್ಲೂ ಬೇಕಾಗಿರುವುದರಿಂದ ಕ್ಲೋರೋಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನಗಳು ಕೊಟ್ಟಾಗ ಆ ಕಾರ್ಯಗಳು ನಿಂತು ಅಡ್ಡಪರಿಣಾಮಗಳಾಗಬಹುದು. ಅಷ್ಟೇ ಅಲ್ಲದೆ ಮೂತ್ರಪಿಂಡ, ಲಿವರ್ ಸಂಬಂಧಿ ಕಾಯಿಲೆಗಳಿದ್ದವರು ಈ ಔಷಧಿಗಳನ್ನು ತೆಗೆದುಕೊಂಡರೆ ಮೂತ್ರಪಿಂಡ ಮತ್ತು ಲಿವರಿನ ಕಾರ್ಯಗಳೇ ನಿಂತು ವ್ಯಕ್ತಿಗಳು ಸಾಯಬಹುದು.
ಈಗಾಗಲೇ ಭಾರತ ಸರ್ಕಾರದ ICMR ಹೈಡ್ರಾಕ್ಸಿಕ್ಲೋರೋಕ್ವಿನನ್ನು ರೋಗಿಗಳ ಮೇಲೆ ಪ್ರಯೋಗಿಸಲು ಪರವಾನಿಗೆ ಕೊಟ್ಟು ಆಗಿದೆ. ಇದರಿಂದ ಎಷ್ಟು ಜನರಿಗೆ ಅಡ್ಡಪರಿಣಾಮಗಳಾಗಿ ಏನೇನು ತೊಂದರೆಗಳಾಗುತ್ತವೋ ಕಾದು ನೋಡಬೇಕು. ಇನ್ನು ಈ ಔಷಧಿಗಳ ಕಾರ್ಯ ಕೆಲವೊಮ್ಮೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಒಬ್ಬ ರೋಗಿಯ ಮೇಲೆ ಉತ್ತಮ ಪರಿಣಾಮ ಬೀರಿದರೆ ಇನ್ನೊಬ್ಬ ವ್ಯಕ್ತಿಯ ಮೇಲೆ ಅಡ್ಡ ಪರಿಣಾಮ ಬೀರಬಹುದು. ಆ ಕಾರಣದಿಂದ ವೈದ್ಯರು ರೋಗಿಯ ಆರೋಗ್ಯದ ಪೂರ್ಣ ಇತಿಹಾಸವನ್ನು ತಿಳಿದುಕೊಂಡು ಈ ಔಷಧಿಗಳನ್ನು ಕೊಟ್ಟರೆ ಪರವಾಗಿಲ್ಲ. ಇಲ್ಲದಿದ್ದರೆ ಅನಾಹುತಗಳು ಹೆಚ್ಚಾಗುತ್ತವೆ.
ಆಧಾರ:
Ochsendorf FR, Runne U. Chloroquine and hydroxychloroquine: side effect profile of important therapeutic drugs. Article in German.Hautarzt. 1991 Mar;42(3):140-6.
Weniger, H. Review of side effects and toxicity of chloroquine. Bull. World Health 79, 906 (1979).
3. ರಕ್ತದ ಗುಂಪುಗಳು ಕೋವಿಡ್-19 ಸೋಂಕಿಗೆ ಹೇಗೆ ಸಂಬಂಧಪಟ್ಟಿದೆ?
