You are currently viewing ಒಮಿಕ್ರಾನ್.. ಅಪಾಯಕಾರಿ ಯಾಕಲ್ಲ..! ಆದರೂ ಮುನ್ಸೂಚನೆ ಏನು?

ಒಮಿಕ್ರಾನ್.. ಅಪಾಯಕಾರಿ ಯಾಕಲ್ಲ..! ಆದರೂ ಮುನ್ಸೂಚನೆ ಏನು?

ಈಗಾಗಲೇ ಸುದ್ದಿಯಲ್ಲಿರುವ ಒಮಿಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರದಿಯಾದ SARS-CoV-2 ನ ರೂಪಾಂತರಿತ ವೈರಸ್‌. ನಂತರದಲ್ಲಿ, ಹಲವಾರು ಇತರ ದೇಶಗಳು ಈ ರೂಪಾಂತರದ ಪ್ರಕರಣಗಳನ್ನು ವರದಿ ಮಾಡಿವೆ. ಅದರಲ್ಲು ಇಂಗ್ಲಂಡ್‌ -ಯು.ಕೆ. (UK) ಹೆಚ್ಚು ಗಮನಕ್ಕೆ ಬಂದ ದೇಶ.  ಈ ರೂಪಾಂತರದಿಂದ ಸೋಂಕಿಗೆ ಒಳಗಾದವರಲ್ಲಿ ಲಸಿಕೆಯನ್ನು ಪಡೆದವರೂ ಮತ್ತು ಹಿಂದಿನ ಕೋವಿಡ್ ಗಳಿಂದ ಸೋಂಕಿಗೆ ಒಳಗಾದವರೂ ಇದ್ದಾರೆ. ಬಹುಶಃ ಇದೇ ಕಾರಣದಿಂದ ಈ ಹೊಸ ರೂಪದ ಒಮಿಕ್ರಾನ್‌ ಸಾಕಷ್ಟು ಭಯವನ್ನು ತಂದಿದೆ ನಿಜ. ಆದರೆ ಅಷ್ಟೆನೂ ಹೆದರಬೇಕಾದ ಅವಶ್ಯಕತೆಯು ಇಲ್ಲ ಎಂಬುದನ್ನು ಅನೇಕ ಅಧ್ಯಯನಗಳು ಸಾಬೀತು ಮಾಡಿವೆ. ಅವುಗಳ ಕೆಲವು ವಿವರಗಳು ಈ ಮುಂದಿವೆ. ಮುಖ್ಯವಾಗಿ ಸೋಂಕು ಉಂಟಾಗಿ, ಆಸ್ಪತ್ರೆಗೆ ದಾಖಲಾಗಲೇಬೇಕಾಗುವ ಸಂಭವವು ಕಡಿಮೆ ಇರುವ ಕಾರಣದಿಂದ ಒಮಿಕ್ರಾನ್ ಹಿಂದಿನ ರೂಪಾಂತರಿಗಳಿಗಿಂತ ಕಡಿಮೆ ಅಪಾಯಕಾರಿ.  

ಪ್ರಾಣಿಗಳನ್ನು ಮಾದರಿಯಾಗಿಟ್ಟುಕೊಂಡು ನಡೆಸಿದ ಹಲವಾರು ಅಧ್ಯಯನಗಳು ಒಮಿಕ್ರಾನ್ ಕೇವಲ ಶ್ವಾಶಕೋಶದ ಮೇಲ್ಭಾಗದ ಮಾತ್ರವೇ ಸುಲಭವಾಗಿ ಸೋಂಕು ಉಂಟುಮಾಡುತ್ತದೆ, ಹೊರತು, ನೇರವಾಗಿ ಶ್ವಾಸಕೋಶದ ಅಂಗಾಂಶವನ್ನು ಸೋಂಕು ಮಾಡುವಷ್ಟು ಪ್ರಬಲವಾಗಿಲ್ಲ ಎಂಬುದನ್ನು ಸಾಬೀತು ಪಡಿಸಿವೆ. ಒಂದು ವೇಳೆ ಸೋಂಕು ತಗುಲಿದರೂ ಅದು ಶ್ವಾಸಕೋಶದ ಒಳಗೆ ಬೆಳವಣಿಗೊಂಡು ವೃದ್ಧಿಸುವುದು ಅದಕ್ಕೆ ಸಾಧ್ಯವಾಗುತ್ತಿಲ್ಲ.  ಆದರೆ ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ಅಪಾರ ಜನಸಂಖ್ಯೆಯ ನಡುವೆ ವೇಗವಾಗಿ ಹರಡುವಿಕೆಯ ಸಾಮರ್ಥ್ಯವನ್ನು ಮಾತ್ರವೇ ಪ್ರದರ್ಶಿಸಿದೆ. ಎಷ್ಟೆಂದರೆ ಹೆಚ್ಚಿನ ಪ್ರಸರಣಕ್ಕೆ ಮಾನದಂಡವಾದ ಮತ್ತೊಂದು ವೈರಸ್‌ ಕಾಯಿಲೆಯಾದ ದಡಾರದೊಂದಿಗೆ ಇದನ್ನು ಹೋಲಿಸಬಹುದಾಗಿದೆ. ಒಮಿಕ್ರಾನ್ ಗಿಂತ ವೇಗವಾಗಿ ಹರಡಿದ್ದರೂ ಅದು ಕಡಿಮೆ ಅಪಾಯಕಾರಿ ಎಂದು ಇದರ ನಡವಳಿಕೆಯಲ್ಲಿನ ವ್ಯತ್ಯಾಸಗಳಿಗೆ ವಿವರಣೆಯನ್ನು ನೀಡುವ ಹಲವಾರು ಪ್ರಯೋಗಾಲಯದ ಅಧ್ಯಯನಗಳು ಹೊರಹೊಮ್ಮಿವೆ.

