You are currently viewing ಅಡಿಕೆ-ಎಲೆಯ ಅನ್ಯೋನ್ಯತೆಯ ಸಂಬಂಧ

ಅಡಿಕೆ-ಎಲೆಯ ಅನ್ಯೋನ್ಯತೆಯ ಸಂಬಂಧ

ತೀರಾ ಅವರ ಮನೆಯಲ್ಲಿ ನನಗೆ ಅಂತಾ ಅಡಿಕೆಎಲೆಯ ಮರ್ಯಾದೆಯಾದ್ರೂ ಬೇಡವಾ ಹೀಗನ್ನುವ ಮಾತನ್ನು ತಾವು ಮಲೆನಾಡಿನ ಸುತ್ತ ಮುತ್ತಲಿನ ಊರುಗಳಲ್ಲಿ ಅಥವಾ ಬೇರೆಲ್ಲಿಯೂ ಕೇಳಿರಬಹುದು. ಆ ಮಾತಿನ ದಾಟಿಯಲ್ಲಿ ಆರೋಪಿಸುವ ಮನೆಯಿಂದ ತನಗೆ ಒಂದು ಅಡಿಕೆ-ಎರಡು ಎಲೆಯನ್ನು ತೆಗೆದುಕೊಳ್ಳುವ, ಆ ಮೂಲಕ ತನಗೊಂದು ಮರ್ಯಾದೆಯನ್ನು ಪಡೆಯುವ, ಜೊತೆಗೆ ಅವರಿಗೂ ಬೆಲೆ ಬರುವಂತಹಾ ಅರ್ಥವನ್ನು ಕಾಣುತ್ತೇವೆ. ಈ ಅಡಿಕೆ-ಎಲೆಗಳು ಸಂಬಂಧಗಳ ಮಾನದಂಡಗಳನ್ನು ನಿರ್ವಹಿಸಿವೆ. ಅದಕ್ಕೆ “ಅಡಿಕೆಯಲ್ಲಿ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬುದು ಜನಪ್ರಿಯವಾದ ಗಾದೆ ಮಾತು. ಭಾರತೀಯ ಸಂಪ್ರದಾಯದಲ್ಲಿ ಒಳಿತನ್ನು ಬಯಸುವ, ಒಳ್ಳೆಯ ಕಾರ್ಯವನ್ನು ಆಹ್ವಾನಿಸುವ ಎಲ್ಲಾ ಸಂದರ್ಭಗಳನ್ನೂ ಈ ಅಡಿಕೆ-ಎಲೆಗಳು ಪ್ರತಿನಿಧಿಸುತ್ತವೆ. ಹಾಗೆಯೇ ಅವೆರಡರ ಸಂಬಂಧಗಳೂ ಯಾವುದೇ ಷರತ್ತಿಲ್ಲದ ಅನನ್ಯವಾದ ಪ್ರೇಮವನ್ನೂ ಸದಾ ಕಾಪಾಡಿಕೊಂಡಿವೆ. 

