You are currently viewing ಉರಿದು ಆವಿಯಾಗುವ “ಕರ್ಪೂರ”, ಬೆಳೆಯುತ್ತಲೇ ಹೆಮ್ಮರವಾಗುವ “ಕರ್ಪೂರದ ಮರ”: Cinnamomum camphora

ಉರಿದು ಆವಿಯಾಗುವ “ಕರ್ಪೂರ”, ಬೆಳೆಯುತ್ತಲೇ ಹೆಮ್ಮರವಾಗುವ “ಕರ್ಪೂರದ ಮರ”: Cinnamomum camphora

ಭಾರತೀಯರಿಗೆ ಕರ್ಪೂರವನ್ನೇನೂ ಪರಿಚಯಿಸಬೇಕಿಲ್ಲ. ಕರ್ಪೂರದ ಮರವನ್ನು ಖಂಡಿತಾ ಪರಿಚಯಿಸಬೇಕಿದೆ. ಕರ್ಪೂರವೂ ಸಹಾ ಸಸ್ಯದ ಉತ್ಪನ್ನವೇ ಎಂದು ಹುಬ್ಬೇರಿಸುವವರೂ ಖಂಡಿತಾ ಇದ್ದಾರೆ. ಗೊತ್ತಿದ್ದವರಿಗೂ ಅದೊಂದು 50-60 ಅಡಿಗಳಿಂದ ನೂರಾರು ಅಡಿಗಳವರೆಗೂ ಬೆಳೆಯುವ ಹೆಮ್ಮರ ಎಂಬದನ್ನಂತೂ ಪರಿಚಯಿಸಬೇಕಿದೆ. ನಮ್ಮದಲ್ಲದ ಈ ಮರ, ಮೂಲತಃ ಪೂರ್ವ ಏಶಿಯಾದ್ದು. ಚೀನಾ, ಜಪಾನ್‌, ತೈವಾನ್‌ಗಳಲ್ಲಿ ಇದರ ಹೆಚ್ಚುಗಾರಿಕೆಯು ಜನಪ್ರಿಯವಾದುದು. ಆದರೆ ಅದರ “ಕರ್ಪೂರ”ದ ಮಾತ್ರ ಪರಿಮಳ ಮಾತ್ರ ಬಹು ಪಾಲು ಭಾರತೀಯರಿಗೆ ಅದರಲ್ಲೂ ತಿನಿಸುಗಳಲ್ಲಿಯೂ ಪರಿಚಿತ. ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ವಾತಾವರಣದಲ್ಲಿ ಸಾಮಾನ್ಯವಾಗಿ ಬೆಳೆವ “ಚಕ್ಕೆ”-ಸಿನ್ನಮೊಮಂ- Cinnamomum ಕ ಕುಲಕ್ಕೇ ಸೇರಿದ ಕರ್ಪೂರದ ಮರ. ಹಲವಾರು ಪ್ರಭೇದಗಳುಳ್ಳ ಸಿನ್ನಮೊಮಂ, ಸಂಕುಲವು ಲರೇಸಿಯೆ (Lauraceae ) ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ.

ಕರ್ಪೂರದ ಬೊಂಬೆ ನಾನು… ಮಿಂಚಂತೆ ಬಳಿ ಬಂದೆ ನೀನು… ಎನ್ನುವ ಜನಪ್ರಿಯ ಚಿತ್ರಗೀತೆಯೊಂದಿದೆ. ಅದರಲ್ಲಿ ಕಾವ್ಯದ ನಾಯಕಿಯು ಪ್ರೇಮಿಯ ಜ್ವಾಲೆಯಲ್ಲಿ ಕರಗಿ ನೀರಾದೆಳೆಂದು ಹಾಡುತ್ತಾಳೆ. ಆದರೆ ನಿಜವಾದ ಕರ್ಪೂರವು ಜ್ವಾಲೆಗೆ ಕರಗಿ ನೀರಾಗದೆ ನೇರವಾಗಿ ಆವಿಯಾಗುತ್ತದೆ. ಇದು ಕರ್ಪೂರದ ವಿಶೇಷವೂ ಹೌದು! ಅದನ್ನು ಶಾಲಾ ರಸಾಯನ ವಿಜ್ಞಾನದ “ಉತ್ಪತನ-(Sublimation)”ಕ್ರಿಯೆ ಎಂದು ಎಲ್ಲರೂ ಓದಿರುತ್ತೀರಿ. ಇದು ಕರ್ಪೂರದ ವೈಜ್ಞಾನಿಕ ಸತ್ಯ. ಕಾವ್ಯದ ಸತ್ಯದ ಕರಗುವಿಕೆಯು ಪ್ರೇಮಿಯ ಪ್ರೀತಿಗೆ ಪರವಶಳಾಗುವ ರೂಪಕ! ಹಾಗಾದರೂ ಪ್ರಿಯಕರನು ಪ್ರೇಮಿಯನ್ನು ಕರ್ಪೂರದ ಬೊಂಬೆಯಾಗಿಸಿ ಪಡೆಯುವ ಪರಿಮಳ ಅವಳ ಪ್ರೀತಿ ಕೂಡ ಇದ್ದೀತು! ಇರಲಿ..!