ರಕ್ತದ ಗುಂಪುಗಳ ನಿರ್ಧಾರವಾಗುವಲ್ಲಿ ನಮ್ಮ ದೇಹದಲ್ಲಿರುವ ರೋಗ ನಿರೋಧಕ ವ್ಯವಸ್ಥೆಗೆ ಬೇಕಾದ ಆಂಟಿಜೆನ್ ಮತ್ತು ಆಂಟಿಬಾಡೀಸ್(ಪ್ರತಿಬಂಧಕಗಳು) ಬಹು ಮುಖ್ಯ ಪಾತ್ರ ವಹಿಸುತ್ತವೆ. ಈ ಹಿಂದಿನ ಕೆಲವು ಸಂಶೋಧನೆಗಳಿಗೆ ಸಂಬಂಧಿಸಿದಂತೆ ಕಾಲರಾ, ಮಲೇರಿಯಾಗೆ ಮುಂತಾದ ಸೋಂಕಿಗೆ ಸಂಬಂಧಪಟ್ಟ ಖಾಯಿಲೆಗಳಿಗೆ ಕೆಲವು ರಕ್ತದ ಗುಂಪಿನ ಮನುಷ್ಯರು ಹೆಚ್ಚು ರೋಗ ನಿರೋಧಕ ಶಕ್ತಿ ಉಳ್ಳವರಾಗಿದ್ದಾರೆ ಎಂದು ತಿಳಿದು ಬಂದಿದೆ. ಆ ಬಗ್ಗೆ ಹಲವು ಸಂಶೋಧನಾ ವರದಿಗಳು ಪ್ರಕಟವಾಗಿದೆ ಕೂಡ.
ಆದರೆ ಸದ್ಯದ ಕೋವಿಡ್-19 ಗೆ ಸಂಬಂಧ ಪಟ್ಟ ಹಾಗೆ ಕೇವಲ ಒಂದು ಸಂಶೋಧನಾ ಪ್ರಬಂಧ ಪ್ರಕಟವಾಗಿದೆ. ಆದರೆ ಈ ಪ್ರಬಂಧಕ್ಕೆ ಪೂರಕವಾಗಿ ಇನ್ನೂ ಹೆಚ್ಚಿನ ಸೋಂಕಿತರ ದಾಖಲೆ, ರೋಗಗತಿ ಮತ್ತು ಆರೋಗ್ಯ ಸುಧಾರಣೆ ವಿವರಗಳು ಲಭ್ಯವಾಗಬೇಕಿದೆ ಎಂದು ಸ್ವತಃ ಈ ಪ್ರಬಂಧದ ಲೇಖಕರು ಹಾಗೂ ವಿಷಯ ತಜ್ಞರ ಅಭಿಪ್ರಾಯವಾಗಿದೆ. ಅವರ ಪ್ರಬಂಧ ಇಲ್ಲಿ ಲಭ್ಯವಿದೆ – https://www.medrxiv.org/content/10.1101/2020.03.11.20031096v2. ಹಾಗಾಗಿ ಈ ಪ್ರಶ್ನೆಗೆ ಉತ್ತರ ದೊರೆಯಲು ಇನ್ನೂ ಸ್ವಲ್ಪ ಸಮಯ ಮತ್ತು ಸೂಕ್ತ ಸಂಶೋಧನಾ ಫಲಿತಗಳಿಗೆ ಕಾಯಬೇಕಾಗಿದೆ.
4. ಬಾವಲಿಗಳಿಂದ ಬಂದಿರುವ SARS-CoV-2 ವೈರಸ್ ಗಳನ್ನು ನಿಯಂತ್ರಿಸಲು ಬಾವಲಿಗಳನ್ನೆಲ್ಲಾ ನಾಶ ಮಾಡಿದರೆ ಒಳ್ಳೆಯದಲ್ಲವೇ?