                ಅಡಿಕೆ ಮತ್ತು ವೀಳ್ಯೆಯದೆಲೆ ಎರಡನ್ನೂ ಭಾರತೀಯ ಸಂಸ್ಕೃತಿಯು ಸಂಬಂಧದಲ್ಲಿಟ್ಟು ಪೋಷಿಸಿದೆ. ಎರಡೂ ಮಲೇಷಿಯಾದಲ್ಲಿ ವಿಕಾಸಗೊಂಡವೆಂದು ನಂಬಲಾಗಿದ್ದರೂ ಇಲ್ಲಿನ ಸಸ್ಯಗಳೇ ಆಗಿವೆ! ಇಲ್ಲಿಯೇ ಹೆಚ್ಚಾಗಿ ಬೆಳೆಯಲಾಗುತ್ತದೆ, ಇಲ್ಲಿಯೇ ಹೆಚ್ಚಾಗಿ ಅಗಿಯಲಾಗುತ್ತದೆ, ಹಾಗೆಯೇ ಇಲ್ಲಿಯೇ ಉಗಿಯಲಾಗುತ್ತದೆ ಕೂಡ! ಇವೆರಡೂ ಅಪ್ಪಟ ಭಾರತೀಯ ತಾಂಬೂಲವೆಂದು ಜೊತೆಗೆ ಸುಣ್ಣವನ್ನೂ ಬೆರೆಸಿಕೊಂಡು ರಂಗೇರಿಸಿಕೊಂಡಿದೆ. ದೇಶಾದ್ಯಂತ ಬಗೆ ಬಗೆಯ ತಯಾರಿಗಳಿಂದ ಬಳಕೆಗೊಂಡು ವಿಶೇಷ ಹೆಸರುಗಳ ಮೂಲಕ ಭಾರತೀಯರ ಬಾಯಿಯ ತಲುಬನ್ನು ಆಳುತ್ತಲೇ ಇದೆ. ಎರಡನ್ನೂ ಜೊತೆಯಾಗಿ ಮಾತ್ರವೇ ಬಳಸಲು ಯೋಗ್ಯವಾದ ಗುಣವನ್ನು ಜನರು ಕಂಡುಕೊಂಡಿದ್ದಾರೆ. ಬರೀ ಎಲೆ ಅಥವಾ ಅಡಿಕೆಯನ್ನು ತಿನ್ನಲು ಆಗದು. ಸುಮ್ಮನೆ ಚಟಕ್ಕೆ ಕೆಲವೊಮ್ಮೆ ಬರೀ ಅಡಿಕೆಯನ್ನು ಜಗಿದರೂ, ಎಲೆಯ ಜೊತೆಗಿನ ಅಗೆಯುವಿಕೆಯೇ ಜನಪ್ರಿಯ. ವೈವಿಧ್ಯಮ ತಯಾರಿಯಿಂದ ಪಾನ್,  ಬೀಡಾ ಎಂದೆಲ್ಲಾ ನಾಮಾಂಕಿತಗೊಂಡ ಉತ್ಪನ್ನದಲ್ಲಿ ಇನ್ನೂ ಹಲವಾರು ಸಸ್ಯಜನ್ಯ ವಸ್ತುಗಳನ್ನಿಟ್ಟುಕೊಂಡು ಅಡಿಕೆ-ಎಲೆಯ ಮೌಲ್ಯವನ್ನು ಹೆಚ್ಚಿಸಿವುದನ್ನೂ ನಾಗರಿಕ ಸಮುದಾಯವು ಕಂಡುಕೊಂಡಿದೆ. 

                ಅಡಿಕೆಯು ಪಾಮ್ ಸಸ್ಯಗಳೆಂಬ ಜಾತಿಯ ಮರ. ತಾಳೆ, ತೆಂಗು, ಖರ್ಜೂರ, ಈಚಲುಗಳೂ ಕೂಡ ಅಡಿಕೆಯ ಕುಟುಂಬದ ಸಸ್ಯಗಳೇ. ಪಾಮ್ ಗಳು ಬಹುವಾರ್ಷಿಕ ಸಸ್ಯಗಳು. ಅಡಿಕೆಯನ್ನು ವೈಜ್ಞಾನಿಕವಾಗಿ Areca catechu ಎಂದು ಹೆಸರಿಸಲಾಗಿದೆ. ಇಂಗ್ಲೀಶಿನಲ್ಲಿ ಕರೆಯಲಾಗುವ Areca ಅಡಿಕೆ ಪದದಿಂದ ಅಥವಾ ಮಲೆಯಾಳಮ್ಮಿನ ಅಡಕ್ಕಾದಿಂದ ಬಂದಿರಬಹುದೆಂದು ನಂಬಲಾಗುತ್ತದೆ. catechu ವು ಪಾನ್‍ ಗಳಲ್ಲಿ ಬಳಸಲಾಗುವ “ಕಾಚು” ಎಂಬುದರಿಂದ ಬಂದಿದೆ. ಅಡಕೆಯು ತನ್ನ ಜೊತೆಗೆ ತಂಬಾಕನ್ನು ಸೇರಿಕೊಂಡು ಒಂದಷ್ಟು ಹೆಸರು ಕೆಡಿಸಿಕೊಂಡಿತು. ಅದು ಹೊರತಾಗಿ ತನ್ನ ಸಾಂಸ್ಕೃತಿಕ ಸಂಗಾತಿಯಾದ ವೀಳ್ಯೆಯದೆಲೆಯ ಜೊತೆಗೆ ಇಂದಿಗೂ ಒಳ್ಳೆಯ ಹೆಸರನ್ನೇ ಹೊಂದಿದೆ. ಅಡಿಕೆಯು ಅರೆಕೆಸಿಯೇ ((Arecaceae) ದ ಎಂಬ ಸಸ್ಯ ಕುಟುಂಬದ ಸದಸ್ಯ. ಇದರ ಜೊತೆಗಾತಿಯಾದ ವೀಳ್ಯೆಯದೆಲೆ ವೈಜ್ಞಾನಿಕ ನಾಮವು Piper betle ಎಂದಾಗಿದ್ದು ಪಿಪರೇಸಿಯೇ (Piperaceae) ಎಂಬ ಸಸ್ಯ ಕುಟುಂಬದ ಬಳ್ಳಿಯಾಗಿದೆ. ಇದು ನಮ್ಮ ತೋಟಗಳ ಕಾಳು ಮೆಣಸಿನ ಕುಟುಂಬದ ಬಳ್ಳಿಯೇ! ಕಾಳು ಮೆಣಸಿನ ಎಲೆಗಳೂ ವೀಳ್ಯೆಯದೆಲೆಗಳೂ ಒಂದೇ ರೀತಿಯ ರಚನೆಗಳನ್ನು ಹೊಂದಿವೆ.

