You are currently viewing ಅರಿತಷ್ಟೂ ನಿಗೂಢವಾಗಿ ಉಳಿವ ಮಣ್ಣು

ಅರಿತಷ್ಟೂ ನಿಗೂಢವಾಗಿ ಉಳಿವ ಮಣ್ಣು

ನಿಸರ್ಗದ ಅತ್ಯಂತ ವಿಶೇಷವಾದ ಉತ್ಪನ್ನ ಅಥವಾ ವಸ್ತು ಎಂದರೆ ನಮ್ಮ ಕಾಲಿನ ಕೆಳಗಿರುವ ಮಣ್ಣು. ಅದರ ಅರಿವು ಆಗಸದಾಚೆಗಿನ ವ್ಯೋಮದ ಕುತೂಹಲಕ್ಕೆ ಹೋಲಿಸಿದರೂ, ಇನ್ನೂ ಸಾಲದೆಂಬಂತೆ ಅದರ ಹೆಗ್ಗಳಿಕೆ! ಏನೂ ಅಷ್ಟೊಂದು ವಿಶೇಷ ಅಂದರೆ ಜೈವಿಕ ಹಿನ್ನೆಲೆಯಲ್ಲಿ ನಮ್ಮ ತಾಯಿಯ ಗರ್ಭದಷ್ಟೇ ವಿಶೇಷವನ್ನು ತನ್ನೊಡಲಲ್ಲೂ ಇಟ್ಟು ಕೊಂಡಿದೆ ಮಣ್ಣು. ಕಳೆದ 2006ರವರೆಗೂ ಅರಿತಿದ್ದಕ್ಕಿಂತಾ ಎರಡು ಪಟ್ಟಿಗೂ ಹೆಚ್ಚು ಜೀವ ಪ್ರಭೇದವನ್ನು ಹೊಂದಿದೆ ಎಂಬುದು ಇತ್ತೀಚೆಗಷ್ಟೇ ತಿಳಿದ ಸಂಗತಿ! ಜೀವಿ ಜಗತ್ತಿನ ಒಟ್ಟೂ ಪ್ರಭೇದಗಳ ಪ್ರತಿಶತ 25ರಷ್ಟು ಮಣ್ಣಿನ ಒಳಗಿವೆ ಎಂಬ 2006ರ ತಿಳಿವಳಿಕೆಯು ಇದೀಗ ಹಾಗಲ್ಲ ಅದು ಅದರ ಎರಡರಷ್ಟಕ್ಕಿಂತಲೂ ಹೆಚ್ಚು..!

