“ಇದೇನಿದು ಪುರಾತನವಾದ “ಅಲ್‌ಕೆಮಿ”ಯನ್ನು ಆಧುನಿಕ ಅಡುಗೆಮನೆಗೆ ಹೋಲಿಸುವುದೇ?” ಎಂದು ಅವಸರಿಸಬೇಕಿಲ್ಲ. ಅವೆರಡರ ನಿಜವಾದ ಸೌಂದರ್ಯ ಮತ್ತು ವಿಕಾಸವನ್ನು ಪ್ರಸ್ತುತತೆಯಿಂದ ನೋಡುವುದರಲ್ಲಿ ಹೆಚ್ಚು ಆಸಕ್ತಿಯ ವಿಚಾರಗಳಿವೆ. ವೈಯಕ್ತಿಕವಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಅಡುಗೆಮನೆಯ ಹಾಗೂ ಎರಡೂವರೆ ದಶಕಗಳ ಪ್ರಯೋಗಾಲಯದ ನಿರ್ವಹಣೆಯನ್ನು ನಿಭಾಯಿಸಿದ ವೈಯಕ್ತಿಕ ಅನುಭವಗಳಿಂದ ಇಂತಹ ಆಪ್ತ ವಿಚಾರವನ್ನು ಚರ್ಚಿಸಲಿದ್ದೇನೆ. ಅದರಲ್ಲೂ ಮಹಿಳಾ ಅಲ್‌ಕೆಮಿಸ್ಟ್‌ಗಳ ಪ್ರಧಾನ ಅನ್ವೇಷಣೆಯಿಂದ ಆಧುನಿಕ ರಸಾಯನವಿಜ್ಞಾನದ ಲ್ಯಾಬ್‌ಗಳಲ್ಲಿ ಬಳಸುವ ತಾಂತ್ರಿಕ ಸನ್ನಿವೇಶಗಳು ಇಂದಿಗೂ ಪ್ರಸ್ತುತವಾಗಿವೆ ಹಾಗೂ ಅಡುಗೆಮನೆಯ ಒಟ್ಟಾರೆಯ ಒಳನೋಟಗಳು ಅಲ್‌ಕೆಮಿಯ ತಂತ್ರಗಾರಿಕೆಯಿಂದ ರೂಪಾಂತರಗೊಂಡಿರುವ ಅವಶೇಷಗಳು ಇವೆಲ್ಲವನ್ನು ಹತ್ತಿರಕ್ಕೆ ತಂದಿವೆ. ಇವೆಲ್ಲವನ್ನೂ ಬಿಡಿ, ಬಿಡಿಯಾಗಿಯೂ ಮತ್ತು ಒಂದಕ್ಕೊಂದು ಸಂಬಂಧಗಳ ನಿರೂಪಗಳಲ್ಲಿಯೂ ನೋಡುವುದರಲ್ಲಿ ಒಂದು ವಿಶೇಷವೇ ಇದೆ. ಹಾಗಾಗಿ ಅಲ್‌ಕೆಮಿ ಎಂದರೇನು? ಅಡುಗೆಮನೆಗೆ ಅದರ ಸಂಬಂಧವೇನು? ಎರಡರಲ್ಲೂ ಮಹಿಳೆಯರ ವಿಶೇಷತೆಗಳನ್ನು ತಿಳಿಯುವ ಪುಟ್ಟ ಪ್ರಯತ್ನವು ಇಲ್ಲಿದೆ.
“ಅಲ್‌ಕೆಮಿ”- Alchemy- ಪದವು ಅರಬಿಕ್ ಮೂಲದ “ಅಲ್- ಕೆಮಿಯಾ” ದಿಂದ ಹಳೆಯ ಫ್ರೆಂಚ್ ಭಾಷೆಯ ಮೂಲಕ “ಅಲ್‌ಕೆಮಿಕ್” ಆಗಿ ಬಂದದ್ದು. ಅಲ್-ಕೆಮಿಯಾವನ್ನು ನೈಸರ್ಗಿಕ ದರ್ಶನಶಾಸ್ತ್ರ (Natural Philosophy) ದ ಭಾಗವಾಗಿಯೂ ನೋಡಲಾಗುತ್ತದೆ. ಇವೆಲ್ಲದರಲ್ಲಿಯೂ ಒಟ್ಟು ಅರ್ಥದಲ್ಲಿ “ರೂಪಾಂತರವಾಗುವ” ಅಥವಾ “ಪರಿಶುದ್ಧತೆಯೆಡೆಗೆ” ಎಂಬ ಸಂದರ್ಭವನ್ನು ವಿವರಿಸಲು ಬಳಸಲಾಗುತ್ತದೆ. ಇದನ್ನು ಬಹು ಹಿಂದಿನಿಂದಲೂ ವಿವಿಧ ವಸ್ತುಗಳನ್ನು ಬಳಸಿ (ಮುಖ್ಯವಾಗಿ ಲೋಹಗಳೇ ಮುಂತಾದ) ಶುದ್ಧೀಕರಿಸುತ್ತಾ ಹೊಳಪುಳ್ಳ ಅಥವಾ ಹೆಚ್ಚಿನ ಬೆಲೆ ಬಾಳುವ ಅಥವಾ ಒಂದು ಬಗೆಯಲ್ಲಿ ಹೆಚ್ಚು ಮೌಲ್ಯಯುತವಾದ ಅಥವಾ ಡಿವೈನ್ ಆದ ವಸ್ತುವನ್ನು ಪಡೆಯುವ ವಿಧಾನ ಎಂಬುದಾಗಿಯೂ ವಿವರಿಸಲ್ಪಟ್ಟಿದೆ. ಹೆಚ್ಚಿನ ಪಾಲು ಬಗೆ ಬಗೆಯ ಸಂಸ್ಕರಣಾ ಶೋಧಗಳಿಂದ “ಚಿನ್ನ”ವನ್ನು ಪಡೆಯಲು ಪ್ರಯತ್ನಿಸಿದ ವಿಧಾನವೆಂದೇ ಜನಪ್ರಿಯ. ಚೀನಾದ ಅಲ್‌ಕೆಮಿ, ಇಂಡಿಯಾದ ಅಲ್‌ಕೆಮಿ, ಯೂರೋಪಿನ್ ಅಲ್‌ಕೆಮಿ, ಗ್ರೀಕ್ ಅಲ್‌ಕೆಮಿ, ಅರಬ್ಬರ ಅಲ್‌ಕೆಮಿ ಎಂಬ ವಿವಿಧ ಬಗೆಗಳಿವೆ. ಎಲ್ಲವೂ ಒಂದು ಬಗೆಯಲ್ಲಿ ವಿಶೇಷವಾದ ಹುಡುಕಾಟ ಅಥವಾ ತಯಾರಿ. ಭಾರತೀಯ ಅಲ್‌ಕೆಮಿಯನ್ನು “ರಸಸಿದ್ಧಿ” “ರಸವಿದ್ಯೆ” ಎಂದೂ ಗುರುತಿಸಲಾಗಿದೆ. ಕೆಲವೊಂದು ಧಾರ್ಮಿಕ ಆಚರಣೆಗಳಲ್ಲಿ “ತಾಂತ್ರಿಕ್” ವಿನ್ಯಾಸಗಳಿಂದ “ಅತೀಂದ್ರಿಯ” ವಿವರಣೆಗಳಲ್ಲಿಯೂ ಕಾಣಬಹುದಿತ್ತು. ಯೂರೋಪಿನ್ ಹಾಗೂ ಚೀನಿ ಅಲ್‌ಕೆಮಿಯಂತೆ ಭಾರತೀಯ ಅಲ್‌ಕೆಮಿಯ ದಾಖಲಾತಿಗಳು ಮೂಲದಲ್ಲಿ ಹೆಚ್ಚು ಲಭ್ಯವಿಲ್ಲ. ಆದರೂ ಲೋಹವಿದ್ಯೆಯ ಅರಿವಿನಲ್ಲಿ ಇಂಡಿಯನ್ ಅಲ್‌ಕೆಮಿಯು ಸಾಕಷ್ಟು ವಿವರಗಳನ್ನು ಒದಗಿಸಿದೆ. ಜೊತೆಗೆ ಆಹಾರ ಬಳಕೆಯ ಪದಾರ್ಥಗಳಲ್ಲೂ ಒಂದಷ್ಟು ಗಮನಾರ್ಹ ಕೊಡುಗೆಯನ್ನು ನೀಡಿದೆ. ಅಲ್ಲದೆ ಚೀನಿಯರಿಂದ ಹಾಗೂ ಕೆಲವು ಐರೋಪ್ಯ ಸಮುದಾಯಗಳಿಂದ ಕೊಡುಕೊಳ್ಳುವಿಕೆಯ ಮೂಲಕವೂ ಸಾಕಷ್ಟು ಬದಲಾವಣೆಗಳನ್ನು ಎರಡೂ ಕಡೆಯ ಅಲ್‌ಕೆಮಿಸ್ಟರು ಪಡೆದಿದ್ದಾರೆ. ಪಾದರಸವನ್ನೂ ಒಳಗೊಂಡ ತಾಂತ್ರಿಕ್ ಉತ್ಪಾದನಾ ಆಚರಣೆಗಳು ಇಂದಿಗೂ ಅಲ್ಲಲ್ಲಿ ಉಳಿದುಕೊಂಡಿವೆ. ಚೀನಿ ಅಲ್‌ಕೆಮಿಯ ವಿಶೇಷ ಉತ್ಪನ್ನಗಳಾಗಿ ಗಾಜು, ಪಿಂಗಾಣಿ ಮುಂತಾದ ಪದಾರ್ಥಗಳು ಮಾನವರ ಜೀವನಕ್ಕೆ ಬಂದಿವೆ. ಹಾಗೆಯೇ ಅನೇಕ ಪಾರಂಪರಿಕ ವಿಧಾನಗಳು ಮೂಲತಃ ವಸ್ತು ಶೋಧಗಳಲ್ಲಿ ಹಾಗೂ ವಿವಿಧ ತಯಾರಿಗಳಲ್ಲಿ ಅಲ್‌ಕೆಮಿಯು ಗಮನಾರ್ಹವಾದ ಪಾತ್ರ ವಹಿಸಿದೆ.