ಸ್ಯಾನ್ ಫ್ರಾನ್ಸಿಸ್ಕೋದ ಗ್ಲಾಡ್‌ಸ್ಟೋನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ವೈರಾಲಜಿಸ್ಟ್ ಮೆಲಾನಿ ಓಟ್ ಹೇಳುವಂತೆ ಒಮಿಕ್ರಾನ್‌ನ ಹೈಪರ್-ಟ್ರಾನ್ಸ್ಮಿಸಿಬಿಲಿಟಿ ಎಂದರೆ ಹರಡುವಿಕೆಯ ಹೆಚ್ಚಳದಿಂದ ಆಸ್ಪತ್ರೆಗಳಿಗೆ ಹೆಚ್ಚು ಹೋಗುವವರು ಇದ್ದರೂ, ತಕ್ಷಣವಾಗಿಯೇ, ರೋಗಿಗಳಲ್ಲಿ ನರಳಾಟದ ತೀವ್ರತೆಯು ಕಡಿಮೆಯಾಗುವುದಂತೆ! 

ತೀವ್ರ ಒಮಿಕ್ರಾನ್‌ ಸೋಂಕಿತ ದಕ್ಷಿಣ ಆಫ್ರಿಕಾದಲ್ಲೂ ಒಮಿಕ್ರಾನ್ ಸಾವಿನಲ್ಲಿ ಹೆಚ್ಚಿನ ಏರಿಕೆಯಿಲ್ಲ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ. ಯುನೈಟೆಡ್‌ ಕಿಂಗ್‌ಡಂ(UK) ಆರೋಗ್ಯ ಭದ್ರತಾ ಸಂಸ್ಥೆಯು ಇಂಗ್ಲಂಡ್‌ನಲ್ಲಿನ ಒಮಿಕ್ರಾನ್-ಸೋಂಕಿತ ಜನರ ಆಸ್ಪತ್ರೆಯ ದಾಖಲಾತಿಯು, ಡೆಲ್ಟಾ ಸೋಂಕಿತರಿಗೆ ತುರ್ತು ಆರೈಕೆಯ ಅಗತ್ಯದ ಅರ್ಧದಷ್ಟು ಮಾತ್ರ ಎಂಬುದಾಗಿ ವರದಿ ಮಾಡಿದೆ.

ಆದಾಗ್ಯೂ, ಲಸಿಕೆ ಅಥವಾ ಸೋಂಕಿನ ಮೂಲಕ ಅಥವಾ ಎರಡರ ಮೂಲಕ ಪ್ರತಿರಕ್ಷಣೆ ಪಡೆದ ಜನರಲ್ಲಿ ಒಮಿಕ್ರಾನ್ ಹೇಗೆ ವರ್ತಿಸುತ್ತದೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆಯ ಕೊರತೆಯಿದೆ. ಪ್ರಯೋಗಾಲಯಗಳಲ್ಲಿ ಪ್ರಾಣಿಗಳ ಮಾದರಿಗಳು ಮತ್ತು ಜೀವಿಕೋಶ ಮಾದರಿಗಳನ್ನು ಬಳಸಿಕೊಂಡು ಒಮಿಕ್ರಾನ್ ಹಿಂದಿನ ರೂಪಾಂತರಗಳಿಗಿಂತ ಸೌಮ್ಯವಾದ ರೋಗವನ್ನು ಉಂಟುಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ.

ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ವೈರಾಲಜಿಸ್ಟ್ ಮೈಕೆಲ್ ಡೈಮಂಡ್ ಮತ್ತವರ ಸಹೋದ್ಯೋಗಿಗಳು ಹ್ಯಾಮ್ಸ್ಟರ್‌ಗಳು ಮತ್ತು ಇಲಿಗಳನ್ನು ಬಳಸಿ ನಡೆಸಿದ ಅಧ್ಯಯನಗಳು ರೋಗದ ಪ್ರಗತಿಯ ಬಗ್ಗೆ ಆಸಕ್ತಿದಾಯಕ ಫಲಿತಾಂಶಗಳನ್ನು ನೀಡಿವೆ. ಒಮಿಕ್ರಾನ್ ಸೋಂಕಿಗೆ ಒಳಗಾದ ಪ್ರಾಣಿಗಳ ಶ್ವಾಸಕೋಶದಲ್ಲಿನ ವೈರಸ್‌ನ ಸಾಂದ್ರತೆಯು ಇತರ ರೂಪಾಂತರಗಳೊಂದಿಗೆ ಸೋಂಕಿತ ದಂಶಕಗಳಿಗಿಂತ ಕನಿಷ್ಠ ಹತ್ತು ಪಟ್ಟು ಕಡಿಮೆಯಾಗಿದೆ ಎಂದವರ ಫಲಿತಗಳು ತಿಳಿಸಿವೆ. ಇತರ ತಂಡಗಳೂ ಇದೇ ರೀತಿಯ ಫಲಿತಾಂಶಗಳನ್ನು ವರದಿ ಮಾಡಿದೆ. ಮೈಕೆಲ್ ಡೈಮಂಡ್ ಅವರು ಒಮಿಕ್ರಾನ್-ಸೋಂಕಿತ ಪ್ರಾಣಿಗಳು ದೇಹದ ತೂಕವನ್ನು ಕಾಯ್ದುಕೊಳ್ಳುವ ಆಶಾದಾಯಕ ವರ್ತನೆಯನ್ನು ಗಮನಿಸಿದ್ದಾರೆ, ಇದು ತೀವ್ರತೆಯನ್ನು ನಿರ್ವಹಿಸುವಲ್ಲಿ ಉತ್ತಮ ಮಾರ್ಗದರ್ಶನದ ಸೂಚಿಯಾಗಿದೆ.