ಇದೇ ಆಗಷ್ಟ್‌ ತಿಂಗಳ ೭ರಂದು ಖ್ಯಾತ ವಿಜ್ಞಾನ ಪತ್ರಿಕೆ PNAS (Proceedings of the National Academy of Sciences) ಜರ್ನಲ್‌ ಪ್ರಕಟಿಸಿದ ಸಂಶೋಧನಾ ಪ್ರಬಂಧದಲ್ಲಿ ಮಣ್ಣಿನೊಳಗಿರುವ ಜೀವಿಪ್ರಭೇದಗಳು, ನೆಲದ ಮೇಲಿರುವುದಕ್ಕಿಂತಲೂ ಹೆಚ್ಚೂ ಎಂದು ಪ್ರಕಟಿಸಲಾಗಿದೆ. ಈ ಹಿಂದಿನ ಅಧ್ಯಯನದ ದಾಖಲೆಗಿಂತ ಎರಡು ಪಟ್ಟಿಗಿಂತಲೂ ಹೆಚ್ಚು. ಸರಿ ಸುಮಾರು ಪ್ರತಿಶತ 59 ರಷ್ಟು ಜೀವಿ ಪ್ರಭೇದಗಳು ಮಣ್ಣಿನಲ್ಲಿರುವ ಅಚ್ಚರಿಯ ಸಂಗತಿಯನ್ನು ಅದು ಪ್ರಕಟಿಸಿದೆ. ಸಾಲದಕ್ಕೇ ಅಷ್ಟೇ ಅಲ್ಲ ಇನ್ನೂ ಹೆಚ್ಚೂ ಇದ್ದಿರುವ ಬಗೆಗೆ ಅನುಮಾನಗಳನ್ನು ಹೆಚ್ಚಿಸಿದೆ. ಹಾಗಾಗಿ ಮಣ್ಣಿಗಿರುವ ಜೈವಿಕ ಪರಂಪರೆಯ ನಿಗೂಢತೆ ಹಿಂದಿಗಿಂತಲೂ ಹೆಚ್ಚಾಗುತ್ತಲೇ ಸಾಗಿದೆ. ಆದ್ದರಿಂದಲೇ ಇರಬೇಕು ಇಷ್ಟೆಲ್ಲಾ ಮಾನವ ನಿರ್ಮಿತ ಅದ್ವಾನಗಳನ್ನೂ ಸಹಿಸಿಕೊಂಡು ಮಣ್ಣು ಮಾನವತೆಯನ್ನು ಸಾಕುತ್ತಲೇ ವಿಕಾಸದ ಅಚ್ಚರಿ ಎಂಬಂತೆ ಬೆಳೆಯುತ್ತಿದೆ. ಸ್ವಿಸ್‌ ಫೆಡೆರಲ್‌ ಸಂಶೋಧನಾ ಸಂಸ್ಥೆಯ (Swiss Federal Research Institute for Forest, Snow and Landscape Research.) ವಿಜ್ಞಾನಿಗಳಾದ ಮಾರ್ಕ್‌ ಆಂತೊಣಿ (Mark A. Anthony) ಮತ್ತು ಅವರ ತಂಡದವರು ಇಂತಹದ್ದೊಂದು ಮಹತ್ವದ ಅಂಶವನ್ನು ಸಂಶೋಧಿಸಿದ್ದಾರೆ. ಮಣ್ಣಿನ ವಿಜ್ಞಾನದ ಅಧ್ಯಯನಕಾರರಿನ್ನು ಮುಂದೆ ಮೂಗಿನ ಮೇಲೆ ಬೆರಳನಿಟ್ಟು ನೆಲದ ಮೇಲೆ ಕಾಲಿಡುವ ಮುನ್ನ ಯೋಚಿಸಬೇಕು ಎನ್ನುವಂತಹಾ ಸುದ್ದಿಯಿದು.

ಮಣ್ಣಿನೊಳಗಿರುವ ಇತರೇ ಜೀವಿ ಪ್ರಭೇದಗಳೆಂದರೆ ಒಟ್ಟು 90% ಶಿಲೀಂದ್ರಗಳು, 85% ಸಸ್ಯಗಳು ಮತ್ತು ಪ್ರತಿಶತ 50ಕ್ಕಿಂತಾ ಹೆಚ್ಚು ಬ್ಯಾಕ್ಟಿರಿಯಾ.  ಕೇವಲ 3% ಸಸ್ತನಿಗಳು ಮಾತ್ರವೇ ಮಣ್ಣನ್ನು ಮನೆಯನ್ನಾಗಿಸಿಕೊಂಡಿವೆ. ಸೂಕ್ಷ್ಮಾಣಿಜೀವಿಗಳಿಂದ ಸಸ್ತನಿಗಳವರೆಗೂ  ಒಟ್ಟು ಭೂಮಂಡಲದ 59% ಜೀವಿಪ್ರಭೇದಗಳ ಮನೆ ಮಣ್ಣು. ಇಷ್ಟಕ್ಕೂ ವಿವಿಧ ಅಧ್ಯಯನಗಳನ್ನು ಆಧರಿಸಿದ ಈ ಅಂದಾಜು ವಾಸ್ತವಕ್ಕಿಂತಾ ಸಾಕಷ್ಟು ಕಡಿಮೆಯೇ ಇದೆ ಎಂದೂ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಏಕೆಂದರೆ ಮಣ್ಣನ್ನು ಈ ಹಿನ್ನೆಲೆಯಲ್ಲಿ ಅರಿತಿರುವ ಸಂಶೋಧನೆಗಳು ತುಂಬಾ ಕಡಿಮೆ.

