You are currently viewing ಕೋವಿಡ್‌.. ಒಮಿಕ್ರಾನ್‌.. ಮುಂದೆ..? ಜಾಗತಿಕ ವಿಕಾಸ ವಿಜ್ಞಾನಿಗಳ ಚರ್ಚೆಗಳೊಡನೆ ಒಂದು ಅನುಸಂಧಾನ

ಕೋವಿಡ್‌.. ಒಮಿಕ್ರಾನ್‌.. ಮುಂದೆ..? ಜಾಗತಿಕ ವಿಕಾಸ ವಿಜ್ಞಾನಿಗಳ ಚರ್ಚೆಗಳೊಡನೆ ಒಂದು ಅನುಸಂಧಾನ

ಕೋವಿಡ್‌ ಹರಡಲು ಆರಂಭಿಸಿ ಕೆಲವು ಅಲೆಗಳಿಂದ ಅಪ್ಪಳಿಸಿ ಬಲಿ ತೆಗೆದುಕೊಂಡ ನಂತರವೂ ಚರ್ಚೆಗಳು ಮುಂದುವರೆದೇ ಇವೆ. ವೈರಸ್ಸು ಹೊಸ ರೂಪ ತಳೆಯುತ್ತಲೂ ಹೊಸ ಚರ್ಚೆಗಳಿಗೆ ಅವಕಾಶ ಕೊಡುತ್ತಲೇ ಬಂದಿದೆ. ಇದ್ದಕ್ಕಿದ್ದಂತೆ ಬಾಗಿಲು ಹಾಕುವ ಸಂಸ್ಕೃತಿಯವರಾದ ನಮಗೆ ಅವುಗಳ ಆಳ-ಅಗಲಗಳ ತಿಳಿವು ನಿಜಕ್ಕೂ ಕಡಿಮೆಯೇ! ಜಾಗತಿಕವಾಗಿ ವಿಕಾಸ ವಿಜ್ಞಾನಿಗಳು, ಇಂದಲ್ಲ, ಹಲವು ದಶಕಗಳಿಂದಲೂ ವೈರಸ್ಸುಗಳ ರೂಪಾಂತರಕ್ಕೆ ತಲೆಕೆಡಿಸಿಕೊಂಡೇ ಇದ್ದಾರೆ. ಕೊರೊನಾ ವೈರಸ್ಸುಗಳ ಹಾವಳಿಯೇನೂ ಮನುಕುಲಕ್ಕೆ ಹೊಸತಲ್ಲ. ಸಂತತಿಗಳ ಉದ್ದಕ್ಕೂ ನಮ್ಮನ್ನು ಕಾಡುತ್ತಿರುವ ಶೀತ, ಕೆಮ್ಮುಗಳಲ್ಲಿ ಅವು ಇದ್ದೇ ಇವೆ. ಇವು ನಮ್ಮ ಜೊತೆಗೇ ಇದ್ದಿರುವ, ಇರುವ ಹಾಗೂ ಮುಂದೆಯೂ ಇರುವ ಸಂಗತಿಗಳನ್ನು ತೀರಾ ಹಗುರವಾಗಿ ಪರಿಗಣಿಸಿದ್ದೇ ಕಾರಣವಿದ್ದೀತಾ? ಇನ್ನೂ ಉತ್ತರ ಅಷ್ಟು ಸುಲಭವಲ್ಲ. ಹಾಗಾದರೆ ಇದರಿಂದ ಮಾನವ ಕುಲವು ಪರಿಹಾರವನ್ನಾದರೂ ಕಂಡುಕೊಳ್ಳುವುದು ಹೇಗೆ? ಇದಕ್ಕೂ ಉತ್ತರಿಸುವುದು ಕಷ್ವವೇ! ಹಾಗೆಂದು ಕುತೂಹಲ ಹಾಗೂ ಜಾಣತನದ ಔನ್ನತ್ಯದ ಜೀವಿಯಾದ ಮಾನವ ಪ್ರಭೇದವು ಅದೆಷ್ಟು ತಿಳಿವಳಿಕೆಯನ್ನು ಸಾಧಿಸಿದೆ ಎನ್ನುವುದರ ಕುರಿತು ಒಂದು ಸಣ್ಣ ಪ್ರಯತ್ನ ಇಲ್ಲಿದೆ.