ಖಂಡಿತಾ ತಪ್ಪು. ಈಗಾಗಲೇ ಇಂತಹ ತಪ್ಪು ತಿಳಿವಳಿಕೆಯಿಂದ ಮೈಸೂರಿನಲ್ಲಿ ಬಾವಲಿಗಳು ವಾಸವಿದ್ದ ಎರಡು ಮರಗಳನ್ನು ಕಡಿದು ಹಾಕಿದ್ದಾರೆ ಎಂಬ ಸುದ್ದಿ ಬಂದಿದೆ. ಇಕಾಲಜಿಯಲ್ಲಿ ಪ್ರತಿ ಜೀವಿಗೂ ತನ್ನದೇ ಆದ ಸ್ಥಾನವಿರುತ್ತದೆ. ಅದನ್ನು ಕೇವಲ ಮಾನವರ ಸ್ವ-ಹಿತಾಸಕ್ತಿಯ ದೃಷ್ಟಿಯಿಂದ ನೋಡಲಾಗುವುದಿಲ್ಲ. ಬಾವಲಿ ಮತ್ತು ಈ ವೈರಸ್ ಗಳ ಸಂಬಂಧ ವಿಕಾಸದ ಪಯಣದಲ್ಲಿ ಇಷ್ಟು ದೂರ ಬಂದಿರುವಾಗ, ಅದರ ಮತ್ತಷ್ಟು ವಿವರಗಳನ್ನು ನಾವಿನ್ನೂ ಅರಿಯಬೇಕಾಗಿದೆ. ಜೊತೆಗೆ ವೈರಸ್ ಗಳಿಂದ ಹರಡಬಹುದಾದ ಹಲವು ಖಾಯಿಲೆಗಳಿಗೆ ತವರಾಗಿ ಮಂಗ, ಇಲಿ ಮುಂತಾದ ಇತರೆ ಪ್ರಾಣಿಗಳೂ ಇವೆ. ಹೀಗೆ ಎಲ್ಲವನ್ನೂ ತೊಡೆದು ಹಾಕುತ್ತಾ ಮಾನವ ಮಾತ್ರ ಉಳಿಯಲು ಸಾಧ್ಯವಿಲ್ಲ.
ಅಲ್ಲದೇ ಬಾವಲಿಗಳು ಕೀಟಗಳನ್ನು ಭಕ್ಷಿಸುತ್ತವೆ ಮತ್ತು ಪರಾಗಸ್ಪರ್ಶಕ್ಕೆ ಸಹಾಯ ಮಾಡುತ್ತವೆ. ನಿಸರ್ಗದಲ್ಲಿ ಅದಕ್ಕೆ ಅದರದೇ ಆದ ಪ್ರಮುಖ ಸ್ಥಾನವಿದೆ. ಸದ್ಯದ ಕೋವಿಡ್-19 ವಿಪತ್ತು, ನಿಸರ್ಗದಲ್ಲಿ ಮಾನವರ ಅತಿಯಾದ ಹಸ್ತಕ್ಷೇಪದ ಕಾರಣವಾಗಿ ಬಂದಿದೆ ವಿನಃ, ಬಾವಲಿಗಳ ಏಕ ಪ್ರಯತ್ನದಿಂದಲ್ಲ. ನಿಸರ್ಗದಲ್ಲಿ ಸಹಬಾಳ್ವೆಯ ಪಾಠವನ್ನು ಈಗ ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾಗಿದೆ. ಉದಾಹರಣೆಯಾಗಿ ನೋಡಬೇಕೆಂದರೆ, ಕೃಷಿಯಲ್ಲಿ ಕೀಟ ನಿರ್ಮೂಲನೆಯೆಂದು ಹೊರಟ ನಾವು, ನಂತರ ಕೀಟ ನಿಯಂತ್ರಣ ಹಂತಕ್ಕೆ ಬಂದು ಸದ್ಯ ಕೀಟ ನಿರ್ವಹಣೆ ಎಂದು ಮಾತನಾಡುತ್ತಿದ್ದೇವೆ. ಕೀಟಗಳ ವಿರುದ್ಧ ಯುದ್ಧ ಸಾರಿದ ನಮ್ಮ ವಿಫಲತೆಯನ್ನು ಮತ್ತು ನಿಸರ್ಗದ ಜೊತೆ ಹೊಂದಾಣಿಕೆಯ ಅನಿವಾರ್ಯವನ್ನು ಇದು ಸೂಚಿಸುತ್ತದೆ.
5. ಬಾವಲಿಗಳಲ್ಲಿ SARS-CoV-2 ವೈರಸ್ಸುಗಳು ಅದು ಹೇಗೆ ಬಾವಲಿಗೆ ತೊಂದರೆಯಾಗದಂತೆ ಬದುಕುತ್ತಿವೆ?