ಕರ್ಪೂರದ ಮರದ ತೊಗಟೆಯೂ ನಮ್ಮ ಸಾಂಬಾರಿನ ಚಕ್ಕೆಯಂತೆಯೇ ಪರಿಮಳಯುತವಾಗಿದ್ದು, ಜೊತೆಗೆ ಎಲೆಗಳೂ, ಚೌಬೀನೆ ಕೂಡ ಪರಿಮಳವನ್ನು ಹೊಂದಿದೆ. ಶತಮಾನಗಳಿಂದ ಕರ್ಪೂರವನ್ನು ಮಾನವ ಕುಲವು ಬಳಸುತ್ತಾ ಬಂದಿದೆ.  ರಸಾಯನಿಕವಾಗಿ ಕರ್ಪೂರವು ಒಂದು ಇಂಗಾಲದ ವಸ್ತುವಾಗಿದ್ದು   ಹತ್ತು ಇಂಗಾಲದ, ಹದಿನಾರು ಜಲಜನಕದ ಅಣುಗಳಿರುವ ಒಂದೇ ಆಮ್ಲಜಕವುಳ್ಳ (C10H16O) ಎಂಬ ರಸಾಯನಿಕ ಸೂತ್ರವನ್ನು ಹೊಂದಿದೆ. ಹಾಗಾಗಿ ಆಮ್ಲಜನಕವನ್ನು ಬೇಗ ಸೆಳೆದುಕೊಂಡು ಜ್ವಾಲೆಯಲ್ಲಿ ಕರಗಿ ಉತ್ಕರ್ಷಣವಾಗಿ ಹಾಗೇ ಆವಿಯೂ ಆಗುತ್ತದೆ. Camphor ಪದವು ಫ್ರೆಂಚ್‌ ಪದ ಕಾಫ್‌ಹ್ರ್   (Camphre) ದಿಂದ ವಿಕಾಸ ಹೊಂದಿದೆ. ಫ್ರೆಂಚ್‌ ಪದವು ಮಧ್ಯಕಾಲೀನ ಲ್ಯಾಟಿನ್‌ ನಿಂದಲೂ, ಲ್ಯಾಟಿನ್‌ ಪದವು ಅರಬಿಕ್‌ ನಿಂದಲೂ, ಅರಾಬಿಕ್‌ ತಮಿಳಿನ ʼಕರ್ಪೂರಂʼ ದು ಎಂದೂ ಅಂದಾಜಿಸಲಾಗಿದೆ. ನಮ್ಮ ದೇಶದ ಮುಂಬೈ ನಗರ ಕರ್ಪೂರದ ಉದ್ಯಮದಲ್ಲಿ ದೊಡ್ಡ ಹೆಸರು.  

ಕರ್ಪೂರದ ಮರಗಳು ನಿತ್ಯ ಹರಿದರ್ವರ್ಣದ ದಟ್ಟವಾಗಿಯೂ ಎತ್ತರವಾಗಿಯೂ ಬೆಳೆಯುತ್ತವೆ. ಮೂಲತಃ ಪೂರ್ವ ಏಶಿಯಾದ ತವರಿನವಾಗಿದ್ದರೂ ನೂರಾರು ವರ್ಷಗಳಿಂದ ಜಗತ್ತಿನಾದ್ಯಂತ ಒಣ ಹವೆ ಹಾಗೂ ಹೆಚ್ಚು ಮಳೆಯ ಪ್ರದೇಶಗಳನ್ನು ಆವರಿಸಿವೆ. ನೋಡಲು ಹೆಮ್ಮರಗಳೇ ಸಾಕಷ್ಟು ಆಕರ್ಷಕವಾದವು ಹಾಗಾಗಿಯೇ ಉಷ್ಣವಲಯದ ಅನೇಕ ಕಡೆಗಳಲ್ಲಿ ಪಾರ್ಕುಗಳಲ್ಲಿಯೂ ಸ್ಥಾನವನ್ನು ಪಡೆದಿವೆ. ಅನೇಕ ಸಸ್ಯೋದ್ಯಾನಗಳಲ್ಲಿ ಇದನ್ನು ಕಾಣಬಹುದು. ಕೆಲವು ಪ್ರದೇಶಗಳಲ್ಲಿ ಸಾಲು ಮರಗಳಾಗಿಯೂ ಇವು ನೆಲೆಯನ್ನು ಪಡೆದಿವೆ. ಸಾಕಷ್ಟು ರೆಂಬೆ-ಕೊಂಬೆಗಳನ್ನು, ದಪ್ಪವಾದ ಬುಡವನ್ನೂ ಹೊಂದಿರುವುದು ಇದರ ವಿಶೇಷ. ಆರಂಭದಲ್ಲಿ ಹೇಳಿದಂತೆ ಹೆಮ್ಮರಗಳಾಗಿರುವ ಇವುಗಳ ವಿಶೇಷವನ್ನೂ ಅವುಗಳಿಗಿರುವ ಮಾನ್ಯತೆಯನ್ನೂ ನಂತರದಲ್ಲಿ ನೋಡೋಣ.