ಕ್ರಿಸ್ತ ಪೂರ್ವ 1500ಕ್ಕೂ ಹಿಂದಿನಿಂದಲೂ ವಿವಿಧ ಬಗೆಯ ರಸವಿದ್ಯೆಯ ಪ್ರಯತ್ನಗಳನ್ನು ಮುಂದೆ 8ನೆಯ ಶತಮಾನದ ಹೊತ್ತಿಗೆ ಪ್ರಾಯೋಗಿಕವಾದ ಹಾಗೂ ವೈಜ್ಞಾನಿಕ ಪದ್ಧತಿಗಳಾಗಿಸಿದ್ದು “ರಸಾಯನವಿಜ್ಞಾನದ ಪಿತಾಮಹಾ” ಎಂದೇ ಖ್ಯಾತರಾದ ಅರಬ್‌ನ “ಜಬೀರ್ ಹಯ್ಯಾಮ್”. ಮುಂದೆ ಅದೆಲ್ಲವೂ ರಸಾಯನ ವಿಜ್ಞಾನವಾಗಿ ವಿಕಾಸಗೊಂಡದ್ದು ಈಗ ಇತಿಹಾಸ. ಹೀಗೆ “ಪರಿಶುದ್ಧತೆಯೆಡೆಗೆ” ಸಾಗಿದ ಹುಡುಕಾಟ ಅಲ್‌ಕೆಮಿಯು ಆಧುನಿಕ ವಿಜ್ಞಾನದಲ್ಲಿ ಶುದ್ಧತೆಯನ್ನು ಪ್ರತಿಷ್ಠಾಪಿಸುವ ರಸಾಯನವಿಜ್ಞಾನವಾಗಿದೆ. ಇಂದಿಗೂ ರಸಾಯನಿಕವಾದ ಪರಿಶುದ್ಧ (ಕೆಮಿಕಲಿ ಪ್ಯೂರ್) ಎಂಬುದಾಗಿ ಗುರುತಿಸುವ ಪರಿಪಾಠ ವಸ್ತುಗಳ ಪರಿಶುದ್ಧತೆಯನ್ನು ಅಳೆಯುವ ಮೂಲಮಾನವೇ ಆಗಿದೆ. ಮೂಲ ಜಿಜ್ಞಾಸೆಯಲ್ಲಿ ಚಿನ್ನವನ್ನು ತಯಾರಿಸುವ ಅಥವಾ ಪಡೆಯುವ ಒತ್ತಾಸೆಯಿದ್ದು, ಅದರ ಅಪೂರ್ಣ ಸಾಧ್ಯತೆಯನ್ನು ವಿಡಂಬನೆಯಾಗಿಸಿದ ಸಂದರ್ಭವೊಂದು 16ನೆಯ ಶತಮಾನದ ದಾರ್ಶನಿಕ ಕನ್ನಡ ಕವಿ “ಸರ್ವಜ್ಞ”ನಿಂದ ದಾಖಲೆಯಾಗಿದೆ. ಅಂತಹಾ ತ್ರಿಪದಿಯೊಂದು ಹೀಗಿದೆ.
ಸೀಗೆ, ಬಾಗೆಯ ಬೇರು. ಕಾಗೆ ಮೋರೆಯ ಗಡ್ಡ ನಾಗರವು ಸತುವಿನೊಡಗೂಡೆ ಹೇಮ ತಾನಾಗಲೇಬೇಕು ಸರ್ವಜ್ಞ.
ಅಲ್‌ಕೆಮಿಸ್ಟರು ಅಥವಾ ರಸಸಿದ್ಧರು ಚಿನ್ನವನ್ನು ಪಡೆಯುವ ಗುರಿಯಿದ್ದರೂ, ಅದನ್ನು ತಯಾರಿಸಲು ಸಾಧ್ಯವಾಗದ ಸತ್ಯವನ್ನು ಕವಿ ಸರ್ವಜ್ಞ ವಿಡಂಬನೆಯಾಗಿಸಿದ್ದಾನೆ. ಸೀಗೆ ಹಾಗೂ ಬಾಗೆಯ ಬೇರು, ಕಾಗೆಯ ಗಡ್ಡ ಸತು, ಮುಂತಾದವನ್ನು ಬೆರೆಸಿದರೆ ಹೇಮ(ಚಿನ್ನ)ವಾಗಲೇಬೇಕು ಎಂಬುದು ಅದರ ತಾತ್ಪರ್ಯ. ತ್ರಿಪದಿಯು ತಮಾಷೆಯ ವಿಡಂಬನೆಯೆಂಬುದು ಆತನ ಬಗೆಗೆ ತಿಳಿದವರಿಗೆ ಸುಲಭವಾಗಿ ಗೊತ್ತಾಗುವ ಸಂಗತಿ. ಇರಲಿ ಹೀಗೆ ಕ್ರಿಸ್ತ ಪೂರ್ವ 2000ವರ್ಷಗಳಷ್ಟು ಹಿಂದಿನಿಂದ ಕ್ರಿ.ಶ. 16ನೆಯ ಶತಮಾನದವರೆಗೂ ರಸವಿದ್ಯೆಯ ಹರಹು ಇದ್ದಿರಬಹುದು. ಮಣ್ಣು, ನೀರು, ಲೋಹ, ಬೆಂಕಿ ಮುಂತಾದವುಗಳ ವರ್ತನೆಯಿಂದ ರಸಸಿದ್ಧಿಯ ಪ್ರಯತ್ನದಲ್ಲಿ ಅನೇಕ ಉಪಯುಕ್ತವಾದ ಪದಾರ್ಥಗಳೂ ಪರಿಶುದ್ಧವಾದ ಸಹಸ್ರಾರು ಉತ್ಪನ್ನಗಳಾಗಿ ಈಗಾಗಲೇ ನಮ್ಮೊಡನಿವೆ. ಇಂತಹಾ ಪ್ರಯತ್ನಕ್ಕೆ ಸಮೀಕರಿಸುವ ಅಡುಗೆಮನೆಯ ವಿಧಿವಿಧಾನಗಳೂ ಪರಿಶುದ್ಧವಾದ ಸಹಸ್ರಾರು ಉತ್ಪನ್ನಗಳನ್ನು ರುಚಿವತ್ತಾದ ತಿನಿಸುಗಳಾಗಿಸಿದ್ದು ಅವೆಲ್ಲವೂ ಮಾನವತೆಯ ಬಳಕೆಯಲ್ಲಿವೆ. ಅಡುಗೆಮನೆಯ ಅಲ್‌ಕೆಮಿಯ ಪ್ರಯೋಗಾಲಯವೇ ಹೌದು. ವಿವರಗಳನ್ನು ಮುಂದೆ ನೋಡೋಣ.
