You are currently viewing ಕೃಷಿಯ ನೊಬೆಲ್‌ -ವರ್ಲ್ಡ್‌ ಫುಡ್‌ ಪ್ರೈಜ್‌ (The World Food Prize) ಪುರಸ್ಕೃತ  ಡಾ. ರತ್ತನ್‌ ಲಾಲ್‌

ಕೃಷಿಯ ನೊಬೆಲ್‌ -ವರ್ಲ್ಡ್‌ ಫುಡ್‌ ಪ್ರೈಜ್‌ (The World Food Prize) ಪುರಸ್ಕೃತ ಡಾ. ರತ್ತನ್‌ ಲಾಲ್‌

ವರ್ಲ್ಡ್‌ ಫುಡ್‌ ಪ್ರೈಜ್‌ (The World Food Prize) ಕೃಷಿಯಲ್ಲಿ ನೊಬೆಲ್‌ ಬಹುಮಾನವಿದ್ದಂತೆ. ಇದು 1970ನೊಬೆಲ್‌ ಶಾಂತಿ ಪುರಸ್ಕೃತರಾದ ನಾರ್ಮನ್‌ ಬೋರ್ಲಾಗ್‌ ಅವರ ಕನಸು. 1985ರಲ್ಲಿ ಅವರು ಆರಂಭಿಸಿದ ವರ್ಲ್ಡ್‌ ಫುಡ್‌ ಪ್ರೈಜ್‌ ಪ್ರತಿಷ್ಠಾನವು 1987ರಿಂದ ಈವರೆಗೂ 50 ವಿಜ್ಞಾನಿಗಳಿಗೆ ಈ ಬಹುಮಾನವನ್ನು ಕೊಟ್ಟಿದೆ. ಮೊಟ್ಟ ಮೊದಲ ಬಹುಮಾನವನ್ನು ನಮ್ಮವರೇ ಆದ ಡಾ. ಎಂ.ಎಸ್‌. ಸ್ವಾಮಿನಾಥನ್‌ ಅವರಿಗೆ ಕೊಡಲಾಗಿತ್ತು. ಡಾ. ವರ್ಗೀಸ್‌ ಕುರಿಯನ್‌ ಅವರನ್ನೂ ಸೇರಿಕೊಂಡು ಇವರೆಗೂ ಒಟ್ಟು 8 ಜನ ಭಾರತೀಯರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ವರ್ಷ2020ರ ಪುರಸ್ಕಾರಕ್ಕೆ ಪಾತ್ರರಾದ ಡಾ. ರತ್ತನ್‌ ಲಾಲ್‌ ಓರ್ವ ಮಣ್ಣು ವಿಜ್ಞಾನಿ. ನಾನು ಒಬ್ಬ ಮಣ್ಣು ವಿಜ್ಞಾನದ ವಿದ್ಯಾರ್ಥಿಯಾಗಿ ಅವರ ಸಂಶೋಧನೆ ಬರಹಗಳಿಂದ ಸಾಕಷ್ಟು ಸ್ಪೂರ್ತಿ ಪಡೆದ ಕೆಲವು ವಿವರಗಳೊಂದಿಗೆ ಅವರ ಬಗ್ಗೆ ಗೌರವಪೂರ್ವಕವಾಗಿ ಬರೆಯುವ ಅವಕಾಶ ದೊರತದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ.