ನಮ್ಮೆಲ್ಲಾ ಕುತೂಹಲದ ಜಗತ್ತು ಆಗಸದಾಚೆಗಿನದು! ವ್ಯೋಮದ ಹಿಂದಿನ ಅಗಾಧತೆಗೆ ಒತ್ತು ಕೊಟ್ಟದ್ದು. ಇಂದು ಚಂದ್ರಯಾನವೋ.. ನಕ್ಷತ್ರಲೋಕದ ಹಿನ್ನೆಲೆಯ ಅಂದಾಜಿಗೋ ಮಹತ್ವವಿದ್ದಷ್ಟು ನಮ್ಮದೇ ಕಾಲ ಕೆಳಗಿನ ವಿಕಾಸದ ವಿಶಿಷ್ಟ ವಸ್ತುವಿನ ಬಗೆಗೆ ಖಂಡಿತಾ ಇಲ್ಲ.

ಜೀವಿ ಸಂಕುಲಗಳ ಹಿನ್ನೆಲೆಯು ವಿಕಾಸದ ಇತಿಹಾಸದಲ್ಲಿ ಅತ್ಯಂತ ನವೀನವಾದ ಸಂಗತಿ. (ಕಳೆದ 2019 ಮತ್ತು 2021ರ ನಡುವಿನ ಕರೋನ ಹಿನ್ನೆಲಯ ವೈರಸ್ಸುಗಳ ವಿಕಾಸದ ಅರಿವಿನ ಹಿನ್ನೆಲೆಯು ಜಗತ್ತನ್ನೇ ತಲ್ಲಣಿಸಿದ್ದು ನೆನಪಿರಲು ಸಾಕು) ವ್ಯೋಮ ಜಗತ್ತೋ  ಅಖಂಡವಾದ ಹರಹಿನ ಹೀಲಿಯಂ ಮತ್ತು ಜಲಜನಕಗಳ ಸಂಕೀರ್ಣ ದ್ರವ್ಯರಾಶಿ. ಮಾನವನ ಅರಿವಿನ ಚರಿತ್ರೆಯಲ್ಲಿ ಜೀವಿಗಳೇ ವಿಕಾಸದ ಆತ್ಯಂತಿಕ ಹೊಸ ಉತ್ಪನ್ನಗಳು! ರಸಾಯನಿಕ ವಿಕಾಸದ ನಂತರೆವೇ ಜೀವಿವಿಕಾಸದ ಹಾದಿಯು ತೆರೆದುಕೊಂಡದ್ದು. ಇದರ ತಾಯಿಯೂ ಹಾಗೂ ಕೂಸೂ ಎರಡೂ ಮಣ್ಣು! ಇದು ಎಲ್ಲ ಜೀವಿಗಳ ಹೊಟ್ಟೆ! ಈ ನೆಲದ ಪ್ರತಿಶತ ೯೫ರಷ್ಟು ಆಹಾರದ ಚೀಲ. ಇದು ನೆಲದ ಮೇಲಿನ ಹೊದಿಕೆ. ಹಾಗೆಂದರೆ ಇದೇ ಈ ಭೂಮಿಯ ಕೀರೀಟ. ನಿಜ ಹೇಳಬೇಕೆಂದರೆ ಒಂದು ಟೀ ಚಮಚೆಯಷ್ಟು ಮಣ್ಣಿನಲ್ಲಿರುವ ಬ್ಯಾಕ್ಟಿರಿಯಾಗಳ ಸಂಖ್ಯೆ 100ಕೋಟಿ (1000ದಶಲಕ್ಷ)!