ಅಲ್‌ಕೆಮಿಸ್ಟರು, ಸುತ್ತಲೂ ಸಿಗುವ ಬಗೆ-ಬಗೆಯ ನೈಸರ್ಗಿಕ ವಸ್ತುಗಳನ್ನು ವಿವಿಧ ರೂಪಾಂತರದಲ್ಲಿ ಪಡೆಯುತ್ತಾ ಪರಿಶುದ್ಧಿಕರಿಸುವ ಜಾಯಮಾನದವರು. ಅಡುಗೆ ಮನೆಯ ನಿರ್ವಾಹಕರೂ ಅದೇ ಬಗೆಯ ಗುರಿಯಿರುವವರು. ಬಳಸುವ ಬಗೆ ಬಗೆಯ ವಸ್ತುಗಳೂ ಪಾಕಶಾಲೆಯೆಂಬ ಲ್ಯಾಬಿನೊಳಗೆ ವಿವಿಧ ಪದಾರ್ಥಗಳಾಗಿ ರೂಪಾಂತರ ಹೊಂದುತ್ತವೆ. ಇದು ಇಂದು ಅಲ್‌ಕೆಮಿ ಎಂದೇನೂ ಕರೆಯಿಸಿಕೊಳ್ಳದೆ ಆದರೆ ಅದೇ ಬಗೆಯ ವೈಧಾನಿಕತೆಯನ್ನು ಉಳಿಸಿ, ಬೆಳೆಸಿಕೊಂಡು ಅಡುಗೆಮನೆಯ ವ್ಯವಸ್ಥೆಯು ನಿರ್ವಹಿಸುತ್ತಿದೆ. ಅಂದರೆ ಯಾವುದನ್ನೂ ನಿಖರವಾಗಿ ಹಾಗೂ ಶಾಶ್ವತವಾಗಿ ಬಳಸುವ ಅಥವಾ ಬಳಸದಿರುವ ಕ್ರಮಕ್ಕೆ ಮಾತ್ರವೇ ಇದನ್ನು ಹೋಲಿಸುವುದಲ್ಲ. ಅಲ್‌ಕೆಮಿಕ್ ಮಾದರಿಯ ನಿಭಾಯಿಸಿವುವಿಕೆಯಲ್ಲಿ ಮಾತ್ರವೇ ಗಮನಿಸುವುದಾಗಿದೆ.
ಅಡುಗೆಮನೆ ಎಂಬುದು ಮಿಲಿಯನ್‌ಗಟ್ಟಲೆ ಮನೆಗಳ ಅಡುಗೆಯ ನಿಭಾಯಿಸುವ ಕೋಣೆ(ಮನೆ)ಗಳೇ ವಿನಾಃ ಕೇವಲ ಗೊತ್ತಾದ ಆಹಾರ ಪದಾರ್ಥಗಳ ಉತ್ಪಾದನಾ ಘಟಕಗಳಲ್ಲ. ಅವುಗಳನ್ನು ಕುರಿತು ನಾನಿಲ್ಲಿ ಚರ್ಚಿಸುತ್ತಿಲ್ಲ. ಪಕ್ಕಾ ಅಡುಗೆಮನೆ- ನಮ್ಮ ನಿಮ್ಮ ಮನೆಗಳ ಅಡುಗೆಯನ್ನು ಮಾಡುವ ಕೋಣೆಯ ಚಟುವಟಿಕೆಗಳು! ಅಚ್ಚರಿಯಾಗಬೇಕಿಲ್ಲ. ಬಹುಶಃ ಇಲ್ಲಿನ ಚಟುವಟಿಕೆಗಳು ಅರ್ಥಾತ್ ದೈನಂದಿನ ತಿನ್ನುವ ಉಣ್ಣುವ ಆಹಾರಗಳ ಸಂಸ್ಕರಣೆಯಿಂದ ಉತ್ಪಾದಿಸುವ ವಿವರಗಳು ಚರ್ಚಿತವಾದಷ್ಟು ಮತ್ತಾವ ಉತ್ಪಾದನಾ ವ್ಯವಸ್ಥೆಯಲ್ಲೂ ಚರ್ಚಿತವಾಗಿರಲಾರದು. ಸಾಲದಕ್ಕೇ ಅಷ್ಟೇ ಗೌಪ್ಯವೂ ಇರುವ ತಂತ್ರಗಳು ಅಥವಾ ಎಷ್ಟೇ ಹೇಳಿದರೂ ಹಾಗೇ ಪುನರುತ್ಪಾದಿಸಲಾಗದ ಸಂದರ್ಭಗಳನ್ನು ಸಹಜವಾಗಿ ಕಾಣುತ್ತೇವೆ. ಉದಾಹರಣೆಗೆ ಆಲೂಗಡ್ಡೆ -ಈರುಳ್ಳಿ ಹುಳಿ ಅಥವಾ ಸಂಬಾರು ತಯಾರಿಕೆಯನ್ನೇ ತೆಗೆದುಕೊಳ್ಳೋಣ. ಇದೇ ಉದಾಹರಣೆ ಏಕೆಂದರೆ ನಿಜಕ್ಕೂ ಅಕ್ಕ-ಪಕ್ಕದ ಮನೆಯವರ ಮಾತುಗಳು ಅಥವಾ ನಮ್ಮ ನಿಮ್ಮೆಲ್ಲರಲ್ಲೂ “ಊಟ ಆಯಿತಾ” ಎಂಬುದು ಹೆಚ್ಚು ಆಡುವ ಮಾತು. ಮುಂದುವರೆದು ಏನು ಊಟ? ಎನ್ನಬಹುದು. ಅಡುಗೆಯನ್ನು ಮಾಡುವವರಾಗಿದ್ದಲ್ಲಿ ಮತ್ತದೇ ಸಾಂಬಾರಿನ ಮಾತೂ ಪ್ರಶ್ನೆಗೆ ಬರುತ್ತದೆ. “ಏನು ಸಾರು…ಇವತ್ತು?” ಅದೇ ಆಲೂಗಡ್ಡೆ-ಈರುಳ್ಳಿಯ ಸಾಂಬಾರೇ ಆದರೂ ಮತ್ತೆ ಚರ್ಚೆಗೆ ಬರುತ್ತದೆ. ನಾವೇ ಮತ್ತೊಮ್ಮೆ ಮಾಡಿದಾಗಲೂ ಹಿಂದೆ ಮಾಡಿದ ರುಚಿಯನ್ನು ಪುನಾರಾವರ್ತಿಸಲಾಗದ ನೂರಾರು ಅನುಭವಗಳು ನಮಗಿವೆ. ಅದೇ ಆಲೂಗಡ್ಡೆ, ಅದೇ ಈರುಳ್ಳಿ ಉಪ್ಪು, ಜೀರಿಗೆ ಮೆಣಸು ಇತ್ಯಾದಿ ಎಲ್ಲವೂ ಅವೇ ಆದರೆ ಒಂದೊಂದು ಬಾರಿಯೂ ಒಂದೊಂದು ರುಚಿ. ಇದು ಟಿಪಿಕಲ್ ಅಲ್‌ಕೆಮಿಯ ವೈಭವ! ಅದೇ ಉಪ್ಪು, ಅದೇ ಹುಳಿ, ಅದೇ ಮೆಣಸು ಸರಿಯೇ. ಆದರೆ ರುಚಿ ಬದಲಾಗದಿದ್ದರೆ ದಿನವೂ ಉಣ್ಣುವುದಾದರೂ ಹೇಗೆ? ಅಲ್‌ಕೆಮಿಯ ಮಾದರಿಯನ್ನು ಉಳಿಸಿಕೊಂಡದ್ದರೆ ಫಲ, ರುಚಿಯ ವೈವಿಧ್ಯ!
ಅಡುಗೆಯ ಚರ್ಚೆಗಳು ಮುಂದುವರೆದರೆ, ಅದೇ ನೀವು ಹೇಳಿದ ಹಾಗೇ ಮಾಡಿದೆ. ಆದರೆ ನೀವು ಕೊಟ್ಟ ಸಾಂಬಾರಿನ ರುಚಿ ಬಂದಿಲ್ಲ ಅಂತಲೋ ಅಥವಾ ಅದಕ್ಕಿಂತಾ ಭಿನ್ನವಾದ ಅಥವಾ ಚೆನ್ನಾಗಿರುವ ಬಗ್ಗೆಯೂ ನಡೆಯುವುದುಂಟು. ಹೀಗೆ ಉತ್ತಮವಾದ್ದೊಂದರ ಹುಡುಕಾಟ ನಮ್ಮ-ನಿಮ್ಮ ಅಡುಗೆಮನೆಯಲ್ಲಿ ನಿತ್ಯವೂ ನಡೆದಿರುತ್ತದೆ. ಹಾಗಾಗಿ ಮಾನವ ಕುಲವು ಅಡುಗೆಮನೆಯ ನಿಭಾಯಿಸುವಿಕೆಯನ್ನು ಅತ್ಯಂತ ಸೃಜಶೀಲವಾಗಿ ಹಾಗೂ ಕುತೂಹಲಕಾರಿಯಾಗಿ ಕಾಪಾಡಿಕೊಂಡಿದೆ. ಹೀಗೆ ಆಹಾರ-ವಸ್ತುಗಳ “ರೂಪಾಂತರಿಸುವ” ಅಥವಾ “ಪರಿಶುದ್ಧತೆ”ಯೆಡೆಗೆ ಕೊಂಡೊಯ್ಯುವ ಅಡುಗೆಮನೆ ನಿಜಕ್ಕೂ ಅಲ್‌ಕೆಮಿ ಲ್ಯಾಬ್. ದಿನವೂ ಅಡುಗೆಮನೆಯನ್ನು ನಿಭಾಯಿಸುವ ಎಲ್ಲರೂ -ಹೆಣ್ಣಿರಲಿ/ಗಂಡಿರಲಿ- “ಅಲ್‌ಕೆಮಿಸ್ಟರೇ” ಅಥವಾ “ರಸತಜ್ಞರೇ”.