ನಾನಿನ್ನೂ ಮಣ್ಣು ವಿಜ್ಞಾನದ (Soil Science) ಮಾಸ್ಟರ್‌ ಪದವಿ ವಿದ್ಯಾರ್ಥಿ. ನನ್ನ ಮೊದಲನೆಯ ಸೆಮಿನಾರು “ಗಣಿಯ ತ್ಯಾಜ್ಯ ಮತ್ತು ಮಣ್ಣಿನ ರಸಾಯನಿಕ ವಿಜ್ಞಾನದ ಹೋಲಿಕೆ- Comparative Chemistry of Mine Tailings and Soils”. ಆಗ ಅದರ ತಯಾರಿಯ ಸಂದರ್ಭದಲ್ಲಿ ಮೊಟ್ಟ ಮೊದಲು Rattan Lal ನನಗೆ ಪರಿಚಯವಾದರು. ಗಣಿ ಮಣ್ಣಿನಲ್ಲಿ ರಸಾಯನಿಕ ಸನ್ನಿವೇಶವನ್ನು ಅದರ ಆಮ್ಲ-ಕ್ಷಾರತೆಯ ಹಿನ್ನೆಲೆಯನ್ನು, ಭೌತಿಕ ಗುಣಗಳ ಸಮೀಕರಣದಲ್ಲಿ ಅರ್ಥೈಸುವ ಹೊಸತೊಂದು ಕ್ರಮವನ್ನು ಮುಂದಿಟ್ಟು ಆರಂಭಿಸಿದ್ದೆ. ಗಣಿ ಮಣ್ಣಿನ್ನು ಅರ್ಥ ಮಾಡಿಕೊಳ್ಳಲು ಮೂಲಭೂತವಾಗಿ ಭೌತಿಕ ಗುಣಗಳ ಮೂಲಕ ಒರೆಹಚ್ಚಿ ನೋಡಬೇಕಿತ್ತು. ಇದು ಸಾಂಪ್ರದಾಯಕ ಮಣ್ಣು ವಿಜ್ಞಾನಕ್ಕೆ ಹೊಸತು. ನಮ್ಮೆಲ್ಲಾ ಮಣ್ಣು ವಿಜ್ಞಾನವು ಗೊಬ್ಬರಗಳ ರಸಾಯನಿಕ ವಿಮರ್ಶೆಯ ಮೂಲಕ ಅರಿಯುವ ಪ್ರಯತ್ನವನ್ನು ಮುಂಚೂಣೀಯಲ್ಲಿ ಇರಿಸುತ್ತದೆ. ಇದಕ್ಕೆ ಭಿನ್ನವಾಗಿ ಮಣ್ಣುಗಳ ವಿಮರ್ಶೆಗೆ ರತ್ತನ್‌ ಲಾಲ್‌ ಅವರ “Physical Edophology” ಪುಸ್ತಕವು ಬಹಳ ವಿಶೇಷವಾಗಿ ನನ್ನ ನೆರವಿಗೆ ಬಂದಿತ್ತು. ಮಣ್ಣನ್ನು ಸಸ್ಯಗಳ ಜೀವಜಗತ್ತನ್ನು ಭೌತಿಕ ಸಂಸ್ಕೃತಿಯ ಹಿನ್ನೆಲೆಯಲ್ಲಿ ವಿಮರ್ಶಿಸುವ ಈ ಪುಸ್ತಕದ ಮೂಲಕ ಪರಿಚಯವಾದವರು ಡಾ. ಲಾಲ್‌. ಇದು ಮಣ್ಣು ವಿಜ್ಞಾನದ ವಿದ್ಯಾರ್ಥಿಯಾಗಿ ಆರಂಭದ ಘಟನೆ.

ಮತ್ತೊಮ್ಮೆ ತೀರಾ ಇತ್ತೀಚೆಗೆ 2017ರಲ್ಲಿ ನವದೆಹಲಿಯ ಐಐಟಿ (IIT-Delhi)ಯಲ್ಲಿ ಮಣ್ಣಿನ (Indian Soils) ಬಗ್ಗೆ ಒಂದು ಸೆಮಿನಾರು. ಅದಕ್ಕೆ ರತ್ತನ್‌ ಲಾಲ್‌ ಬರುವವರಿದ್ದರು. ಆಗ ನನ್ನ ಪ್ರಬಂಧದ ಶೀರ್ಷಿಕೆ “Understanding Soils Beyond Chemistry” ಮಣ್ಣು ವಿಜ್ಞಾನದ ವಿದ್ಯಾರ್ಥಿಯಾಗಿ ಮೊದಲ ಸೆಮಿನಾರಿನ ಟೈಟಲ್‌ ಹಾಗೂ ಐಐಟಿಯ ಸೆಮಿನಾರಿನ ಟೈಟಲ್‌ಗಳೆರಡೂ Conventional Soil Science ನ ಚರ್ಚೆಗಳಿಂದ ಭಿನ್ನವಾದವಾಗಿದ್ದವು. ಇವೆರಡಕ್ಕೂ Dr. Rattan Lal ಪ್ರಭಾವಿಸಿದ್ದರು. ನನ್ನ ಅತ್ಯಂತ ಆಸಕ್ತಿ Disturbed Land Ecologyಯ ಸಂಶೋಧನೆ ಮತ್ತು ಓದಿಗೆ Dr. Rattan Lal ಕಾರಣರಾಗಲು ಅವರನ್ನು ಮತ್ತಷ್ಟು ಪರಿಚಯಸಬೇಕಾಗುತ್ತದೆ. ಈ ಮುಂದಿನ ಕೆಲವು ವಿವರಗಳು ಅವನ್ನೊಳಗೊಂಡಿವೆ.

ಇಂದು ಬಹಳ ವೈಭವ ಪೂರ್ವಕವಾಗಿ ನಡೆಯುತ್ತಿರುವ ಅಸಂಪ್ರದಾಯಿಕವಾದ(Non-conventional) ಮಣ್ಣಿನ ರಕ್ಷಣೆಯ ಚರ್ಚೆಗಳನ್ನೆಲ್ಲಾ ಸಾಂಪ್ರದಾಯಿಕ (Conventional) ಆಗಿಯೇ ಆರಂಭಿಸಿ ನಡೆಸಿದ್ದ ವಿಜ್ಞಾನಿ ಡಾ. ಲಾಲ್‌. ಇವತ್ತು ನಮಗೆಲ್ಲಾ ಆರ್ಗಾನಿಕ್‌, ಸೇಫ್‌ ಪುಡ್‌, ಇತ್ಯಾದಿ ಮಾತುಗಳ ದೊಡ್ಡ ಚರ್ಚೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸದ ವಿಶ್ವವಿದ್ಯಾಲಯಗಳೂ ಹಾಗೂ ತಮ್ಮ ಮಾಮೂಲಿ ಅನಿಸಿಕೆ ಆಧಾರಿತ ಪರಾಕುಗಳಿಂದ ವೈಭವೀಕರಿಸುವ ಎನ್‌.ಜಿ.ಓ.ಗಳು ಈ ಇಬ್ಬರಿಗೂ ಸಾಕಷ್ಟು ಮೂಲ ಸಾಮಗ್ರಿಯನ್ನು Conventional ಆಗಿ ವಿಶ್ವವಿದ್ಯಾಲಯದ ಒಳಗಿದ್ದೇ ಕೊಟ್ಟವರು ಡಾ. ಲಾಲ್‌. ದುರಾದೃಷ್ಟವೆಂದರೆ ಭಾರತದಲ್ಲಿ ಅಂತೂ ಇಬ್ಬರಿಗೂ ಅವರು ಅರ್ಥವಾಗಿಲ್ಲ. ಆಚರಣೆಗೆ ಬೇಕಾಗುವಷ್ಟು ಬಳಸಿಕೊಳ್ಳಲು ಕಲಿತುಕೊಂಡಿದ್ದಾರೆ, ಅಷ್ಟೇ. 80ರ ದಶಕದ ಅವರ ಸಂಶೋಧನೆ ಬರಹಗಳು ಸಾಂಪ್ರದಾಯಿಕ Soil Scienceನಿಂದ ಭಿನ್ನವಾದ ಚಿಂತನೆಗಳನ್ನು ಒಳಗೊಂಡಿದ್ದವು, ಅಥವಾ ಹಾಗೆಂದು ಮಣ್ಣನ್ನು ಅರ್ಥ ಮಾಡಿಕೊಳ್ಳದ ವಿಜ್ಞಾನಿಗಳು ಮತು ಸಂಸ್ಥೆಗಳು ವಿವರಿಸುತ್ತಿದ್ದರು.