       ಮಾನವ ಕುಲವು ಜಗತ್ತಿನಾದ್ಯಂತ SARS-CoV-2 ನಿಂದಾಗಿ, ಕಳೆದ ವರ್ಷ 2020ರಲ್ಲಿ ಸಂಪೂರ್ಣವಾಗಿ ನಲುಗಿ ಹೋಯಿತು. ಪ್ರಪಂಚವನ್ನೆಲ್ಲಾ ಹೆಚ್ಚೂ ಕಡಿಮೆ ಆವರಿಸಿದ ಹೊತ್ತಲ್ಲೇ ಅಮೆರಿಕದ ವಾಷಿಂಗ್ಟನ್‌ ರಾಜ್ಯದ ಸಿಯಾಟಲ್‌ ನ ಕ್ಯಾನ್ಸರ್‌ ಸಂಶೋಧನಾ ಸಂಸ್ಥೆಯ ವೈರಸ್ಸುಗಳ ತಜ್ಞರಾದ ಪ್ರೊ. ಜೆಸ್ಸಿ ಬ್ಲೂಮ್‌ ಅವರು “ಈ ವೈರಸ್‌ ಸಂಪೂರ್ಣವಾಗಿ ತೊಲಗಲಾರದೆಂದೂ, ಬದಲಾಗಿ ಶಾಶ್ವತವಾಗಿ ಮಾನವ ದೇಹವನ್ನೇ ಆವರಿಸಿ -ಆಗಾಗ್ಗೆ, ಸಣ್ಣ-ಪುಟ್ಟ ಶೀತ-ಕೆಮ್ಮುಗಳ ತರುತ್ತಾ, ಕೆಲವಾರು ದಶಕಗಳ ಕಾಲ ಸುತ್ತುವರೆಯುತ್ತಲೇ ಇರುತ್ತದೆ” ಎಂದಿದ್ದರು. ಡಾ. ಬ್ಲೂಮ್‌ ಅವರು ಈ ಬಗೆಯ ಋತುಮಾನದ (Seasonal ) ವೈರಸ್ಸುಗಳ ಅಸ್ವಸ್ಥತೆಯನ್ನು ಅಧ್ಯಯನ ಮಾಡುತ್ತಿರುವ ವಿಕಾಸ ವಿಜ್ಞಾನಿ. ಮಾನವ ದೇಹಕ್ಕೆ ವೈರಸ್ಸುಗಳ ಎಂಟ್ರಿ ಮತ್ತು ಒಳಹೊಕ್ಕ ಮೇಲೆ ಉತ್ಪಾದನೆಯಾಗುವ ಪ್ರೊಟೀನುಗಳ ವಿವಿಧತೆಗಳನ್ನು ತೀವ್ರವಾಗಿ ಸಂಶೋಧಿಸುತ್ತಿರುವ ವಿಜ್ಞಾನಿ. ಜೊತೆಗೆ ಹೀಗೆ ಕಾಲಾಂತರದಲ್ಲಿ ಬಂದು ಹೋಗುವ ವೈರಸ್ಸುಗಳ ಉದ್ದೇಶ ಮತ್ತು ಮಾನವ ಕುಲವು ಅದಕ್ಕೆ ಪ್ರತಿರೋಧಿಸುವ ಪ್ರಕ್ರಿಯೆಗಳ ಕುರಿತು ಸೂಕ್ಷ್ಮ ಸಂಗತಿಗಳ ಅರ್ಥೈಸಿರುವ ವಿಜ್ಞಾನಿ.

       ಪ್ರೊ. ಜೆಸ್ಸಿ ಬ್ಲೂಮ್‌ ಅವರ ವಿಖ್ಯಾತ ಅಧ್ಯಯನಗಳಲ್ಲಿ 229E  ಎಂಬ ಋತುಮಾನದ (Seasonal ) ವೈರಸ್ಸುಗಳ ಕುರಿತ ಫಲಿತಾಂಶಗಳು ಮಹತ್ವವಾದವು. ಈ 229E ವೈರಸ್ಸು ಮಾನವ ಕುಲವನ್ನು ಆಗಾಗ್ಗೆ ಶೀತ-ಕೆಮ್ಮುಗಳಿಗೆ ಒಡ್ಡುತ್ತದೆ. ಹೀಗೆ ಪದೆ ಪದೇ ಸೋಂಕು ತರುವ ಈ 229E ವೈರಸ್ಸು ನಮ್ಮ ಇಮ್ಯೂನ್‌ ವ್ಯವಸ್ಥೆಯ ಮೇಲೆ ಏನು ಪರಿಣಾಮ ಬೀರುತ್ತಿದೆ ಎಂಬುದು ತಿಳಿದಿರಲಿಲ್ಲ. ಒಂದೆ ವೇಳೆ ಪದೆ ಪದೇ ಕಾಡುತ್ತಿರುವುದರಿಂದ ನಮ್ಮ ಇಮ್ಯೂನಿಟಿ ಕಡಿಮೆಯಾಗುತ್ತಾ ಬರುತ್ತಿದೆಯೇ? ಅಥವಾ ನಮ್ಮ ಪ್ರತಿರೋಧವು ಹೆಚ್ಚಿದಂತೆಲ್ಲಾ ವೈರಸ್ಸೂ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡು ಮಾನವನ ಇಮ್ಯುನಿಟಿಯನ್ನು ಕೊಲ್ಲುತ್ತಿದೆಯೋ? ಈ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಪ್ರೊ. ಬ್ಲೂಮ್‌ ಇಂದೂ ಇರುವ ಈ 229E ವೈರಸ್ಸಿನ ವಿವಿಧತೆಗಳನ್ನು ಹಿಂದಕ್ಕೆ ಹೋಗಿ 1980ರ ವರೆಗೂ ರಕ್ತದ ಮಾದರಿಗಳಲ್ಲಿ ಅವುಗಳ ಪ್ರಕ್ರಿಯೆಗಳ ಅಧ್ಯಯನ ಮಾಡಿ ಗಣನೀಯವಾದ ಫಲಿತಗಳನ್ನು ದಾಖಲಿಸಿದ್ದಾರೆ.