       ಸುವಾಸನೆಯ ಭಾಗಗಳನ್ನು ಹೊಂದಿರುವ ಮರ! ಎಲೆಗಳನ್ನು ಕೈಯಲ್ಲಿ ಕಿತ್ತು ಉಜ್ಜಿದರೆ ಸಾಕು ಅಂಗೈಯೆಲ್ಲಾ ಕರ್ಪೂರದ ಪರಿಮಳ! ಎಲೆಗಳು ಮೇಲ್ಮೈಯು ಎಣ್ಣೆಯನ್ನು ಹಚ್ಚಿದಂತೆ ಹೊಳೆಯುತ್ತಿರುತ್ತವೆ. ತಳ ಭಾಗವು ತುಸು ಮಾಸಲು ಬಿಳಿಯದಾದ ಹಸಿರು ಬಣ್ಣವನ್ನು ಹೊಂದಿರುತ್ತವೆ. ಎಲೆಗಳಲ್ಲೂ ಕರ್ಪೂರದ ಎಣ್ಣೆಯು ಇದ್ದರೂ, ಅದರ ಚೌಬೀನೆ(Inner Wood) ಸಾಕಷ್ಟು ಕರ್ಪೂರದದ ಇಳುವರಿಯನ್ನು ಕೊಡುತ್ತದೆ. ಮರವನ್ನು ಹೊರ ತೊಗಟೆಯನ್ನು ಚೆನ್ನಾಗಿ ತೊಳೆದು, ಇಲ್ಲವೇ ತೆಳುವಾಗಿ ಸುಲಿದು, ಒಳ-ಮರವನ್ನು ಸಣ್ಣ ಸಣ್ಣ ತುಂಡುಗಳಾಗಿಸಿ ಶುದ್ಧವಾದ ನೀರಿನಲ್ಲಿ ಭಟ್ಟಿ ಇಳಿಸಲಾಗುತ್ತದೆ. ಅದರಿಂದ ಪಡೆದ ಎಣ್ಣೆಯನ್ನು ನೀರಲ್ಲಿಯೇ ಘನೀಕರಿಸಿ ತೇಲಿಸಿದಾಗ ಶುದ್ಧ ಕರ್ಪೂರ ದೊರೆಯುತ್ತದೆ. ಬಹು ಪಾಲು ತಿನಿಸುಗಳಿಗೆ ಸುಗಂಧವಾಗಿ ಬಳಸುವ ಕರ್ಪೂರವನ್ನು “ಪಚ್ಚ ಕರ್ಪೂರ” ಎಂದು ಕರೆಯುತ್ತೇವೆ. ಅದನ್ನು ಸಾಮಾನ್ಯವಾಗಿ ಹೀಗೆ ಕರ್ಪೂರದ ಮರದಿಂದಲೇ ಪಡೆಯಲಾಗುತ್ತದೆ. ಆದರೆ ಪೂಜೆಯ ಆರತಿಯಲ್ಲಿ ಬಳಸುವ ಕರ್ಪೂರವನ್ನು ಕೃತಕವಾಗಿಯೂ ತಯಾರಿಸಲಾಗುತ್ತದೆ. ಅಲ್ಲದೆ ಇತರೇ ಕೆಲವು ಮರಗಳ ಚೌಬೀನೆಯಿಂದಲೂ ಪಡೆಯಲಾಗುತ್ತದೆ.   ಕರ್ಪೂರದ ಮರಗಳು ಸಾಕಷ್ಟು ಕಾಯಿ-ಬೀಜಗಳನ್ನು ಬಿಡುತ್ತವೆ. ಕಾಯಿ-ಹಣ್ಣುಗಳು ನೋಡಲು ರಸಭರಿತವಾಗ ಬೆರ್ರಿ ಎನಿಸಿದರೂ ಗಟ್ಟಿಯಾದ ಒಳಗೆ ಓಟೆಯಂತಿರುವ ಬೀಜದವು. ಹಾಗಾಗಿ ಹಬ್ಬುವುದೂ ಹೆಚ್ಚು, ಕೆಲವೊಂದು ಆಫ್ರಿಕಾದ ದೇಶದ ಕಾಡುಗಳಲ್ಲಿ ಇತರೆ ಮರಗಳನ್ನು ಅಡ್ಡಿ ಪಡಿಸಿರುವ ಉದಾಹರಣೆಗಳೂ ಇದ್ದು ಕರ್ಪೂರದ ಮರವನ್ನು ಆಕ್ರಮಣಕಾರಿ ಗಿಡವೆಂದೂ ವರ್ಗೀಕರಿಸಲಾಗಿದೆ.  