ಆದರೆ ಮಣ್ಣನ್ನು ನೋಡಬೇಕಾದ ಕ್ರಮವೇ ಹಾಗೆ ಎಂಬದನ್ನು ಹೇಳಲು ಇನ್ನೂ ಕಷ್ಟ ಪಡಬೇಕಿದೆ, ಹೆಚ್ಚಿನ ಮಾತುಗಳಲ್ಲಿ ಹೇಳಬೇಕಾಗುತ್ತದೆ. ಆ ಕಾರಣದಿಂದಲೇ ಮಣ್ಣನ್ನು ಒಂದು ಬಗೆಯಲ್ಲಿ ಬ್ಯಾಂಕ್‌ ಅಕೌಂಟ್‌ ರೀತಿಯಲ್ಲಿ ನೋಡಬೇಕು ಎಂದಿದ್ದರು ಡಾ.ಲಾಲ್‌. ನಾವು ಅದನ್ನು ಉಳಿಸಿಕೊಂಡರೆ ಮಾತ್ರವೇ ತಾನೆ ನಮ್ಮ ಅಕೌಂಟ್‌ನಲ್ಲಿ ದುಡ್ಡೂ ಬೆಳೆಯುವುದು ಹಾಗೇ ಮಣ್ಣೂ ಕೂಡ ಎನ್ನುತ್ತಿದ್ದರು. ನಾನೋರ್ವ ಮಣ್ಣು ವಿಜ್ಞಾನದ ವಿದ್ಯಾರ್ಥಿಯಾಗಿ ನೋಡಿದ್ದೇನೆ, ನಮ್ಮ ಕೃಷಿ ವಿಶ್ವವಿದ್ಯಾಲಯಗಳು ಮಣ್ಣನ್ನು ನೋಡುವ/ಅರಿಯುವ ಕ್ರಮವನ್ನು ಕಲಿಸುತ್ತಿಲ್ಲ. ಅದನ್ನು ಬಳಸುವ ಕ್ರಮವನ್ನು ಕಲಿಸುತ್ತಿವೆ, ಅದೆಲ್ಲಾ ನಿಜ. ಆದರೆ ಅರಿಯುವ ಕ್ರಮ ಎಂದರೇನು? ಇದನ್ನೆಲ್ಲಾ ಅರ್ಥೈಸಿದ ಡಾ.ಲಾಲ್‌ ತರಹದ ಸಂಶೋಧಕರು ನಮ್ಮ ವಿಜ್ಞಾನ ಕಲಿಕೆಯಲ್ಲಿ ಇಲ್ಲವೇ ಇಲ್ಲ. ಹಾಗಾಗಿಯೇ ಇಂದು ವರ್ಲ್ಡ್‌ ಫುಡ್‌ ಪ್ರೈಜ್‌ ಕಾರಣದಿಂದ ಸುದ್ಧಿಯಾದ್ದರಿಂದ ಡಾ. ಲಾಲ್‌ ಅವರ ಫೋಟೊವನ್ನು ಕೃಷಿ ವಿಶ್ವವಿದ್ಯಾಲಯದ ಅಧ್ಯಾಪಕರೂ, ವಿದ್ಯಾರ್ಥಿಗಳೂ ವಾಟ್ಸಾಪಿನಲ್ಲಿ ಹಂಚಿದ್ದಾರೆ ವಿನಾಃ ಅವರ ಸಂಶೋಧನೆಯ ತೀವ್ರತೆಯು ಪ್ರತಿಶತ 90ಮಂದಿಗೆ ಗೊತ್ತಿಲ್ಲ! ನಾನೇ ನೋಡಿದಂತೆ ಅವರ “ಫಿಸಿಕಲ್‌ ಎಡಫಾಲಜಿ” ಪುಸ್ತಕವೂ ಹೆಚ್ಚು ಚರ್ಚೆಗೆ ಒಳಗಾಗಿಲ್ಲ. ನನ್ನ ಒಂದು ದಶಕದ ಕೃಷಿ ವಿಶ್ವವಿದ್ಯಾಲಯದ ಕಲಿಕೆಯಲ್ಲಿ ಯಾರೂ ಅವರ ಬಗ್ಗೆ ಮಾತಾಡಿದ್ದಿಲ್ಲ, ಅವರ ಪುಸ್ತಕಗಳ ಆಕರವಾಗಿ ಹೇಳಿರಲಿಲ್ಲ! ನನ್ನ ಮಾರ್ಗದರ್ಶಕರನ್ನೂ ಇತರೇ ಗುರುಗಳನ್ನೂ ಒಳಗೊಂಡು ಯಾರೂ ಇಂತಹಾ ಪುಸ್ತಕವಾಗಲಿ, ವಿಜ್ಞಾನಿಯಾಗಲಿ ಎಂದು ಯಾರೂ ಚರ್ಚಿಸಿದ್ದಿಲ್ಲ. (ಹೀಗೆ ದಾಖಲಿಸಲು ವೈಯಕ್ತಿವಾಗಿ ಇಷ್ಟವಿಲ್ಲ, ಆದರೆ ವಿಜ್ಞಾನದಿಂದ ವಂಚೆನೆಗೆ ಒಳಗಾಗುತ್ತಿದ್ದೇವೆ ಎಂಬ ನೋವು ಮಾತ್ರ ಅಪರಿಮಿತವಾಗಿ ಹೇಳಿದ್ದೇನೆ) ಏನಿದ್ದರೂ ಮಣ್ಣಿಗೆ ಎಷ್ಟು ಗೊಬ್ಬರ ಹಾಕಬೇಕು, ನೀರು ಬೀಜ ಕಳೆ ಔಷಧಿ ಇತ್ಯಾದಿಗಳಲ್ಲೇ ಮುಗಿದುಹೋಗುತ್ತದೆ ಕೃಷಿ ವಿಜ್ಞಾನದ ಕಲಿಕೆ! ವಿಜ್ಞಾನವನ್ನು ಒಳ ಹೊಕ್ಕು ನೋಡುವ ಕ್ರಮವನ್ನು ವೈದ್ಯ ವಿಜ್ಞಾನ, ಮೂಲ ವಿಜ್ಞಾನವನ್ನೂ ಒಳಗೊಂಡಂತೆ ಯಾವುದರಲ್ಲಿಯೂ ನಾವು ಕಲಿಯುವುದೇ ಇಲ್ಲ. ಪರೀಕ್ಷೆಗೆ ಒಪ್ಪಿಸುವ ಮಾದರಿಯ ಕಲಿಕೆ ನಮ್ಮದು. ಹಾಗಾಗಿ ಕೃಷಿ ವಿಜ್ಞಾನದಲ್ಲಿ ಮಣ್ಣಿನ ಮೂಲಭೂತ ಕಾರ್ಯಗಳ(Functions) ಬಗೆಗೆ ನಮ್ಮ ತಿಳಿವಳಿಕೆಯನ್ನು ವಿಮರ್ಶಿಸುವುದಿಲ್ಲ. ಹಾಗಿದ್ದಲ್ಲಿ ಈ ಸಂಗತಿಗಳ ವಿಚಾರದಲ್ಲಿ ಡಾ.ಲಾಲ್‌ ಹೇಗಿದ್ದರು?

ವಾತಾವರಣದ ಬದಲಾವಣೆಯ ಮಾತುಗಳನ್ನು ಆರಂಭಿಸಿದ್ದೇ ಮಣ್ಣು ವಿಜ್ಞಾನಿಗಳು. 19ನೆಯ ಶತಮಾನದಲ್ಲೇ ಹವಾಮಾನ ಪ್ರಕ್ರಿಯೆ ಮತ್ತು ಮಣ್ಣುನ ಸಮೀಕರಣವನ್ನು ಡೊಕುಷೋವ್‌(Dokuchaev) ಮತ್ತು ಹಿಲ್‌ ಗಾರ್ಡ್‌ (Hilgaud) ಅವರು ಗುರುತಿಸಿದ್ದರು. 20ನೆಯ ಶತಮಾನದಲ್ಲಿ ಹ್ಯಾನ್ಸ್‌ ಜೆನ್ನಿ (Hans Jenny)ಯು ಅದನ್ನು ಮುಂದುವರೆಸಿ ಚರ್ಚೆಗಳನ್ನು ಪ್ರಬುದ್ಧವಾಗಿಸಿದರು. ಅವುಗಳನ್ನು 21ನೆಯ ಶತಮಾನಕ್ಕೂ ಅತ್ಯಂತ ಸಮರ್ಥವಾಗಿ ಶೈಕ್ಷಣಿಕವಾಗಿ ನಿಭಾಯಿಸಿ ವರ್ಗಾಯಿಸಿದ್ದು ಡಾ. ಲಾಲ್‌.(Rattan Lal) .