ಇದು ಬಹಳ ಪ್ರಮುಖವಾದ ಪ್ರಶ್ನೆ. ವಿಜ್ಞಾನಿಗಳನ್ನು ಬಹಳ ವರ್ಷಗಳಿಂದ ಕಾಡಿದ್ದ ಈ ಪ್ರಶ್ನೆಗೆ ಚೀನಾದ ಬ್ಯಾಟ್ ವುಮೆನ್ ಶೀ ಜೆಂಗ್ ಲಿ ಮತ್ತು ಸಹ ಸಂಶೋಧಕರು ಸಂಭಾವ್ಯ ಉತ್ತರ ಕಂಡುಹಿಡಿದು “ಸೈನ್ಸ್” ಪತ್ರಿಕೆಯಲ್ಲಿ ಪ್ರಕಟಿಸಿದ್ದರು – https://science.sciencemag.org/content/339/6118/456 . ಈ ಫಲಿತಗಳ ಆಧಾರದ ಮೇಲೆ ಹೇಳುವುದಾದರೆ, ಚೀನಾದ ಹಾರ್ಸ್‌ಶೂ ಬಾವಲಿಗಳಲ್ಲಿ “STING” ಎಂಬ ಪ್ರೊಟೀನ್ ಅನ್ನು ಉತ್ಪಾದಿಸುವ ಜೀನು ರೂಪಾಂತರ ಹೊಂದಿದೆ. ಹಾರಾಟದ ಸಲುವಾಗಿ ಒಮ್ಮೊಮ್ಮೆ ಜೀನೋಮ್ ನ ನ್ಯೂಕ್ಲಿಕ್ ಆಮ್ಲಗಳು ತುಂಡಾಗುವುದರಿಂದ, ಈ ತರಹದ ವ್ಯವಸ್ಥೆ ಆ ಬಾವಲಿಗಳಲ್ಲಿ ವಿಕಾಸವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ ಮೇಲಿನ ಸಂಶೋಧಕರು. ಈ ಕಾರಣಕ್ಕಾಗಿ ಬಾವಲಿಗಳಲ್ಲಿ, ತುಂಡರಿಸಿದ ಜೀನೋಮ್ ನ ನ್ಯೂಕ್ಲಿಕ್ ಆಮ್ಲಗಳಂತೆ ಗೋಚರಿಸುವ ವೈರಸ್ ಗಳನ್ನು ಕಂಡೂ ಕೂಡ, ಅದರ ರೋಗನಿರೋಧಕ ವ್ಯವಸ್ಥೆ ಅಲ್ಪ ಪ್ರಮಾಣದಲ್ಲಿ ಅದರೊಂದಿಗೆ ಹೋರಾಡುತ್ತಾ ವೈರಸ್ ಗಳನ್ನು ಪಳಗಿಸಿಕೊಂಡಿವೆ. ಹಾಗಾಗಿ ಬಾವಲಿಗಳಿಗೆ ತೊಂದರೆ ಇಲ್ಲ.
6. ಸೋಷಿಯಲ್ ಡಿಸ್ಟೆನ್ಸಿಂಗ್ (Social Distancing) ಆರು ಅಡಿಗಳಷ್ಟು ಏಕೆ- ಇದರ ವೈಜ್ಞಾನಿಕತೆ ಏನು?
ಸೂಕ್ತ ಲಸಿಕೆ ಮತ್ತು ಔಷಧಗಳಿಲ್ಲದಿರುವ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಅನುಸರಿಸುವ ಮಾರ್ಗಗಳಲ್ಲಿ ಸೋಷಿಯಲ್ ಡಿಸ್ಟೆನ್ಸಿಂಗ್ ಕೂಡ ಒಂದು. ಇದು ಸಾಕಷ್ಟು ಪರಿಣಾಮಕಾರಿ ಕೂಡ. ಸದ್ಯ SARS-CoV-2 ವೈರಸ್ ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಹೊರಬರಬಹುದಾದ ಡ್ರಾಪ್ಲೆಟ್ ಗಳು ಅಂದಾಜು ಆರು ಅಡಿಗಳಷ್ಟು ದೂರಕ್ಕೆ ತಲುಪಬಹುದಾದ್ದರಿಂದ, ಇಷ್ಟು ದೂರದ ಸೋಷಿಯಲ್ ಡಿಸ್ಟೆನ್ಸಿಂಗ್ ಅವಶ್ಯಕ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಸೋಷಿಯಲ್ ಡಿಸ್ಟೆನ್ಸಿಂಗ್ ಬದಲು ಸ್ಪೇಷಿಯಲ್ ಡಿಸ್ಟೆನ್ಸಿಂಗ್(Spatial Distancing) ಎಂಬ ಪದ ಸಾಮಾಜಿಕವಾಗಿ ಹೆಚ್ಚು ಸೂಕ್ತ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.