       ಕರ್ಪೂರವನ್ನು ಭಟ್ಟಿ ಇಳಿಸಿ ಪಡೆಯುವ ಬಿಳಿಯ ಘನೀಕೃತವಾದ ವಸ್ತು. ಕರ್ಪೂರದ ಮರವನ್ನು ಬೆಂಕಿಯಲ್ಲಿ ಹುರಿದು, ಅದರಿಂದ ಆವಿಯಾಗುವ ಎಣ್ಣೆಯನ್ನು (ಮೂಲತಃ ರಾಳ-ರೆಸಿನ್)‌, ಅದರ ಮೇಲೆಯೆ ಹಬೆಯನ್ನು ಹಾಯಿಸಿ ಘನೀಕರಿಸಿ, ನಂತರ ಪಡೆಯಲಾಗುತ್ತಿತ್ತು. ಇದನ್ನು ಜಪಾನಿಯರು ಶತಮಾನಗಳ ಕಾಲ ಪ್ರಭುತ್ವ ಹೊಂದಿದ್ದರು. 20ನೆಯ ಶತಮಾನದ ಆದಿಯಲ್ಲಿ ಕೃತಕವಾಗಿ ಸಂಸ್ಕರಿಸುವ ವಿಧಾನವನ್ನು ಕಂಡುಹಿಡಿದ ಮೇಲೆ ಬಗೆ ಬಗೆಯ ಕಾರ್ಖಾನೆಗಳು ತಲೆಯೆತ್ತಿವೆ. ಆದರೂ ನೈಸರ್ಗಿಕವಾದ ಕರ್ಪೂರ ಎಂದೂ ಈಗಲೂ ಮಾರುಕಟ್ಟೆಯಲ್ಲಿ ಸಿಗುತ್ತದೆ. ಕರ್ಪೂರವನ್ನು ತಿನ್ನಲು ಬಳಸುವಲ್ಲಿ ಇಂಡಿಯಾ ಮೇಲುಗೈ. ಅನೇಕ ಸಿಹಿಗಳಲ್ಲಿ, ಕುಡಿಯುವ ನೀರಿನಲ್ಲೂ ಪರಿಮಳಕ್ಕೆ ಬಳಸುತ್ತಾರೆ. ಅಲ್ಲದೆ ಔಷಧಗಳಲ್ಲಿ ಮುಖ್ಯವಾಗಿ “ಉರಿ” ತರಿಸುವಂತಹಾ ವಿಕ್ಸ್‌ ವೆಪೊರಬ್‌ ಮುಂತಾದ ಔಷಧಗಳಲ್ಲಿ ಬಳಸುತ್ತಾರೆ. ಗಂಟಲಿನ ಶುದ್ಧೀಕರಣಕ್ಕೆ ಕರ್ಪೂರದ ಹಬೆಯನ್ನು ಉಸಿರಾಡುವುದೂ ಕೂಡ ಬಳಕೆಯಲ್ಲಿದೆ.   

ಕರ್ಪೂರವು ಒಂದು ಬಗೆಯ ಮೇಣದಂತಹಾ ವಸ್ತು. ಅದರ ಗಾಢವಾದ ವಾಸನೆಯು ಟರ್ಪಿನಾಯ್ಡ್‌ ಗಳೆಂಬ ಇಂಗಾಲಯುತ ರಾಸಾಯನಿಕ. ಶೀತ, ನೆಗಡಿ, ಕೆಮ್ಮು ನಿವಾರಕವಾಗಿ  ನೂರಾರು ವರ್ಷಗಳಿಂದ ಬಳಕೆಯಲ್ಲಿದೆ. ಪಾರಂಪರಿಕವಾಗಿ ಕರ್ಪೂರವನ್ನು ಮೊಲೆಯುಣಿಸುವ ಹೆಣ್ಣು ಮಕ್ಕಳ ಎದೆಯ ಹಾಲಿನ ಉತ್ಪಾದನೆಯನ್ನು ಕಡಿಮೆ ಮಾಡಲೂ ಕೂಡ ಬಳಸುತ್ತಾರೆ. ಕರ್ಪೂರವು ಕೃತಕ ಅಬಾರ್ಶನ್‌ ಅನ್ನು‌ ಉಂಟು ಮಾಡಲೂ ಸಹಾ ಪಾರಂಪರಿಕ ಪದ್ಧತಿಗಳಲ್ಲಿ ಬಳಸುವ ರೂಢಿ ಇದೆ. ಇತ್ತೀಚೆಗೆ ಕರ್ಪೂರದ ಅನೇಕ ಔಷಧೀಯ ಗುಣಗಳ ವೈದ್ಯಕೀಯ ಅಧ್ಯಯನಗಳೂ ನಡೆದಿವೆ. ಹೆಚ್ಚು, ಚರ್ಮ ಹಾಗೂ ಗಂಟಲಿನ ಕಾಯಿಲೆಗಳ ಸಂಬಂಧದವು ಅಲ್ಲದೆ ಇತರೇ ಜೀವಿವೈಜ್ಞಾನಿಕ ಅಧ್ಯಯನಗಳೂ ಪ್ರಮುಖವಾಗಿವೆ. ಹೆಚ್ಚು ಪ್ರಮಾಣದ ಕರ್ಪೂರವನ್ನು ನೇರವಾಗಿ ನುಂಗುವುದು ಅಪಾಯಕಾರಿ ಕೂಡ! ಕರ್ಪೂರವು ಹೆಚ್ಚಿನ ಪ್ರಮಾಣದಲ್ಲಿ ನರಮಂಡಲಕ್ಕೆ ವಿಷಕಾರಿ.