       ಅವರ ಅಧ್ಯಯನದಂತೆ 1984ರಲ್ಲಿ ಉಂಟುಮಾಡಿದ್ದ ಇಮ್ಯೂನ್ ಪ್ರಕ್ರಿಯೆಗಳು‌ ನಿಜಕ್ಕೂ ದಟ್ಟವಾದವಾಗಿದ್ದವು. ಆದರೆ ಅವೇ 1990 ವೈರಸ್ಸಿನ ವಿಧಾನಗಳಿಗೆ ಹೋಲಿಸಿದಲ್ಲಿ ಕಡಿಮೆ ಸಾಮರ್ಥ್ಯದವಾಗಿದ್ದವು. ಅಂದಂತೆ ಯಾರಿಗೆ ಒಮ್ಮೆ ಸೋಂಕು ತಗುಲಿ ರೋಗವನ್ನು ಅನುಭವಿಸಿದ್ದಾರೋ ಅವರಲ್ಲಿ ಮುಂದೊಮ್ಮೆ ಅದೇ ಬಗೆಯ ಆದರೆ ತುಸು ಭಿನ್ನವಾದ ರೋಗಕಾರಕ ವೈರಸ್ಸಿಗೆ ಇಮ್ಯುನಿಟಿ ಕಡಿಮೆಯಾಗಿತ್ತು. ಇದರ ಅರ್ಥ ವೈರಸ್ಸು ಮಾನವರ ಇಮ್ಯೂನ್‌ ವ್ಯವಸ್ಥೆಯ ಮೇಲೆ ವ್ಯವಸ್ಥಿತವಾದ ದಾಳಿಗೆ ಬೇಕಾದ ಬಲವನ್ನು ಅಭಿವೃದ್ಧಿ ಪಡಿಸುತ್ತಲೇ ಸಾಗಿದೆ.  ಕಳೆದ ಎರಡು ವರ್ಷಗಳಿಂದ SARS-CoV-2 ವೈರಸ್ಸೂ ಕೂಡ ಸಾಕಷ್ಟು ವಿಕಾಸ ಹೊಂದುತ್ತಲೇ ಇದ್ದು ಅದೂ ಸಹಾ 229E ಕ್ಕೆ ಸಮಾನಾಂತರವಾದ ದಾರಿಯಲ್ಲೇ ಸಾಗಿದೆ ಎಂದೇ ಡಾ. ಬ್ಲೂಮ್‌ ಅಭಿಪ್ರಾಯ ಪಡುತ್ತಾರೆ. ಇದು ಸೋಂಕು ಅಥವಾ ವ್ಯಾಕ್ಸೀನು ಅಥವಾ ಅವೆರಡರಿಂದಲೂ ಒಟ್ಟಾಗಿ ವೈರಸ್ಸಿನ ವಿಕಾಸಕ್ಕೆ ಕಾರಣವಾಗಿದೆ. ಹಾಗಾಗಿ ಇದು ಮುಂದೆಯೂ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇದು ಸಾಮಾನ್ಯ ಶೀತ-ಕೆಮ್ಮುಗಳ ಸಾಧಾರಣ ರೋಗಕಾರಕವಾಗಿಯೋ ಅಥವಾ ಇನ್‌ಫ್ಲುಯಾಂಜಾ ತರಹ ಸಂಕಟ ತರುವ ವೈರಸ್ಸಾಗಲಿದೆಯೇ ಎಂಬುದೀಗ ಬಗೆಹರೆಯದ ಸಮಸ್ಯೆಯಾಗಿದೆ. ಆದಾಗ್ಯೂ ದಕ್ಷಿಣ ಆಫ್ರಿಕದ ತೀವ್ರ ರೂಪಾಂತರಿ ವೈರಸ್ಸಾದ “ಒಮಿಕ್ರಾನ್‌” ಅನ್ನು ಗಮನಿಸುವುದಾದರೆ ಇದು ನಮ್ಮ ಇಮ್ಯುನಿಟಿಯನ್ನು ಕಡಿಮೆಗೊಳಿಸುತ್ತಲೇ ಇರುವ ವೈರಸ್ಸು ಎನ್ನುವುದು ಸ್ಪಷ್ಟವಾಗುತ್ತಿದೆ ಎನ್ನುತ್ತಾರೆ.