7. ಸ್ಯಾನಿಟೈಸರ್ ಹಾಗೂ ಸೋಪುಗಳ ಮೂಲಕ ಕೈ ತೊಳೆದರೆ ವೈರಸ್ ಹೇಗೆ ನಿಯಂತ್ರಣಕ್ಕೆ ಬರುತ್ತದೆ?
ಸೋಪುಗಳಲ್ಲಿರುವ ಮಾಲಿಕ್ಯೂಲ್‌ಗಳು ವೈರಸ್ ನ ಹೊರಕವಚಗಳನ್ನು ನಾಶ ಮಾಡುವುದರಿಂದ, ವೈರಸ್ ನ ಭಾಗಗಳು ಚದುರಿ ಅವು ಬಲಹೀನಗೊಳ್ಳುತ್ತವೆ. ಇನ್ನು ಶೇ ಅರವತ್ತು ಪ್ರತಿಶತ ಆಲ್ಕೋಹಾಲ್ ಇರುವ ಸ್ಯಾನಿಟೈಸರ್ ಗಳು ಕೂಡ ಹೀಗೆ ವೈರಸ್ ಗಳನ್ನು ದುರ್ಬಲಗೊಳಿಸುತ್ತವೆ. ಕೆಳಗಿನ ಚಿತ್ರ ಇದನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ತೋರಿಸುತ್ತದೆ.
ನಿಮಗೆ ಇನ್ನೂ ಹಲವು ಇದೇ ತೆರೆನಾದ ಅಥವಾ ಸಾಮಾನ್ಯ ಪ್ರಶ್ನೆಗಳಿರಬಹುದು. ವಿಶ್ವ ಆರೋಗ್ಯ ಸಂಸ್ಥೆ ತನ್ನ ಜಾಲತಾಣದಲ್ಲಿ ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸಿದೆ. ಇದನ್ನು ಬಳಸಿ ನಿಮ್ಮ ಸಂದೇಹಗಳಿಗೆ ಉತ್ತರ ಕಂಡುಕೊಳ್ಳಿ. ಅವುಗಳೆಲ್ಲವನ್ನೂ ನೋಡಲು ಈ ಲಿಂಕ್ ಬಳಸಿ – https://www.who.int/news-room/q-a-detail/q-a-coronaviruses .
ಈ ಸಂಚಿಕೆಯಲ್ಲಿ ಎಲ್ಲರ ಉಪಯೋಗಕ್ಕಾಗಿ ಮೇಲಿನ ಪ್ರಶ್ನೆಗಳನ್ನೆಲ್ಲಾ ಕ್ರೋಢೀಕರಿಸಿ, ಅವಕ್ಕೆ ವೈಜ್ಞಾನಿಕ ಆಧಾರ ಸಮೇತ ಉತ್ತರಗಳನ್ನು ಸಂಕಲಿಸಿ ನೀಡಿದ್ದೇವೆ. ಈ ದಿಶೆಯಲ್ಲಿ ಜೀವಿವಿಜ್ಞಾನಿ ಡಾ.ಪ್ರಸನ್ನ ಸಂತೆಕಡೂರು, ಕೃಷಿ ವಿಜ್ಞಾನಿ ಡಾ.ಟಿ.ಎಸ್.ಚನ್ನೇಶ್, ವೈದ್ಯರಾದ ಡಾ.ಸಂದೇಶ್ ಕುಮಾರ್ ಕೆ.ಜೆ ಮುಂತಾದ ತಜ್ಞರು ಸಹಾಯ ಮಾಡಿದ್ದಾರೆ. ಅವರೆಲ್ಲರಿಗೆ ಹಾಗೂ ಓದುಗರಾದ ನಿಮಗೆಲ್ಲರಿಗೂ ವಿಶೇಷ ನಮಸ್ಕಾರಗಳು. ಇದಕ್ಕೂ ಮಿಕ್ಕಿ ಇನ್ನೂ ಪ್ರಶ್ನೆಗಳಿದ್ದರೆ ನಮಗೆ ಬರೆಯಿರಿ. ಮುಂದಿನ ಸಂಚಿಕೆಯಲ್ಲಿ ಮತ್ತೆ ಸಿಗೋಣ.