ಕರ್ಪೂರದ ಮರಗಳು 18-19ನೆಯ ಶತಮಾನದಿಂದಲೂ ಉದ್ಯಮದ ಹಿತಾಸಕ್ತಿಯಿಂದ ಬೆಳೆಸಲಾಗುತ್ತಿದೆ. ಮಾನವರ ಮೂಲ ಹಿತಾಸಕ್ತಿಯ ಗಿಡ-ಮರಗಳ ಹುಡುಕಾಟದಲ್ಲಿ ವಸಾಹತು ಕಾಲದಲ್ಲಿ ಡಚ್ಚರು ಪೂರ್ವ ಏಶಿಯಾದಿಂದ ಪಶ್ಚಿಮದ ಕಡೆಗೆ ಕೊಂಡೊಯ್ದರು. ಅವರಿಗೆ ಈ ಪೂರ್ವದ ನೆಲೆಯ ಹಸಿರಿನ ಬಗೆಗೆ ಇಲ್ಲಿನವರ ಪ್ರೀತಿಯ ಬಗ್ಗೆ ಅಪಾರ ಕುತೂಹಲ ಹಾಗೆಯೇ ಅದನ್ನು ಗೌರವಿಸಿದವರೂ ಕೂಡ. ಜಪಾನೀಯರು, ಚೀನಿಯರೂ, ತೈವಾನಿಯರೂ ಹಿಂದಿನಿಂದಲೂ ಈ ಮರವನ್ನು ದೈವ ಸ್ವರೂಪವಾಗಿಸಿ ಬೆಳೆಸಿ ಕಾಪಾಡಿಕೊಂಡು ಬಂದಿದ್ದಾರೆ. ಇಂದಿಗೂ ಅಂತಹಾ ದೈವಸ್ವರೂಪದ ಮರಗಳನ್ನು ಜತವಾಗಿ ಕಾಪಾಡಿಕೊಂಡು ನೈಸರ್ಗಿಕ ಕರ್ಪೂರದ ತಯಾರಿಯಲ್ಲಿ ಬಳಸುತ್ತಿದ್ದಾರೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ಮರಗಳೂ ಸಹಾ ಜಪಾನಿನಲ್ಲಿವೆ.  

ಕಮೊವ್‌ ನ ಒಃಕಾಸು – “Kamoh no Ohkusu” – ಕರ್ಪೂರದ ಬೃಹತ್‌ ಮರ ಎಂದೇ ಅರ್ಥ. ಕಮೊ ದೇವಾಲಯದ ಸುತ್ತಲಿನ ರಾಷ್ಟ್ರೀಯ ರಕ್ಷಿತ ಪ್ರದೇಶವೆಂದು ಘೋಷಿಸಿ ಅಲ್ಲಿರುವ ಬೃಹತ್ತಾದ ಐದು ಕರ್ಪೂರದ ಮರಗಳನ್ನು ಜಪಾನ್‌ ಕಾಪಾಡಿಕೊಂಡು ಬಂದಿದೆ. ಅವುಗಳು ಸರಿ ಸುಮಾರು 1500-3000 ವರ್ಷಗಳ ಹಿರಿಯ ಜೀವಗಳೆಂದು ಅಂದಾಜಿಸಲಾಗಿದೆ. ನೂರು ಅಡಿಗಳ ಎತ್ತರ, ಹಾಗೂ 80 ಅಡಿಗೂ ಹೆಚ್ಚು ಸುತ್ತಳತೆಯನ್ನೂ ಸುಮಾರು 150 ಅಡಿಗಳ ಸುತ್ತಳತೆಯ ಬೇರಿನ ವ್ಯೂಹವನ್ನೂ ಹೊಂದಿರುವ ಮರಗಳು ಅವು.

ಅದಲ್ಲದೆ ಜಪಾನಿನಲ್ಲಿಯೇ ಸಾವಿರ ವರ್ಷಗಳ ಹಿರಿಯ ಹಾಗೂ ಬೃಹತ್ತಾದ ಮತ್ತೊಂದು ಮರವನ್ನು ಕಾಪಾಡಿ, ಗೌರವಿಸಲು ಅದರ ಸಲುವಾಗಿ ಪಾರ್ಕ್‌ ಒಂದನ್ನು ಸ್ಥಾಪಿಸಲಾಗಿದೆ. ಯೊಶಿನೊ ನದಿಯ ದಡದ ಹಳ್ಳಿಯೊಂದರ ಹತ್ತಿರ ಇರುವ ಮರವು ಅದು ಒಟ್ಟು ಆವರಿಸಿರುವ ವಿಸ್ತಾರದಿಂದಾಗಿ ಜನಪ್ರಿಯತೆಯನ್ನು ಪಡೆದಿದೆ. ಸುಮಾರು 2000-2500 ಚದರ ಮೀಟರ್‌ ವಿಸ್ತೀರ್ಣವಾದ ವಿಶಾಲ ಚಾವಣೆಯನ್ನು ಹಾಸಿದೆ. ಇದೂ ಸಹಾ ರಾಷ್ಟ್ರೀಯ ರಕ್ಷಿತ ಮರವೆಂದೂ ಕಾಪಾಡಿಕೊಂಡು ಬರಲಾಗಿದೆ.