ವಿಷಯ ಇಷ್ಟಕ್ಕೆ ಮುಗಿಯುವುದಿಲ್ಲ. ನಮ್ಮ ಅಡುಗೆಯ ವಿಧಾನವನ್ನು ಗಮನಿಸೋಣ. (ಯೂ-ಟ್ಯೂಬ್ ನೋಡಿ ಮಾಡುವುದನ್ನು ನೆನಪಿಸಿಕೊಳ್ಳಬೇಡಿ) ನಾವು ನಿತ್ಯವೂ ಅಡುಗೆಮನೆಯ ವಿವಿಧ ಪದಾರ್ಥಗಳನ್ನು ಲ್ಯಾಬ್ ಅಥವಾ ಪ್ರಯೋಗಾಲಯದಂತೆಯೇ ಜೋಡಿಸಿಡಬೇಕು. ಇಲ್ಲವೆಂದರೆ ಸಿಗಬೇಕಾದ್ದು ಸಮಯಕ್ಕೆ ಸಿಗದು. ಒಗ್ಗರಣೆಗೆ ಒಲೆಯ ಮೇಲೆ ಎಣ್ಣೆಯನ್ನಿಟ್ಟು ಸಾಸುವೆ ಡಬ್ಬಿಯನ್ನು ಹುಡುಕಲಾದೀತೇ? ಉಪ್ಪು ಸರಿಯಾಗಿ ಕೈಗೆ ಸಿಗದಂತಿದ್ದರೆ ರುಚಿಯನ್ನು ನಿಭಾಯಿಸುವುದಾದರೂ ಹೇಗೆ? ಇವೆಲ್ಲಕ್ಕಿಂತಲೂ ಸೀರಿಯಸ್ಸಾದ ಸಂಗತಿ ಎಂದರೆ ಅಡುಗೆಮನೆಯ ಪದಾರ್ಥಗಳ ಅಳತೆಗೋಲು! ಉಪ್ಪು, ಎಣ್ಣೆ, ಸಾಸಿವೆ, ಖಾರದಪುಡಿ ಎಲ್ಲದರಲ್ಲೂ ಚಮಚೆ ಇದ್ದಿರಬಹುದು. ಆದಾಗ್ಯೂ ಕಣ್ಣಳತೆಯ ಅಥವಾ ಕೈಬೆರಳುಗಳಿಗೆ ನಾವಿತ್ತ ನೆನಪುನ ಚಿತ್ರಗಳನ್ನು ಗಮನಿಸಿದರೆ ಅಲ್‌ಕೆಮಿ ಲ್ಯಾಬಿನ ಚಿತ್ರ ಕಣ್ಣಮುಂದೆ ಗ್ಯಾರಂಟಿ. ಭಾರತೀಯ ಅಡುಗೆಮನೆಯಲ್ಲಂತೂ “ಉಪ್ಪು” ಕೈಯಿಂದ ಹಾಕಿದಾಗ ಆಗುವ ನಿಖರತೆ ತೂಕ ಮಾಡಿ ಅಥವಾ ಚಮಚೆಗಳಿಂದ ಅಳತೆ ಮಾಡಿದಾಗ ಸಾಧ್ಯವಾಗಲಾರದು. ಹಾಗೆ ಕೈಯಿಂದ ನಾಲ್ಕು ಮುಂಬೆರಳುಗಳಲ್ಲಿ ಇಟ್ಟುಕೊಂಡು ಹೆಬ್ಬೆರಳಲ್ಲಿ ಜಾರಿಸುತ್ತಾ ನಮ್ಮ ಇಡೀ ಉಪ್ಪು ಹಾಕುವ ಅನುಭವವನ್ನೆಲ್ಲಾ ಆ ಕ್ಷಣಕ್ಕೆ ತುಂಬಿಕೊಟ್ಟು ನಿಭಾಯಿಸುತ್ತೇವೆ. ಆ ಕ್ಷಣ ಬೆರಳುಗಳು ಕಣ್ಣು, ಕಿವಿ, ಮೂಗು ಎಲ್ಲವೂ ಆಗಿ ತನ್ನೆಲ್ಲಾ ನೆನಪನ್ನು ಬೆರಳ ನಡುವಿನ ಅನುಭವಕ್ಕೆ ತಂದುಕೊಡುತ್ತದೆ. ಇದೆಲ್ಲವೂ ಒಂದೆರಡು ಸೆಕೆಂಡುಗಳಲ್ಲಿ ಮುಗಿದೂ ಹೋಗುತ್ತದೆ. ಅಂದರೆ “ವೇಗ” ಮತ್ತು “ನಿಖರವಾದ ಅಳತೆ” ಎರಡೂ ಅದ್ಭುತವಾಗಿ ಸಮೀಕರಣಗೊಂಡು ಕೆಲಸವು ಸೆಕೆಂಡುಗಳಲ್ಲಿ ಮುಗಿದೇ ಹೋಗಿರುತ್ತದೆ.
ಅದಕ್ಕೆ ಎಷ್ಟೋ ಬಾರಿ, “ಅದೇನು, ಅವನ/ಅವಳ ಕೈ-ಅಡುಗೆ, ಅಬ್ಬಾ…ರುಚಿ ಅಂದ್ರೆ, ಆ ಕೈಯಿಂದ ಮಾಡಿದ್ದು” ಎಂದು ಉದ್ಘರಿಸುತ್ತೇವೆ. ಇದು ಎಲ್ಲರ ಕೈಯಲ್ಲೂ ಇರುವಂತಹದ್ದೇ! ಆದರೆ ಕೈಗಳು ರೂಢಿಸಿಕೊಂಡಿರಬೇಕು ಅಷ್ಟೇ. ಅದೂ ಅಲ್ಲದೆ ಎಷ್ಟೋ ಬಾರಿಗೆ ಅಡುಗೆಮನೆಗೆ ಅಡುಗೆಯ ಸಮಯದಲ್ಲಿ ಯಾರೊಬ್ಬರನ್ನೂ ಸೇರಿಸಲು ಇಷ್ಟ ಪಡಲಾರರು. ಅಡುಗೆಯು ನಿಜಕ್ಕೂ ಒಂದು ಬಗೆಯ ಧ್ಯಾನದಂತೆ ಹಾಗಾಗಿಯೇ ದಿನವೂ ಸಮಯವನ್ನಿಟ್ಟುಕೊಂಡು ಅಡುಗೆಯನ್ನು ನಿಭಾಯಿಸುವವರಿಗೆ ಧ್ಯಾನದ ಫಲ ಅಡುಗೆಯಲ್ಲಿಯೂ ಸಿಗುತ್ತದೆ. ಆಗಿರುವ ಏಕಾಗ್ರತೆಯು ರುಚಿಯಲ್ಲಿ ಮೆರುಗು ಪಡೆದಿರುತ್ತದೆ. ಈ ಬಗೆಯ ನಿರ್ವಹಣೆಯು ಟಿಪಿಕಲ್ ಅಲ್‌ಕೆಮಿ ಲ್ಯಾಬಿನ ಮಾದರಿಯದು. ಅಲ್‌ಕೆಸ್ಟರೂ ಅಷ್ಟೆ ಓರ್ವ ನಿಭಾಯಿಸುವವ ಸಹಾಯಕರನ್ನು ಪಡೆದಿದ್ದರೂ, ನಿರ್ವಹಣೆಯಲ್ಲಿ ಮುಂದಾಳಾಗಿರುತ್ತಿದ್ದರು. ಹೇಗೇ ಇದ್ದರೂ ಸಹಾ ಯಾರೂ ತಮ್ಮ ಹೆಸರಿನಿಂದ ಉಳಿಸಿಹೋಗಿರಲಾರರು. ಕೆಲವೊಂದು ಅಪರೂಪದ ಉದಾಹರಣೆಗಳು ಇದ್ದಿರಬಹುದು.