– ಆಕಾಶ್ ಬಾಲಕೃಷ್ಣ
ಕೋವಿಡ್-19 ತಂದೊಡ್ಡಿರುವ ಈ ಸಂಕಟದ ಸಂದರ್ಭದಲ್ಲಿ, ಸರಿಯಾದ ಮಾಹಿತಿ ಮತ್ತು ವಿವರಗಳನ್ನು ಪಡೆಯುವುದು ಅತ್ಯವಶ್ಯಕ. ಹಾಗಾಗಿ ಜಗತ್ತಿನ ಶ್ರೇಷ್ಠ ವಿಜ್ಞಾನ ಪತ್ರಿಕೆಗಳಾದ “ಸೈನ್ಸ್”, “ನೇಚರ್”, “ಸೈಂಟಿಫಿಕ್ ಅಮೆರಿಕನ್”, “ಲ್ಯಾನ್ಸೆಟ್”, “ಸೆಲ್”, “ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್” ಮುಂತಾದ ಪತ್ರಿಕೆಗಳು ನಿಖರವಾದ ಮತ್ತು ವೈಜ್ಞಾನಿಕವಾದ ವಿವರಗಳನ್ನು ಪ್ರಕಟಿಸುತ್ತಿವೆ. ಮನುಕುಲದ ಒಳಿತಿಗಾಗಿ ಸಂಶೋಧನಾ ಲೇಖನಗಳನ್ನು ಮತ್ತು ವರದಿಗಳನ್ನು ಮುಕ್ತ ಆಕರವಾಗಿ ಒದಗಿಸಿಕೊಡುತ್ತಿವೆ. ಭಾರತದಲ್ಲಿ “ದಿ ಹಿಂದೂ” ಪತ್ರಿಕೆ ಕೂಡ ಮೌಲಿಕವಾದ ಬರಹಗಳನ್ನು ಪ್ರಕಟಿಸುತ್ತಿದೆ. ಹಾಗಾಗಿ ಓದುಗರು ಸುಳ್ಳು ಸುದ್ದಿಗಳು, ಅಪೂರ್ಣ ಸುದ್ದಿಗಳ ಮೊರೆ ಹೋಗದೇ ಇಂತಹ ಪತ್ರಿಕೆಗಳನ್ನು ನೋಡಬಹುದಾಗಿದೆ.
Informative
Very useful to understand the various dimensions of the issues related to COVID-19, a pandemic sweeping across the globe fundamentally changing the very Eco system in as it’s encompassing implications. More such write-ups are the need of the hour.
ಚನ್ನಾಗಿ ತಿಳಿಯುವಂತೆ ಉತ್ತರಿಸಿದ್ದೀರಿ. ಅಭಿನಂದನೆ ಆಕಾಶ್
Answered many questions and clarified doubts. Thank you.
ಒಳ್ಳೆಯ ಮಾಹಿತಿ. ಥ್ಯಾಂಕ್ಸ್
ಒಳ್ಳೆಯ ಮಾಹಿತಿ
ಎಲ್ಲರನ್ನೂ ಕಾಡುವ ಸಾಮಾನ್ಯ ಪ್ರಶ್ನೆಗಳಿಗೆ ಸರಳವಾಗಿ ಉತ್ತರಿಸಿದ್ದೀರಿ. ಅಭಿನಂದನೆಗಳು ಆಕಾಶ್.
ದನ್ಯವಾದಗಳು ಆಕಾಶ್
Good information
Thanks for all yours effort , awesome information…