ಭೂಮಿಯ ಮೇಲಿನ ಪ್ರತಿಶತ 59ರಷ್ಟು ಪ್ರಭೇದಗಳು ಮಣ್ಣಿನಲ್ಲಿವೆ ಎಂಬುದರ ಅಂದಾಜಿನಲ್ಲೂ ಪ್ರತಿಶತ 15ರಷ್ಟು ಲೆಕ್ಕತಪ್ಪಿದೆ (Calculation Error). ಹಾಗಾಗಿ ಇದರ ವಾಸ್ತವವಾದ ಲೆಕ್ಕ ಬದ್ಧತೆಯು ಪ್ರತಿಶತ 44 ಅಥವಾ 74% ಆದರೂ ಅಚ್ಚರಿಯಲ್ಲ! ಸೂಕ್ಷ್ಮಾತಿ ಸೂಕ್ಷ್ಮಜೀವಿಗಳ ಲೆಕ್ಕದಲ್ಲಂತೂ ಹೆಚ್ಚೇ ಇರುವ ಬಗೆಗೆ ಮಾರ್ಕ್‌ ಆಂತೊನಿಯವರು ಖಚಿತವಾಧ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರೆ.  ಹಾಗಾಗಿ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುವುದೇ ಒಂದು ಸವಾಲಿನ ಕೆಲಸ. ಒಂದೆರಡು ಬಗೆಯ ಜೀವಿಗಳು ಮಾತ್ರವೇ ಇವುಗಳನ್ನು ನಿರ್ಮಿಸಿಲ್ಲ. ಬ್ಯಾಕ್ಟಿರಿಯಾಗಳು, ಶಿಲೀಂದ್ರಗಳು, ಕೀಟಗಳು, ದುಂಡುಹುಳುಗಳು, ಸಸ್ಯಜಗತ್ತೂ ಹೀಗೆ ಹಲವು ಬಗೆಗಳು.

“ಈ ಅಧ್ಯಯನ ಕಾರ್ಯದ ಸಂಪೂರ್ಣ ಸವಾಲು ನಿಜವಾಗಿಯೂ ಆಶ್ಚರ್ಯವನ್ನು ಉಂಟುಮಾಡಿದೆ. ಏಕೆಂದರೆ ಭೂಮಿಯ ಮೇಲಿನ  ಪ್ರಮುಖವಾದ ಎರಡು ದೊಡ್ಡ ಗುಂಪುಗಳಾದ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ,  ವೈವಿಧ್ಯಮಯ ಜೀವ ರೂಪಗಳಿಗೆ ನಮ್ಮ ಅಂದಾಜುಗಳಿಗೆ ಎಷ್ಟೊಂದು ವ್ಯತ್ಯಾಸವನ್ನು ನಾವು ಅರಿತಿದ್ದೇವೆ. ಅಂತಹದರಲ್ಲಿ  ಅದನ್ನು ಮನಸ್ಸಿನಲ್ಲಿಟ್ಟುಕೊಂಡು, ಈ ಸಂಶೋಧನಾ ಅಧ್ಯಯನದ ಅಂದಾಜು ನಿಜವಾಗಿಯೂ ಅಸ್ತಿತ್ವದಲ್ಲಿರುವ ಜಾಗತಿಕ ಜೀವಿ ವೈವಿಧ್ಯದ ಶ್ರೀಮಂತಿಕೆಯನ್ನು ಸಂಘಟಿಸುವ ವಿಶಿಷ್ಟ ಪ್ರಯತ್ನವಾಗಿದೆ. ನಿಜವಾದ ವೈವಿಧ್ಯತೆಯು ಈ ವ್ಯಾಪ್ತಿಯೊಳಗೆ ಎಲ್ಲೋ ಇದ್ದರೂ,  ಈ ತಂಡದ ಪ್ರಯತ್ನವು ಮಣ್ಣಿನಲ್ಲಿನ ಜಾಗತಿಕ ವೈವಿಧ್ಯತೆಯ ಮೊದಲ ವಾಸ್ತವಿಕ ಅಂದಾಜಾಗಿದೆ ಮತ್ತು ಜೀವವೈವಿಧ್ಯತೆ ಮತ್ತು ಹವಾಮಾನ ಬಿಕ್ಕಟ್ಟುಗಳ ಮುಖಾಂತರ ಮಣ್ಣಿನ ಜೀವನಕ್ಕಾಗಿ ನಮಗೆ ಇದು ಬೇಕು.