ಡಾ. ಲಾಲ್‌ ಓರ್ವ ರೈತನ ಮಗ. ಅಪ್ಪ, ಚಿಕ್ಕಪ್ಪ ಹಾಗೂ ಅವರ ಸಮಕಾಲೀನ ರೈತ ಸಮುದಾಯ ಮಣ್ಣುನ್ನು ನಿಭಾಯಿಸಲು ಪಡುತ್ತಿದ್ದ ಶ್ರಮ, ಆಸಕ್ತಿ ಹಾಗೂ ಪ್ರೀತಿಯನ್ನು ಅದೇ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಕಂಡವರು. ಮುಂದೆ ವಿಜ್ಞಾನದ ಸತ್ಯದ ಹುಡುಕಾಟದಲ್ಲೂ ಅದೇ ಮಾರ್ಗವನ್ನು ಅನುಸರಿಸಿ ವಿಮರ್ಶಿಸಿದರು. ಇದು ಇಷ್ಟೇ! ಸರಳ ಎಂಬುದನ್ನೇ ಮಾತ್ರವೇ ಸಂಪ್ರದಾಯವಾದಿಗಳೂ- ಅಸಂಪ್ರದಾಯವಾದಿಗಳೂ, ಕೇವಲ ರೈತರನ್ನು ಸುಮ್ಮನಾಗಿಸಲು, ತಮಗೆ ಬೇಕಾದಷ್ಟನ್ನು ಮಾತ್ರವೇ ಬಳಸಿಕೊಂಡರು. ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳು ವಿದ್ಯಾರ್ಥಿಗಳನ್ನು ಸುಮ್ಮನಾಗಿಸಲು ತಂತ್ರಗಳನ್ನು ಬಳಸುವುದಿಲ್ಲವೇ? ಹಾಗೆ! ಅದರ ಒಟ್ಟಾರೆಯ ಸಮಗ್ರ ಸ್ವರೂಪವನ್ನು ಅರ್ಥೈಸಿಕೊಳ್ಳಲಿಲ್ಲ. ಹಾಗಾಗಿ ಅವರು ನಮಗೆ ಪರಿಚತರೇ ಆಗಲಿಲ್ಲ. ಇದೇ ಕಾರಣಕ್ಕೆ ನಾವು ಅವರನ್ನು ಈಗ ಬಹುಮಾನ ಬಂದಿರುವುದಕ್ಕೆ ವಾಟ್ಸಾಪ್‌, ಫೇಸ್‌ ಬುಕ್ಕುಗಳಲ್ಲಿ ಹಂಚುತ್ತಿದ್ದೇವೋ ಹೊರತು, ಶೈಕ್ಷಣಿಕವಾಗಿ ಚರ್ಚಿಸುವುದಿರಲಿ, ಅವರ ಹೆಸರೂ ಎಷ್ಟೋ ಭಾರತೀಯ Soil Scientist ಗಳಿಗೂ ಗೊತ್ತಿಲ್ಲ.