ನಮ್ಮ ಪರಂಪರೆಯಲ್ಲಿ “ನಳ” “ಭೀಮಸೇನ” ಕೈಬೆರಳಷ್ಟು ಎಣಿಕೆಯ ಪುರುಷರ ಹೆಸರುಗಳು ಅಡುಗೆಗೆ ಸಂಬಂಧಿಸಿವೆ. ಆದರೆ ಹೆಣ್ಣುಮಕ್ಕಳೆಲ್ಲಾ ಪ್ರವೀಣರೇ ಆಗಿರುವುದರಿಂದ ಹೆಸರುಗಳಿಂದ ಗುರುತಿಸಲಾಗದೇನೋ! ಅಲ್‌ಕೆಮಿಸ್ಟರಂತೂ ಅಭಿವೃದ್ಧಿ ಪೂರ್ವದ ಕಾಲದವರಾದ್ದರಿಂದ ಯಾರೂ ಹೆಚ್ಚು ಹೆಸರುಗಳಿಂದ ಗುರುತನ್ನು ಪಡೆದಿಲ್ಲ. ಆದರೂ “ಅಲ್‌ಕೆಮಿ”ಯಿಂದ “ರಸಾಯನವಿಜ್ಞಾನ”ಕ್ಕೆ ಕೊಡುಗೆಯಾಗಿ ಬಂದ ಒಂದು ಅತ್ಯಂತ ಪ್ರಮುಖ ಉಪಕರಣವನ್ನು ಮಹಿಳಾ ಅಲ್‌ಕೆಮಿಸ್ಟ್ ನೀಡಿದ್ದರಿಂದ ವಿಶೇಷವಾಗಿ ಪ್ರಸ್ತಾಪಿಸಬೇಕಿದೆ. ಇಂದು ರಸಾಯನವಿಜ್ಞಾನ ಅಷ್ಟೊಂದು ಅಗಾಧವಾಗಿ ಬೆಳೆದಿದ್ದರೆ ಅದಕ್ಕೆ “ಭಟ್ಟಿ ಇಳಿಸುವ” ಉಪಕರಣ “ರೆಟಾರ್ಟ್” ಅನ್ನು ವಿನ್ಯಾಸಗೊಳಿಸಿದ್ದು ಅತ್ಯಂತ ಮಹತ್ತರವಾದುದು. ರೆಟಾರ್ಟ್ ಸಾಮಾನ್ಯವಾಗಿ ಏನನ್ನಾದರೂ ಕುದಿಸಿ ಅದರಿಂದ ಆವಿಯಾಗಿ ಬಂದದ್ದನ್ನು ತಂಪುಗೊಳಿಸಿ ಅಥವಾ ಸಂಶ್ಲೇಷಿಸಿ ಪಡೆಯಲು ಅನುಕೂಲಮಾಡುವ ಉಪಕರಣ (ಚಿತ್ರ ನೋಡಿ). ಇಂತಹಾ ಮಹತ್ವದ ಉಪಕರಣವನ್ನು ಮಹಿಳಾ ಅಲ್‌ಕೆಮಿಸ್ಟ್ ಆದಿಯಲ್ಲಿ ವಿನ್ಯಾಸಗೊಳಿಸಿದ್ದರು ಎಂದೇ ನಂಬಲಾಗಿದೆ. ಅದರಲ್ಲೂ “ಅಲ್‌ಕೆಮಿಸ್ಟ್ ಕ್ಲಿಯೊಪಾತ್ರ” ಎಂಬ ಮಹಿಳಾ ಅಲ್‌ಕೆಮಿಸ್ಟ್ ಈ ಭಟ್ಟಿ ಇಳಿಸುವ ಉಪಕರಣವನ್ನು ಮೂಲದಲ್ಲಿ ವಿನ್ಯಾಸಗೊಳಿಸಿದ್ದವರಲ್ಲಿ ಒಬ್ಬರೆಂದೇ ನಂಬಲಾಗಿದೆ. ಈಗಿರುವ ಆಧುನಿಕ ಉಪಕರಣವೂ ಆಕೆಯು ದಾಖಲಿಸಿದ್ದ ಚಿತ್ರಕ್ಕೂ ಬಹುಪಾಲು ಹೋಲಿಕೆಯಿರುವುದು, ಆಕೆಯ ಶ್ರೇಷ್ಠತೆಯ ಕೊಡುಗೆಯನ್ನು ಗುರುತಿಸುತ್ತದೆ. ಕ್ರಿಸ್ತ ಶಕ ಮೂರನೆಯ ಶತಮಾನದಲ್ಲಿ ಜೀವಿಸಿದ್ದ ಕ್ಲಿಯೊಪಾತ್ರ ರಸವಿದ್ಯೆಯ ಅನೇಕ ರೂಪ ವಿನ್ಯಾಸಕ್ಕೆ ಅಡಿಪಾಯ ಹಾಕಿದ್ದಾರೆ. ಅದೇ ಕಾಲದ ಮತ್ತೋರ್ವ ಬಹು ಮುಖ್ಯವಾದ ಮಹಿಳಾ ರಸತಜ್ಞೆ ಮರಿಯಾ ಪ್ರೊಪೆಂಟಿಸ್ಮಾ (Maria Prophentissima). ಈಕೆಯು ಮುಖ್ಯವಾಗಿ ಸಂಸ್ಕರಣೆಯ ಮೂಲ ತಳಹದಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಸಂಸ್ಕರಣೆಯು ನಮ್ಮ ಅಡುಗೆಮನೆಯ ದಿನನಿತ್ಯದ ಬಹು ಮುಖ್ಯವಾದ ಚಟುವಟಿಕೆ. ಅದು ಚಹಾ ಮಾಡುವುದರಿಂದ ಆರಂಭಗೊಂಡು, ಸಾಂಬಾರು, ಸೂಪ್ ತಯಾರಿಯವರೆಗೂ ಹಬ್ಬಿಕೊಂಡಿದೆ. ಅಷ್ಟೇಕೆ ಉಪ್ಪಿನಕಾಯಿಯಲ್ಲಿ ರುಚಿಗೊಂಡು, ಅನೇಕ ರಸಾಯನ, ಕಷಾಯಗಳವರೆಗೂ ಬೆಳೆದು ಬಂದಿದೆ.