 ಕರ್ಪೂರದ ಮರಗಳ ಸ್ವಭಾವವೇ ಹೆಮ್ಮರವಾಗಿ ಬೆಳೆಯುವುದು. ಮೊದಲ ವರ್ಷ ದಾಟಿದ ಮರಗಳು ನಂತರದಲ್ಲಿ ವೇಗವಾಗಿ ಬೆಳೆಯುತ್ತವೆ. ವರ್ಷಕ್ಕೆ ಏನಿಲ್ಲವೆಂದರೂ 6ರಿಂದ 10 ಅಡಿ ಎತ್ತರವನ್ನೂ ಸುಲಭವಾಗಿ ತಲುಪುತ್ತವೆ. ಹಾಗಾಗಿ ಅತಿಯಾದ ಬೇರುಗಳ ವ್ಯೂಹವನ್ನೂ ಬೆಳೆಸಿಕೊಂಡು ಅಲ್ಲೂ ಕುಡಿ ಎಬ್ಬಿಸಿ ಹಬ್ಬುತ್ತವೆ. ಬಹುಶಃ ಕರಿಬೇವಿನ ಗಿಡದ ಬುಡದ ಸುತ್ತಲೂ ಮರಿಗಿಡಗಳು ಬಂದಿರುವುದನ್ನು ಕಂಡಿರುತ್ತೀರಿ. ಹಾಗೆಯೇ ಈ ಮರವೂ ಮರಿಗಳನ್ನು ದಾಟಿಸುತ್ತದೆ. ಜೊತೆಗೆ ಸಾಕಷ್ಟು ಬೀಜಗಳನ್ನೂ ಕೂಡ ಬಿಟ್ಟು ಹಬ್ಬುತ್ತದೆ. ಆದ್ದರಿಂದ ಪಾರ್ಕುಗಳಲ್ಲಿ ಬದಿಯಲ್ಲಿ ನೆಟ್ಟ ಮರಗಳನ್ನು ಜೋಪಾನವಾಗಿ ಕಾಯ್ದು ಕತ್ತರಿಸಬೇಕಾಗುತ್ತದೆ. ಅವುಗಳ ಬೆಳೆಯುವ ನೋಟವೇ ಆಕರ್ಷಕವಾಗಿ ಡಚ್ಚರು ಅದನ್ನು ಆಫ್ರಿಕಾದ ಎಸ್ಟೇಟ್‌ ಒಂದರಲ್ಲಿ ಬೆಳೆಸಿದ್ದೂ ಉಂಟು. ಕ್ರಿ.ಶ. 1700ರಲ್ಲಿ ಡಚ್‌ ಈಸ್ಟ್‌ ಇಂಡಿಯಾ ಕಂಪನಿಯ ಅಧಿಕಾರಿಯಿಂದ ವೈಯಕ್ತಿಕ  ಆಸಕ್ತಿಯ ತೋಟವು ಅದಾಗಿತ್ತು. ವರ್ಜೆಲಜೆನ್‌ ಎಸ್ಟೇಟು (Vergelegen Estate) ಎಂದು ಹೆಸರಾದ ಅದು ಇಂದಿಗೂ ಇದೆ. ಡಚ್ ನಲ್ಲಿ‌ ವರ್ಜೆಲಜೆನ್‌ (Vergelegen) ಎಂದರೆ “ಎಲ್ಲೋ ಬಹು ದೂರದಲ್ಲಿ” ಎಂದು ಅರ್ಥ. ಇಂದೂ ಆ ಎಸ್ಟೇಟು ಇದ್ದು, ರೆಸ್ಟೊರೆಂಟುಗಳನ್ನು ಹೊಂದಿ ವಿಶೇಷವಾದ ಡಚ್‌ ಹಾಗೂ ಬ್ರಿಟಿಷ್‌ ಸಂಸ್ಕೃತಿಯನ್ನು ಪೂರ್ವದ ಒತ್ತಾಸೆಯಲ್ಲಿ ಹಿಡಿದಿಟ್ಟ ತಾಣವಾಗಿ ಜನಪ್ರಿಯವಾಗಿದೆ.   ಮೂರು ನೂರು ವರ್ಷಗಳ ಹಿರಿಯ ಕರ್ಪೂರದ ಮರಗಳ ಜತೆಯಲ್ಲಿ  ಇನ್ನೂ ಹಲವಾರು ಮರಗಳ ನೆಲೆಯಾದ ಬೃಹತ್‌ ತೋಟವಾಗಿದೆ.

ಕರ್ಪೂರದ ಮರಗಳಂತೆಯೇ ಕರ್ಪೂರವನ್ನರಸುವ ಹಿನ್ನೆಲೆಯೂ ಬೆಳೆಯುತ್ತಲೇ ಇದೆ. ಇತ್ತೀಚೆಗೆ 2014ರಲ್ಲಿ ಕೇರಳದ ಅರಣ್ಯ ಇಲಾಖೆ ಹಾಗೂ ಗುರುವಾಯೂರ್‌, ತ್ರಿಶೂರ್‌ ಕಾಲೇಜೊಂದರ ಸಸ್ಯವಿಜ್ಞಾನದ ವಿಭಾಗದ ವಿಜ್ಞಾನಿಗಳು ಕರ್ಪರದ ಸುವಾಸನೆಯಳ್ಳ ಹಾಗೂ ಕರ್ಪೂರವನ್ನು ಕೊಡಬಲ್ಲ ಹೊಸ ಪ್ರಭೇದವನ್ನು ಅಲ್ಲಿನ ಅಗಸ್ತಮಲೈ ಅರಣ್ಯದಲ್ಲಿ ಪತ್ತೆ ಹಚ್ಚಿದ್ದಾರೆ. ಅದೇ ಸಂಕುಲದ ಸಸ್ಯವಾದ ಅದಕ್ಕೆ ಸ್ಥಳೀಯ ಗುರುತನ್ನಿಟ್ಟು Cinnamomum agasthyamalayanum  ಎಂದು ನಾಮಕರಣ ಮಾಡಿದ್ದಾರೆ. ಇದು Cinnamomum camphora    ದಂತೆ ಹೆಮ್ಮರವಲ್ಲ! ಸುಮಾರು 25 ಅಡಿ ಎತ್ತರದ್ದು!