       ಆದ್ದರಿಂದ SARS-CoV-2 ವೈರಸ್ಸೂ ಸಹಾ ಮುಂದಿನ ಕೆಲವು ತಿಂಗಳುಗಳಲ್ಲಿ ಅಥವಾ ವರ್ಷಗಳಲ್ಲಿ ಹೇಗೆ ವಿಕಾಸಗೊಂಡು ಕೊನೆಯಾಗುವುದೋ ಎಂಬದರ ಚಿಂತೆಯಲ್ಲಿ ಉಳಿದುಕೊಂಡಿದೆ. ಒಂದಂತೂ ಅನುಮಾನದಲ್ಲಿದೆ ಏನೆಂದರೆ ಈ ರೂಪಾಂತರಿ ವೈರಸ್ಸಿನ ಪ್ರಭಾವಗಳ ತಿಳಿವಳಿಕೆ! ಎಡಿನ್‌ಬರ್ರಾ ವಿಶ್ವವಿದ್ಯಾಲಯದ ಮತ್ತೋರ್ವ ಜೀವಿವಿಕಾಸ ವಿಜ್ಞಾನಿ ಆಂಡ್ರ್ಯೂ ರ‍್ಯಾಂಬರ್ಟ್‌ ಅವರು  “ಸಂಶೋಧನೆಗಳೇ ತಿಳಿಸುತ್ತಾ ನಮ್ಮ ಅರಿವನ್ನು ಹೆಚ್ಚಿಸಬೇಕಿದೆ, ನಾವಿನ್ನೂ ಹೆಚ್ಚು ಹಾದಿಯನ್ನೇ ಸವೆಸಿಲ್ಲ” ಎನ್ನುತ್ತಾರೆ.  

       ಈಗ ಈ ಹಾದಿಯಲ್ಲಿ ಸ್ವಲ್ಪ ಸಾಗಿರುವವರು ಎರಡು ಬಗೆಯ ಮಾರ್ಗವನ್ನು ವೈರಸ್ಸು ಅನುಸರಿಸುತ್ತಿರುವ ಬಗ್ಗೆ ಅರಿತುಕೊಂಡಿದ್ದಾರೆ. ಒಂದು ಸೋಂಕಿನ ಹರಡುವಿಕೆ ತೀವ್ರತೆ ಹೆಚ್ಚಳ- ಇದರಿಂದಾಗಿ ಬೇಗನೇ ಸಾಕಷ್ಟು ಹರಡುವಿಕೆಯನ್ನು ಗಮನಿಸುವುದು. ಮತ್ತೊಂದು ಸೋಂಕಿನಿಂದಾಗ ಉಂಟಾದ ಇಮ್ಯುನಿಟಿಯನ್ನು ಗೆಲ್ಲುವ ಪ್ರಭಾವ. ಹಾಗಾಗಿ ಇದಕ್ಕೆ ಪ್ರತಿಕ್ರಿಯಿಸಿರುವ ಲಂಡನ್‌ನ ಇಂಪೀರಿಯಲ್‌ ಕಾಲೇಜಿನ ವೈರಸ್‌ ತಜ್ಞರಾದ ಡಾ. ವೆಂಡಿ ಬರ್ಕ್ಲೆ ಅವರು “ಹೊಸ ರೂಪಾಂತರಿ ವೈರಸ್ಸು, ತುಂಬಾ ಜಾಣತನದಿಂದ ಅರ್ಥಪೂರ್ಣವಾದ ಸೋಂಕಿಗೆ ವಿಕಾಸಗೊಂಡು ತನ್ನ ಹರಡುವಿಕೆಯನ್ನು ಅಭಿವೃದ್ಧಿಒಡಿಸುತ್ತಲೇ ಸಾಗುತ್ತದೆ” ಎಂದಿದ್ದಾರೆ. ಆದರೆ ಆರ್‌ ಎನ್‌ ಎ ವೈರಸ್ಸು ಆದೃಷ್ಟವಶಾತ್‌ “ಇನ್‌ಫ್ಲುಯಾಂಜಾ” ಅಥವಾ “ಎಚ್‌ಐವಿ” ಮಾದರಿಯ ವಿಕಾಸವನ್ನು ಅನುಸರಿಸುತ್ತಿಲ್ಲ ಎನ್ನುವುದೇ ಸಮಾಧಾನಕರವಾದ ಸಂಗತಿಯಾಗಿದೆ.     