ಡಾ. ರವೀಂದ್ರ ಗುಪ್ತಾ

ಕೇಂಬ್ರಿಜ್‌ ಇನ್‌ಸ್ಟಿಟ್ಯೂಟ್ ಆಫ್ ಥೆರಪ್ಯೂಟಿಕ್ ಇಮ್ಯುನೊಲಾಜಿ ಮತ್ತು ಇನ್‌ಫೆಕ್ಷಿಯಸ್ ಡಿಸೀಸ್‌ನ ಸಂಶೋಧಕರ ತಂಡವು ಶ್ವಾಸಕೋಶದ ಜೀವಿಕೋಶಗಳಲ್ಲಿ ಟಿಎಂಪಿಆರ್‌ಎಸ್‌ಎಸ್2(TMPRSS2) ಎಂಬ ಪ್ರೊಟೀನ್ ಅನ್ನು ಕಂಡುಹಿಡಿದಿದೆ, ಅದು ಶ್ವಾಸಕೋಶಕ್ಕೆ ಒಮಿಕ್ರಾನ್ ವೈರಸ್ಸಿನ ಪ್ರವೇಶವನ್ನು ತಡೆಯುತ್ತದೆ. ತಂಡವು ಶ್ವಾಸಕೋಶದ ಮಾದರಿಯನ್ನು ಬಳಸಿ ಈ ಸಂಶೋಧನೆಯನ್ನು ನಡೆಸಿದೆ. TMPRSS2 ಪ್ರೊಟೀನ್ ಶ್ವಾಸಕೋಶಗಳು ಮತ್ತು ಇತರ ಕೆಲವು ಅಂಗಗಳಲ್ಲಿನ ಜೀವಿಕೋಶಗಳ ಮೇಲ್ಮೈಯಲ್ಲಿ ಕಂಡುಬರುತ್ತದೆ. ಆದರೆ ಮೂಗು ಮತ್ತು ಗಂಟಲಿನ ಜೀವಿಕೋಶಗಳ ಮೇಲ್ಮೈಯಲ್ಲಿ ಇರುವುದಿಲ್ಲ, ಇದರಿಂದಾಗಿ ಮೂಗು ಮತ್ತು ಗಂಟಲಿಗೆ ಸಹಜವಾದ ಸೋಂಕನ್ನು ಉಂಟುಮಾಡುತ್ತದೆ. ಇದರ ರೋಗಲಕ್ಷಣಗಳು ಸಾಮಾನ್ಯ ಶೀತದಲ್ಲಿ ಉಂಟಾಗುವ ರೋಗಲಕ್ಷಣಗಳಿಗೆ ಹೋಲುತ್ತವೆ. ಇದರಿಂದಾಗಿ ಶ್ವಾಸಕೋಶದ ಒಮಿಕ್ರಾನ್‌ ಸೋಂಕುಗಳು ಮೇಲ್ಭಾಗದ ಶ್ವಾಸೇಂದ್ರಿಯದ ಪ್ರದೇಶಕ್ಕೆ ಮಾತ್ರವೇ ಸೀಮಿತವಾಗಿವೆ ಎಂದು TMPRSS2 ಅಧ್ಯಯನದಲ್ಲಿ ತೊಡಗಿರುವ ತಂಡದ ಸದಸ್ಯ ಕೇಂಬ್ರಿಜ್‌ ವಿಶ್ವವಿದ್ಯಾಲಯದ ವೈರಾಲಜಿಸ್ಟ್ ಡಾ.ರವೀಂದ್ರ ಗುಪ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಮುಂದುವರೆಯುವ ವೈರಸ್‌ ವಿಕಾಸದಲ್ಲಿ ಇನ್ನೂ ಪ್ರಬಲವಾದ ವೈರಸ್‌ ಬಂದೀತೆಂಬ ಎಚ್ಚರಿಕೆಯನ್ನೂ ಪ್ರೊ. ರವೀಂದ್ರ ಗುಪ್ತಾ ಕೊಟ್ಟಿದ್ದಾರೆ. ಅವರ ಜೊತೆಗಿನ ಸಂದರ್ಶನವನ್ನು ಈ ಲಿಂಕ್‌ ಅಲ್ಲಿ ನೋಡಬಹುದಾಗಿದೆ. https://www.youtube.com/watch?v=xDWQjduws9w

ಒಮಿಕ್ರಾನ್ ಮಕ್ಕಳ ಮೇಲೆ ಬೀರವ ಪರಿಣಾಮದಲ್ಲಿ ಸ್ವಲ್ಪ ಗಂಭೀರವಾದ ಅನುಮಾನಗಳಿವೆ. ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದ ಮಕ್ಕಳ ಆಸ್ಪತ್ರೆಯ ಮಕ್ಕಳ ಸಾಂಕ್ರಾಮಿಕ ರೋಗ ತಜ್ಞ ಆಡ್ರೆ ಜಾನ್, ಪ್ರಕಾರ ಎಳೆಯ ಮಕ್ಕಳ ಮೂಗಿನಲ್ಲಿ ಕಿರಿದಾದ ಮಾರ್ಗಗಳಿವೆ, ಜೊತೆಗೆ ಶಿಶುಗಳು ಕೇವಲ ತಮ್ಮ ಮೂಗಿನ ಮೂಲಕ ಮಾತ್ರ ಉಸಿರಾಡುತ್ತವೆ – ಹಾಗಾಗಿ ಶ್ವಾಸಕೋಶದ ಮೇಲ್ಭಾಗದ ಶ್ವಾಸೇಂದ್ರಿಯ ಭಾಗದ ಅಸ್ವಸ್ಥತೆಯನ್ನು ಸ್ವಲ್ಪ ಹೆಚ್ಚಾಗಿಯೇ ಅನುಭವಿಸಬಹುದು. ಆದಾಗ್ಯೂ, ಅದು ಸಾಮಾನ್ಯ ಶೀತದಲ್ಲಿ ಕಾಣಬರುವ ರೋಗಲಕ್ಷಣಗಳಂತೆ ಎನ್ನುತ್ತಾರೆ.