                ಅಡಿಕೆ-ಎಲೆಗಳು ಕ್ರಿಸ್ತ ಪೂರ್ವ 1ನೆಯ ಶತಮಾನದಿಂದಲೂ ಬಳಸಲಾಗುತ್ತಿದೆಯೆಂದು ಸಂಸ್ಕೃತ ಹಾಗೂ ಚೀನಿ ದಾಖಲೆಗಳು ತಿಳಿಸುತ್ತವೆ. ಹಾಗಾಗಿ ಬಹಳ ಹಿಂದಿನಿಂದಲೂ ಭಾರತದ ನೆಲೆಯನ್ನು ಇವೆರಡೂ ಕಂಡುಕೊಂಡಿವೆ. ಬುದ್ಧನ ಜಾತಕಕಥೆಗಳಲ್ಲೂ ಇವುಗಳ ಉಲ್ಲೇಖವಿದೆ. ಅರಬ್ಬರು 8 ಮತ್ತು 9ನೆಯ ಶತಮಾನದಲ್ಲಿ ಅಡಿಕೆ-ಎಲೆಗೆ ಪರಿಚಯಗೊಂಡರು. ಕ್ರಿ.ಶ 1300ರ ನಂತರವೇ ಅಡಿಕೆಯು ಯೂರೋಪನ್ನು ಹೊಕ್ಕಿದೆ. ಮಾರ್ಕೋ ಪೋಲೋ ಯೂರೋಪಿಗೆ ಅಡಿಕೆಯನ್ನು ಪರಿಚಯಿಸಿದನೆಂಬ ದಾಖಲೆಯನ್ನು ಕಾಣಬಹುದು. ವರಾಹ ಮಿಹಿರನ ವೈದ್ಯಕೀಯ ಬರಹಗಳೂ ಅಡಿಕೆ-ಎಲೆಯ ಬಳಕೆಯನ್ನು ಒಳಗೊಂಡಿವೆ. ಬಾಬರ್ ಭಾರತವನ್ನು ಬಯಸಿದ್ದರಲ್ಲಿ ಇಲ್ಲಿನ ವೀಳ್ಯೆಯದೆಲೆಯೂ ಕಾರಣವೆಂದು ಉಲ್ಲೇಖಗಳಿವೆ. ಆತ ವೀಳ್ಯೆಯದೆಲೆ ಹಾಗೂ ಮಾವಿನ ಹಣ್ಣನ್ನು ಕರುಣಿಸಲು ಹಿಂದೂಸ್ಥಾನದದ ವಿಜಯಕ್ಕೆ ದೇವರಲ್ಲಿ ಬೇಡಿಕೆಯಿತ್ತು ಪ್ರಾರ್ಥಿಸಿದ್ದನಂತೆ. ಕಥನಗಳೇನೇ ಇರಲಿ ಇಂದಿಗೂ ಅಡಿಕೆ-ಎಲೆಗಳೆರಡೂ ಒಟ್ಟಾಗಿ ಅನೇಕ ಶುಭ ಸಮಾರಂಭಗಳ ಆಚರಣೆಯನ್ನು ಒಳಗೊಂಡಿರುವುದು ಎಲ್ಲರಿಗೂ ಅನುಭವಕ್ಕೆ ಬಂದಿರುವ ಸಂಗತಿಯೆ ಸರಿ. ವೀಳ್ಯ ಎಂದರೇನೇ ಆಹ್ವಾನ ಅದರಲ್ಲೂ ಒಳಿತಾಗಿ ಆಹ್ವಾನ ಎಂಬ ಅರ್ಥವಿದೆ. ಆದ್ದರಿಂದ ಎಲ್ಲಾ ಶುಭ ಸೂಚನೆಗಳಿಗೂ ಆಹ್ವಾನಿಸುವ ರೂಪಕವನ್ನು ವೀಳ್ಯೆಯದೆಲೆ ಅಡಕೆಯ ಜೊತೆಗೆ ಹೊತ್ತಿದೆ.