ಚಕ್ಕೆಯೂ ಸೇರಿದಂತೆ ಇತರೇ ಅದರ ಕುಲದ ಬಹುತೇಕ ಪ್ರಭೇದಗಳಿಗೆ ಪಶ್ಚಿಮ ಘಟ್ಟಗಳ ನೆಲ ಹೇಳಿ ಮಾಡಿಸಿದ್ದು. ಕೇರಳದ ಅಗಸ್ತಮಲೈ ಅರಣ್ಯ ಪ್ರದೇಶವನ್ನು ಜೀವಿಗೋಳ ರಕ್ಷಿತ (Agasthyamalai Biosphere Reserve) ಪ್ರದೇಶ ಎಂದು ಗುರುತಿಸಿಲಾಗಿದೆ. ಇದು ದಕ್ಷಿಣದ ಎತ್ತರದ ಪ್ರದೇಶಗಳಲ್ಲಿ ಒಂದು. ದಿನಬಳಕೆಯ ಕರ್ಪೂರದ ಬಿಲ್ಲೆಗಳು ಮುಕ್ಕಾಲು ಸೆಂಟಿ ಮೀಟರ್‌ ನಿಂದ ಒಂದೂ ವರೆ ಸೆಂಟಿ ಮೀಟರ್‌ ವ್ಯಾಸದವಾಗಿದ್ದರೆ ಹೆಚ್ಚು. ಅದಕ್ಕೂ ಚಿಕ್ಕವಿದ್ದರೂ ಇರಬಹುದು. ಆದರೆ ಅದರ ಪರಿಮಳ ಘಾಟು ಮಾತ್ರ ದಟ್ಟವಾದುದು. ಅದು ಮಾತ್ರ ಉರಿದು ನೇರವಾಗಿ ಆವಿಯಾಗಿ ಕಪ್ಪಾಗಿ ಹೋದೀತು…! ಆದರೆ ಕರ್ಪೂರದ ಮರಗಳು ಮಾತ್ರ ಸಾವಿರಾರು ವರ್ಷಗಳು ಬೆಳೆಯುತ್ತಲೇ ಹೆಮ್ಮರವಾಗುತ್ತವೆ.

ಕರ್ಪೂರದ ಆರತಿಯೊಂದಿಗೆ ಕರ್ಪೂರದ ಮರಗಳ ಕಥನಕ್ಕೆ ಮಂಗಳ ಹಾಡಲೇ?… ಅಂದ ಹಾಗೆ ಇವತ್ತಿನ ಕರ್ಪೂರದ ಪ್ರಬಂಧವು ಸಸ್ಯಯಾನವನ್ನು 90ಕ್ಕೆ ತಂದು ನಿಲ್ಲಿಸಿದೆ. ಸಸ್ಯಯಾನದ ನೂರರ ಗಡಿಯ ಮಾತು – ಸಸ್ಯಯಾನದ ಆಸೆ ಮತ್ತು ಉತ್ಸಾಹವು “ಮಾತು ಮುರಿದು” ಕರ್ಪೂರದ ಮರಗಳಂತೆ ಬೆಳೆಯುತ್ತಲೇ ಇರುವ ತುಂಟ ಪ್ರೀತಿಯನ್ನೂ ತಂದಿಟ್ಟಿವೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌

This Post Has 11 Comments

  1. ಹಂ.ಗು. ರಾಜೇಶ್

    ಕರ್ಪೂರದ ಉತ್ಪಾದನೆ, ಮರದ ವಿಶೇಷತೆ ಬಹಳ ಮಾಹಿತಿ ಪೂರ್ಕುಣವಾಗಿದೆ. ನನಗಿದ್ದ ಕುತೂಹಲವನ್ನು ತಣಿಸುವಲ್ಲಿ ನಿಮ್ಮ ಬರವಣಿಗೆ ಯಶಸ್ವಿಯಾಗಿದೆ. ಅಭಿನಂದನೆಗಳು ಸರ್. ನಿಮ್ಮ ಸಸ್ಯಯಾನ ಹೀಗೆ ವಿಶೇಷಗಳನ್ನು ಹೊತ್ತು ತರಲೆಂದು ಆಶಿಸುತ್ತೇನೆ.