       ಕೊರೊನಾ ವೈರಸ್ಸುಗಳ ಕಿರೀಟಧಾರಿ ರಚನೆಯಲ್ಲಿ ಒಳಹೋಗುವ (ಸೋಂಕುಂಟು ಮಾಡಲು) ಸುಗಮ ಹಾದಿಗೆ ಕಾರಣವಾದ ಪ್ರೊಟೀನು ಉತ್ಪಾದನೆಯ ಅರಿವಿನಲ್ಲಿ ಈಗ ಹೊಸ ಎರಡು ರೂಪಾಂತರಿಗಳಾದ “ಡೆಲ್ಟಾ ಮತ್ತು ಆಲ್ಫಾ (Delta and Alpha)” ಗಳ ಪ್ರಸರಣದಲ್ಲಿ ಚಿಮ್ಮುವಂತಾಹ ಹರಡುವಿಕೆಯನ್ನೇನೂ ಕಾಣಲಿಲ್ಲ, ಎಂಬುದಾಗಿ ಕೆನಡಾದ ಬ್ರಿಟೀಶ್‌ ಕೊಲಂಬಿಯಾ ವಿಶ್ವವಿದ್ಯಾಲಯದ ವಿಕಾಸ ವಿಜ್ಞಾನಿ ಡಾ. ಸಾರ‍್ಹಾ ಒಟ್ಟೊ ಅಭಿಪ್ರಾಯಪಟ್ಟಿದ್ದಾರೆ. ಅವರ ಪ್ರಕಾರ ವೈರಸ್ಸಿನ ವಿಕಾಸ ಎನ್ನುವುದು ಭೂಹರಹೊಂದರಲ್ಲಿ ವಾಕಿಂಗ್‌ ಮಾದರಿಯದ್ದು! ಅಲ್ಲಿ ಸೋಂಕು ಉಂಟಾಗುವಿಕೆ ಏನಿದ್ದರೂ ಭೂಹರಹಿನ ಇಳಿಜಾರಿನಂತೆ! ಒಂದು ಬಗೆಯಲ್ಲಿ ತಡೆದು ನಿಲ್ಲಿಸಬಲ್ಲಂತಹಾ “ಫಿಟ್‌ನೆಸ್‌ ಪ್ಲೆಟೂ (fitness plateau)” ಅಥವಾ ಕುಳಿಯೊಂದರ ಅನಿವಾರ್ಯತೆಯ ಅವಶ್ಯಕತೆಯಂತೆ. ಅಲ್ಲಿಯೂ ಸಹಸ್ರಾರು ವೈರಲ್‌ ಅಣುಗಳ ದಂಡು ಇದ್ದು ಪ್ರತಿಯೊಂದೂ ವಿಭಿನ್ನ ರೂಪಾಂತರಿಗಳಾಗಿರಬಹುದು. ಹಾಗಾಗಿ ಸೋಂಕೂ ಕಡಿಮೆಯಾಗುತ್ತದೆ ಎಂಬುದು ಡಾ. ಸಾರ‍್ಹಾ ಅವರ ಅಭಿಪ್ರಾಯ. ಹಾಗಾಗಿ ಹೆಚ್ಚಿನ ಸೋಂಕಿಗೆ ಎತ್ತರದ ಭೂಹರಹನ್ನು ತಲುಪಲು ಬೇಕಾದಂತೆ ಹೆಚ್ಚಿನ ಶಕ್ತ ರೂಪಾಂತರಿಯ ಅವಶ್ಯಕತೆಯೂ ಇದೆ. ಇದನ್ನೇ “ಆಲ್ಫಾ”  ರೂಪಾಂತರಿಯು ಗಳಿಸಿದ್ದು 2020ರ ಕಡೆಯಲ್ಲಿ ಮತ್ತು 2021ರ ಆರಂಭದಲ್ಲಿ ಇದರ ಅನುಭವವಾಯಿತು ಎನ್ನುತ್ತಾರೆ ಯೂನಿವರ್ಸಿಟಿ ಕಾಲೇಜ್‌ ಲಂಡನ್‌ನ ಕಂಪ್ಯೂಟೇಷನ್‌ ಜೀವಿವಿಜ್ಞಾನಿ ಫ್ರಾನ್ಸಿಸ್‌ ಬಲ್ಲಾಕ್ಸ್‌.