                ವೀಳ್ಯೆಯದೆಲೆಯು ಹೃದಯದ ಆಕಾರವುಳ್ಳ ಎಲೆ. ಬಹು ವಾರ್ಷಿಕ ಹಬ್ಬು ಬಳ್ಳಿಯನ್ನು, ಕಾಂಡವನ್ನು ಬಳಸಿ ನಾಟಿ ಮಾಡಿ ಬೆಳೆಸಬಹುದು. ಭಾರತದಲ್ಲಿ ಸುಮಾರು 900 ಕೋಟಿವಹಿವಾಟಿನ ಉತ್ಪನ್ನವನ್ನು ನೀಡುತ್ತಿವೆ. ಪ್ರತೀ ಎಕರೆಗೆ ಕಡಿಮೆ ಎಂದರೂ 8ರಿಂದ 10 ಲಕ್ಷ ಎಲೆಗಳನ್ನು ಕೊಯಿಲು ಮಾಡಲಾಗುತ್ತದೆ. ಎಲೆ ತೋಟಗಳ ನಿರ್ವಹಣೆಯಲ್ಲಿ ವಿಶೇಷ ಬಗೆಗಳಿವೆ. ಹಲವು ತೋಟಿಗರು ತೋಟದೊಳಗೆ ಚಪ್ಪಲಿ ಹಾಕಿಕೊಂಡು ಹೋಗುವುದಿಲ್ಲ. ಅಷ್ಟರ ಮಟ್ಟಿಗೆ ಹೊರಗಿನ ಸೋಂಕನ್ನು ತಪ್ಪಿಸುವ ವಿಧಾನವನ್ನು ರೂಢಿಸಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ಎನಿಲ್ಲವೆಂದರೂ 120ರಿಂದ 150ರಷ್ಟು ಸ್ಥಳೀಯ ತಳಿಗಳಿವೆ. ಮೈಸೂರು ಚಿಗುರೆಲೆಯಂತೂ ರಾಜ್ಯದಲ್ಲಿ ವಿಶೇಷವಾಗಿರುವುದು ತಿಳಿದೇ ಇದೆ. ಬೇರೆಲ್ಲಾ ಬೆಳೆಯ ವಹಿವಾಟುಗಳಿಗೆಲ್ಲಾ ಹೋಲಿಸಿದರೆ ಇದರದ್ದು ವಿಶೇಷ ಮಹತ್ವ ಹೊಂದಿದೆ. ಕಾರಣ ಪ್ರತೀ ಎಲೆಯೂ ಇದರಲ್ಲಿ ಲೆಕ್ಕಾಚಾರಗೊಳ್ಳುತ್ತದೆ. ಹಾಗೆಯೇ ಅಡಿಕೆಯೂ ಸಹಾ…!