ನೇರವಾಗಿ ಅವರ ವೈಜ್ಞಾನಿಕ ಸಂಶೋಧನೆಯ ಪಟ್ಟಿ ಮಾಡಿ ಒಂದೇ ಪ್ಯಾರಾದಲ್ಲಿ ಮುಗಿಸುವುದಾದರೆ ಸುಮಾರು 2500 ಪ್ರಬಂಧಗಳು ಹಾಗೂ 90ಕ್ಕೂ ಹೆಚ್ಚು ಪುಸ್ತಕಗಳನ್ನೂ ಬರೆದು ಪ್ರಕಟಿಸಿದ್ದಾರೆ. ಪಂಜಾಬಿನ ಲುಧಿಯಾನ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್‌ಸಿ ಕೃಷಿ ಪದವಿ ನಂತರ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನವದೆಹಲಿಯಲ್ಲಿ ಮಣ್ಣು ವಿಜ್ಞಾನದ ಮಾಸ್ಟರ್‌ ಪದವಿ ಪಡೆದು ನಂತರ ಪಿ.ಎಚ್.ಡಿಗೆ ಅಮೆರಿಕಾಗೆ ತೆರೆಳಿದರು. ಅಲ್ಲಿ ಒಹಾಯೋ ವಿಶ್ವವಿದ್ಯಾಲಯದಲ್ಲಿ ಡಾಕ್ಟೊರೇಟ್‌ ಪಡೆದು ಕೆಲಕಾಲ, ಆಸ್ಟ್ರೇಲಿಯಾ, ಆಫ್ರಿಕಾಗಳಲ್ಲಿ ಕೆಲಸ ಮಾಡಿ ಮತ್ತೆ ಒಹಾಯೋಗೆ ಬಂದು ಅಲ್ಲಿಯೇ ನೆಲೆಯಾದರು. ಅವರ ಒಟ್ಟು ಐದು ದಶಕಕ್ಕೂ ಹೆಚ್ಚಿನ ಸಂಶೋಧನೆ, ಅಧ್ಯಯನ ಮತ್ತು ಅದಕ್ಕಾಗಿ ಅಲೆದಾಟವನ್ನು ಪುಟ್ಟ ಪ್ರಬಂಧದಲ್ಲಿ ಖಂಡಿತಾ ವಿವರವಾಗಿ ಕೊಡಲಾಗದು. ಜಗತ್ತಿನ ನಾಲ್ಕು ಖಂಡಗಳ ಒಂದು ನೂರು ದೇಶಗಳನ್ನು ಸುತ್ತಿ ನೆಲದ ಪ್ರೀತಿಯನ್ನು ಆಹಾರ ಮತ್ತು ಮಾನವತೆಯ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ಅರಿತು ಹಂಚಿದರು. ಸ್ವಾಭಾವಿಕವಾಗಿ ಮಣ್ಣನ್ನು ನಿಸರ್ಗದ ಭಾಗವಾಗಿ ವ್ಯವಹರಿಸುವ ಮಾದರಿಯನ್ನು ಅರಿಯುವ ಮಣ್ಣು ವಿಜ್ಞಾನದ ಬಗೆಯನ್ನು ಕಟ್ಟಿದರು. ಅದಕ್ಕಾಗಿ ಇಡಿ ಮಾನವ ಸಮುದಾಯ ವರ್ತಿಸುವ ವೈಧಾನಿಕತೆಗಳನ್ನು ಸಮೀಕರಿಸಿ ಮಣ್ಣಿನ ಅಧ್ಯಯನ ಹಾಗೂ ನಿರ್ವಹಣೆಯ ಸೂತ್ರಗಳನ್ನು ನಿರ್ಮಿಸಿದರು. ಇದಕ್ಕಾಗಿ ಸರಳ ರೈತಪರ ಮಾರ್ಗದರ್ಶಿಯನ್ನು ಮುಂದಿಟ್ಟುಕೊಂಡು ವಿಜ್ಞಾನದ ಚಿಂತನೆಗಳನ್ನು ಪ್ರಾಯೋಗಿಕವಾಗಿ ಉಪಕ್ರಮಿಸುವ ಸಂಗತಿಗಳನ್ನು ಸಂಶೋಧಿಸಿದರು, ಹಾಗೂ ಸಾಧ್ಯಗೊಳಿಸಿದರು.

ಪ್ರಸಕ್ತ ವರ್ಲ್ಡ್‌ ಫುಡ್‌ ಪ್ರೈಜ್‌ ವ್ಯಾಖ್ಯಾನದಂತೆ ಡಾ.ಲಾಲ್‌ ಅವರು ಜಾಗತಿಕ ಆಹಾರ ಭದ್ರತೆಗೆ ಸಣ್ಣ ರೈತರ ನೆಲದ ಮಣ್ಣನ ಆರೋಗ್ಯವನ್ನು ಸುಧಾರಿಸುವ ಮೂಲಕ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಅವರ ಸಂಶೋಧನೆಯು ನಮ್ಮ ಕಾಲ ಕೆಳಗಿರುವ ಸಹಜವಾಗಿ ನಮ್ಮ ಕಣ್ಣಿಗೆ ಕಾಣದ ಮಣ್ಣಿಗೆ ಮತ್ತು ಅದರ ಸಮಸ್ಯೆಗಳಿಗೆ ಪರಿಹಾರದ ಸೂತ್ರಗಳನ್ನು ಹೆಣೆದಿದೆ. ಇಂದು ಜಗತ್ತಿನ ಸರಿ ಸುಮಾರು 500 ದಶಲಕ್ಷ ಸಣ್ಣ ರೈತರ ನೆಲವನ್ನು ನಂಬಿಕೆಯಿಂದ ನಿರ್ವಹಿಸಿ, ಮಣ್ಣಿನ ಸಮಸ್ಯೆಗಳನ್ನು ಪರಿಹರಿಸಿ ಕಾಪಾಡಿದ್ದಾರೆ. ಅವರ ಸಂಶೋಧನೆಗಳು ಕೋಟ್ಯಾಂತರ ಕೃಷಿಕರ ನೆಮ್ಮದಿಯ ಕ್ಷಣಗಳನ್ನು ಹೆಚ್ಚಿಸಿವೆ.