ಇಂದಿಗೂ ಅಡುಗೆಯ ಪಾತ್ರೆಗಳ “ತಳ” ಹೇಗಿರಬೇಕು? ಅಥವಾ “ಕಂಠ” ಹೇಗಿಯೇ ಇರಬೇಕು..! ಎನ್ನುವುದಲ್ಲಿ ಒಂದು ರೀತಿಯಲ್ಲಿ ಮಹಿಳೆಯರ ತೀರ್ಮಾನವೇ ಕೊನೆ ತಾನೆ? ಇಡೀ ರಸಾಯನವಿಜ್ಞಾನ ಬಹು ಮುಖ್ಯವಾದ ಶುದ್ಧೀಕರಿಸುವ ಉಪಕರಣ ರೆಟಾರ್ಟ್ ಅನ್ನು ಮೂಲವಿನ್ಯಾಸ ಮಾಡಿದ್ದು ಮಹಿಳಾ ಅಲ್‌ಕೆಮಿಸ್ಟರೆ ಇರಬೇಕು. ಅದಕ್ಕೆ ಅಡುಗೆಮನೆಯೂ ರಸಾಯನವಿಜ್ಞಾನದ ಮೂಲಹಾದಿಯಲ್ಲೇ ಉತ್ಪಾದನೆಗಳನ್ನು ನಿರ್ವಹಿಸುತ್ತದೆ. ಇದು ಖಂಡಿತಾ ಅಡುಗೆಯನ್ನು ಮಹಿಳೆಯರಿಗೆ ಸೀಮಿತಗೊಳಿಸುವ ವಾದವಲ್ಲ, ಬದಲಾಗಿ ಅದನ್ನು ಶ್ರೀಮಂತಗೊಳಿಸಿದ ಸ್ತ್ರೀ ಸಮುದಾಯದ ಸೃಜನಶೀಲತೆಯ ಅನಾವರಣ. ಅಡುಗೆಗಳಲ್ಲಿ ಇರುವಷ್ಟು ವೈವಿಧ್ಯತೆ ಹಾಗೂ ನಾವೀನ್ಯತೆ ಬೇರಾವ ಉತ್ಪಾದನಾ ಜಗತ್ತು ಹೊಂದಿರಲಾರದು. (ಇದಕ್ಕೆ ಹೋಲಿಸಬಹುದಾದರೆ ಅದು ನಿಸರ್ಗದ ಹೂವು-ಹಣ್ಣು ಬಿಡುವ ನೆಲ ಮಾತ್ರ)
ಅದಕ್ಕೆ ನಮ್ಮ ನಿಮ್ಮೆಲ್ಲರ ಅಡುಗೆಮನೆಯು ಖಂಡಿತಾ ಅಲ್‌ಕೆಮಿಯ ಲ್ಯಾಬ್! ನಾನಂತೂ ಅಲ್‌ಕೆಮಿಯ ಪ್ರಯೋಗಿಕ ಮಾದರಿಗಳಿಂದಲೇ ಪರಿಶುದ್ಧವಾದ ಒಂದು ಸಂಸ್ಕರಣೆಯ ಹುಡುಕಾಟವನ್ನು ನಡೆಸುತ್ತಲೇ ಆನಂದಿಸಿದ್ದೇನೆ. ದಿನವೂ ತಯಾರಿಸುವ ಊಟೋಪಚಾರಗಳಲ್ಲಿ ಅಂದಾಜು ಅಳೆತಗಳ ವಿವಿಧ ಸಂಬಾರು ಪದಾರ್ಥಗಳ ಪರಿಮಳವನ್ನು ಹಿತ-ಮಿತವಾಗಿ ಮಿಶ್ರವಾಗಿಸಿ ಆಹ್ಲಾದಗೊಳಿಸುವ ಸೃಜನಶೀಲತೆಯನ್ನು ಅದ್ಭುತ ಪ್ರಯೋಗ ಎಂದೇ ನಂಬಿದ್ದೇನೆ. ಆಹಾರ ವಸ್ತುಗಳ ಜೊತೆಗೆ ಬೆರೆಸುವ “ಪ್ರೀತಿ” ಮತ್ತು “ವಿಶ್ವಾಸ”ಗಳು ಉತ್ಪನ್ನಗಳನ್ನು ತೃಪ್ತಿಯ ಶಿಖರಕ್ಕೆ ತೆಗೆದುಕೊಂಡು ಹೋಗುವ ಬೆರಗನ್ನೂ ಆನಂದಿಸಿದ್ದೇನೆ.
– ಡಾ. ಟಿ.ಎಸ್. ಚನ್ನೇಶ್
Good explanation with lot of information
Very informative, simple and very useful information