                ಅಡಿಕೆಯ ಬೆಳೆಗಾರರಂತೂ ರೂಪಾಯಿಯನ್ನೇ ಬೆಳೆಯುತ್ತಿದ್ದ ಸಂಗತಿಗಳು ದಾರಾಳವಾಗಿ ಹಂಚಿವೆ. ಭತ್ತವನ್ನು ಬೆಳೆಯುವ ಗದ್ದೆಗಳನ್ನೂ ಅಡಿಕೆಗೆ ಮಾರ್ಪಡಿಸಿದ ಸಾವಿರಾರು ಉದಾಹರಣೆಗಳು ಸಿಗುತ್ತವೆ. ಅಡಿಕೆಗೆ ದಾರಾಳವಾದ ನೀರು ಬೇಕು. ಅದಕ್ಕಾಗಿ ನೆಲವನ್ನು ಕೊರೆದು ನೀರಿಗೆ ಲಗ್ಗೆ ಹಾಕಿದ ಅನೇಕ ಕಥನಗಳು ರಾಜ್ಯದಲ್ಲಿ ಪರಿಚಿತವಾಗಿವೆ. ಲಾಭದ ಲೆಕ್ಕಾಚಾರಗಳಿಂದ ಎರಡೂ ಸಸ್ಯಗಳು ನಮ್ಮ ರೈತ ಸಮುದಾಯಕ್ಕೆ ಬೆಂಬಲವಾಗಿ ನಿಂತದ್ದಂತೂ ಸತ್ಯ. ಇದಕ್ಕೆಲ್ಲಾ ಪ್ರಮುಖ ಕಾರಣವಾದ ಹುಡುಕಾಟದ ಅಡಿಕೆ-ಎಲೆಯ ಅಗಿಯುವ ಚಟದ ಸಂಶೋಧನಾ ಅಧ್ಯಯನಗಳು ಬರೀ ರಾಜ್ಯದಲ್ಲಿ ಮಾತ್ರವಲ್ಲಾ, ದೇಶಾದ್ಯಂತಾ…. ಅಷ್ಟೇಕೆ ಅಮೆರಿಕಾದ ಹಾರ್ವಡ್ ವಿಶ್ವವಿದ್ಯಾಲಯದ ದಾಖಲೆಗಳಲ್ಲೂ ಸ್ಥಾನವನ್ನು ಪಡೆದಿವೆ. ಭಾರತದಲ್ಲಿ ಪಾನ್ ಅಗೆಯುವ ಇತಿಹಾಸದ ಅಧ್ಯಯವನ್ನು ಹಾರ್ವಡ್ ವಿಶ್ವವಿದ್ಯಾಲಯವು 1951ರಲ್ಲೇ ಪ್ರಕಟಿಸಿದೆ. ಹಾರ್ವಡಿನ ಬಟಾನಿಕಲ್ ಮ್ಯುಸಿಯಂನ ಲೀಫ್ ಲೆಟ್ ಪತ್ರಿಕೆಯಲ್ಲಿ ನಮ್ಮ ಪಾನ್ ಅಗೆಯುವ ಸುದೀರ್ಘ ಇತಿಹಾಸವನ್ನು ನಮ್ಮ ರಾಜ್ಯದ ಹೆಸರಾಂತ ತೋಟಗಾರಿಕಾ ವಿಜ್ಞಾನಿ ದಿವಂಗತ ಡಾ.ಎಂ.ಎಚ್. ಮರಿಗೌಡರವರು ಪ್ರಕಟಿಸಿದ್ದಾರೆ. ಅವರ ಪ್ರಕಾರ ಭಾರತದಾದ್ಯಂತ ಪಾನ್ ಎಂದು ಅಗೆಯುವ ಚಟಕ್ಕೆ ಏನಿಲ್ಲವೆಂದರೂ 30 ಬಗೆಯ ವಿವಿಧ ಸಸ್ಯಗಳ ಉತ್ಪನ್ನಗಳು ಬಳಕೆಯಾಗುತ್ತವಂತೆ! ಸಸ್ಯಯಾನದ ಆಶಯದಲ್ಲಿರುವ ಒಂದು ನೂರು ಸಸ್ಯಗಳ ಪರಿಚಯದಲ್ಲಿ ಬರೀ ಪಾನ್ ಹಿಂದೆ ಹೋದರೇ ಮೂರರಲ್ಲಿ ಒಂದರಷ್ಟು ಸ್ಥಾನವನ್ನು ಕೇವಲ ಪಾನ್ ಚರಿತ್ರೆಯೇ ಕಬಳಿಸಿದರೆ ಅಂತಾ ಒಂದು ರೀತಿಯ ವಿಸ್ಮಯ ಜೊತೆಗೆ ಭಯವೂ ಆದೀತು!  ಹಾಗಾಗಿ ಅಡಿಕೆ-ಎಲೆಯ ರಸಾಯನಿಕತೆಯ, ಜೊತೆಗಿನ ವೈದ್ಯಕೀಯ ಅನುಮಾನಗಳನ್ನು ಮುಂದಿಟ್ಟು ಮುಗಿಸಬಹುದೇನೋ!