ಇಂದು ಜಗತ್ತು ಹಿಂದೆಂದೂ ಅನುಭವಿಸಿರದ ವಾತಾವರಣವನ್ನು ಕಾಣುತ್ತಿದೆ. ಹಿಂದಿನ ಎಲ್ಲಾ ಲೆಕ್ಕಾಚಾರಗಳೂ ಆಯತಪ್ಪಿರುವಂತೆ ಅರಿವಿಗೆ ಬರುತ್ತಿವೆ. ಈ ಹಿನ್ನೆಲೆಯಿಂದ ಮಣ್ಣಿಗೆ ಇರುವ ಮಹತ್ವವನ್ನು ಸಾಧು ಸಂತರ ನರ್ತನಗಳಿಂದಲೂ ಜಗತ್ತಿಗೆ ಸಾರುವ ಪ್ರಯತ್ನಗಳೂ ನಡೆದಿವೆ. ಆರಂಭದ ಮಣ್ಣು ಮತ್ತು ಜೀವಿಗಳಿಗೆ  ಇರುವ ದಾರ್ಶನಿಕ ಸಂಬಂಧಗಳಿಂದ ಮೊದಲ್ಗೊಂಡು ಇಂದು ಬಿಡಿ ಬಿಡಿಯಾದ ಮೂಲವಸ್ತುಗಳ ಸಂಕೀರ್ಣ ಸಂಯುಕ್ತ ವಸ್ತುಗಳ ಮತ್ತು ಅವುಗಳ ಆಹಾರಾಂಶಗಳ ಅರ್ಥಪೂರ್ಣ ಸಾಧ್ಯತೆಗಳಿಗೆ ತೆರೆದುಕೊಂಡಿವೆ. ಜೊತೆಗೆ ಇಂದು ಇಡೀ ಜಗತ್ತು ಎದುರಿಸುತ್ತಿರುವ ವಾತಾವರಣದ ಉಷ್ಣತೆಯ ಹೆಚ್ಚಳವನ್ನು ಸಂಪೂರ್ಣವಾಗಿ ನಿರ್ವಹಿಸುವ ಇಂಗಾಲ ಮತ್ತು ಅದರ ರೂಪಾಂತರಕ್ಕೆ ಪ್ರಮುಖ ಮಾಧ್ಯಮ ಮಣ್ಣು ಎಂಬುದನ್ನು ಅರಿವಾಗಿಸಬೇಕಿದೆ.  ಹಾಗಾಗಿ ಮಣ್ಣು ಅರಿತಷ್ಟೂ ನಿಗೂಢವಾಗುತ್ತಲೇ ಸಾಗುತ್ತಿದೆ.

ಮಣ್ಣು ಭೂಮಿಯ ಮೇಲಿನ ಎಲ್ಲಾ ಜೀವಿಗಳನ್ನು ಒಟ್ಟು ಹಾಕಿ ಸಾಕುವ ಭೂಮಿಯ ಅತ್ಯಂತ ದುರ್ಬಲವಾದ ಚರ್ಮದ ಹಾಗೆ! ಇದು  ಅತ್ಯಂತ ಕ್ರಿಯಾತ್ಮಕವಾದ  ಮತ್ತು ಸಂಕೀರ್ಣವಾದ  ಪರಿಸರ ವ್ಯವಸ್ಥೆಯನ್ನು ರಚಿಸುವ ಲೆಕ್ಕವಿಲ್ಲದಷ್ಟು ಜಾತಿಗಳನ್ನು ಒಳಗೊಂಡಿದ್ದು ಇಡೀ ಮಾನವ ಜನಾಂಗಕ್ಕೆ ಅತ್ಯಂತ ಅಮೂಲ್ಯವಾದ ಸಂಪನ್ಮೂಲಗಳಲ್ಲಿ ಒಂದಾಗಿದೆ. ತೀರಾ ಹೆಚ್ಚಿನ ಶಕ್ತಿ ಹಾಗು ವಿಕಾಸ ಜಾಣತನವನ್ನು ಬಳಸಿ ಪ್ರಕೃತಿಯು ನಿರ್ಮಿಸಿರಿವ ಮಣ್ಣು ನಿರಂತರವಾಗಿ ನಷ್ಟವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಈ ನೆಲದ ಮೇಲ್ಮೈಯ ಬಗೆಗೆ ನಮಗಿರುವ ತಾತ್ಸಾರ!