  2. Rudresh Adarangi

    ನಿಜಕ್ಕೂ ನಿಮ್ಮ ಲೇಖನ ಕರ್ಪೂರದ ಘಮಲು ನೀಡಿತು. ಧನ್ಯವಾದಗಳು ಸರ್

  3. M.vchetana

    ಓದುತ್ತಾ ಇರುವಾಗ ನಿಜಕ್ಕೂ ಕರ್ಪೂರದ ಘಮಲು ಮೂಗಿಗಿಂತ ಮಸ್ತಷ್ಕಕ್ಕೆ ಹರಡಿತು ಎನ್ನಬಹುದು ಇನ್ನೂ ಹೆಚ್ಚು ಹೆಚ್ಚು ನಮಗೆ ಸಸ್ಯಲೋಕವನ್ನು ತಿಳಿಸಿ ಪರಿಚಯಿಸಿ

  4. Dr.N.T.Anil

    ಕರ್ಪೂರದ ಸಂಪೂರ್ಣ ಮಾಹಿತಿ ಓದಿ ತುಂಬಾ ಸಂತೋಷವಾಯಿತು ಸರ್,ಚೆಂದದ ಬರಹ

  5. ಶಶಿಕಲಾ ರವಿಶಂಕರ್

    ಅಧ್ಯಯನ ಮಾಡಲೇಬೇಕಾದ ಅನಿವಾರ್ಯತೆ ಇದೆ ತಮ್ಮ ಲೇಖನಗಳಲ್ಲಿ..ಅಷ್ಟು ಮಹತ್ವಪೂರ್ಣ ಮಾಹಿತಿಪೂರ್ಣ ಲೇಖನ ತಮ್ಮದು..
    ತಮ್ಮ ಸಸ್ಯಯಾನದ ಅಭಿಯಾನ ನಿರಂತರವಾಗಿರಲಿ.. ಸಸ್ಯ ಲೋಕ ದಕ್ಕಿಸಿಕೊಂಡ ಸಮೃದ್ಧ ಸಾಹಿತ್ಯಸಂಪತ್ತು ತಮ್ಮದಾಗಲಿ.. ಹೃದಯಪೂರ್ವಕ ನಮನಗಳು.. ಅಭಿನಂದನೆಗಳು..

  6. ShashikalaRavishankar

    ಅಧ್ಯಯನ ಮಾಡಲೇಬೇಕಾದ ಅನಿವಾರ್ಯತೆ ಇದೆ ತಮ್ಮ ಲೇಖನಗಳಲ್ಲಿ..ಅಷ್ಟು ಮಹತ್ವಪೂರ್ಣ ಮಾಹಿತಿಪೂರ್ಣ ಲೇಖನ ತಮ್ಮದು..
    ತಮ್ಮ ಸಸ್ಯಯಾನದ ಅಭಿಯಾನ ನಿರಂತರವಾಗಿರಲಿ.. ಸಸ್ಯ ಲೋಕ ದಕ್ಕಿಸಿಕೊಂಡ ಸಮೃದ್ಧ ಸಾಹಿತ್ಯಸಂಪತ್ತು ತಮ್ಮದಾಗಲಿ.. ಹೃದಯಪೂರ್ವಕ ನಮನಗಳು.. ಅಭಿನಂದನೆಗಳು..

  7. ಶ್ರೀಹರಿ ಸಾಗರ ಕೊಚ್ಚಿ

    ಕರ್ಪೂರದ ಕಥನ ವನ್ನು ಓದುತ್ತಾ ಮನದ ತುಂಬಾ ಪರಿಮಳವನ್ನು ಹರಡಿದ್ದೀರಾ. ಲೇಖನ ತುಂಬಾ ಉಪಯುಕ್ತ. ಚೆನ್ನಾಗಿದೆ…

  8. ರಾಘವೇಂದ್ರ ಜಿ

    ಕರ್ಪೂರದ ಗಿಡ ಅಥವಾ ಬೀಜಗಳು ಲಭ್ಯವಿದೆಯೆ, ಮತ್ತು ಮಲೆನಾಡಿನಲ್ಲಿ ಇವನ್ನು ಬೆಳೆಯಬಹುದಲ್ಲವೆ?

  9. ಎಂ ಎಸ್ ಹಿರೇಮಠ

    ಚಿಕ್ಕದಾಗಿ ಮತ್ತು ಚೊಕ್ಕದಾಗಿ ರುದ್ರಾಕ್ಷ ಮರ ಮತ್ತು ಕರ್ಪೂರದ ಕುರಿತು ಅಭಿವ್ಯಕ್ತಿಸಿದ ಲೇಖನ . ಭಾವ ಪ್ರಪಂಚ ,ಭೌತಿಕ ಪ್ರಪಂಚ ,ಮತ್ತು ಆಧ್ಯಾತ್ಮಿಕ ಲೋಕವನ್ನು ಮೇಳೈಸಿದ ಸರಳ ಸಂಕೀರ್ಣ ಲೇಖನ . ತಮ್ಮ ಪ್ರಯತ್ನ ಮತ್ತು ಫಲಕ್ಕೆ ಅಭಿನಂದನೆಗಳು .

  10. ಮೋಹನ ಕುಮಾರ ಕೆ ಎನ್

    ನಂದಿ ಬೆಟ್ಡದ ಮೇಲೆ ಪುರಾತನ ಕಲ್ಯಾಣಿಯ ಪಕ್ಕದಲ್ಲಿ ತೋಟಗಾರಿಕಾ ಇಲಾಖೆಯವರು ಕರ್ಪೂರದ ಮರವನ್ನು ಬೆಳೆಸಿದ್ದಾರೆ. ಅದನ್ನು ನೋಡಲು ನಂದಿ ಬೆಟ್ಟದ ತೋಟಗಾರಿಕಾ ವಿಶೇಷಾಧಿಕಾರಿಯ ಅನುಮತಿಯ ಅಗತ್ಯವಿದೆ.

Leave a Reply