       ಈಗಾಗಲೇ ಪರಿಚಿತವಾಗಿರುವ ಮೂರು ಮುಖ್ಯ ರೂಪಾಂತರಿಗಳು ಜಾಗತಿಕ ಹರಡಿರುವ ವಿಧಾನವನ್ನು ಈ ಮುಂದಿನ ಚಿತ್ರವು ವಿವರಿಸಬಲ್ಲದು. ಒಂದು ಸಂಗತಿಯೆಂದರೆ ಮುಂದೆ ವಿಕಾಸದ ಯಾವುದೇ ತಳಿಯು ಹಿಂದೆ ಉಳಿಸಿದ ತಳಿಗಿಂತಲೂ ಹೆಚ್ಚಿನ ಜಾಣತನವನ್ನು ಪ್ರದರ್ಶಿಸಿ ಸೋಂಕು ಉಂಟು ಮಾಡುವ ಸಾಧ್ಯತೆಗಳು ಹೆಚ್ಚಿವೆ. ಈ ಕೆಳಗಿನ ವೈರಸ್ಸಿನ ತಳಿಗಳ ಅಲೆಗಳನ್ನು ನಾಲ್ಕು ಪ್ರಮುಖ ದೇಶಗಳನ್ನು ಪ್ರತಿನಿಧಿಸಿದರೂ ಹೆಚ್ಚಿನ ಪಾಲು ಜಾಗತಿಕ ತಿಳಿವನ್ನು ಕೊಡಬಲ್ಲವು. ಅವುಗಳಲ್ಲಿ “ಡೆಲ್ಟಾ” ತೀವ್ರತೆಯು ಹೆಚ್ಚಿದ್ದು “ಒಮಿಕ್ರಾನ್‌” ಆಫ್ರಿಕಾದ ಸೀಮಿತ ಆಕ್ರಮಣಕಾರಿ ಗುಣ ಪ್ರದರ್ಶಿಸಿದೆ.

ಅವುಗಳ ಮೂಲಗಳು ಏನೇ ಇರಲಿ, ಎಲ್ಲಾ ಮೂರು ರೂಪಾಂತರಗಳು ಅವರು ಸ್ಥಳಾಂತರಿಸಿದ ತಳಿಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿವೆ. ಆದರೆ ಬೀಟಾ ಮತ್ತು ಗಾಮಾವು ಹಿಂದಿನ ಸೋಂಕು ಅಥವಾ ವ್ಯಾಕ್ಸಿನೇಷನ್‌ನಿಂದ ಪ್ರಚೋದಿಸಲ್ಪಟ್ಟ ಸೋಂಕನ್ನು ತಡೆಯುವ ‘ತಟಸ್ಥಗೊಳಿಸುವ’ ಪ್ರತಿಕಾಯಗಳ ಸಾಮರ್ಥ್ಯವನ್ನು ಮಂದಗೊಳಿಸುವ ರೂಪಾಂತರಗಳನ್ನು ಸಹ ಒಳಗೊಂಡಿದೆ. 229E ಯ ಬ್ಲೂಮ್‌ನ ಅಧ್ಯಯನಗಳು ಊಹಿಸಿದ ರೀತಿಯಲ್ಲಿ ವೈರಸ್ ವರ್ತಿಸಲು ಪ್ರಾರಂಭಿಸುವ ಸಾಧ್ಯತೆಯನ್ನು ಇದು ಹೆಚ್ಚಿಸಿತು.  