ಡಾ.ಲಾಲ್‌ ಅವರು ಈ ಹಿಂದೆ ನೊಬೆಲ್‌ ಪುರಸ್ಕಾರಕ್ಕೆ ಪಾತ್ರವಾದ ಸಂಸ್ಥೆ IPCCಯ ಸದಸ್ಯರೂ ಆಗಿದ್ದರು. ಅವರ ಒಟ್ಟಾರೆಯ ಸಂಶೋಧನೆ ಹಾಗೂ ಮಣ್ಣಿನ ನಿರ್ವಹಣೆಯ ಹಿತವನ್ನು ಪ್ಯಾರಿಸ್‌ ಒಪ್ಪಂದದಲ್ಲಿ ಗುರುತಿಸಿ ಪ್ರತೀ ವರ್ಷ ಕನಿಷ್ಟ ಪ್ರತಿ 1000ಕ್ಕೆ 4ರಷ್ಟು ಸಾವಯವ ಇಂಗಾಲವನ್ನು ಹೆಚ್ಚಿಸುವ -4 per 1000 – ಕಾರ್ಯಕ್ರಮಕ್ಕೆ ಅನುವುಗೊಳಿಸಲಾಯಿತು. ಇದರ ಹೆಚ್ಚಿನ ವಿವರಗಳನ್ನು https://www.4p1000.org/ ಲಿಂಕ್‌ ನಿಂದ ನೋಡಬಹುದು. ಮಣ್ಣಿನಲ್ಲಿರುವ ಮತ್ತು ಮಣ್ಣು ಹಿಡಿದಿಟ್ಟುಕೊಳ್ಳುವ ಇಂಗಾಲದ ಬಗೆಗೆ ಅವರ ಸಂಶೋಧನೆ ಮತ್ತು ಚರ್ಚೆಯ ಸಂಗತಿಗಳು ಜಾಗತಿಕವಾಗಿ ತಿಳಿವನ್ನು ನೀಡಿವೆ. ಮಣ್ಣಿನ ಮೂಲಭೂತ ತಿಳಿವನ್ನು ಮಣ್ಣಿನ ವರ್ತನೆ ಹಾಗೂ ಸಾವಯವ ಪ್ರತಿಕ್ರಿಯೆಯ ಮೂಲಕ ಅರಿಯುವ ಸಂಗತಿಯನ್ನು ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿದ್ದು ಡಾ. ಲಾಲ್‌, ಅವರು.

ಇದರ ಹಿನ್ನೆಲೆಯ ಅವರ ಒಂದು ಸಂಶೋಧನಾ ಪ್ರಬಂಧ Soil carbon sequestration impacts on global climate change and food securityಯು ವಿಖ್ಯಾತ ಸೈನ್ಸ್‌ (Science) ವಿಜ್ಞಾನ ಪತ್ರಿಕೆಯಲ್ಲಿ 2004ರಲ್ಲಿ ಪ್ರಕಟಗೊಂಡಿತ್ತು. ಇದು ಅದೆಷ್ಟು ಜನಪ್ರಿಯವೆಂದರೆ ಈವರೆಗೆ ಸುಮಾರು 5708 ಬಾರಿ ಇತರೇ ಸಂಶೋಧನಾ ಪ್ರಬಂಧಗಳಲ್ಲಿ ಆಕರವಾಗಿದೆ. ಅಷ್ಟೊಂದು ಮಾರ್ಗದರ್ಶಿ ಮಾದರಿಯನ್ನು ಅವರ ಬರಹವು ಒಳಗೊಂಡಿತ್ತು.

ಸುಮಾರು 90ಕ್ಕೂ ಹೆಚ್ಚು ಪುಸ್ತಕಗಳನ್ನು ಮಣ್ಣು ಮತ್ತು ಪರಿಸರದ ಹಿನ್ನೆಲೆಯಲ್ಲಿ ಪ್ರಕಟಿಸಿರುವ ಡಾ. ಲಾಲ್‌ ಅವುಗಳ ಚಿಂತನೆಯಲ್ಲಿ ತಮ್ಮ ವಿಶಿಷ್ಠ ಛಾಪನ್ನು ಮೂಡಿಸಿದ್ದಾರೆ. Soil and Climate, Methods for Assessment of Soil Degradation, Principals of Soil Conservation and Management ಮತ್ತು Food Security and Soil Quality ಇಂತಹಾ ಶೀರ್ಷಿಕೆ ಗಳಲ್ಲಿ Soil Science ಅನ್ನು ವಿಮರ್ಶಿಸಿರುವ ಡಾ.ಲಾಲ್‌ ಪ್ರಸ್ತುತ ಮಣ್ಣಿನ ಅರ್ಥ ಮತ್ತು ವ್ಯಾಖ್ಯಾನವನ್ನು ಅರಿಯಬೇಕಿರುವ ಹಾದಿಯನ್ನು ಬಹಳ ಅರ್ಥವತ್ತಾಗಿಯೇ ನಿರ್ಮಿಸಿದ್ದಾರೆ. ವಾತಾವರಣದ ಬದಲಾವಣೆ ಮತ್ತು ಸಣ್ಣ ಹಿಡುವಳಿದಾರ ಕೃಷಿಯ ಹಿತವನ್ನು ತಮ್ಮ ಜೀವನದ ಉದ್ದಕ್ಕೂ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ನಿಭಾಯಿಸಿಕೊಂಡ ಬಂದ ಮಾನವತೆಯ ವಿಜ್ಞಾನಿ ಡಾ. ರತ್ತನ್‌ ಲಾಲ್‌. ಇಂದು ಪ್ರಯಾಸ ಪಡುತ್ತಿರುವ ಹವಾಮಾನ ಬದಲಾವಣೆಯ ಸಂಗತಿಗಳನ್ನು ಆಹಾರ ಭದ್ರತೆಯ ಜೊತೆಗೆ ಸಮೀಕರಿಸಿ ಒಟ್ಟಾರೆಯ ಮಣ್ಣಿನ ಗ್ರಹಿಕೆಯ ಮಾದರಿಯನ್ನು ಆಧುನಿಕ ಚಿಂತನೆಗಳ ಮೂಲಕ ರೂಪಿಸಿದ ಕೀರ್ತಿ ಡಾ. ಲಾಲ್‌ ಅವರದ್ದು.