ಮಣ್ಣಿನ ಸವಕಳಿ ದಿನೇ ದಿನೇ ಹೆಚ್ಚುತ್ತಲೇ ಇದ್ದು ಒಂದು ಅಂದಾಜಿನಂತೆ ಒಟ್ಟಾರೆ ಮಣ್ಣಿನ ಅರ್ಧದಷ್ಟು ಕಳೆದ 150-200 ವರ್ಷಗಳಲ್ಲಿ ಕಳೆದುಹೋಗಿದೆ. ಸವೆತದ ಜೊತೆಗೆ, ಮಣ್ಣಿನ ಗುಣಮಟ್ಟವು ಕೃಷಿ ಬಳಕೆಯ ಇತರ ಅಂಶಗಳಿಂದ ಪ್ರಭಾವಿಸಿ ನಷ್ಟವನ್ನು ಹೊಂದುತ್ತಲೇ ಇದೆ. ಈ ಪರಿಣಾಮಗಳು ಮಣ್ಣಿನ ರಚನೆಯ ನಷ್ಟ, ಪೋಷಕಾಂಶಗಳ ಅವನತಿ ಮತ್ತು ಮಣ್ಣಿನ ಲವಣಾಂಶವನ್ನು ಒಳಗೊಂಡಿರುತ್ತದೆ. ಇವುಗಳೆಲ್ಲವೂ ತುಂಬಾ ನೈಜವಾದ ಹಾಗೂ ಕೆಲವೊಮ್ಮೆ ಗಂಭೀರ ಸಮಸ್ಯೆಗಳಾಗಿವೆ.

ಮಣ್ಣಿನ ಸವೆತದ ಪರಿಣಾಮಗಳು ಫಲವತ್ತಾದ ಭೂಮಿಯ ನಷ್ಟವನ್ನು ಅನುಭವಿಸುತ್ತಿದೆ. ಇದೆಲ್ಲವೂ ನದಿಗಳಲ್ಲಿ ಮಾಲಿನ್ಯ ಮತ್ತು ಸೆಡಿಮೆಂಟೇಶನ್ ಅನ್ನು ಹೆಚ್ಚಿಸಿದೆ,  ಮೀನು ಮತ್ತು ಇತರ ಜಲಚರ ಜೀವಗಳ ಹಿತಕ್ಕೆ ದಕ್ಕೆಯನ್ನು ಉಂಟುಮಾಡುವಲ್ಲಿ ಕಾರಣವಾಗಿದೆ. ಮಣ್ಣಿನ ಅವನತಿ ಮತ್ತು ಸವೆತವನ್ನು ತಡೆಯದಿದ್ದರೆ ಬೆಲೆಬಾಳುವ ಭೂಮಿಯನ್ನು ಕಳೆದುಕೊಳ್ಳುತ್ತಾ ಸಾಗುತ್ತೇವೆ.

       ಮಣ್ಣನ್ನು ಅರಿತುಕೊಂಡಷ್ಟೂ ಅದು ಹೊಸ ಹೊಸ ಸಂಗತಿಗಳನ್ನು ನಮ್ಮ ಜಾಗೃತಿಗೆ ತರುತ್ತಲೇ ಇದೆ! ಆದಾಗ್ಯೂ ನಮ್ಮೆಲ್ಲಾ ಚಟುವಟಿಕೆಗಳೂ ನಿರಂತರವಾಗಿ ನೆಲವನ್ನು ಶೋಷಿಸುತ್ತಲೇ ಸಾಗುತ್ತಿವೆ. ಇದೀಗ ಈ ಹೊಸ ಸಂಗತಿ ಒಟ್ಟಾರೆ ಜೀವಿ ಜಗತ್ತಿನ ಅರ್ಧಕ್ಕಿಂತಾ ಹೆಚ್ಚಿರುವ ವಿಚಾರ ಮಣ್ಣಿನ ನಷ್ಟಕ್ಕೆ ಹೊಸ ಭಯವನ್ನು ತಂದಿರುವುದಂತೂ ನಿಜ.

ನಮಸ್ಕಾರ

ಡಾ. ಟಿಎಸ್.‌ ಚನ್ನೇಶ್‌

ಹೆಚ್ಚಿನ ಓದಿಗೆ

Mark A. Anthony, S. Franz Bender and Marcel G.A. vander Heijden 2023. Enumerating soil biodiversity. PNAS August 7, 2023 120 (33) https://doi.org/10.1073/pnas.2304663120

Leave a Reply