ಡೆಲ್ಟಾ ಡೈಲಮಾ (The Delta dilemma)

ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡ ತೀವ್ರ ಆಕ್ರಮಣಕಾರಿ ಡೆಲ್ಟಾ (Delta) ತಳಿಯು ನಿಜಕ್ಕೂ ತೀವ್ರವಾದ ವೈರಸ್ಸಾಗಿದ್ದು ಇನ್ನೂ ತನ್ನ ಆಕ್ರಮಣವನ್ನು ಸಾಬೀತು ಗೊಳಿಸಲು ಜನರನ್ನು ಹುಡುಕಾಡುತ್ತಿದೆ ಎಂದೇ ಇಂಪೀರಿಯಲ್‌ ಕಾಲೇಜಿನ ಡಾ. ವೆಂಡಿ ಬರ್ಕ್ಲೆ ಅಭಿಪ್ರಾಯ ಪಡುತ್ತಾರೆ. ಇದೊಂದು ಬಗೆಯ ಸೂಪರ್‌ ಆಲ್ಫಾ ಎನ್ನುತ್ತಾರೆ. ಅವರ ಅಧ್ಧಯಯನಗಳಂತೆ ಡೆಲ್ಟಾ ತಳಿಯಿಂದಲೇ ಸೋಂಕು ಉಂಟಾಗುವವರ ಫಿಟ್‌ನೆಸ್‌ ಹೆಚ್ಚಾಯಿತು ಎನ್ನಲಾಗುತ್ತಿದೆ.

ಆದ್ದರಿಂದ ಈ ಹಿಂದೆ, ಸೋಂಕೇ ಉಂಟಾಗದವರ ಹುಡುಕಾಟದ ಕುರಿತು ಬರೆದದ್ದನ್ನು ( ಲಿಂಕ್‌ ನೋಡಿ) ಓದಿರಬಹುದು.  ಹೀಗೆ ಇದ್ದಿರುವವರ ಇಮ್ಯುನಿಟಿಯೂ ಹೆಚ್ಚಿನ ಉತ್ತರಗಳನ್ನು ಕೊಡಬಲ್ಲದು. ಆದ್ದರಿಂದ ಪ್ರೊ. ಜೆಸ್ಸಿ ಬ್ಲೂಮ್‌ ಅವರ ಪ್ರಕಾರ “ಸೋಂಕು ಉಂಟಾಗುವಿಕೆಯ ತೀವ್ರತೆಯು ಅಥವಾ ಹರಡುವಿಕೆಯು ಹೆಚ್ಚುವಿಕೆಯೂ ಕಡಿಮೆಯಾಗುತ್ತದೆ.” ಅದಕ್ಕೆ ಮುಂದಿರುವ ಹಲವಾರು ಅನುಮಾನಗಳಲ್ಲಿ ಮುಖ್ಯಾದದದ್ದು ಎಂದರೆ ದಕ್ಷಿಣ ಆಫ್ರಿಕಾದ “ಒಮಿಕ್ರಾನ್‌ʼ ನಲ್ಲಿ ಅದರ ಕ್ಷಿಪ್ರ ಏರಿಕೆಯು ಮಾನವ ಪ್ರತಿರಕ್ಷೆಯನ್ನು ತಪ್ಪಿಸಿಕೊಳ್ಳುವ ಮಾರ್ಗವನ್ನು ಈಗಾಗಲೇ ಕಂಡುಕೊಂಡಿದೆ ಹಾಗಾಗಿ ಹೊಸ ಬಗೆಯ ಜಿಗಿತಗಳಿಗೆ ಕಾರಣವಾಗಬಹುದು.  ಅಲ್ಲದೆ ಏತನ್ಮಧ್ಯೆ, ಕೆಲವು ದೇಶಗಳು ವೈರಲ್ ಹರಡುವಿಕೆಯನ್ನು ನಿಯಂತ್ರಿಸಲು ನಿರ್ಬಂಧಗಳನ್ನು ತೆಗೆದುಹಾಕುವುದರಿಂದ, SARS-CoV-2 ಗೆ ಗಮನಾರ್ಹವಾದ ವಿಕಸನೀಯ ಜಿಗಿತಗಳನ್ನು ಮಾಡಲು ಅವಕಾಶಗಳು ಹೆಚ್ಚಾಗುತ್ತವೆ.  ಹೀಗಾಗಿ ಅಂತಹಾ ಆಕ್ರಮಣಕಾರಿ ಸೋಂಕನ್ನು ಕಾಣದಿದ್ದರೂ, ಸಾವುಗಳು ಸಂಭವಿಸದಿದ್ದರೂ ನಮ್ಮ ಪ್ರತಿರೋಧವನ್ನು ಹೆಚ್ಚಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಯಂತೂ ಇದೆ.