 ಒಮಿಕ್ರಾನ್‌ ಅನ್ನು ತಗ್ಗಿಸುಲ್ಲಿವ ಸಾಕಷ್ಟು ಪ್ರಭಾವಿಸುವ ಅಂಶಗಳಿವೆ ಎಂದು ಸಾನ್‌ಫ್ರಾನ್ಸಿಸ್ಕೊದ ವೈರಾಲಜಿಸ್ಟ್‌ ಮೆಲಾನಿ ಒಟ್ ಒಪ್ಪುತ್ತಾರೆ. “ವೈರಸ್ ಮೇಲಿನ ವಾಯುಮಾರ್ಗಗಳಲ್ಲಿ ಮಾತ್ರವೇ ಸೋಂಕನ್ನು ಉಂಟುಮಾಡುತ್ತದೆಯೇ ವಿನಾಃ ಅದು ಶ್ವಾಸಕೋಶದಲ್ಲಿ ಒಳಗೆ ವಿನಾಶವನ್ನು ಉಂಟುಮಾಡಲು ಕಡಿಮೆ ಅವಕಾಶವನ್ನು ಹೊಂದಿದೆ” ಎಂದು ಅವರು ಹೇಳುತ್ತಾರೆ. ಆದಾಗ್ಯೂ, ‘ಆತಿಥೇಯ-ಪ್ರತಿರಕ್ಷಣಾ ಪ್ರತಿಕ್ರಿಯೆ –(Host-Immune Response) ರೋಗದ ತೀವ್ರತೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಲ್ಲದೆ ಒಮಿಕ್ರಾನ್‌ನ ಕಾಯಿಲೆಯ ಪ್ರಗತಿಗೆ ಸಂಬಂಧಿಸಿದಂತೆ ಜೈವಿಕ ಸಮಸ್ಯೆಗಳ ಕುರಿತು ಸಾಕಷ್ಟು ವೈದ್ಯಕೀಯ ಮಾಹಿತಿಯು ಲಭ್ಯವಾದಾಗ ಮಾತ್ರ ಉತ್ತಮ ವಿವರಣೆಯು ಸಾಧ್ಯ ಎಂಬುದನ್ನು ಗಮನಿಸಬೇಕಿದೆ. ವಿವರವಾದ ವೈದ್ಯಕೀಯ ದತ್ತಾಂಶದ ಅನುಪಸ್ಥಿತಿಯಲ್ಲಿಯೂ ಸಹ, ದಕ್ಷಿಣ ಆಫ್ರಿಕಾ ಮತ್ತು UK ನಲ್ಲಿ ದಾಖಲಾದ ಮಾಹಿತಿಗಳು ಪ್ರಕಾರ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಅಷ್ಟೊಂದು ಆತಂಕಕಾರಿಯಾಗಿಲ್ಲ ಎಂದು ಖಾತ್ರಪಡಿಸಿವೆ. ಒಮಿಕ್ರಾನ್‌ ಅದರ ಪೂರ್ವವರ್ತಿಗಳಂತೆ ಹೆಚ್ಚು ಭಯಂಕರವಾಗಿಲ್ಲ ಎಂದು ಸೂಚಿಸಲು ಅರ್ಹವಾದ ಈ ಪ್ರಕರಣವು ಜನಸಾಮಾನ್ಯರ ಗಮನಕ್ಕೆ ಯೋಗ್ಯವಾಗಿದೆ. ಆದಾಗ್ಯೂ, ವೈರಸ್‌ಗಳು ನಿರಂತರವಾಗಿ ವಿಕಸನಗೊಳ್ಳುತ್ತಿರುವುದರಿಂದ, ಆರೋಗ್ಯ ರಕ್ಷಣೆಯ ವಿಭಾಗಗಳು ಪ್ರತಿರಕ್ಷಣೆ, ಆಸ್ಪತ್ರೆಗೆ ದಾಖಲು ಮತ್ತು ಚಿಕಿತ್ಸೆಯ ನಂತರದ ಆರೈಕೆಯ ರೀತಿ ರಿವಾಜುಗಳನ್ನು ಒಳಗೊಂಡಿರುವ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಾಗಿ ಬಳಸಲಾಗುವ ತಂತ್ರಗಳನ್ನು ನಿರಂತರವಾಗಿ ವಿಕಸನಗೊಳಿಸಬೇಕಾಗುತ್ತದೆ. ಮುನ್ನೆಚ್ಚರಿಕೆ ಖಂಡಿತಾ ಬೇಕಿದೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has One Comment

  1. ಕೃಷ್ಣ ಮೂರ್ತಿ

    ಮಾಹಿತಿಗಾಗಿ ಧನ್ಯವಾದಗಳು…

Leave a Reply