ಡಾ. ಲಾಲ್‌ ಅವರು ಸ್ವಾತಂತ್ರ್ಯ ಪೂರ್ವ ಭಾರತದ ಪಶ್ಚಿಮ ಪಂಜಾಬ್‌ (ಈಗ ಪಾಕಿಸ್ಥಾನದಲ್ಲಿರುವ) ಕರ್ಯಾಲ್ ಎಂಬ ಹಳ್ಳಿಯಲ್ಲಿ 5ನೆಯ ಸೆಪ್ಟೆಂಬರ್‌ 1944ರಲ್ಲಿ ಜನಿಸಿದರು. ದೇಶ ವಿಭಜನೆಯ ಸಂದರ್ಭದಲ್ಲಿ ಭಾರತಕ್ಕೆ ವಲಸೆ ಬಂದ ಹಿಂದೂ ಕುಟುಂಬಗಳಲ್ಲಿ ಒಂದಾದ ಅವರ ಕುಟುಂಬವು ಹರಿಯಾನ ರಾಜ್ಯದಲ್ಲಿ ನೆಲೆಯಾಗಿತ್ತು. ಓರ್ವ ರೈತನ ಮಗನಾಗಿ ಕೃಷಿ ಸಂಸ್ಕೃತಿಯನ್ನು ಮಾನವತೆಯ ಹಿನ್ನೆಲೆಯಲ್ಲಿ ಅರಿತು ವೈಜ್ಞಾನಿಕವಾಗಿ ವಿಶ್ಲೇಷಿಸಿದ ಅದ್ಭುತವಾದ ಮಣ್ಣು ವಿಜ್ಞಾನಿ ಓರ್ವ ಭಾರತೀಯ ಎಂಬುದು ಹೆಮ್ಮೆಯ ಸಂಗತಿ.‌ ಕಳೆದ 2019ರಲ್ಲಿ ಅವರಿಗೆ ಜಪಾನಿನ ಪುರಸ್ಕಾರವೂ ದೊರೆತಿತ್ತು. ಅವರ ಮಾತುಗಳಲ್ಲಿಯೇ ವಿಜ್ಞಾನ ಮತ್ತು ಸಮಾಜದ ಸಂಗಮವನ್ನು ಕಾಣಬಹುದಾದರೆ, ಅದು ಹೀಗಿದೆ……..

“ಹಸಿವಿನಿಂದ ಮುಕ್ತವಾದ ಮಾನವತೆಯನ್ನೂ, ಮಣ್ಣಿನ ಸವಕಳಿಯ ಸಮಸ್ಥಿತಿಯನ್ನೂ, ಮಾಲಿನ್ಯ ಮುಕ್ತವಾದ ಕೃಷಿಯನ್ನೂ ಮತ್ತು ನೀರನ್ನೂ ಸಾಕಾರಗೊಳಿಸುವುದು ಅತ್ಯಂತ ಮುಖ್ಯವಾದ ಸವಾಲಾಗಿದ್ದು ಅದನ್ನೆಂದೂ ಕಡೆಗಾಣಿಸಬಾರದು.”

ಅವರ ಕುರಿತು ಮತ್ತೊಮ್ಮೆ ಹೆಚ್ಚಿನ ಸಂಗತಿಗಳನ್ನು ನೋಡೋಣವಂತೆ! ಬಹುಶಃ ಹಾಗೊಮ್ಮೆ ಹಂಚಿಕೊಳ್ಳುವುದು ಮಣ್ಣು ವಿಜ್ಞಾನದ ವಿದ್ಯಾರ್ಥಿಯಾಗಿ ಅದು ನನ್ನ ಜವಾಬ್ದಾರಿ ಕೂಡ.

ನಮಸ್ಕಾರ

ಡಾ.ಟಿ.ಎಸ್.‌ ಚನ್ನೇಶ್.‌

Leave a Reply