                ನೇರವಾಗಿ ಬರೀ ಅಡಿಕೆಯನ್ನು ತಿನ್ನುವುದನ್ನು ಸಾಂಪ್ರದಾಯಕವಾಗಿಯೂ ಅನುಮಾನಿಸಲಾಗುತ್ತದೆ. ಅದರಲ್ಲಿರುವ ಅಲ್ಕಲಾಯ್ಡ್ಗಳು ಮತ್ತು ಬರಿಸುವ ಲಕ್ಷಣಗಳನ್ನು ಹೊಂದಿರುವುದು ತಿಳಿದ ಸಂಗತಿಯೇ ಸರಿ. ಸಾಮಾನ್ಯವಾಗಿ ಅಡಿಕೆಯನ್ನು ಸಂಸ್ಕರಿಸಿ ಬಳಸಲಾಗುತ್ತದೆ. ಅಡಿಕೆಯಲ್ಲಿ ಪ್ರಮುಖವಾಗಿ ಅರೆಕಾಯ್ಡಿನ್ ಮತ್ತು ಅರೆಕೊಲಿನ್ ಎಂಬ ಅಲ್ಕಲಾಯ್ಡ್ಗಳಿವೆ. ಇದರ ಜೊತೆಗೆ ಹಲವು ಟ್ಯಾನಿನ್ಗಳೂ ಇದ್ದು ಅವು ಆರೋಗ್ಯದ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತವೆ.  ವೀಳ್ಯೆಯದೆಲೆಯೂ ಸಹಾ ಹಲವಾರು ರಾಸಾಯನಿಕಗಳನ್ನು ಹೊಂದಿದೆ. ಹಾಗಾಗಿ ಎಲೆಯನ್ನೂ ಹಾಗೇ ತಿನ್ನಲಾಗದು. ಇದರಲ್ಲೂ ಹಲವು ಟ್ಯಾನಿನ್‍ ಗಳಿದ್ದು ನೇರವಾದ ಬಳಕೆಗೆ ಅನುಕೂಲವಾಗುವುದಿಲ್ಲ. ಬರೀ ವೀಳ್ಯೆಯದೆಲೆ ಅಗಿದರೆ ಬಾಯಿ ಸುಟ್ಟ ಹಾಗೆ ಅನ್ನಿಸುವುದಲ್ಲವೇ? ಅದಕ್ಕೆ ಅದರ ರಾಸಾಯನಿಕಗಳ ವರ್ತನೆಯನ್ನು ಶಮನ ಮಾಡಲು ಸುಣ್ಣವನ್ನು ಸೇರಿಸಿ ತಿನ್ನುತ್ತೇವೆ.

                ಅಡಿಕೆ-ಎಲೆಯನ್ನು ಸುಣ್ಣದ ಜೊತೆ ಹದವಾಗಿ ಬೆರೆಸಿ ಅಗೆದಾಗ ರಂಗೇರುವ ಬಾಯಿ ನಿಮ್ಮ ಪ್ರೇಮದ ಸಂಕೇತವೆಂದು ತಮಾಷೆಗೆ ಹೇಳುವುದುಂಟು. ಅದೇನೇ ಇರಲಿ, ಬಾಯಲ್ಲಿ ಪ್ರತೀ ಎಲೆಯೂ-ಅಡಿಕೆಯ ಜೊತೆಗೆ ರಮ್ಯವಾಗಿ, ಅಗೆತಕ್ಕೊಳಗಾಗಿ ಬಾಯೊಳಗೆ ಜೊಲ್ಲಿನ ರಸಭರಿತವಾಗಿ ಒಂದಷ್ಟು ಕಾಲ ಆನಂದದ ಮತ್ತೇರಿಸುವ ಪ್ರೇಮವಂತೂ ನಿಜವೇ! ಅಡಿಕೆ-ಎಲೆಯ ಚಟವು ಹದವನ್ನು ಮೀರಿದರೆ ನಾಲಿಗೆ ಹೊರಳದು ಎಂಬುದು ಬಾಯ ತುಂಬಾ ತಾಂಬೂಲ ತುಂಬಿದಾಗಂತೂ ಅಕ್ಷರಶಃ ಸತ್ಯ. ಊಟವಾದ ಮೇಲೆ ತಿನ್ನುವ ಚಟವಾಗಿದ್ದರಿಂದ ತುಂಬಿದ ಹೊಟ್ಟೆಗೆ ಆನಂದದ ಅಮಲೇರಿಸುವ ತಿಳಿವಿನಿಂದ ಮಿತಿಯಲ್ಲಿದ್ದರಾಯಿತು. ಬಾಯಿಯ ಸುಗಂಧದ ಪರಿಮಳಕ್ಕೆ ಬೇಕಾಗುವಷ್ಟು ಮೆಲ್ಲೋಣ ಬಿಡಿ.

ನಮಸ್ಕಾರ

ಚನ್ನೇಶ್

Leave a Reply