ಪುಣೆಯಲ್ಲಿ ಸೆಟಲ್‌ ಆಗಿರುವ ನನ್ನ ಗೆಳತಿಯೊಬ್ಬಳು, ವ್ಯಾಕ್ಸೀನ್‌ ಹಾಕಿಸಿಕೊಂಡಿಲ್ಲ! ಮಹಾರಾಷ್ಟ್ರದಲ್ಲಿದ್ದೂ ಏಕೆ ಹಾಕಿಸಿಕೊಂಡಿಲ್ಲ ಎಂದರೆ, “ಅಯ್ಯೋ ನನ್ನ ಜೀನುಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ” ಎನ್ನುತ್ತಾಳೆ. ನಿನ್ನ ಜಿನೋಮನ್ನು ಬದಲಾಯಿಸುವುದು/ಬದಲಾಯಿಸುತ್ತಿರುವುದು ವೈರಸ್ಸುಗಳೇ ವಿನಾಃ ವ್ಯಾಕ್ಸೀನ್‌ ಅಲ್ಲ ಎಂದು ಹೇಗೆ ಹೇಳಲಿ. ಏಕೆಂದರೆ ಆಕೆ ಮಾಸ್ಟರ್‌ ಡಿಗ್ರಿ ಪದವೀಧರೆ!   

ಇದನ್ನೆಲ್ಲಾ ಬರೆದು ಹೇಳಲು ನೀನೇನು ಡಾಕ್ಟರ್ರೇ… ಎಂದು ಹಲವರು ಕೇಳುತ್ತಾರೆ! “ಹೌದು ನಾನು ಡಾಕ್ಟರ್‌ ಅಲ್ಲ, ಹಾಗೇನಾದ್ರೂ ಡಾಕ್ಟರ್‌ ಆಗಿದ್ರೆ ಇದನ್ನೆಲ್ಲಾ ಬರೆಯಲು ಆಗುತ್ತಿರಲಿಲ್ಲ” ಅಂತಾ ಹೇಗೆ ಹೇಳಲಿ ಅವರಿಗೆ! ಕಳೆದ ಒಂದೂವರೆ ವರ್ಷದಿಂದ ನಾವು CPUS ಕೊವಿಡ್‌ ಟೀಮ್‌ ಅಲ್ಲಿ ಕೊರೊನಾ ವೈರಸ್ಸುಗಳ ಕುರಿತು ಸಂಗ್ರಹಿಸಿರುವ ಮಾಹಿತಿಗೆ (Original Research Papers) ಮತ್ತು ಸಂಪರ್ಕಗಳ ಸಂಖ್ಯೆಯನ್ನು ವಿವರಿಸಿ ಹೇಳುವುದೂ ಮತ್ತೂ ಕಷ್ಟ.

ಹಾಗಾದರೆ ಈ ವ್ಯಾಕ್ಸೀನು, ಬೂಸ್ಟರ್‌ ಡೋಸ್‌, ರೂಪಾಂತರಿಗಳ ಜೊತೆಗೆ ಬದುಕು ಇವೆಲ್ಲವನ್ನೂ ಮುಂದೆ ನೋಡೋಣ.

ಕಡೆಯಲ್ಲಿ ಬಾಂಗ್ಲಾ ದೇಶದ “ಮಕ್ಕಳ ಆರೋಗ್ಯ ಸಂಶೋಧನಾ ಪ್ರತಿಷ್ಠಾನ ”ದ ನಿರ್ದೇಶಕ ಡಾ. ಸೆನ್‌ಜುತಿ ಸಹಾ ಮಾತಿನಿಂದ ಮುಗಿಸುತ್ತೇನೆ. ಅವರೆನ್ನುತ್ತಾರೆ, “There is so little understanding of what’s going on, and that’s true, even for scientists.”

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

ಹೆಚ್ಚಿನ ಓದಿಗೆ:

Ewen Callaway  Beyond Omicron: what’s next for COVID’s viral evolution. Nature 600, 204-207 (2021)  https://doi.org/10.1038/d41586-021-03619-8

Peacock, T. P. et al.  2021. The SARS-CoV-2 variants associated with infections in India, B.1.617, show enhanced spike cleavage by furin. doi: https://doi.org/10.1101/2021.05.28.446163Rachel T. Eguia, et. al. 2021. A human coronavirus evolves antigenically to escape antibody immunity.   https://doi.org/10.1371/journal.ppat.1009453

Rachel T. Eguia, et. al. 2021. A human coronavirus evolves antigenically to escape antibody immunity.   https://doi.org/10.1371/journal.ppat.1009453

Volz, et. al.  Cell 184, 64–75 (2021). Evaluating the Effects of SARS-COV-2 Spike Mutation D614G on  Transmissibility and Pathogenicity

This Post Has 2 Comments

  1. Rajegowda

    Awesome information but I don’t see the conclusion about topic

  2. Kushal

    👍👍👍🙏🙏

Leave a Reply